‘ಕಾಂಗ್ರೆಸ್‌ನವರು ಕುಂಬಳಕಾಯಿ ಕಳ್ಳ ಎಂದರೆ ಇವರು ಬೆನ್ನು ಮುಟ್ಟಿಕೊಳ್ಳುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. 

ಬೆಂಗಳೂರು (ಏ.06): ‘ಕಾಂಗ್ರೆಸ್‌ನವರು ಕುಂಬಳಕಾಯಿ ಕಳ್ಳ ಎಂದರೆ ಇವರು ಬೆನ್ನು ಮುಟ್ಟಿಕೊಳ್ಳುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಮುಖಂಡರ ಮೇಲೆ ಶೀಘ್ರ ಐಟಿ ದಾಳಿಯಾಗುತ್ತದೆ ಎಂಬ ಕಾಂಗ್ರೆಸ್‌ ನಾಯಕರ ಆರೋಪಕ್ಕೆ ಮುಖ್ಯಮಂತ್ರಿಗಳು ತಿರುಗೇಟು ನೀಡಿದರು. ‘ಚುನಾವಣಾ ಆಯೋಗ, ಐಟಿ ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದಾರೆ. ಯಾರು ಕಳ್ಳರಿದ್ದಾರೆ ಅವರು ಸಿಗುತ್ತಾರೆ. 

ಕಾಂಗ್ರೆಸ್‌ನವರು ಯಾಕೆ ಭಯ ಪಡಬೇಕು? ಅವರು ಇಷ್ಟು ದಿನ ಅಕ್ರಮವಾಗಿ ಗಳಿಸಿರುವ ಕಪ್ಪು ಹಣ ಹೊರಗೆ ಬರುತ್ತದೆ ಎಂಬ ಭಯ ಇರುವ ಕಾರಣಕ್ಕೆ ಈ ರೀತಿಯ ತಂತ್ರ ಮಾಡುತ್ತಿದ್ದಾರೆ’ ಎಂದು ಹೇಳಿದರು. ‘ಚುನಾವಣಾ ಆಯೋಗ ಎಲ್ಲ ಪಕ್ಷದವರ ಮೇಲೆ ದಾಳಿ ಮಾಡಿ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದೆ. ನಿಷ್ಪಕ್ಷಪಾತವಾಗಿ ನಡೆಯುತ್ತಿರುವ ದಾಳಿಯನ್ನು ತಡೆಯಲು ಅಧಿಕಾರಿಗಳ ಮೇಲೆ ಒತ್ತಡ ತರುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಪ್ರತಿಯೊಂದು ಜಿಲ್ಲೆಗೂ ಐಟಿ ಅಧಿಕಾರಿಗಳು ಭೇಟಿ ನೀಡಿದ್ದಾರೆ’ ಎಂದರು.

ಮಹಾರಾಷ್ಟ್ರದ ವಿಮೆ ಕಿತಾಪತಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ: ಸಿಎಂ ಬೊಮ್ಮಾಯಿ ಕಿಡಿ

ದೇಶದಲ್ಲಿ ಮೋದಿಯಿಂದ ಭಾರಿ ಬದಲಾವಣೆ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ದೇಶದಲ್ಲಿ ದೊಡ್ಡ ಬದಲಾವಣೆ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಲ್ಲೇಶ್ವರದ ಈಸ್ಟ್‌ ಪಾರ್ಕ್ ರಸ್ತೆಯ ಗಿರಿಜಾರಾಮ ದೈವಜ್ಞ ಭವನದಲ್ಲಿ ಸೋಮವಾರ ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಇಡೀ ವಿಶ್ವದಲ್ಲಿಯೇ ಅತಿ ದೊಡ್ಡ ಪಕ್ಷ. ಕರ್ನಾಟಕದಲ್ಲೂ ಉತ್ತಮ ಸಂಘಟನೆ ಹೊಂದಿರುವ ಬಿಜೆಪಿ ಬಹಳ ಆಳವಾಗಿ ಬೇರೂರಿರುವ ಪಕ್ಷವಾಗಿದೆ ಎಂದರು. ಹಿಂದೆ ದೇಶದಲ್ಲಿ ಇದ್ದ ಯುಪಿಎ ಸರ್ಕಾರ ದೇಶದಲ್ಲಿ ಅಸ್ಥಿರತೆ ಉಂಟು ಮಾಡಿತ್ತು. 

ಆರ್ಥಿಕವಾಗಿ ಅಸ್ಥಿರತೆ ಉಂಟಾಗಿ ಭ್ರಷ್ಟಾಚಾರದ ಸುರಿಮಳೆಯೇ ಆಯಿತು. ಪ್ರತಿಯೊಬ್ಬ ನಾಗರಿಕನಿಗೆ ಆತ್ಮವಿಶ್ವಾಸ ಮೂಡಬೇಕು. ನಾವು ಸುರಕ್ಷಿತವಾಗಿ ಇದ್ದೇವೆ ಎಂಬ ಭಾವನೆ ಬರಬೇಕು. ಈ ನಿಟ್ಟಿನಲ್ಲಿ ದೇಶದಲ್ಲಿ ಅತಿ ಹೆಚ್ಚು ರಸ್ತೆ, ವಿಮಾನ ನಿಲ್ದಾಣ ಎಲ್ಲವೂ ಅಭಿವೃದ್ಧಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್‌ ಬಗ್ಗೆ ಮಾತಾಡುವಾಗ ವಿರೋಧ ಪಕ್ಷಗಳು ಹಾಸ್ಯ ಮಾಡಿದವು. ಒಂದು ಮನೆಯ ಸ್ವಚ್ಛತೆಯ ಬಗ್ಗೆ ಅರ್ಥ ಮಾಡಿಕೊಳ್ಳದೇ ಇರುವವರು 70 ವರ್ಷ ಆಡಳಿತ ಮಾಡಿದ್ದು ದುರ್ದೈವದ ಸಂಗತಿ ಎಂದು ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದರು. ಚುನಾವಣೆಗೆ ಪಕ್ಷ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ನಾವು ಮಾಡಿದ ಸಾಧನೆಯ ವರದಿ ಹಿಡಿದು ಮತ ಕೇಳುತ್ತಿದ್ದೇವೆ. ಜತೆಗೆ ಕಾಂಗ್ರೆಸ್‌ನ ದುರಾಡಳಿತದ ಬಗ್ಗೆಯೂ ಜನರಿಗೆ ತಿಳಿಸಲಾಗುವುದು. 

ಕಾಂಗ್ರೆಸ್‌ ಗೆದ್ದರೆ ಬಿಜೆಪಿ ಭ್ರಷ್ಟಾಚಾರ ತನಿಖೆಗೆ ಆಯೋಗ: ರಣದೀಪ್‌ ಸಿಂಗ್‌ ಸುರ್ಜೇವಾಲಾ

ಕಾಂಗ್ರೆಸ್‌ನವರು ಧರ್ಮ ಒಡೆಯುವ ಕೆಲಸ ಮಾಡಿದರು. ಆದರೆ ನಾವು ಧರ್ಮಗಳನ್ನು ಜೋಡಿಸುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್‌ ಸರ್ಕಾರ ಇದ್ದಾಗ ಕೋಮು ಗಲಭೆಗಳಾದವು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿತ್ತು. ರಾಜ್ಯದ ಅಭಿವೃದ್ಧಿಯೇ ಆಗಿರಲಿಲ್ಲ. ಆ ಅವಧಿ ಕರಾಳ ದಿನಗಳಾಗಿದ್ದವು ಎಂದು ಹಿಂದಿನ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.