ಕಾಂಗ್ರೆಸ್ ಗ್ಯಾರಂಟಿ ಬರೀ ಸುಳ್ಳು, ಇಂಥ ಪಕ್ಷ ನಂಬಬೇಡಿ: ಮೋದಿ ವಾಗ್ದಾಳಿ
ಕಾಂಗ್ರೆಸ್ಸಿಗರು ಚುನಾವಣೆಗೂ ಮೊದಲು ಗ್ಯಾರಂಟಿ ಕೊಡುತ್ತಾರೆ. ಆಮೇಲೆ ಕಮಿಟಿ ಹೆಸರು ಹೇಳಿಕೊಂಡು ಜನರನ್ನು ವಂಚಿಸುತ್ತಾರೆ. ಇಂಥ ಟ್ರ್ಯಾಕ್ ರೆಕಾರ್ಡ್ ಇರುವ ಕಾಂಗ್ರೆಸ್ ಅನ್ನು ನಂಬಬೇಡಿ. ಕಾಂಗ್ರೆಸ್ ಗ್ಯಾರಂಟಿ ಬರೇ ಸುಳ್ಳು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಹಾವೇರಿ/ಬಾಗಲಕೋಟೆ (ಮೇ.07): ಕಾಂಗ್ರೆಸ್ಸಿಗರು ಚುನಾವಣೆಗೂ ಮೊದಲು ಗ್ಯಾರಂಟಿ ಕೊಡುತ್ತಾರೆ. ಆಮೇಲೆ ಕಮಿಟಿ ಹೆಸರು ಹೇಳಿಕೊಂಡು ಜನರನ್ನು ವಂಚಿಸುತ್ತಾರೆ. ಇಂಥ ಟ್ರ್ಯಾಕ್ ರೆಕಾರ್ಡ್ ಇರುವ ಕಾಂಗ್ರೆಸ್ ಅನ್ನು ನಂಬಬೇಡಿ. ಕಾಂಗ್ರೆಸ್ ಗ್ಯಾರಂಟಿ ಬರೇ ಸುಳ್ಳು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಹಾವೇರಿಯಲ್ಲಿ ಬಿಜೆಪಿ ಸಮಾವೇಶ ಹಾಗೂ ಬಾಗಲಕೋಟೆಯ ಬಾದಾಮಿಯಲ್ಲಿ ನಾರಿ ಶಕ್ತಿ ಮಹಾ ಸಮಾವೇಶದಲ್ಲಿ ಶನಿವಾರ ಮಾತನಾಡಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹಿಮಾಚಲ ಪ್ರದೇಶದಲ್ಲಿ ಸರ್ಕಾರ ಬಂದ ಮೊದಲ ಕ್ಯಾಬಿನೆಟ್‌ನಲ್ಲೇ ಒಂದು ಲಕ್ಷ ಉದ್ಯೋಗ ಕೊಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಸರ್ಕಾರ ರಚನೆಯಾಗಿ ಹಲವು ಸಮಯದ ಬಳಿಕ ಈ ಬಗ್ಗೆ ಪ್ರಶ್ನಿಸಿದರೆ, ಕಮಿಟಿ ರಚಿಸಿದ್ದೇವೆ ಎನ್ನುತ್ತಿದ್ದಾರೆ.
ಮಹಿಳೆಯರಿಗೆ ಮಾಸಿಕ 1500, 300 ಯುನಿಟ್ ವಿದ್ಯುತ್ ಉಚಿತವಾಗಿ ಕೊಡುವುದಾಗಿಯೂ ಹಿಮಾಚಲ ಪ್ರದೇಶದಲ್ಲಿ ಭರವಸೆ ನೀಡಿದ್ದರು. ಆ ಬಗ್ಗೆ ಕೇಳಿದರೆ, ಕಮಿಟಿ ವರದಿ ಬಂದ ಮೇಲೆ ನೋಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದೇನಾ ಅವರ ಗ್ಯಾರಂಟಿ ಎಂದು ಪ್ರಶ್ನಿಸಿದ ಮೋದಿ, 50 ವರ್ಷಗಳ ಹಿಂದೆ ಗರೀಬಿ ಹಠಾವೋ ಎಂಬ ದೊಡ್ಡ ಸುಳ್ಳು ಹೇಳಿದ್ದ ಕಾಂಗ್ರೆಸ್ ಈಗಲೂ ಅದನ್ನೇ ಮುಂದುವರಿಸಿಕೊಂಡು ಬರುತ್ತಿದೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್‌ನ ಒಂದೊಂದು ಸುಳ್ಳು ಭರವಸೆಯೂ ಬಿಜೆಪಿ ಅಲೆಯಲ್ಲಿ ಕೊಚ್ಚಿ ಹೋಗಲಿದೆ. ರಾಜ್ಯದ ಕಾಂಗ್ರೆಸ್‌ನ ತುಷ್ಟೀಕರಣ ಹಾಗೂ ಕೆಟ್ಟನೀತಿ ಕಾರಣದಿಂದ ಲಿಂಗಾಯತ, ಹಿಂದುಳಿದ ವರ್ಗಗಳ ಜನ ಸಿಟ್ಟಾಗಿದ್ದಾರೆ. ಅವರೆಲ್ಲ ಒಂದು ಸಂಕಲ್ಪ ಮಾಡಿದ್ದು, ರಾಜ್ಯದಲ್ಲಿ ಬಹುಮತದ ಬಿಜೆಪಿ ಸರ್ಕಾರದ ಧ್ವನಿ ಪ್ರತಿ ಮನೆ, ಗಲ್ಲಿ, ಹಳ್ಳಿಗಳಲ್ಲೂ ಕೇಳಿಬರುತ್ತಿದೆ ಎಂದು ಹೇಳಿದರು.
ಬೆಂಗ್ಳೂರಲ್ಲಿ 26 ಕಿಮೀ ರೋಡ್ ಶೋ: ರಾಜ್ಯದಲ್ಲೇ ಮೊದಲು ಮೋದಿ ದಾಖಲೆ ಶೋ!
ಬೈಯುವುದೇ ಕಾಯಕ: ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆ ಬಳಿಕ ಕಾಂಗ್ರೆಸ್ಸಿಗರಿಗೆ ನನ್ನನ್ನು ಬೈಯುವುದೆ ಒಂದು ಕಾಯಕವಾಗಿದೆ. ಸದಾಕಾಲ ಭ್ರಷ್ಟಾಚಾರದಲ್ಲಿ ತೊಡಗಿಕೊಂಡು ಬಂದಿರುವ ಕಾಂಗ್ರೆಸ್ಸಿಗರನ್ನು ಭ್ರಷ್ಟಾಚಾರದಿಂದ ದೂರ ಇಡುವ ಪ್ರಯತ್ನ ಯಶಸ್ವಿಯಾಗಿದೆ. ಭ್ರಷ್ಟಾಚಾರವನ್ನು ತ್ರಿಶೂಲಾಸ್ತ್ರದ ಮೂಲಕ ನಿಲ್ಲಿಸಿದ್ದರಿಂದ ಮತ್ತು ಎಲ್ಲ ಹಂತದಲ್ಲೂ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲದಂತೆ ಮಾಡಿದ್ದರಿಂದ ಸದಾಕಾಲ ಕಾಂಗ್ರೆಸ್ಸಿಗರು ನನ್ನನ್ನು ನಿಂದಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.
ಕಳೆದ 9 ವರ್ಷಗಳಲ್ಲಿ ಬಡವರಿಗೆ ವಿವಿಧ ಹಂತಗಳಲ್ಲಿ ನೀಡಿದ ಸಹಾಯಧನ ಸೇರಿ .29 ಲಕ್ಷ ಕೋಟಿ ನೇರವಾಗಿ ಫಲಾನುಭವಿಗಳಿಗೆ ತಲುಪಿದೆ. ಆದರೆ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ .24 ಲಕ್ಷ ಕೋಟಿ ಹಣವನ್ನು ಅವರೇ ನುಂಗಿ ಹಾಕುತ್ತಿದ್ದರು. ಇದನ್ನು ತಪ್ಪಿಸಿದ್ದಕ್ಕಾಗಿ ಅವರು ನನ್ನನ್ನು ತೆಗಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಸರ್ಕಾರದಲ್ಲಿ ಇಂಟರ್‌ನೆಟ್ ಸೇರಿ ಹಲವು ಸೌಲಭ್ಯಗಳನ್ನು ಪಡೆಯಲು ನಾಲ್ಕಾರು ಸಾವಿರ ಹಣ ಕಟ್ಟಬೇಕಾಗಿತ್ತು. 2014ರ ಮೊದಲು 1ಜಿಬಿ ಡಾಟಾ ಬೆಲೆ .300 ಇತ್ತು. ಈಗ ಕೇವಲ .10ಗೆ ಸಿಗುತ್ತಿದೆ. ಮೊಬೈಲ್ ಸೇರಿ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳು ಬೇರೆ ದೇಶಗಳನ್ನು ಅವಲಂಬಿಸಬೇಕಾಗಿತ್ತು. ಈಗ ಭಾರತದಲ್ಲೇ ಈಗ ಹೆಚ್ಚು ಮೊಬೈಲ್ ಉತ್ಪಾದಿಸುತ್ತಿದ್ದೇವೆ ಎಂದರು.
ಗ್ಯಾರಂಟಿ ಈಡೇರಿಸಿದ್ದೇವೆ: ಮೋದಿ ವಿರುದ್ಧ ಸೋನಿಯಾ ಗಾಂಧಿ ಕಿಡಿ
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ಬಾದಾಮಿಯನ್ನು ಅಭಿವೃದ್ಧಿ ಮಾಡಿದ್ದಾಗಿ ಶಾಸಕ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಿದ್ದರೆ ಬಾದಾಮಿ ಹಾಗೂ ಬಾಗಲಕೋಟೆಯ ಜನತೆ ಮೊದಲಿನಿಂದಲು ಏಕೆ ಸೌಲಭ್ಯ ವಂಚಿತರಾಗಿದ್ದರು? ಬಾದಾಮಿಯಲ್ಲಿ ಏನಾದರೂ ಅಭಿವೃದ್ಧಿಯಾಗಿದ್ದರೆ ಅದು ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಎಂಬುದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ಈ ಚುನಾವಣೆಯಲ್ಲಿ ಸೋಲುವುದು ಗ್ಯಾರಂಟಿ ಎಂದು ಅರಿವಾದ ಬಳಿಕ ಅವರು ಕ್ಷೇತ್ರ ಬಿಟ್ಟು ಹೋಗಿದ್ದಾರೆ ಎಂದು ಮೋದಿ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.