ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯಿಂದ ಮುಂದೂಲ್ಪಟ್ಟಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವ ಸಂದರ್ಭದಲ್ಲಾದರೂ ಆಗಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.
ಬೆಂಗಳೂರು (ಜು.25): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯಿಂದ ಮುಂದೂಲ್ಪಟ್ಟಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವ ಸಂದರ್ಭದಲ್ಲಾದರೂ ಆಗಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿ ದೆಹಲಿಯಲ್ಲಿ ಕಳೆದ ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಸಲಾದ ಸಭೆಯನ್ನು ನೀಟ್ ಪ್ರಶ್ನೆ ಪತ್ರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ ಸಚಿವ ಸಂಪುಟ ಸೇರುವವರ ಪಟ್ಟಿ ಅಂತಿಮಗೊಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಕೇಂದ್ರ ನಾಯಕರೊಂದಿಗೆ ಶೀಘ್ರದಲ್ಲಿ ಸಭೆ ನಡೆಸುವ ಮುನ್ಸೂಚನೆ ನೀಡಿರುವ ಕೆ.ಸಿ.ವೇಣುಗೋಪಾಲ್, ರಾಜ್ಯದ ಸಚಿವ ಸಂಪುಟ ವಿಸ್ತರಣೆ ಯಾವಾಗ ಬೇಕಾದರೂ ಆಗಬಹುದು. ಅದಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ನಾನು ಕೂಡ ಸಚಿವ ಸ್ಥಾನ ಆಕಾಂಕ್ಷಿ: ಅಶೋಕ ಪಟ್ಟಣ
ಮೈಸೂರು: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಅಶೋಕ ಪಟ್ಟಣ ತಿಳಿಸಿದ್ದಾರೆ.
ಆಷಾಢ ಶುಕ್ರವಾರ ನಿಮಿತ್ತ ಚಾಮುಂಡಿಬೆಟ್ಟಕ್ಕೆ ಆಗಮಿಸಿ, ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಾನು ದೇವರಾಜ ಅರಸು ಅವರ ಕಾಲದಿಂದಲೂ ಇದ್ದೇನೆ. ಸಚಿವ ಸಂಪುಟ ವಿಸ್ತರಣೆ ವೇಳೆ ಹಿರಿಯನಾಗಿರುವ ನನ್ನನ್ನು ಕೂಡ ಪರಿಗಣಿಸಬೇಕು. ಈ ಬಗ್ಗೆ ಪಕ್ಷದ ವರಿಷ್ಠರಿಗೂ ಮನವಿ ಮಾಡಿದ್ದೇನೆ ಎಂದರು.
ಯುವಕರಿಗೆ ಆದ್ಯತೆ ನೀಡುವಂತೆ ಹಿರಿಯರಿಗೂ ಅವಕಾಶ ನೀಡಬೇಕು. ಸಚಿವ ಸಂಪುಟ ಸಮತೋಲನದಿಂದ ಕೂಡಿರಬೇಕು ಎಂದು ಅವರು ಹೇಳಿದರು.


