ಸಚಿವ ಸಂಪುಟ ವಿಸ್ತರಣೆ ಚರ್ಚೆಗಾಗಿ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಭೇಟಿ ಲಭ್ಯವಾಗಿಲ್ಲ. ಮೂರು ದಿನಗಳಿಂದ ಕಾಯುತ್ತಿದ್ದರೂ ಭೇಟಿಗೆ ಅವಕಾಶ ಸಿಗದ ಕಾರಣ ನಾಯಕರಲ್ಲಿ ಅಸಮಾಧಾನ.
ಬೆಂಗಳೂರು (ಜು.30): ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಮೂರನೇ ಬಾರಿಗೆ ದೆಹಲಿಗೆ ತೆರಳಿದ್ದು, ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭೇಟಿಗೆ ಅವಕಾಶ ನೀಡದಿರುವುದು ರಾಜ್ಯ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಜ್ಯ ಕಾಂಗ್ರೆಸ್‌ನ ಅಗ್ರನಾಯಕರ ಆದಿಯಾಗಿ ಭಾಗಶಃ ಸಚಿವ ಸಂಪುಟವೇ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದೆ. ಜತೆಗೆ, ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದ ಅವಕಾಶಕ್ಕಾಗಿ ಹಾತೊರೆಯುತ್ತಿರುವ 40-45 ಮಂದಿ ಶಾಸಕರೂ ಸಹ ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ.
ವರಿಷ್ಠರು ಸಂಪುಟ ವಿಸ್ತರಣೆ ಕುರಿತ ಚರ್ಚೆ ಹೆಸರಿನಲ್ಲಿ ರಾಜ್ಯ ನಾಯಕರನ್ನು ಸೋಮವಾರವೇ ದೆಹಲಿಗೆ ಕರೆಸಿಕೊಂಡಿದ್ದರು. ಆದರೆ, ಕಳೆದ ಮೂರು ದಿನಗಳಿಂದ ಅರ್ಧ ಗಂಟೆ ಭೇಟಿಗೂ ರಾಹುಲ್ ಗಾಂಧಿ ಅವರು ಲಭ್ಯವಾಗಿಲ್ಲ.
ಡಿ.ಕೆ. ಶಿವಕುಮಾರ್ ಅವರು ಪದಗ್ರಹಣ ಮಾಡಿ ಎರಡು ತಿಂಗಳು ಆಗುತ್ತಿದ್ದರೂ ಈವರೆಗೆ ಸಂಪುಟ ವಿಸ್ತರಣೆಯಾಗಿಲ್ಲ. ರಾಜ್ಯದಲ್ಲಿ ತೀವ್ರ ಬರ ಮತ್ತಿತರ ಸಮಸ್ಯೆಗಳಿದ್ದರೂ ಮುಖ್ಯಮಂತ್ರಿ ಆದಿಯಾಗಿ ಸಂಪುಟವನ್ನೇ ದೆಹಲಿಯಲ್ಲಿ ಕಾಯಿಸಲಾಗುತ್ತಿದೆ. ಇದು ರಾಜ್ಯದಲ್ಲಿ ಪ್ರತಿಪಕ್ಷಗಳಿಗೆ ಅಸ್ತ್ರವಾಗಿ ಬದಲಾಗಿದೆ.
ಮೂರನೇ ಬಾರಿ ಭೇಟಿ:
ಈ ಹಿಂದೆಯೂ ಎರಡು ಬಾರಿ ಚರ್ಚೆಗೆ ಕರೆದಿದ್ದ ರಾಹುಲ್‌ಗಾಂಧಿ ಅವರು ಯಾವುದೇ ತೀರ್ಮಾನ ಸೂಚಿಸಿರಲಿಲ್ಲ. ಕಳೆದ ವಾರ ದೆಹಲಿಗೆ ಕರೆಸಿದ್ದಾಗ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆ ಕಾರಣ ನೀಡಿ ಎರಡು ದಿನಗಳ ಬಳಿಕ ಬರಿಗೈಯಲ್ಲಿ ರಾಜ್ಯ ನಾಯಕರನ್ನು ವಾಪಸು ಕಳುಹಿಸಲಾಗಿತ್ತು.
ಇದೀಗ ಮೂರನೇ ಬಾರಿಗೆ ಕರೆಸಿಕೊಂಡಿದ್ದು, ಮೂರು ದಿನ ಕಳೆದರೂ ರಾಹುಲ್‌ಗಾಂಧಿ ಅವರು ಚರ್ಚೆಗೆ ಅವಕಾಶ ನೀಡದಿರುವುದು ರಾಜ್ಯ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಗಳ ಆದಿಯಾಗಿ ಸರ್ಕಾರವೇ ದೆಹಲಿಯಲ್ಲಿದೆ. ಮೂರು ದಿನಗಳಿಂದ ದೆಹಲಿಯಲ್ಲಿ ಕೂರಿಸಿಕೊಂಡು ಸಮಯ ವ್ಯಯ ಮಾಡಲಾಗುತ್ತಿದೆ. ಈಗಾಗಲೇ ಸಂಪುಟ ವಿಸ್ತರಣೆ ಕುರಿತ ಪಟ್ಟಿ ಅಂತಿಮಗೊಂಡಿದ್ದು, ಗೊಂದಲವಿರುವ 3-4 ಹೆಸರುಗಳ ಬಗ್ಗೆ ಮಾತ್ರ ರಾಹುಲ್ ಗಾಂಧಿ ತಮ್ಮ ತೀರ್ಮಾನ ತಿಳಿಸಬೇಕಿದೆ.
ಹೀಗಿದ್ದರೂ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ನಾಯಕರೊಂದಿಗೆ 30 ನಿಮಿಷಗಳ ಕಾಲ ರಾಹುಲ್ ಸಭೆ ನಿಗದಿ ಮಾಡಲಾಗುತ್ತಿಲ್ಲ. ಈ ಬಗ್ಗೆ ರಾಹುಲ್‌ಗಾಂಧಿ ಅವರನ್ನು ಮನವೊಲಿಸಲು ಪ್ರಯತ್ನಿಸುತ್ತಿಲ್ಲ ಎಂಬ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ.
ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು, ಕಾವೇರಿ ಸೇರಿದಂತೆ ಜಲ ಹಂಚಿಕೆ ವಿವಾದ ಶುರುವಾಗಿ ರೈತರು ಹೋರಾಟದ ಹಾದಿ ತುಳಿದಿದ್ದಾರೆ. ಮತ್ತೊಂದೆಡೆ ಜಲಾಶಯದ ನೀರು ನೆಚ್ಚಿಕೊಂಡು ರೈತರಿಗೆ ಬೆಳೆಗಳನ್ನು ಹಾಕದಂತೆ ನಿರ್ದೇಶಿಸಲಾಗಿದೆ. ಹೀಗಿದ್ದರೂ ಕೃಷಿ ಸಚಿವರು, ತೋಟಗಾರಿಕೆ ಸಚಿವರು ಇಲ್ಲ. ಶೈಕ್ಷಣಿಕ ವರ್ಷ ಶುರುವಾಗಿದ್ದರೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಲಿ, ಉನ್ನತ ಶಿಕ್ಷಣ ಸಚಿವರಾಗಲಿ ಇಲ್ಲ. ಹೆಚ್ಚುವರಿ ಹೊಣೆಗಾರಿಕೆ ಹೊತ್ತಿರುವ ಸಚಿವರನ್ನು ಬಿಟ್ಟರೆ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲ. ಹೀಗಾಗಿ ಬರ ನಿರ್ವಹಣೆ ಬಗ್ಗೆಯೂ ಗಮನ ಹರಿಸಲು ಆಗುತ್ತಿಲ್ಲ. ಹೀಗಾಗಿ ಪ್ರತಿಪಕ್ಷಗಳು ಟೀಕಾಪ್ರಹಾರ ನಡೆಸುತ್ತಿದ್ದರೂ, ಕಳೆದ ಎರಡು ತಿಂಗಳಿಂದ ಸಂಪುಟ ವಿಸ್ತರಣೆ ಮಾಡದ ಬಗ್ಗೆ ಸ್ವಪಕ್ಷದಲ್ಲೇ ಅಸಮಾಧಾನ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.==
ಇಂದಾದ್ರೂ ಸಮಯ ಕೊಡ್ತಾರಾ ರಾಹುಲ್?
ರಾಜ್ಯ ನಾಯಕರನ್ನು ರಾಹುಲ್ ಗಾಂಧಿ ಅವರು ಈವರೆಗೂ ಭೇಟಿ ಆಗದಿದ್ದರೂ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಮೂಲಗಳ ಪ್ರಕಾರ, ಗುರುವಾರ ರಾಹುಲ್‌ಗಾಂಧಿ ಅವರು ಪಟ್ಟಿ ಅಂತಿಮಗೊಳಿಸಲಿದ್ದು, ಗುರುವಾರ ಸಂಜೆ ಅಥವಾ ಶುಕ್ರವಾರ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಲಿದೆ. ಹೀಗಾಗಿಯೇ ಸಿದ್ಧತೆಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.


