Asianet Suvarna News Asianet Suvarna News

ಮೋದಿ ಪ್ರಧಾನ ಮಂತ್ರಿ ಅಲ್ಲ, ಪ್ರಚಾರ ಮಂತ್ರಿ: ಅಖಿಲೇಶ್‌ ಯಾದವ್‌

ಪಿಎಂ ಅಂದ್ರೆಪ್ರಧಾನ ಮಂತ್ರಿ ಅಲ್ಲ, ಪ್ರಚಾರ ಮಂತ್ರಿ. ನರೇಂದ್ರ ಮೋದಿ ಪ್ರಧಾನಿ ಆಗದೆ ಪ್ರಚಾರ ಮಂತ್ರಿಗಳಾಗಿದ್ದಾರೆಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಹೇಳಿದರು. 
 

Karnataka Election 2023 Akhilesh Yadav Slams On PM Narendra Modi gvd
Author
First Published May 7, 2023, 1:15 PM IST

ಚಿತ್ರದುರ್ಗ (ಮೇ.07): ಪಿಎಂ ಅಂದ್ರೆ ಪ್ರಧಾನ ಮಂತ್ರಿ ಅಲ್ಲ, ಪ್ರಚಾರ ಮಂತ್ರಿ. ನರೇಂದ್ರ ಮೋದಿ ಪ್ರಧಾನಿ ಆಗದೆ ಪ್ರಚಾರ ಮಂತ್ರಿಗಳಾಗಿದ್ದಾರೆಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಹೇಳಿದರು. ವಿಧಾನಸಭೆ ಚುನಾವಣೆ ಹಿನ್ನೆಲೆ ಶನಿವಾರ ಇಲ್ಲಿ ನಡೆದ ಸಮಾಜವಾದಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಸದಾ ಕಾಲ ಪ್ರಚಾರದಲ್ಲಿ ಮುಂದಿರುತ್ತಾರೆ. ಕರ್ನಾಟಕದಲ್ಲಿ ಕಡಿಮೆ ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ವೇಳೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಚಾರ ಮಾಡಿದ್ದರು. 

ಕೆಲಸ ಕಾರ್ಯ ಬಿಟ್ಟು ಕೇವಲ ಪ್ರಚಾರದಲ್ಲಿ ತೊಡಗಿದ್ದರು. ಮೋದಿ ಮಂತ್ರಿ ಮಂಡಲದ ಎಲ್ಲ ಸದಸ್ಯರು ಕೆಲಸ ಬಿಟ್ಟು ಕೆಟ್ಟಪ್ರಚಾರ ಮಾಡುತ್ತಾರೆಂದರು. ದೇಶದಲ್ಲಿ ನಿರುದ್ಯೋಗ, ಬೆಲೆಏರಿಕೆ ಸಮಸ್ಯೆಯಿದೆ. ಗಡಿ ಪ್ರದೇಶಗಳಲ್ಲಿ ಸುರಕ್ಷತೆ ಇಲ್ಲ. ಪೂಂಛ್‌, ಕಾಶ್ಮೀರದ ಗಡಿ ಪ್ರದೇಶದಲ್ಲಿ ಸೈನಿಕರು ಹುತಾತ್ಮರಾಗಿದ್ದಾರೆ. ಛತ್ತೀಸ್‌ಗಡದಲ್ಲಿ ನಕ್ಸಲರ ದಾಳಿ ನಡೆದಿದೆ. ಮಣಿಪುರದಂಥ ಶಾಂತಿ ಪ್ರದೇಶದಲ್ಲೂ ಹಿಂಸಾಕೃತ್ಯ ನಡೆಯುತ್ತಿದೆ. ಆಂತರಿಕ ಸುರಕ್ಷತೆ, ದೇಶದ ಗಡಿ ಸುರಕ್ಷತೆ ಸಾಧ್ಯವಾಗುತ್ತಿಲ್ಲ. ಬಿಜೆಪಿ ಸರ್ಕಾರ ದ್ವೇಷ ಬಿತ್ತಿ, ಜನರಲ್ಲಿ ಶಾಂತಿ ಕದಡುತ್ತಿದೆ ಎಂದು ದೂರಿದರು. 

ಡಿಕೆಶಿ ಪರ ಮತಯಾಚನೆ ವೇಳೆ ಸಂಸದ ಡಿ.ಕೆ.ಸುರೇಶ್‌ ಕಣ್ಣೀರಧಾರೆ!

ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳಿವೆ. ಭ್ರಷ್ಟಾಚಾರದ ಆರೋಪಕ್ಕೆ ಬಿಜೆಪಿ ವರಿಷ್ಠರು ಉತ್ತರಿಸಬೇಕು. ಎಐಸಿಸಿ ಅಧ್ಯಕ್ಷ ಖರ್ಗೆ ಹತ್ಯೆಗೆ ಸಂಚು ಆರೋಪ ಪ್ರಸ್ತಾಪಿಸಿದ ಅಖಿಲೇಶ್‌, ಸರ್ಕಾರ ಖರ್ಗೆ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು. ನಾವು ದೇಶದ ಎಲ್ಲಾ ಕಡೆ ಸಂಚರಿಸುತ್ತಿದ್ದೇವೆ. ಮೂರನೇ ರಂಗ ನಿರ್ಮಾಣ ಮಾಡುತ್ತೇವೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಬಿಜೆಪಿ ಸುಳ್ಳು ಭರವಸೆ ನಂಬಿ ಮೋಸ ಹೋಗಬೇಡಿ: ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ ಸಮಸ್ಯೆಗಳು ಉಲ್ಬಣವಾಗಿವೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಆರೋಪಿಸಿದರು. ಶನಿವಾರ ಇಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಎನ್‌.ಮಂಜಪ್ಪ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು ಬಿಜೆಪಿ ಬಂಡವಾಳಶಾಹಿಗಳ ಪರವಾಗಿದೆ. ದೇಶದಲ್ಲಿ ಉದ್ಯಮಪತಿಗಳ ಪ್ರಗತಿಯಾಗಿದೆಯೇ ಹೊರತು ಜನಸಾಮಾನ್ಯರ ಕಲ್ಯಾಣವಾಗಿಲ್ಲ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಆರೋಪಿಸಿದರು.

ನಗರದ ಕಾಟಮ್ಮ, ವೀರನಾಗಪ್ಪ ಕಲ್ಯಾಣ ಮಂಟಪದಲ್ಲಿ ಸಮಾಜವಾದಿ ಪಕ್ಷದಿಂದ ಶನಿವಾರ ಆಯೋಜಿಸಿದ್ದ, ಸಮಾವೇಶದಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಎನ್‌.ಮಂಜಪ್ಪ ಪರ ಮತಯಾಚಿಸಿ ಮಾತನಾಡಿದ ಅವರು, ದೇಶದ ಜನರ ಸಮಸ್ಯೆ ಆಲಿಸುವ ಮನಸ್ಸು ಕೇಂದ್ರಕ್ಕೆ ಇಲ್ಲದಂತಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ ಎಂದರು. ಕರ್ನಾಟಕದ ಜನ ಒಮ್ಮೆ ಕಾಂಗ್ರೆಸ್‌ಗೆ, ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ನೀಡುತ್ತಿದ್ದಾರೆ. ನಾವು ಕರ್ನಾಟಕದಲ್ಲಿ ಪಕ್ಷ ಬಲಪಡಿಸುವ ಉದ್ದೇಶ ಹೊಂದಿದ್ದೇವೆ. ನಮ್ಮ ಅಭ್ಯರ್ಥಿಗೆ ಮತ ನೀಡುವ ಮೂಲಕ ಬೆಂಬಲಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆಗೊಳಿಸಿರುವ ಪ್ರಣಾಳಿಕೆ ಅನುಷ್ಠಾನಕ್ಕೆ ಪಕ್ಷ ಸಿದ್ಧ ಎಂದು ಆಶ್ವಾಸನೆ ನೀಡಿದರು.

ನನ್ನನ್ನು ಸೋಲಿಸಲು ಇದೇನು ಗುಜರಾತ್‌ ಅಲ್ಲ: ಜಗದೀಶ್‌ ಶೆಟ್ಟರ್‌ ಕಿಡಿ

ಉತ್ತರ ಪ್ರದೇಶದಲ್ಲಿ ನಾನು ಸಿಎಂ ಆಗಿದ್ದಾಗ ವಯೋವೃದ್ಧರಿಗೆ ಪಿಂಚಣಿ, ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಉಚಿತ ಲ್ಯಾಪ್‌ಟಾಪ್‌, ಕ್ಯಾನ್ಸರ್‌ಗೆ ಉಚಿತ ಚಿಕಿತ್ಸೆ, ಆಂಬುಲೆನ್ಸ್‌ ವ್ಯವಸ್ಥೆ, ಸೇರಿ ಹಲವಾರು ಕಾರ್ಯಕ್ರಮ ನೀಡಿದ್ದೆ. ದೇಶದಲ್ಲಿ ಜನ ಜೀವನ ನಡೆಸುವುದು ಕಷ್ಟಕರವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಯುವಕ, ಯುವತಿಯರಿಗೆ ಉಜ್ವಲ ಭವಿಷ್ಯ ಸೃಷ್ಟಿಯಾಗುತ್ತಿಲ್ಲ. ಬಿಜೆಪಿಯ ಸುಳ್ಳು ಭರವಸೆಗಳಿಗೆ ಮೋಸ ಹೋಗಬೇಡಿ. ತುಂಬಾ ಆಲೋಚಿಸಿ ಈ ಬಾರಿಯ ಮತದಾನ ದಿನದಂದು ಜನಪರವಿರುವ ಅಭ್ಯರ್ಥಿ ಆಯ್ಕೆಗೆ ಮುಂದಾಗಿ ಎಂದು ಮನವಿ ಮಾಡಿದರು.

Follow Us:
Download App:
  • android
  • ios