Asianet Suvarna News Asianet Suvarna News

Karnataka Council Election: ಬಿಜೆಪಿಗೆ 15 ಸ್ಥಾನದಲ್ಲಿ ಗೆಲುವು

  • ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯು 15 ಸ್ಥಾನಗಳಲ್ಲಿ ಜಯಗಳಿಸಲಿದೆ 
  • ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ವಿಶ್ವಾಸ 
Karnataka Council Election BJP will win in 15 seats says N Ravikumar snr
Author
Bengaluru, First Published Nov 26, 2021, 12:43 PM IST

 ಮೈಸೂರು (ನ.26):  ವಿಧಾನ ಪರಿಷತ್‌ ಚುನಾವಣೆಯಲ್ಲಿ (Karnataka MLC Election) ಬಿಜೆಪಿಯು (BJP) 15 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ  ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ 65 ವಾರ್ಡ್‌ಗಳ ಮಹಾಶಕ್ತಿ ಕೇಂದ್ರದ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಯಿಂದ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ರಾಜ್ಯದಲ್ಲಿ ಬಿಜೆಪಿ ಆಯೋಜಿಸಿದ್ದ ಜನಸ್ವರಾಜ್‌ ಸಮಾವೇಶದಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಕ್ಷವು 25 ಸ್ಥಾನಗಳ ಪೈಕಿ ಹೆಚ್ಚಿನ ಸೀಟು ಗೆಲ್ಲಲು ತಯಾರಿ ಆರಂಭಿಸಿದ್ದೇವೆ. ಈ ಪೈಕಿ ಕನಿಷ್ಠ 15 ಸೀಟು ಗೆಲ್ಲುತ್ತೇವೆ ಎಂದರು.

ಮೇಲ್ಮನೆಯಲ್ಲಿ ಬಿಜೆಪಿ ಬಹುಮತಕ್ಕೆ 12 ಸೀಟು ಕೊರತೆ ಇದೆ. ಈ ಚುನಾವಣೆಯಲ್ಲಿ ಬಹುಮತ ಪಡೆಯುತ್ತೇವೆ. ಜೆಡಿಎಸ್‌ನಿಂದ 7 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಉಳಿದ ಕಡೆ ಬೆಂಬಲ ನೀಡುವಂತೆ ಮಾಜಿ ಸಿಎಂ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ. ಹಾಗಂತ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್‌ ನಿರುದ್ಯೋಗಿಗಳ ಕೂಟವಾಗಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಪರಮೇಶ್ವರ್‌ ಅವರಿಗೆ ಬಿಜೆಪಿ ಟೀಕಿಸುವುದೇ ಕೆಲಸ. ಇಲ್ಲಸಲ್ಲದ ಟೀಕೆ ಮಾಡುವುದರಿಂದ ಅವರ ಗೌರವ ಕಡಿಮೆಯಾಗುತ್ತದೆ ಎಂದರು.

ಕಾಂಗ್ರೆಸ್‌ 5 ದಶಕದಿಂದ ಆಡಳಿತ ನಡೆಸಿದೆ. 39 ವರ್ಷ ಒಂದೇ ಕುಟುಂಬದವರು ಪ್ರಧಾನಿಯಾಗಿದ್ದರು. ಈಗ ಅಳಿವಿನಂಚಿನಲ್ಲಿದೆ. ಪ್ರಾದೇಶಿಕ ಪಕ್ಷಗಳಿಗಿಂತ ಕಡಿಮೆ ಶಾಸಕರು, ಸಂಸದರನ್ನು ಹೊಂದಿದೆ. ಧ್ವಜ ಕಟ್ಟಲು ಜನರಿಲ್ಲದ ಪಕ್ಷವೀಗ ಪ್ರಪಂಚದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಎಂದೂ ಸೈದ್ಧಾಂತಿಕವಾಗಿ ರಾಜಿ ಮಾಡಿಕೊಂಡಿಲ್ಲ. ಸೈದ್ಧಾಂತಿಕವಾಗಿ ರಾಜಿಯಾಗುವ ಪಕ್ಷಗಳು ಬೇಗ ಅವಸಾನವಾಗುತ್ತವೆ ಎಂದು ಅವರು ಹೇಳಿದರು.

ಮಳೆ ಆವಾಂತರಕ್ಕೆ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದೆ. ಮುಖ್ಯಮಂತ್ರಿ ಮತ್ತು ಎಲ್ಲಾ ನಾಯಕರು ರಾಜ್ಯ ಪ್ರವಾಸ ಮಾಡಿ, ಪರಿಹಾರ ಘೋಷಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನಿರಾಶ್ರಿತರ ಮನೆಗೆ ಹೋಗಿ ಕ್ಯಾಶ್‌ ಕೊಟ್ಟರಾ? ಸಂವಿಧಾನಾತ್ಮಕವಾಗಿ, ಆಡಳಿತತ್ಮಾಕವಾಗಿ ಒಂದು ವಿಧಾನವಿದೆ. ಅದನ್ನು ವಿರೋಧ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕುಟುಕಿದರು.

 ಮೈಸೂರು ವಿಭಾಗೀಯ ಪ್ರಭಾರಿ ಮೈ.ವಿ. ರವಿಶಂಕರ್‌, ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಮುಖಂಡರಾದ ಎಂ. ರಾಜೇಂದ್ರ, ಸಂದೇಶ್‌ಸ್ವಾಮಿ, ಗಿರಿಧರ್‌, ವಡಿವೇಲು, ಭಾನುಪ್ರಕಾಶ್‌, ಸೋಮಶೇಖರ್‌, ರಘು ಇದ್ದರು.

ಬಿಜೆಪಿಗೆ ಜೆಡಿಎಸ್ ಬೆಂಬಲ :  ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಎಲ್ಲಿ ಜೆಡಿಎಸ್‌ (JDS) ಅಭ್ಯರ್ಥಿಗಳು ಸ್ಪರ್ಧಿಸುವುದಿಲ್ಲವೋ ಅಲ್ಲಿ ಬಿಜೆಪಿಯನ್ನು (BJP) ಜೆಡಿಎಸ್‌ ಬೆಂಬಲಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.

ಭಾನುವಾರ ಇಲ್ಲಿನ ಹಾಲಟ್ಟಿಬಳಿ ಇರುವ ಕವಟಗಿ ಮಠ ಫಾಮ್‌ ಹೌಸ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್‌ ಅಭ್ಯರ್ಥಿಗಳು ಇಲ್ಲದ ಕಡೆ ಬಿಜೆಪಿಗೆ ಸಹಕಾರ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಹಾಗೂ ಮಾಜಿ ಪ್ರಧಾಮಿ ಎಚ್‌.ಡಿ.ದೇವೇಗೌಡರಿಗೆ (HD Devegowda) ಮನವಿ ಮಾಡುವುದಾಗಿ ಹೇಳಿದರು.

ಅಭ್ಯರ್ಥಿಗಳ ಘೋಷಣೆ ಮಾಡುವ ಮೊದಲೇ ನಾಲ್ಕು ತಂಡಗಳ ಮೂಲಕ ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಬಿಜೆಪಿ ಜನ ಸ್ವರಾಜ್‌ (Jan Swaraj yatra) ಕಾರ್ಯಕ್ರಮ ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಕೇಂದ್ರದ ನಾಯಕರು ಪ್ರಚಾರ ನಡೆಸಲಿದ್ದಾರೆ ಎಂದರು

Follow Us:
Download App:
  • android
  • ios