ರಾಷ್ಟ್ರೀಯ ಕಾಂಗ್ರೆಸ್ ಪಾಲಿಗೆ ಅತ್ಯಂತ ಪ್ರಮುಖವೆನಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜಗೊಳಿಸುವ ದಿಸೆಯಲ್ಲಿ ರಾಜ್ಯ ನಾಯಕರಿಗೆ ಹೆಗಲು ಕೊಟ್ಟು ದುಡಿದವರು ರಣದೀಪ್ ಸಿಂಗ್ ಸುರ್ಜೇವಾಲಾ.
ಸಂದರ್ಶನ: ಎಸ್.ಗಿರೀಶ್ ಬಾಬು
ರಾಜ್ಯ ಕಾಂಗ್ರೆಸ್ ಬಣ ರಾಜಕಾರಣದಲ್ಲಿ ಮುಳುಗಿದ್ದ ಸಂದರ್ಭದಲ್ಲಿ ಕರ್ನಾಟಕಕ್ಕೆ ರಾಜ್ಯ ಉಸ್ತುವಾರಿಯಾಗಿ ಆಗಮಿಸಿದವರು ರಣದೀಪ್ ಸಿಂಗ್ ಸುರ್ಜೇವಾಲಾ. ಹರ್ಯಾಣ ಮೂಲದ ಹಿರಿಯ ರಾಜಕಾರಣಿ ರಾಜ್ಯಕ್ಕೆ ಆಗಮಿಸಿದ ಕಾಲಘಟ್ಟದಲ್ಲಿ ಕರ್ನಾಟಕ ಕಾಂಗ್ರೆಸ್ ಬಣ ರಾಜಕಾರಣದಲ್ಲಿ ಮುಳುಗಿ ಹೋಗಿತ್ತು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣದ ನಡುವೆ ತೀವ್ರ ಪೈಪೋಟಿಯಿತ್ತು. ಈ ಉಭಯ ಬಣಗಳ ವೈರುದ್ಧ್ಯ ನಿರ್ವಹಿಸಿ ಪಕ್ಷದಲ್ಲಿ ಸಾಮರಸ್ಯ ಮೂಡವಂತೆ ನೋಡಿಕೊಳ್ಳುವಲ್ಲಿ ಸುರ್ಜೇವಾಲಾ ಕೊಡುಗೆ ದೊಡ್ಡದು.
ರಾಷ್ಟ್ರೀಯ ಕಾಂಗ್ರೆಸ್ ಪಾಲಿಗೆ ಅತ್ಯಂತ ಪ್ರಮುಖವೆನಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜಗೊಳಿಸುವ ದಿಸೆಯಲ್ಲಿ ರಾಜ್ಯ ನಾಯಕರಿಗೆ ಹೆಗಲು ಕೊಟ್ಟು ದುಡಿದವರು ಸುರ್ಜೇವಾಲಾ. ಚುನಾವಣೆಗೆ ಕೆಲವೇ ದಿನಗಳಿರುವ ಈ ಹಂತದಲ್ಲಿ ಪಕ್ಷದ ಸಂಘಟನೆ, ಚುನಾವಣಾ ಸಿದ್ಧತೆ, ಬಣ ರಾಜಕಾರಣ, ಮುಂದಿನ ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯ ಅವರ ಎರಡು ಕ್ಷೇತ್ರಗಳ ಸ್ಪರ್ಧೆ ಸೇರಿದಂತೆ ಕಾಂಗ್ರೆಸ್‌ಗೆ ಚುನಾವಣಾ ಸಿದ್ಧತೆಯ ಮಹತ್ವದ ಪ್ರಶ್ನೆಗಳಿಗೆ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ರಣದೀಪ್ ಸಿಂಗ್ ಸುರ್ಜೇವಾಲಾ.
ಇಂದಿನಿಂದ ರಾಜ್ಯದಲ್ಲಿ ಐಟಿ ದಾಳಿಗೆ ಸಿದ್ಧತೆ: ಸುರ್ಜೇವಾಲಾ ಆರೋಪ
* ನಾಯಕತ್ವ ಘೋಷಣೆ ಮಾಡದೆ ಚುನಾವಣೆ ಎದುರಿಸಲು ಮುಂದಾಗಿದ್ದೀರಿ. ಇದು ಎಷ್ಟುಸರಿ?
ನಾವು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಈಗ ನೀವು ಹೇಳಿ ಬಿಜೆಪಿ ಯಾರ ಫೇಸ್ ಮುಂದಿಟ್ಟುಕೊಂಡಿದೆ? ನಳಿನ್‌ಕುಮಾರ್ ಕಟೀಲ್ ಹಾಗೂ ಬಸವರಾಜ ಬೊಮ್ಮಾಯಿ? (ನಗು). ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಬಹಿರಂಗ ಸವಾಲು ಹಾಕುತ್ತೇನೆ. ನಾವು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನೇತೃತ್ವ ಘೋಷಿಸಿದಂತೆ ಕಟೀಲ್ ಹಾಗೂ ಬೊಮ್ಮಾಯಿ ಹೆಸರು ಘೋಷಿಸಲಿ ನೋಡೋಣ. ಅಕಸ್ಮಾತ್ ಘೋಷಿಸಿದರೆ, ಬಿಜೆಪಿಗೆ ರಾಜ್ಯದಲ್ಲಿ 40 ಸೀಟು ಬರುವುದಿಲ್ಲ.
* ಚುನಾವಣೆಯಲ್ಲಿ ಗೆದ್ದರೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಪೈಕಿ ಯಾರು ಮುಂದಿನ ಸಿಎಂ?
ಅದನ್ನು ನೂತನ ಶಾಸಕರು ಹಾಗೂ ಪಕ್ಷದ ನಾಯಕತ್ವ ಒಗ್ಗೂಡಿ ಸಾಮರಸ್ಯದಿಂದ ತೀರ್ಮಾನ ಮಾಡುತ್ತದೆ. ಕಳೆದ 75 ವರ್ಷಗಳಿಂದ ಕಾಂಗ್ರೆಸ್ ಇದನ್ನು ಮಾಡಿಕೊಂಡು ಬಂದಿದೆ. ಈ ಬಾರಿಯೂ ಮಾಡುತ್ತದೆ.
* ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನಡುವೆ ಸಾಮರಸ್ಯ ಮೂಡಿಸಲು ಅಧಿಕಾರ ಹಂಚಿಕೆಯ ಫಾರ್ಮುಲಾ?
ಅಂತಹ ಯಾವುದೇ ಮ್ಯಾಜಿಕ್ ಫಾರ್ಮುಲಾವನ್ನು ನಾವು ಮಾಡಿಲ್ಲ.
* ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬಯಸಿದ್ದಾರಲ್ಲ?
ಸಿದ್ದರಾಮಯ್ಯ ಅವರು ಯಾವತ್ತೂ ನನಗೆ ಎರಡು ಕ್ಷೇತ್ರಗಳಲ್ಲಿ ಸೀಟು ಬೇಕು ಎಂದು ಕೇಳಿಲ್ಲ. ಕೆಲ ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ತಮಗೆ ಒತ್ತಡವಿದೆ. ಆದರೆ, ತಾವು ಹೈಕಮಾಂಡ್ ಸೂಚಿಸಿರುವಂತೆ ವರುಣದಿಂದ ಸ್ಪರ್ಧಿಸುತ್ತೇನೆ. ಉಳಿದ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ತನ್ಮೂಲಕ ಪಕ್ಷದ ಅತ್ಯಂತ ನಿಷ್ಠಾವಂತ ಸೇನಾಧಿಪತಿಯಂತೆ ಅವರು ವರ್ತಿಸಿದ್ದಾರೆ. ನಾಯಕತ್ವ ಈ ಬಗ್ಗೆ ತೀರ್ಮಾನಿಸುತ್ತದೆ.
* ಬಹಿರಂಗವಾಗಿಯೇ ಅವರು ಕೋಲಾರದಲ್ಲೂ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದಾರಲ್ಲ?
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂದು ಅವರ ಬೆಂಬಲಿಗರು, ವಿವಿಧ ಕ್ಷೇತ್ರಗಳ ನಾಯಕರು ನನ್ನ ಬಳಿ ಅಭಿಪ್ರಾಯ ಹೇಳಿದ್ದಾರೆ. ಈ ಅಭಿಪ್ರಾಯವನ್ನು ಕೇಂದ್ರ ಚುನಾವಣಾ ಸಮಿತಿಗೆ ತಿಳಿಸಿದ್ದೇನೆ. ಈ ರೀತಿಯ ಅಭಿಪ್ರಾಯ ಇರುವುದರಲ್ಲಿ ಯಾವ ತಪ್ಪು ಇಲ್ಲವಲ್ಲ. ಅಂತಿಮವಾಗಿ ಈ ಬಗ್ಗೆ ಕೇಂದ್ರ ಚುನಾವಣಾ ಸಮಿತಿ ಸೂಕ್ತ ನಿರ್ಧಾರ ಮಾಡುತ್ತದೆ.
* ಕೋಲಾರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಅಲ್ಲಿ ಸ್ಪರ್ಧೆ ಬೇಡ ಎಂದು ಹೈಕಮಾಂಡ್ ಹೇಳಿದ್ದು ಏಕೆ?
ನಾವು ಯಾವ ನಿರ್ಧಾರವನ್ನು ಮೇಲಿನಿಂದ ಹೇರುವುದಿಲ್ಲ. ಪ್ರಜಾಸತ್ತಾತ್ಮಕವಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಲಹೆ, ಮಾರ್ಗದರ್ಶನ ಮಾಡಲಾಗುತ್ತದೆ.
* ರಾಹುಲ್ ಗಾಂಧಿ ಸಲಹೆ ನೀಡಿದರೂ ಅದು ರಾಜ್ಯ ನಾಯಕರ ಪಾಲಿಗೆ ಆದೇಶ ಅಲ್ಲವೆ?
ರಾಹುಲ್ ಗಾಂಧಿ ಅವರು ನಮ್ಮ ನಾಯಕರು, ಖರ್ಗೆ ಅವರು ನಮ್ಮ ಅಧ್ಯಕ್ಷರು. ನಮ್ಮ ಕುಟುಂಬದ ಮುಖ್ಯಸ್ಥರು. ಕುಟುಂಬದ ಸದಸ್ಯರಿಗೆ ಅವರು ಸಲಹೆ ನೀಡಬಹುದು. ಆದರೆ, ಅದು ಖಂಡಿತವಾಗಿಯೂ ಆದೇಶವಲ್ಲ.
ಕಳ್ಳರನ್ನು ಕಳ್ಳ ಎನ್ನುವುದು ಅಪರಾಧವೇ: ರಣದೀಪ್ ಸಿಂಗ್ ಸುರ್ಜೇವಾಲ
* ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್‌ಗೆ ಲಾಭ ಆಗುವುದಿಲ್ಲ ಅನಿಸಿದ್ದು ಏಕೆ?
ಕೋಲಾರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್‌ಗೆ ಲಾಭವಾಗುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗಾಗಲಿ ಅಥವಾ ಹೈಕಮಾಂಡ್‌ಗಾಗಲಿ ಅನಿಸಿಲ್ಲ. ಈಗಾಗಲೇ ವರುಣದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಬೇರೆ ಕ್ಷೇತ್ರಗಳಂದ ಬೇಡಿಕೆಯಿದೆ. ಆ ಬಗ್ಗೆ ಸಿಇಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ.
* ಕಾಂಗ್ರೆಸ್ ಮೊದಲ ಪಟ್ಟಿಸುಲಲಿತವಾಗಿತ್ತು. ಎರಡನೇ ಪಟ್ಟಿಗೆ ವಿಪರೀತ ಕಸರತ್ತು ನಡೆದಿದೆ?
ಒಟ್ಟು ಸೀಟುಗಳ ಪೈಕಿ ಮೂರನೇ ಎರಡರಷ್ಟುಸೀಟುಗಳಿಗೆ ಹೆಚ್ಚಿನ ಸಮಸ್ಯೆಯಿಲ್ಲದೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ಕಾಂಗ್ರೆಸ್‌ನಲ್ಲಿ ಪ್ರತಿ ಕ್ಷೇತ್ರದಲ್ಲೂ ಗೆಲ್ಲುವ ಸಾಮರ್ಥ್ಯವಿರುವ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದು ಪಕ್ಷದ ಶಕ್ತಿಯೇ ಹೊರತು ದೌರ್ಬಲ್ಯವಲ್ಲ. ಹೀಗಾಗಿ ಪ್ರಕ್ರಿಯೆ ನಡೆದಿದೆ. ಆದರೆ, ‘ಬಿಜೆಪಿ ಮೇ ಜೂತೇ ಮೇ ದಾಲ್, ಬಟ್ ರಹೀ ಹೇ ದಾಲ್’ (ತೊವ್ವೆಯನ್ನು ಶೂನಲ್ಲಿ ಹಾಕಿ ಹಂಚಲಾಗುತ್ತಿದೆ). ಆ ಪಕ್ಷದ ಕೆಲ ಶಾಸಕರಿಗೆ ಸ್ಪರ್ಧೆ ಮಾಡಲು ಮನಸ್ಸಿಲ್ಲ. ಕೆಲ ಶಾಸಕರಂತೂ ತಮ್ಮ ಪ್ರಚಾರ ಸಾಮಗ್ರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವನ್ನೇ ಹಾಕುತ್ತಿಲ್ಲ. ಹಾಕಿದರೂ ಅದನ್ನು ಭೂತಗಾಜು ಹಿಡಿದು ಹುಡುಕುವಂತಿದೆ. ಮುಖ್ಯಮಂತ್ರಿಯವರ ಮಾತು, ಸಚಿವರು ಕೇಳುತ್ತಿಲ್ಲ. ಸಚಿವರ ಮಾತಿಗೆ ಶಾಸಕರು ಬೆಲೆ ನೀಡುತ್ತಿಲ್ಲ. ಇಂತಹ ಅವ್ಯವಸ್ಥೆ ಬಿಜೆಪಿಯಲ್ಲಿದೆ. ಕಾಂಗ್ರೆಸ್‌ನಲ್ಲಿ ಅತ್ಯಂತ ಟಿಕೆಟ್ ಹಂಚಿಕೆ ಅತ್ಯಂತ ಕ್ಲಿಷ್ಟವಾಗಿದ್ದರೂ ಸಾಮರಸ್ಯದಿಂದ ನಡೆದಿದೆ.
* ಟಿಕೆಟ್ ಕೇಳಿದರೆ ಪಕ್ಷದ ನಾಯಕರು ದುಡ್ಡು ಎಷ್ಟುಇಟ್ಟಿದ್ದೀಯಾ ಅಂತ ಕೇಳುತ್ತಾರಂತೆ?
ಇದು ಸಂಪೂರ್ಣ ಅಸತ್ಯ. ಹಣದ ಮೇಲೆ ಚುನಾವಣೆ ನಡೆಸುವುದು ಬಿಜೆಪಿ. ಈಗಾಗಲೇ ಜನರಿಂದ ಲೂಟಿ ಮಾಡಿದ ಹಣವನ್ನು ಬಳಸಿ ಚುನಾವಣೆ ನಡೆಸಲು ಬಿಜೆಪಿ ಸಜ್ಜಾಗಿದೆ. ಇದಕ್ಕೆ ಆ ಪಕ್ಷದ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಮತವೊಂದಕ್ಕೆ ಆರು ಸಾವಿರ ರು. ನೀಡುತ್ತೇವೆ ಎಂದು ಹೇಳಿದ್ದೆ ಸಾಕ್ಷಿ. ಆದರೆ, ಜನರು ಹಣಕ್ಕಾಗಿ ಮತ ಮಾರಾಟ ಮಾಡುವುದಿಲ್ಲ. ಹಾಗೇನಾದರೂ ಆಗಿದ್ದರೆ ಈ ‘ಮೋಡಾನಿ’ ಸರ್ಕಾರ 75 ವರ್ಷದ ಹಿಂದೆಯೇ ಭಾರತದಲ್ಲಿ ಅಧಿಕಾರಕ್ಕೆ ಬಂದಿರುತ್ತಿತ್ತು. ಕಾಂಗ್ರೆಸ್ ಸಿದ್ಧಾಂತದ ಬಲದ ಮೇಲೆ ಚುನಾವಣೆ ನಡೆಸುತ್ತದೆ. ಅದಾನಿಯಂತಹ ಕೈಗಾರಿಕೋದ್ಯಮಿಯ ಹಣವನ್ನು ನಂಬಿಯಲ್ಲ.
* ಸಮರ್ಥ ಅಭ್ಯರ್ಥಿಗಳಿದ್ದಾರೆ ಎನ್ನುವಿರಿ. ಆದರೆ, ಬಿಜೆಪಿ ಶಾಸಕರನ್ನು ಸೆಳೆಯಲು ಕಾಂಗ್ರೆಸ್ಸಿಗರು ದುಂಬಾಲು ಬಿದ್ದಿದೆ ಎಂಬ ಆರೋಪವಿದೆ?
ಬಸವರಾಜ ಬೊಮ್ಮಾಯಿ ದಿಗಿಲು ಬಿದ್ದಿದ್ದಾರೆ. ತಮ್ಮ ಪಕ್ಷದ ಜನರನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಾಯಿಗೆ ಬಂದಂತೆ ಇಂತಹ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯಿಂದ ಶಾಸಕರು ಮಾತ್ರವಲ್ಲ, ಕೆಳ ಹಂತದ ಕಾರ್ಯಕರ್ತರು, ಪರಿಶಿಷ್ಟ, ಹಿಂದುಳಿದ ವರ್ಗಗಳ ನಾಯಕರು ಪಕ್ಷಕ್ಕೆ ಸೇರಲು ಮುಂದಾಗಿದ್ದಾರೆ. ಇದರಿಂದ ಬೊಮ್ಮಾಯಿ ಗಾಬರಿ ಬಿದ್ದು ಯುದ್ದಕ್ಕೆ ಮೊದಲೇ ಸೋತು ಅಸ್ತ್ರ ತ್ಯಜಿಸಿದ ಸೇನೆಯ ಸೇನಾಧಿಕಾರಿಯಂತೆ ಮಾತನಾಡುತ್ತಿದ್ದಾರೆ.
* ಅಂದರೆ, ಕಾಂಗ್ರೆಸ್ಸಿಗರು ಫೋನ್ ಮಾಡಿ ಬಿಜೆಪಿಗರನ್ನು ಕರೆಯುತ್ತಿಲ್ಲವೇ?
ಬಿಜೆಪಿಯ ಸಚಿವರು ಸೇರಿದಂತೆ ಹಲವಾರು ಮಂದಿ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲು ರಚಿಸಿರುವ ಕಾಂಗ್ರೆಸ್ ನಾಯಕರ ಸಮಿತಿಯು ಆಸಕ್ತಿ ತೋರುತ್ತಿರುವವರ ಪ್ರತಿಯೊಬ್ಬರ ಬಗ್ಗೆಯೂ ಪರಿಶೀಲಿಸಿ ನಿರ್ಧರಿಸುತ್ತದೆ. ನಾವೇನಾದರೂ ಬರುತ್ತೇವೆ ಎಂದವರನ್ನೆಲ್ಲ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಮುಂದಾದರೆ ಕರ್ನಾಟಕದಲ್ಲಿ ಬಿಜೆಪಿ ಎಂಬುದೇ ಇರುವುದಿಲ್ಲ. ಖಾಲಿಯಾಗಿ ಬಿಡುತ್ತದೆ.
ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಕಾಯ್ದೆ ಬೋಗಸ್: ಸುರ್ಜೇವಾಲಾ ಆರೋಪ
* ಕಾಂಗ್ರೆಸ್ ರಾಜ್ಯ ಉಸ್ತುವಾರಿಯಾಗಿ ಎರಡೂವರೆ ವರ್ಷ ಕಳೆದಿದ್ದಿರಿ, ಹೇಗಿದೆ ಅನುಭವ?
ನಾನು ರಾಜ್ಯ ಉಸ್ತುವಾರಿಯಾದ ಸಂದರ್ಭ ಕೆಲ ದಿನಗಳಲ್ಲೇ ದೇಶ ಹಾಗೂ ರಾಜ್ಯವನ್ನು ಕೊರೋನಾ ಬಾಧಿಸಿತ್ತು. ಈ ಅವಧಿಯಲ್ಲಿ ಕಾಂಗ್ರೆಸ್ ಕೇಡರ್ ತನ್ನ ಬಳಿ ಲಭ್ಯವಿದ್ದ ಸಂಪನ್ಮೂಲವನ್ನೇ ಬಳಸಿ ಜನರ ಸೇವೆಗೆ ನಿಂತಿದ್ದನ್ನು ಕಂಡೆ. ಕೊರೋನಾ ಉತ್ತುಂಗದ ಕಾಲದಲ್ಲೂ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಜೀವವನ್ನು ಲೆಕ್ಕಿಸದೇ ಜನರ ಸೇವೆ ಮಾಡಿದರು. ಇದೇ ಅವಧಿಯಲ್ಲಿ ಬಿಜೆಪಿಯ ಶಾಸಕರು ಹಾಗೂ ಸಚಿವರು ತಮ್ಮ ಬೆಡ್ ರೂಂ ಬಿಟ್ಟು ಹೊರಬರಲಿಲ್ಲ. ಅಷ್ಟೇ ಅಲ್ಲ, ಕೊರೋನಾ ನೆಪ ಮಾಡಿಕೊಂಡು ಎಲ್ಲ ರೀತಿಯ ದರ ಹೆಚ್ಚಳ ಮಾಡಿ ಜನರನ್ನು ಲೂಟಿ ಮಾಡಿದರು. ಕನ್ನಡಿಗರ ಜೀವನದ ಜತೆ ಹುಡುಗಾಟವಾಡಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ತನ್ನ ಮೊದಲ ಸಚಿವ ಸಂಪುಟದಲ್ಲೇ ಕೊರೋನಾ ಕಾಲದಲ್ಲಿ ನಡೆದ ಎಲ್ಲ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಿ, ಅಪರಾಧಿಗಳು ಎಷ್ಟೇ ದೊಡ್ಡವರಾಗಿದ್ದರು ಅವರಿಗೆ ಶಿಕ್ಷೆ ಕೊಡಿಸುವ ಕೆಲಸವನ್ನು ಮಾಡಲಿದೆ.
* ಕರ್ನಾಟಕದ ಚುನಾವಣೆ ರಾಷ್ಟ್ರೀಯ ಕಾಂಗ್ರೆಸ್‌ಗೆ ಎಷ್ಟು ಮುಖ್ಯ?
ಭಾರತೀಯತೆಯ ಜೀವ ಮಿಡಿಯುತ್ತಿರುವ ರಾಜ್ಯವೆಂದರೆ ಅದು ಕರ್ನಾಟಕ. ಚರಿತ್ರೆಯನ್ನು ನೀವು ಸೂಕ್ಷ್ಮವಾಗಿ ಅವಲೋಕಿಸಿದರೆ ಸಂದಿಗ್ದ ಸಂದರ್ಭಗಳಲ್ಲಿ ಭಾರತಕ್ಕೆ ಹೊಸ ಜೀವ- ಚೈತನ್ಯ ಕರುನಾಡಿನಿಂದ ಒದಗಿದ್ದು ಕಾಣುತ್ತದೆ. ಅದೇ ರೀತಿ ಕಾಂಗ್ರೆಸ್‌ಗೂ ಕೂಡ ಕರ್ನಾಟಕ ಹಲವು ಬಾರಿ ಹೊಸ ಚೈತನ್ಯ ನೀಡಿದೆ. ಇಂದಿರಾ ಗಾಂಧಿ ಅವರ ಚಿಕ್ಕಮಗಳೂರಿನಿಂದ ಗೆದ್ದು ದೇಶದ ರಾಜಕೀಯಕ್ಕ ಹೊಸ ಭಾಷ್ಯ ನೀಡಿದ್ದರೆ, ಸೋನಿಯಾ ಗಾಂಧಿ ಅವರು ಬಳ್ಳಾರಿಯಿಂದ ಗೆದ್ದದ್ದು ಕಾಂಗ್ರೆಸ್‌ಗೆ ಚೈತನ್ಯ ದೊರಕಿತ್ತು. ಈ ದೃಷ್ಟಿಯಲ್ಲಿ ಕರ್ನಾಟಕ ಕಾಂಗ್ರೆಸ್ ಪಾಲಿನ ಅದೃಷ್ಟದ ತಾಣ. ಅದೇ ರೀತಿ ಈ ಬಾರಿಯೂ ಕರ್ನಾಟಕವು ಅಸ್ಥಿರಗೊಂಡಿರುವ ಭಾರತೀಯ ರಾಜಕೀಯ ವ್ಯವಸ್ಥೆಗೆ ಹೊಸ ಶಕ್ತಿ ನೀಡಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಲಿದೆ. ಈ ಚುನಾವಣೆಯಲ್ಲಿ ಕನ್ನಡಿಗರು ನೀಡುವ ಸಂದೇಶ ಇಡೀ ದೇಶದಲ್ಲೇ ಹೊಸ ಸಂಚಲನ ಉಂಟು ಮಾಡಲಿದೆ.
* ಅದು ಹೇಗೆ?
ಬಿಜೆಪಿಯ ಸಿದ್ಧಾಂತ ಹಾಗೂ ದೆಹಲಿಯ ಆಡಳಿತಗಾರರಿಂದ (ರೂಲರ್ಸ್ ಆಫ್ ಡೆಲ್ಲಿ) ಭಾರತದ ಪ್ರಜಾಪ್ರಭುತ್ವ ಹಾಗೂ ಸಂವಿಧಾನವು ಅವನತಿಯ ಭೀತಿಯಲ್ಲಿದೆ. ಮೋದಿ ಅಂಡ್ ಕಂಪೆನಿಯ ಸರ್ವಾಧಿಕಾರ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ. ಜನರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಬಿಜೆಪಿಯ ಅವಸಾನ ಮಾತ್ರ ಈ ದೇಶವನ್ನು ಕಾಪಾಡಬಲ್ಲದು. ಈ ದೃಷ್ಟಿಯಿಂದ ಕರ್ನಾಟಕದಲ್ಲಿ ಬಿಜೆಪಿಯ ಸೋಲು ಭಾರತದ ಪ್ರಜಾಸತಾತ್ಮಕ ವ್ಯವಸ್ಥೆಯ ಉಳಿಯುವಿಕೆಗೆ ಅತ್ಯಂತ ಮುಖ್ಯ.
* ರಾಜ್ಯ ಸುತ್ತಿದ್ದೀರಿ. ಅಂತಹ ಸಾಧ್ಯತೆ ಕಾಣುತ್ತಿದೆಯೇ?
ಖಂಡಿತವಾಗಿಯೂ. ಕರ್ನಾಟಕದಲ್ಲಿ ಬದಲಾವಣೆಗಾಗಿ ಕೂಗೆದ್ದಿದೆ. ಬಿಜೆಪಿಯ ಆಡಳಿತದ ಬಗ್ಗೆ ಜನರಲ್ಲಿ ಆಳವಾದ ಕೋಪ ಹಾಗೂ ತೀವ್ರ ನಿರಾಶೆ ಮಡುಗಟ್ಟಿದೆ. ರೈತರು, ಮಹಿಳೆಯರು ಹಾಗೂ ಯುವ ಸಮೂಹಕ್ಕೆ ನಂಬಿ ಮೋಸಹೋದ ಭಾವ ಕಾಡಿದೆ. ಈ ಕೋಪ ತಾನಾಗೇ ಚುನಾವಣೆಯಲ್ಲಿ ಪ್ರಕಟವಾಗಲಿದ್ದು, ಬಿಜೆಪಿಯೆಂಬ 40 ಪರ್ಸೆಂಟ್ ಸರ್ಕಾರ, 40ಕ್ಕಿಂತಲೂ ಕಡಿಮೆ ಸೀಟು ಗೆಲ್ಲುವಂತೆ ಮಾಡಲಿದೆ.
* ಚುನಾವಣೆಗೆ ಬಾಕಿ ಉಳಿದಿರುವ ಅವಧಿಯಲ್ಲಿ ಅಮಿತ್ ಶಾ ಹಾಗೂ ಮೋದಿ ಕರ್ನಾಟಕದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಆಟ ಬದಲಾಗುತ್ತದೆ ಎಂದು ಬಿಜೆಪಿ ನಂಬಿದೆ?
ಬರ ಬಂತು, ಪ್ರವಾಹ ಆಯ್ತು ಆಗ ಎಲ್ಲಿದ್ದರು ಈ ಮೋದಿ ಹಾಗೂ ಶಾ? ಪಿಎಸ್‌ಐ ಹಗರಣ, ಸಹಾಯಕ ಪ್ರೊಫೆಸರ್, ಸಹಾಯಕ ಎಂಜಿನಿಯರ್ ನೇಮಕಾತಿ ಹಗರಣ ಅಷ್ಟೇ ಅಲ್ಲ ಸಫಾಯಿ ಕರ್ಮಚಾರಿಗಳ ನೇಮಕಾತಿಯಲ್ಲೂ ಹಗರಣ ನಡೆಯಿತು, ಆಗ ಮೋದಿ, ಶಾ ಕರ್ನಾಟಕದತ್ತ ತಿರುಗಿಯೂ ನೋಡಲಿಲ್ಲ. ಕರ್ನಾಟಕದ ಸಂಪತ್ತನ್ನು ಜಿಎಸ್‌ಟಿ ನೆಪದಲ್ಲಿ ದೆಹಲಿಯವರು ಲೂಟಿ ಮಾಡಿ, ಚಿಲ್ಲರೆ ಮೊತ್ತವನ್ನು ರಾಜ್ಯಕ್ಕೆ ನೀಡಿದರು. ಕರ್ನಾಟಕದ ಐಕಾನ್‌ಗಳಿಗೆ ಬಿಜೆಪಿ ಸರ್ಕಾರ ಅವಮಾನ ಮಾಡಿತು. ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರು ಅವರ ಟಾಬ್ಲೋಗೆ ಅವಕಾಶ ನೀಡಲಿಲ್ಲ. ನಾಡಿಗೆ ಅಪಾರ ಕೊಡುಗೆ ನೀಡಿದ ಚಾರಿತ್ರಿಕ ವ್ಯಕ್ತಿಗಳ ಪಾಠವನ್ನು ಪಠ್ಯದಿಂದ ಕಿತ್ತುಹಾಕಲಾಯಿತು. ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯವನ್ನು ಅಗೌರವದಿಂದ ಕಾಣಲಾಯಿತು. ಆಗೆಲ್ಲ ಈ ಮೋದಿ, ಶಾ ಎಲ್ಲಿದ್ದರು? ಈಗ ಬಂದರೆ ಅದನ್ನು ಜನ ನಂಬುವುದಿಲ್ಲ.
* ಚುನಾವಣೆ ಸಂದರ್ಭದ ತಂತ್ರಗಾರಿಕೆಯಲ್ಲಿ ಅಮಿತ್ ಶಾ ಸದಾ ಕಾಂಗ್ರೆಸ್ ವಿರುದ್ಧ ಮೇಲುಗೈ ಸಾಧಿಸಿದ್ದಾರೆ?
ಈ ಬಾರಿ ಅಂತಹ ತಂತ್ರಗಾರಿಕೆ ಕೆಲಸ ಮಾಡುವುದಿಲ್ಲ. ಏಕೆಂದರೆ, ಬಿಜೆಪಿಯು ಕನ್ನಡಿಗರ ಅಸ್ಮಿತೆಗೆ ಧಕ್ಕೆ ತಂದಿದೆ. ವಾಸ್ತವವಾಗಿ ಬಿಜೆಪಿಯು ಕನ್ನಡತನಕ್ಕೆ ನಿಜ ಶತ್ರು. ಬ್ರಾಂಡ್ ಕರ್ನಾಟಕವನ್ನು ನಾಶ ಮಾಡಿದ್ದು ಬಿಜೆಪಿ. ಇದರಿಂದಾಗಿ ಕರ್ನಾಟಕ ಅವನತಿಯ ಹಾದಿ ಹಿಡಿದಿದೆ. ಬಂಡವಾಳ ಹಾಗೂ ಉದ್ಯೋಗಗಳು ಅನ್ಯ ರಾಜ್ಯದ ಪಾಲಾಗುತ್ತಿವೆ. ಕನ್ನಡಿಗರ ಅಭಿಮಾನಕ್ಕೆ ಸತತವಾಗಿ ಧಕ್ಕೆ ತರುವ ಕೆಲಸ ಬಿಜೆಪಿಯಿಂದ ನಡೆದಿದೆ. ಹೀಗಾಗಿ ಬಿಜೆಪಿಯನ್ನು ಕನ್ನಡಿಗರು ಬೇ ಆಫ್ ಬೆಂಗಾಲ್‌ಗೆ ಬಿಸಾಡಲಿದ್ದಾರೆ.
* ಬಿಜೆಪಿಯವರು ಮೋದಿ ಹವಾ ಇದೆ ಅಂತಾರೆ?
ಇದು ಮೋದಿ ಚುನಾವಣೆಯಲ್ಲ. ಸಂಸತ್ತಿಗೆ ಚುನಾವಣೆ ನಡೆಯುವುದು 2025ಗೆ. ಈ ಚುನಾವಣೆಯಲ್ಲಿ ಮೋದಿ ಯಾವುದೇ ಪರಿಣಾಮ ಬೀರುವುದಿಲ್ಲ. ಇದಕ್ಕೆ ಅವರು ಇತ್ತೀಚೆಗೆ ರಾಜ್ಯಕ್ಕೆ ನೀಡಿದ ಕಡೆಯ ಮೂರು ಭೇಟಿಗಳೇ ನಿದರ್ಶನ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ರೂಪಿಸಿದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಪರಿಪೂರ್ಣವಾಗಿ ನಿರ್ಮಾಣ ಮಾಡಲು ಬಿಜೆಪಿಯಿಂದ ಆಗಲಿಲ್ಲ. ಹಾಗಿದ್ದರೂ, ಮೋದಿ ಬಂದು ಅದನ್ನು ಉದ್ಘಾಟಿಸಿದರು. ಉದ್ಘಾಟಿಸಿದ ಕೆಲವೇ ದಿನಗಳಲ್ಲಿ ಟೋಲ್ ಬರೆ ಹಾಕಿದರು. ಇದು ಮೋದಿ ಸರ್ಕಾರ ಕರುನಾಡಿನ ಬಗೆಗೆ ಹೊಂದಿರುವುದು, ಕಿವಿ ಮೇಲೆ ಹೂವು ಇಡುವ ಧೋರಣೆ ಹೊಂದಿದೆ ಎಂಬುದು ಸಾಬೀತಾಗುತ್ತದೆ.
* ಈ ಚುನಾವಣೆಗೆ ಕಾಂಗ್ರೆಸ್‌ನ ಅಜೆಂಡಾ ಏನು?
ಚುನಾವಣೆಗೆ ಕಾಂಗ್ರೆಸ್ ಅಜೆಂಡಾ ಸೆಟ್ ಮಾಡುತ್ತಿಲ್ಲ. ಬದಲಾಗಿ ಜನರೇ ಮಾಡಿದ್ದಾರೆ. ಕನ್ನಡಿಗರಿಗೆ ಪಾರದರ್ಶಕವಾದ ಹೊಣೆಗಾರಿಕೆ ಹೊಂದಿರುವ, 40 ಪರ್ಸೆಂಟ್ ಲಂಚ ಪಡೆಯದ ಸರ್ಕಾರ ಬೇಕಿದೆ.
* ಕಾಂಗ್ರೆಸ್ ಆಡಳಿತದಲ್ಲಿ ಸರ್ಕಾರದಲ್ಲಿ ಭ್ರಷ್ಟಾಚಾರವಿರಲಿಲ್ಲವೇ?
ಇದ್ದಿದ್ದರೆ ಕಳೆದ ಎಂಟೂವರೆ ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರ ಹಾಗೂ ಕಳೆದ ನಾಲ್ಕು ವರ್ಷದಿಂದ ರಾಜ್ಯದಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರ ಏಕೆ ತನಿಖೆ ನಡೆಸಿ, ತಪ್ಪಿತಸ್ಥರನ್ನು ಪತ್ತೆ ಮಾಡಿ ಶಿಕ್ಷೆ ವಿಧಿಸಲಿಲ್ಲ?
* ನೀವು ಅಧಿಕಾರಕ್ಕೆ ಬಂದರೆ ಅದನ್ನೇ ಮಾಡುವಿರಿ?
ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಡೆಸುವ ಮೊಟ್ಟಮೊದಲ ಸಚಿವ ಸಂಪುಟದಲ್ಲೇ ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಆಯೋಗವೊಂದನ್ನು ರಚಿಸಲಾಗುವುದು. ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಎಫ್‌ಐಆರ್ ಹಾಕಲಾಗುವುದು. ಯಾವುದೇ ರೀತಿಯ ದ್ವೇಷದ ರಾಜಕಾರಣ ಮಾಡದೆಯೇ ಜನರ ಹಣ ಲೂಟಿ ಮಾಡಿದವರನ್ನು ಪತ್ತೆ ಮಾಡಿ ಶಿಕ್ಷಿಸಲಾಗುವುದು. ಇದು ಮುಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವವರಿಗೆ ಪಾಠವಾಗಬೇಕು. ಎಚ್ಚರಿಕೆ ಗಂಟೆಯಾಗಬೇಕು ಆ ರೀತಿಯ ಕಠಿಣ ಕ್ರಮ ಕೈಗೊಳ್ಳುತ್ತೇವೆ.
ಬಿಜೆಪಿ ಸರ್ಕಾರ ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯ ದಿವಾಳಿ: ರಣದೀಪ್ ಸಿಂಗ್ ವಾಗ್ದಾಳಿ
* ಬಿಜೆಪಿ ಸರ್ಕಾರ ಒಳ ಮೀಸಲಾತಿ ನೀಡಿದೆ. ನಿಮ್ಮ ಅಭಿಪ್ರಾಯ?
ಮೀಸಲಾತಿ ಹಾಗೂ ಒಳ ಮೀಸಲಾತಿ ಸಮರ್ಪಕವಾಗಿ ಅರ್ಹ ವರ್ಗಗಳಿಗೆ ದೊರೆಯಬೇಕು ಎಂದರೆ ಮೀಸಲಾತಿಯ ಗರಿಷ್ಠ ಮಿತಿ ಶೇ. 50ಕ್ಕಿಂತ ಹೆಚ್ಚಾಗಬೇಕು. ಆಗ ಮಾತ್ರ ಲಿಂಗಾಯತ, ಒಕ್ಕಲಿಗ, ಹಿಂದುಳಿದ ಸಮುದಾಯದ ಬಯಕೆಗಳನ್ನು ಈಡೇರಿಸಬಹುದು. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮೀಸಲಾತಿ ಮಿತಿಯನ್ನು ಕನಿಷ್ಠ ಶೇ. 15ರಷ್ಟುಹೆಚ್ಚಳ ಮಾಡಲು ಅಗತ್ಯ ಕ್ರಮ ಹಾಗೂ ಶಿಫಾರಸನ್ನು ಮಾಡುತ್ತದೆ.
* ಬಿಜೆಪಿ ಮುಸ್ಲಿಂರ ಮೀಸಲಾತಿ ತೆಗೆದಿದೆ. ಅದನ್ನು ಹಿಂತಿರುಗಿಸುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಹೇಗೆ?
ಬಿಜೆಪಿ ಸರ್ಕಾರ ಮೀಸಲಾತಿ ಹಾಗೂ ಒಳ ಮೀಸಲಾತಿ ನೀಡಿರುವುದು ಒಂದು ಮೋಸ. ಈ ಮೀಸಲಾತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಅದು ಬಿದ್ದು ಹೋಗುತ್ತದೆ. ಅಲ್ಲದೆ, ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬ ಶಿಫಾರಸಿಗೆ ಕೇಂದ್ರ ಸರ್ಕಾರ ತನ್ನ ಒಪ್ಪಿಗೆಯನ್ನೇ ನೀಡಿಲ್ಲ. ಹೀಗಾಗಿ ಮೀಸಲಾತಿ ಹಾಗೂ ಒಳ ಮೀಸಲಾತಿ ಹೆಸರಿನಲ್ಲಿ ಬಿಜೆಪಿ ಸರ್ಕಾರ ಜನರಿಗೆ ವಂಚನೆ ಮಾಡುತ್ತಿದೆ. ಮೀಸಲಾತಿಯ ಮಿತಿಯನ್ನು ಶೇ. 50ಕ್ಕಿಂತ ಹೆಚ್ಚಳ ಮಾಡದೇ ಜನರನ್ನು ಏಮಾರಿಸುವ ಇಂತಹ ತಂತ್ರಗಳಿಂದ ವಾಸ್ತವವಾಗಿ ಯಾವುದೇ ಪ್ರಯೋಜನವಾಗದು. ಮೊದಲು ಮೀಸಲು ಮಿತಿ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು ಮೊದಲು ಆ ಕೆಲಸ ಮಾಡುತ್ತೇವೆ.
