ಮಹಾರಾಷ್ಟ್ರದ ವಿಮೆ ಕಿತಾಪತಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ: ಸಿಎಂ ಬೊಮ್ಮಾಯಿ ಕಿಡಿ
ಕರ್ನಾಟಕದ 865 ಗ್ರಾಮಗಳ ಜನತೆಗೆ ಮಹಾರಾಷ್ಟ್ರ ಸರ್ಕಾರವು ಜ್ಯೋತಿರಾವ್ ಫುಲೆ ಜನ ಆರೋಗ್ಯ ವಿಮೆ ಯೋಜನೆ ಜಾರಿಗೆ ಆದೇಶ ಮಾಡಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಏ.06): ಕರ್ನಾಟಕದ 865 ಗ್ರಾಮಗಳ ಜನತೆಗೆ ಮಹಾರಾಷ್ಟ್ರ ಸರ್ಕಾರವು ಜ್ಯೋತಿರಾವ್ ಫುಲೆ ಜನ ಆರೋಗ್ಯ ವಿಮೆ ಯೋಜನೆ ಜಾರಿಗೆ ಆದೇಶ ಮಾಡಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ಕರ್ನಾಟಕದ ಗಡಿಯಲ್ಲಿ ಇರುವವರಿಗೆ ಮಹಾರಾಷ್ಟ್ರ ಸರ್ಕಾರ ವಿಮೆ ಜಾರಿ ಮಾಡಿರುವುದು ಉದ್ಧಟತನದ ಪರಮಾವಧಿಯಾಗಿದ್ದು, ಇದು ಎರಡು ರಾಜ್ಯಗಳ ನಡುವಿನ ಬಾಂಧವ್ಯ ಕದಡುವ ಪ್ರಯತ್ನವಾಗಿದೆ ಎಂದಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿ ಇದ್ದರೂ ಮಹಾರಾಷ್ಟ್ರ ಸರ್ಕಾರ ಎರಡೂ ರಾಜ್ಯಗಳ ಗಡಿ ಭಾಗದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರ ಇದೇ ರೀತಿ ಉದ್ಧಟತನ ಮುಂದುವರೆಸಿದರೆ ಕರ್ನಾಟಕ ಸರ್ಕಾರವೂ ಕೂಡ ಮಹಾರಾಷ್ಟ್ರ ಗಡಿಯಲ್ಲಿರುವ ಕನ್ನಡಿಗರ ರಕ್ಷಣೆಗೆ ಇದೇ ರೀತಿಯ ವಿಮೆ ಜಾರಿಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗಡಿ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲ ಸೃಷ್ಟಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದರು.
ಚಿತ್ರ ನಟರ ಮುಖ ತೋರಿಸಿ ಬಿಜೆಪಿ ಮತಭಿಕ್ಷೆ: ಎಚ್.ಡಿ.ಕುಮಾರಸ್ವಾಮಿ
ಹೀಗಾಗಿ, ಮಹಾರಾಷ್ಟ್ರ ಸರ್ಕಾರ ತಕ್ಷಣ ತನ್ನ ಆದೇಶವನ್ನು ವಾಪಸ್ ಪಡೆದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಗೆ ಗೌವರ ಕೊಡುವ ಮೂಲಕ ಎರಡೂ ರಾಜ್ಯಗಳ ನಡುವಿನ ಬಾಂಧವ್ಯ ಕಾಪಾಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕರ್ನಾಟಕ ಗಡಿಯಲ್ಲಿರುವ ಜನರಿಗೆ ವಿಮೆ ನೀಡುವ ಹೆಸರಿನಲ್ಲಿ ಮಹಾರಾಷ್ಟ್ರ ಸರ್ಕಾರ, ಅವರಿಂದ ಮಹಾರಾಷ್ಟ್ರಕ್ಕೆ ಸೇರಿದವರೆಂದು ಘೋಷಣಾ ಪತ್ರ ತೆಗೆದುಕೊಳ್ಳುವುದು ಖಂಡನೀಯ ಎಂದೂ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ಕರ್ನಾಟಕದ 865 ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಜಾರಿ ಮಾಡಿರುವುದು ಉದ್ಧಟತನದ ಕ್ರಮ. ಈ ಆದೇಶ ಕೂಡಲೇ ವಾಪಸ್ ಪಡೆಯಿರಿ. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ಕನ್ನಡಿಗರು ಇದನ್ನು ಸಹಿಸುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾತಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.
- ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ
ಮೋದಿ, ಸಿಎಂ ಕಾರ್ಯ ಮೆಚ್ಚಿ ಸುದೀಪ್ ಪ್ರಚಾರಕ್ಕೆ ಒಪ್ಪಿದ್ದಾರೆ: ಸಚಿವ ಸುಧಾಕರ್
ಮಹಾರಾಷ್ಟ್ರದಲ್ಲಿರುವ ಬಿಜೆಪಿ ಸರ್ಕಾರ ಪದೇ ಪದೇ ಕಾಲು ಕೆರೆದು ಕಿತಾಪತಿ ಮಾಡುತ್ತಿದೆ. ಪ್ರತಿಯೊಂದು ವಿಷಯದಲ್ಲಿಯೂ ಕರ್ನಾಟಕವನ್ನು ಕೆರಳಿಸುತ್ತಿದೆ. ಚೀನಾ ಮನಸ್ಥಿತಿಯ ಆ ರಾಜ್ಯವು ಕರ್ನಾಟಕವನ್ನು ಶತ್ರು ದೇಶದಂತೆ ನೋಡುತ್ತಿದೆ. ನಾವೇನು ಶತ್ರುವೇ? ಆರೋಗ್ಯ ವಿಮೆ ಜಾರಿಯು ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ಧೂರ್ತ ಪ್ರಯತ್ನ. ಕನ್ನಡಿಗರು ಸುಮ್ಮನಿರುವ ಕಾಲ ಮುಗಿದಿದೆ.
- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ