Asianet Suvarna News Asianet Suvarna News

ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಹರಿಪ್ರಸಾದ್‌: ಕಾಂಗ್ರೆಸ್ಸಿಗರಿಂದ ಮನವೊಲಿಕೆ ಯತ್ನ

ಬಿ.ಕೆ.ಹರಿಪ್ರಸಾದ್‌ ಅವರನ್ನು ಭೇಟಿಯಾಗಿ ಮನವೊಲಿಸುವ ಪ್ರಯತ್ನ ನಡೆಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮತ್ತು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ. 

Karnataka Congress Leaders Tried to Convince BK Hariprasad grg
Author
First Published Sep 15, 2023, 8:30 AM IST

ಬೆಂಗಳೂರು(ಸೆ.15):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸಿ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿರುವ ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರನ್ನು ಗುರುವಾರ ನಗರದಲ್ಲಿ ಭೇಟಿಯಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮತ್ತು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಮನವೊಲಿಸುವ ಪ್ರಯತ್ನ ನಡೆಸಿದರು.

ಅತಿ ಹಿಂದುಳಿದ ವರ್ಗಗಳ ಸಮಾವೇಶವನ್ನು ರಾಜ್ಯಾದ್ಯಂತ ನಡೆಸುವ ಸಿದ್ಧತೆ ನಡೆಸಿದ್ದರು ಎನ್ನಲಾದ ಹರಿಪ್ರಸಾದ್‌ ಅವರಿಗೆ ಈ ಯತ್ನ ಕೈ ಬಿಡುವಂತೆ ಮನವೊಲಿಸಲು ಹೈಕಮಾಂಡ್ ಸೂಚನೆ ಮೇರೆಗೆ ಉಭಯ ಸಚಿವರು ಈ ಭೇಟಿ ನಡೆಸಿದರು. ಹರಿಪ್ರಸಾದ್ ಅವರು, ಮಾಜಿ ಸಚಿವ ದಿ. ಶ್ರೀರಾಮುಲು ಅವರ ಪುತ್ರ ಶ್ರೀನಾಥ್‌ ನೇತೃತ್ವದಲ್ಲಿ ರಾಜ್ಯಾದ್ಯಂತ ಹಿಂದುಳಿದವರ ಸಮಾವೇಶ ನಡೆಸುವ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.

ಬಿ.ಕೆ.ಹರಿಪ್ರಸಾದ್ ಬೇಸರಗೊಂಡಿರುವುದೇಕೆ ? ಕಾಂಗ್ರೆಸ್‌ ನಾಯಕನ ಮುಂದಿನ ನಡೆ ಏನು..?

ಆದರೆ, ಇಂತಹ ಸಮಾವೇಶಗಳನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲೊಡ್ಡುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಹೈಕಮಾಂಡ್‌ ನಾಯಕರು ಲೋಕಸಭಾ ಚುನಾವಣೆ ಸಾಮೀಪ್ಯದ ಈ ಹಂತದಲ್ಲಿ ಇಂತಹ ಸಮಾವೇಶ ನಡೆಸುವುದರಿಂದ ಪಕ್ಷ ಹಾಗೂ ಸರ್ಕಾರ ಎರಡಕ್ಕೂ ಹಿನ್ನೆಡೆಯಾಗಲಿದೆ. ಹೀಗಾಗಿ ಇಂತಹ ಪ್ರಯತ್ನ ನಡೆಸದಂತೆ ಮನವೊಲಿಸುವ ಹೊಣೆಯನ್ನು ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ನೀಡಿತ್ತು ಎನ್ನಲಾಗಿದೆ.

ಏನೇನೋ ಮಾತಾಡಿ ಕಾಂಗ್ರೆಸ್ ವರ್ಚಸ್ಸು ಹಾಳುಮಾಡ್ಬೇಡಿ: ಹರಿಪ್ರಸಾದ್‌ಗೆ ಸುರೇಶ್ ಬಾಬು ಸಲಹೆ

ಈ ಹಿನ್ನೆಲೆಯಲ್ಲಿ ಉಭಯ ನಾಯಕರು ಹರಿಪ್ರಸಾದ್ ಅ‍ವರನ್ನು ಭೇಟಿ ಮಾಡಿ ಸುದೀರ್ಘವಾಗಿ ಚರ್ಚಿಸಿದರು. ಈ ಸಂದರ್ಭದಲ್ಲಿ ರಾಜ್ಯದ ಜನ ಕಾಂಗ್ರೆಸ್‌ ಪಕ್ಷದ ಮೇಲೆ ಅಪಾರ ನಂಬಿಕೆಯಿಂದ ದೊಡ್ಡ ಮಟ್ಟದ ಜನಾದೇಶ ನೀಡಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಜೊತೆಗೆ ಎಲ್ಲ ನಾಯಕರೂ ಒಗ್ಗೂಡಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಶ್ರಮಿಸಬೇಕಾಗಿದೆ. ಈ ಎಲ್ಲ ಕಾರಣಗಳಿಂದ ತಾವು ಸಮಾಧಾನದಿಂದ ಇರಬೇಕು. ತಮಗೆ ಸೂಕ್ತ ಸ್ಥಾನ ಮಾನದ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸೋಣ. ನಾವೂ ನಿಮ್ಮ ಪರವಾಗಿ ಮಾತನಾಡುತ್ತೇವೆ ಎಂದು ಮನವೊಲಿಸುವ ಪ್ರಯತ್ನ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಹರಿಪ್ರಸಾದ್‌ ನಮ್ಮ ಪಕ್ಷದ ಹಿರಿಯ ನಾಯಕರು ಅವರನ್ನು ನಾವು ಭೇಟಿ ಆಗಬಾರದಾ? ಭೇಟಿ ಮಾಡಿದ ವೇಳೆ ಅನೇಕ ವಿಚಾರಗಳು ಚರ್ಚೆಗೆ ಬರುತ್ತವೆ. ಪಕ್ಷದ ಆಂತರಿಕ ವಿಷಯಗಳೂ ಇರುತ್ತವೆ. ಅವುಗಳನ್ನೆಲ್ಲಾ ಮಾಧ್ಯಮಗಳ ಮುಂದೆ ಹೇಳೋಕೆ ಆಗುತ್ತಾ? ಹರಿಪ್ರಸಾದ್‌ ಅವರಿಗೆ ಅಸಮಾಧಾನವಿದೆ ಎಂದು ಹೇಳಿದವರು ಯಾರು? ಅವರೇನಾದ್ರೂ ಹೇಳಿದ್ದಾರಾ? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.  

Follow Us:
Download App:
  • android
  • ios