ಏನೇನೋ ಮಾತಾಡಿ ಕಾಂಗ್ರೆಸ್ ವರ್ಚಸ್ಸು ಹಾಳುಮಾಡ್ಬೇಡಿ: ಹರಿಪ್ರಸಾದ್‌ಗೆ ಸುರೇಶ್ ಬಾಬು ಸಲಹೆ
ಜನಾಭಿಪ್ರಾಯ, ಶಾಸಕರ ಅಭಿಪ್ರಾಯ ಹಾಗೂ ಹೈಕಮಾಂಡ್ ನ ನಂಬಿಕೆ, ವಿಶ್ವಾಸ ಗಳಿಸಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾರೆ. ಅವರನ್ನು ಜಾತಿವಾದಿ ಎಂದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಸುರೇಶ್ ಬಾಬು
ಹಿರಿಯೂರು(ಸೆ.13): ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ ಏನೇನೋ ಮಾತಾಡಿ, ಕಾಂಗ್ರೆಸ್ ವರ್ಚಸ್ಸನ್ನು ಹಾಳು ಮಾಡಬೇಡಿ ಎಂದು ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು ಅವರು ಬಿ.ಕೆ.ಹರಿಪ್ರಸಾದ್‌ಗೆ ಸಲಹೆ ಮಾಡಿದ್ದಾರೆ.
ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಐದು ರಾಜ್ಯಗಳಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡಿರುವ ಹರಿಪ್ರಸಾದ್ ಅವರಿಗೆ ಬರೀ ಮಂತ್ರಿ ಪದವಿ ಶೋಭೆ ತರುವುದಿಲ್ಲ. ರಾಷ್ಟ್ರೀಯ ನಾಯಕರಾಗಿರುವ ಅವರು ಇತ್ತೀಚೆಗೆ ಯಾಕೋ ಮಂತ್ರಿ ಪದವಿ ಬಗ್ಗೆಯೇ ಸಭೆ ಸಮಾರಂಭಗಳಲ್ಲಿ ಮಾತಾಡುತ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅತಿ ಹಿಂದುಳಿದ ಸಮಾಜದ ಸಮಾವೇಶದಲ್ಲಿ ಜಿ.ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿಯವರನ್ನ ಇಲ್ಲವೇ ಅಲ್ಪಸಂಖ್ಯಾತರನ್ನ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಮಾಡಲಿಲ್ಲ ಎಂದು ದೂರಿರುವುದು ಸರಿಯಲ್ಲವೆಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಬಿ.ಕೆ. ಹರಿಪ್ರಸಾದ್‌ಗೆ ನೋಟಿಸ್ ಕೊಟ್ಟ ಕಾಂಗ್ರೆಸ್ ಹೈಕಮಾಂಡ್
ಸಿದ್ದರಾಮಯ್ಯರಂತಹ ಸಾಮಾನ್ಯ ಮನುಷ್ಯ 1984ರಲ್ಲಿ ಯಾವುದೇ ರಾಜಕೀಯ ಬೆಂಬಲವಿಲ್ಲದೆ ಸಾಮಾನ್ಯ ವಕೀಲನಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷೇತರನಾಗಿ ಗೆದ್ದು 2023 ರವರೆಗೂ ಹೋರಾಟದ ಮೂಲಕ ಗೆಲುವುಗಳನ್ನು ಕಂಡು ಎರಡು ಬಾರಿ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದವರು. ಜನಾಭಿಪ್ರಾಯ, ಶಾಸಕರ ಅಭಿಪ್ರಾಯ ಹಾಗೂ ಹೈಕಮಾಂಡ್ ನ ನಂಬಿಕೆ, ವಿಶ್ವಾಸ ಗಳಿಸಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾರೆ. ಅವರನ್ನು ಜಾತಿವಾದಿ ಎಂದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸುರೇಶ್ ಬಾಬು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರದೇ ಜಾತಿಯ ನನ್ನ ಪತ್ನಿ ಚಿತ್ರದುರ್ಗ ಜಿಲ್ಲಾ ಪಂಚಾಯ್ತಿಗೆ ಒಪ್ಪಂದದ ಪ್ರಕಾರ ಅಧ್ಯಕ್ಷರಾಗುವ ಸಂದರ್ಭ ಬಂದಾಗ ಕುರುಬ ಸಮಾಜದವರು ಈಗಾಗಲೇ ಹಿಂದೆ ಜಿಲ್ಲೆಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. ಉಪ್ಪಾರ ಸಮಾಜದವರಿಗೆ ಸ್ಥಾನ ಸಿಕ್ಕಿಲ್ಲ.ಹಾಗಾಗಿ ಉಪ್ಪಾರ ಸಮಾಜದ ಹೆಣ್ಣು ಮಗಳಿಗೆ ಅವಕಾಶ ಮಾಡಿಕೊಡಿ ಎಂದು ಜಿಲ್ಲೆಯ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದರು.
ರಾಜ್ಯದಿಂದ 30 ವರ್ಷಗಳ ಕಾಲ ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಅಧಿಕಾರ ಅನುಭವಿಸಿ ಈಗ ಈಗ ಜನಾಭಿಪ್ರಾಯದಿಂದ ಆಯ್ಕೆಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಹರಿಪ್ರಸಾದ್ ಮಾತನಾಡುವುದು ಸರಿ ಅನಿಸುತ್ತಿಲ್ಲ. ನೀವು ಸಹ ಮುಂದಿನ ಚುನಾವಣೆಯಲ್ಲಿ ಜನಪ್ರತಿನಿಧಿಯಾಗಿ ಗೆದ್ದು ಈ ರಾಜ್ಯದಲ್ಲಿ ಮಂತ್ರಿ, ಮುಖ್ಯಮಂತ್ರಿ ಆಗಬೇಕು ಎಂದು ಆಶಿಸುತ್ತೇನೆ ಎಂದು ಸುರೇಶ್ ಬಾಬು ಹೇಳಿಕೆಯಲ್ಲಿ ತಿಳಿಸಿದ್ದಾರೆ.