ಗ್ಯಾರಂಟಿ ಈಡೇರಿಸಿದ್ದೇವೆ: ಮೋದಿ ವಿರುದ್ಧ ಸೋನಿಯಾ ಗಾಂಧಿ ಕಿಡಿ
ಕಾಂಗ್ರೆಸ್ ಯಾವತ್ತೂ ಜನರ ವಿಶ್ವಾಸಕ್ಕೆ ದ್ರೋಹ ಬಗೆದಿಲ್ಲ. ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಪಕ್ಷ ನೀಡಿರುವ ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತಂದು ಜನರ ವಿಶ್ವಾಸ ಉಳಿಸಿಕೊಳ್ಳಲಿದೆ ಎಂದು ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಹೇಳಿದರು.
ಹುಬ್ಬಳ್ಳಿ (ಮೇ.07): ಲೂಟಿ, ದರೋಡೆ ಮಾಡುವ, 40 ಪರ್ಸೆಂಟ್ ಕಮಿಷನ್ ಪಡೆಯುವ ಹಾಗೂ ಧಮ್ಕಿ ಹಾಕುವ ಬಿಜೆಪಿಯ ಕರಾಳ ಸರ್ಕಾರ ಬೇಕೋ? ಜನರ ಬದುಕನ್ನು ಹಸನು ಮಾಡುವ, ನೆಮ್ಮದಿ ಕೊಡುವ ಸರ್ಕಾರ ಬೇಕೋ ಎಂಬುದನ್ನು ಕರ್ನಾಟಕದ ಮತದಾರರು ತೀರ್ಮಾನಿಸಬೇಕು. ಕಾಂಗ್ರೆಸ್ ಯಾವತ್ತೂ ಜನರ ವಿಶ್ವಾಸಕ್ಕೆ ದ್ರೋಹ ಬಗೆದಿಲ್ಲ. ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಪಕ್ಷ ನೀಡಿರುವ ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತಂದು ಜನರ ವಿಶ್ವಾಸ ಉಳಿಸಿಕೊಳ್ಳಲಿದೆ ಎಂದು ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಹೇಳಿದರು.
ಇಲ್ಲಿನ ಯಂಗ್ ಸ್ಟಾರ್ ಸ್ಪೋರ್ಟ್ಸ್ ಗ್ರೌಂಡಿನಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿಯ ದ್ವೇಷ ರಾಜಕಾರಣದ ಸರ್ಕಾರವನ್ನು ಕಿತ್ತೆಸೆಯುವವರೆಗೂ ಅಭಿವೃದ್ಧಿ ಸಾಧ್ಯವಿಲ್ಲ. ಜನರ ಪ್ರಶ್ನೆಗಳಿಗೆ ಉತ್ತರ ನೀಡದೆ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದೆ ಸೊಕ್ಕಿನಿಂದ ಮೆರೆಯುತ್ತಿರುವ ಬಿಜೆಪಿ ಸರ್ಕಾರ ಕಿತ್ತೆಸೆಯಲು ಕಾಂಗ್ರೆಸ್ಸಿನೊಂದಿಗೆ ಜನ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜೆಡಿಎಸ್ ಅಧಿಕಾರಕ್ಕೆ ತಂದು ಕಣ್ಮುಚ್ಚುವ ಆಸೆ: ದೇವೇಗೌಡರ ಭಾವನಾತ್ಮಕ ಮಾತು
ಬಿಜೆಪಿಯವರು ತಮ್ಮ ಕೆಲಸದ ಮೇಲೆ ಮತ ಕೇಳುತ್ತಿಲ್ಲ. ಬದಲಿಗೆ ಬಿಜೆಪಿಗೆ ಮತ ಹಾಕದಿದ್ದರೆ ಮೋದಿ ಆಶೀರ್ವಾದ ಸಿಗುವುದಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆಗಳಾಗುತ್ತವೆ ಎಂದು ಜನರನ್ನು ಹೆದರಿಸುತ್ತಿದ್ದಾರೆ. ಕರ್ನಾಟಕದ ಜನ ಯಾರ ಆಶೀರ್ವಾದವನ್ನೂ ಬಯಸುವುದಿಲ್ಲ. ಅವರ ಸ್ವಂತ ಶಕ್ತಿ, ಪರಿಶ್ರಮದ ಮೇಲೆ ವಿಶ್ವಾಸ ಇಟ್ಟುಕೊಂಡು ಕೆಲಸ ಮಾಡುವ ಸ್ವಾಭಿಮಾನಿಗಳು. ಅವರೆದುರು ನಿಮ್ಮ ಹೆದರಿಕೆ, ಬೆದರಿಕೆಗಳು ನಡೆಯಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವರಿಷ್ಠೆ ಗುಡುಗಿದರು.
ಬಸವನ ಪುಣ್ಯ ಭೂಮಿ: ಕರ್ನಾಟಕ ಬಸವೇಶ್ವರರ ಪುಣ್ಯ ಭೂಮಿ. ಇಡೀ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ನಾಡು. ಕುವೆಂಪು ಕರ್ನಾಟಕದ ಮಹಾನ್ ಕವಿ. ಇಂಥ ಮಹನೀಯರ ವಿಚಾರ ಹಾಗೂ ಭಾವನೆಗಳಿಗೆ ವಿರುದ್ಧವಾಗಿ ಬಿಜೆಪಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕದಡುವ ಕೆಲಸವನ್ನು ಪ್ರತಿನಿತ್ಯ ಮಾಡುತ್ತಿದೆ. ಬಿಜೆಪಿಯವರು ತಮ್ಮ ಸ್ವಾರ್ಥಕ್ಕಾಗಿ ಕರ್ನಾಟಕವನ್ನು ಬಲಿ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರದಿಂದ ಕಿರುಕುಳ: ಕೇಂದ್ರ ಸರ್ಕಾರ ಸಂವಿಧಾನಾತ್ಮಕ ಸಂಸ್ಥೆಗಳನ್ನು ತಮ್ಮ ಕಿಸೆಯಲ್ಲಿದೆ ಎಂದು ಭಾವಿಸಿದಂತಿದೆ. ಅವುಗಳನ್ನು ಇಟ್ಟುಕೊಂಡು ಪ್ರತಿಪಕ್ಷದವರನ್ನು ಹಾಗೂ ದೇಶದ ಜನರಿಗೆ ಕಿರುಕುಳ ನೀಡುತ್ತಿದೆ. ಬಿಜೆಪಿಯವರಿಗೆ ದೇಶದಲ್ಲಿ ತಾವು ಏನು ಮಾಡಿದರೂ ನಡೆಯುತ್ತದೆ ಎನ್ನುವ ಸೊಕ್ಕಿದೆ. ಇಂಥ ವ್ಯವಸ್ಥೆಯಿಂದ ಪ್ರಜಾಪ್ರಭುತ್ವಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ಅವರ ಅಹಂಕಾರಕ್ಕೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ದ್ವೇಷ ಹರಡುವವರ ವಿರುದ್ಧ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಮಾಡಲಾಗಿತ್ತು. ಕರ್ನಾಟಕ ಸೇರಿ ದೇಶದ ಲಕ್ಷಾಂತರ ಜನ ಯಾತ್ರೆಯನ್ನು ಬೆಂಬಲಿಸಿದ್ದಾರೆ. ಅದೇ ರೀತಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು. ಈ ಮೂಲಕ ಬಿಜೆಪಿ ನಡೆಸುತ್ತಿರುವ ಲೂಟಿಗೆ ಕಡಿವಾಣ ಹಾಕಲು ಹಾಗೂ ಕರ್ನಾಟಕದಲ್ಲಿ ಪ್ರಗತಿ ಗ್ಯಾರಂಟಿ ಕೊಡುವ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ತರಬೇಕು. ಇದರಿಂದ ರಾಜ್ಯದ ಭವಿಷ್ಯ ಬದಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭರವಸೆ ಈಡೇರಿಸಿದ್ದೇವೆ: ಹಿಂದೆ ಕರ್ನಾಟಕದಲ್ಲಿದ್ದ ಕಾಂಗ್ರೆಸ್ ಸರ್ಕಾರ ಐದು ವರ್ಷ ಅಧಿಕಾರಾವಧಿಯಲ್ಲಿ ತಾನು ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಈಗ ರಾಜಸ್ಥಾನ, ಹಿಮಾಚಲ, ಛತ್ತೀಸಘಡದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಅಲ್ಲಿ ಪಕ್ಷ ನೀಡಿದ್ದ ಎಲ್ಲ ಭರವಸೆಯನ್ನು ಈಡೇರಿಸುವ ಮೂಲಕ ಜನರ ವಿಶ್ವಾಸ ಉಳಿಸಿಕೊಂಡಿದ್ದೇವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ ಪಕ್ಷ ನೀಡಿರುವ ಗ್ಯಾರಂಟಿ ಕಾರ್ಡ್‌ಗಳನ್ನು ಜಾರಿಗೆ ತಂದು ನಿಮ್ಮ ವಿಶ್ವಾಸ ಉಳಿಸಿಕೊಳ್ಳಲಿದ್ದೇವೆ ಎಂದರು.
ಬೊಂಬೆನಗರಿಯಲ್ಲಿ ಕುಮಾರಸ್ವಾಮಿಯನ್ನು ಮಣಿಸಿ ಯೋಗೇಶ್ವರ್ ವಿಧಾನಸೌಧ ಪ್ರವೇಶಿಸುತ್ತಾರಾ?
ಕನ್ನಡದಲ್ಲೇ ಭಾಷಣ!: ಸಹೋದರ, ಸಹೋದರಿಯರೇ ನಮಸ್ಕಾರ.... ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಸೋನಿಯಾ ಗಾಂಧಿ ಅವರು, ಕರ್ನಾಟಕದ ಜನ ವಿವಿಧ ಕ್ಷೇತ್ರಗಳಲ್ಲಿ ದೇಶದ ಹೆಸರನ್ನು ಬೆಳಗಿಸಿದ್ದಾರೆ. ಕಾಂಗ್ರೆಸ್ಸಿಗೂ ಬೆಂಬಲಿಸುತ್ತಲೇ ಬಂದಿದ್ದಾರೆ. ಇದನ್ನು ನಾವೆಂದೂ ಮರೆಯುವುದಿಲ್ಲ ಎಂದರು. ಇಂದಿರಾ ಗಾಂಧಿಯವರು ರಾಜಕೀಯ ಜೀವನದಲ್ಲಿ ಹೋರಾಡುತ್ತಿದ್ದಾಗ ಚಿಕ್ಕಮಗಳೂರು ಜನ ಕೈಹಿಡಿದಿದ್ದರು. 24 ವರ್ಷಗಳ ಹಿಂದೆ ನನ್ನನ್ನು ಬಳ್ಳಾರಿ ಜನ ಬೆಂಬಲಿಸಿದ್ದರು ಎಂದು ಸೋನಿಯಾ ಗಾಂಧಿ ಸ್ಮರಿಸಿದರು.
ತಾಯಿ ಮಾತನಾಡಿದ್ದಕ್ಕೆ ಭಾಷಣ ಮಾಡದ ರಾಹುಲ್: ಪ್ರಚಾರ ಸಭೆಯಲ್ಲಿ ಸೋನಿಯಾ ಗಾಂಧಿ ಅವರು ಮಾತನಾಡಿದ ನಂತರ ರಾಹುಲ್ ಗಾಂಧಿ ಅವರನ್ನು ಮಾತನಾಡಲು ಆಹ್ವಾನಿಸಲಾಯಿತು. ಆದರೆ, ರಾಹುಲ್ ಅವರು ನನ್ನ ತಾಯಿ ಮಾತನಾಡಿದ ನಂತರ ನಾನು ಮಾತನಾಡುವುದು ಸರಿಯಲ್ಲ ಎಂದು ವಿನಮ್ರವಾಗಿ ಹೇಳುವ ಮೂಲಕ ತಾಯಿ ಮೇಲಿನ ಗೌರವ ಎತ್ತಿ ಹಿಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.