ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ದಲಿತ ನಾಯಕರನ್ನು ಬೆಳೆಯಲು ಬಿಡದ ಖರ್ಗೆ ಕುಟುಂಬದ ವಿರುದ್ಧವೂ ಅವರು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು(ಅ.24): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ನಿನ್ನೆ ನೆಲಮಂಗಲದಲ್ಲಿ ಒಂದು ಮನೆಗೆ ನುಗ್ಗಿ ಸಾಮೂಹಿಕ ಅತ್ಯಾ೧ಚಾರ ಆಗಿದೆ. ದಸರಾ ಸಂದರ್ಭದಲ್ಲೇ ಮೈಸೂರಿನಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿ ಮೇಲೆ ಅತ್ಯಾ೧ಚಾರ, ಭೀಕರ ಕೊಲೆ ಆಗಿದೆ. ಕಲಬುರಗಿಯಿಂದ ಬಂದಿದ್ದ ಆ ಕುಟುಂಬಕ್ಕೆ ಯಾವೊಬ್ಬ ಸಚಿವನೂ ಸಾಂತ್ವನ ಹೇಳಲಿಲ್ಲ. ನ್ಯಾಯ ಕೊಡಿಸುವ ಭರವಸೆ ನೀಡಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದಮೇಲೆ ಕಿಡಿಗೇಡಿಗಳಿಗೆ ಪೊಲೀಸರ ಮೇಲೆಯೂ ಭಯ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಅಂಗನವಾಡಿ ಟೀಚರ್ ಗಳಿಗೆ, ಲೈಬ್ರರಿ ಮೇಲ್ವಿಚಾರಕರಿಗೆ, ನೀರುಗಂಟಿಗಳಿಗೆ ಈ ಸರ್ಕಾರ ಸಂಬಳ ನೀಡಿಲ್ಲ. ಯಾವಾಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂತೋ ಆಗಿನಿಂದ ರಾಜ್ಯಕ್ಕೆ ದರಿದ್ರ ಬಂದಿದೆ, ಈಸರ್ಕಾರದ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೂ ಎರಡುವರೆ ವರ್ಷ ರಾಜ್ಯದ ಜನತೆ ಇದನ್ನ ಅನುಭವಿಸಬೇಕಿದೆ. ಜನರು ತಡೆದುಕೊಳ್ಳಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತಗಳ್ಳತನ ಮಾಡಿಯೇ ಕಾಂಗ್ರೆಸ್ 136 ಸೀಟು ಗೆದ್ದಿದ್ದು:

ಬೆಂಗಳೂರು ಸಂಪೂರ್ಣ ಗುಂಡಿಮಯ ರಸ್ತೆಗಳಿಂದ ತುಂಬಿಹೋಗಿದೆ. ಈ ಸರ್ಕಾರಕ್ಕೆ ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ. ಕಾಂಗ್ರೆಸ್ ಸರ್ಕಾರ ಮಾತೆತ್ತಿದರೆ ಮತಗಳ್ಳತನ ಎನ್ನುತ್ತಿದೆ. 136 ಸೀಟ್ ಗೆದ್ದಿರೋದು ನೀವು, ಓಟ್ ಚೋರಿ‌ ಮಾಡಿರೋದೇ ನೀವು. ಸರ್ಕಾರ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಆರೆಸ್ಸೆಸ್ ವಿಚಾರ ಚರ್ಚೆ ಮಾಡುತ್ತಿದೆ. ಮುಖ್ಯಮಂತ್ರಿಗಳಿಗೆ ಅಮವ್ಯಾಸೆ, ಹುಣ್ಣಿಮೆ ವ್ಯತ್ಯಾಸ ಗೊತ್ತಿಲ್ಲ. ನಮ್ಮ ಸಂಸದರನ್ನ ಸಿಎಂ ಅಮವ್ಯಾಸೆ ಸೂರ್ಯ ಅಂತಾರೆ. ಕಾಂಗ್ರೆಸ್ ಪಾಲಿಗೆ ಸೂರ್ಯ ಇಲ್ಲ, ಅದಕ್ಕೆ ರೋಗ ರುಜಿನ ಹೆಚ್ಚಾಗಿದೆ. ಸರ್ಕಾರದ ವಿರುದ್ಧ ಚಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

ನಾನು ಆರೆಸ್ಸೆಸ್ ಅಲ್ಲ, ಬಿಜೆಪಿ ಎಂದ ಚಲವಾದಿ:

ಐ‌ ಆ್ಯಮ್ ನಾಟ್ ಆರ್ ಎಸ್ಎಸ್, ಐ ಆ್ಯಮ್ ಬಿಜೆಪಿ ಎಂದ ಚಲವಾದಿ ನಾರಾಯಣಸ್ವಾಮಿ ಅವರು, ಪ್ರಿಯಾಂಕ್ ಖರ್ಗೆ ಪ್ರಚಾರದ ಹುಚ್ಚಿಗೆ ಆರೆಸ್ಸೆಸ್ ಬಗ್ಗೆ ಮಾತಾಡ್ತಿದ್ದಾರೆ ಆರೆಸ್ಸೆಸ್ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ದಲಿತರು ಹಿಂದಿನಿಂದಲೂ ಕಾಂಗ್ರೆಸ್ ಜೊತೆ ಇದ್ದವರು ಆದರೆ ಅಂಬೇಡ್ಕರ್ ರನ್ನ ಸೋಲಿಸಿದ್ದು ಇದೇ ಕಾಂಗ್ರೆಸ್. ಇದು ಕಾಂಗ್ರೆಸ್ ಬೆಂಬಲಿಸುವವ ದಲಿತರಿಗೆ ಅರ್ಥವಾಗಬೇಕು. ಹಿಂದೆ ಅಂಬೇಡ್ಕರ್ ಅವರೇ ಕಾಂಗ್ರೆಸ್ ಪಕ್ಷವನ್ನ ಸುಡುವ ಮನೆ ಅಂದಿದ್ರು. ವಿಪರ್ಯಾಸ ಎಂದರೆ ದಲಿತರು ಅಂಬೇಡ್ಕರ್‌ರನ್ನ ಯಾವ ಪಕ್ಷ ಹೀನಾಯವಾಗಿ ನಡೆಸಿಕೊಂಡಿತ್ತೋ ಅದ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ.

ಪ್ರಿಯಾಂಕ್ ಖರ್ಗೆ ಒಂದು ದಿನವೂ ದಲಿತ ಚಳವಳಿಯಲ್ಲಿ ಭಾಗಿಯಾಗಿಲ್ಲ:

ಪ್ರಿಯಾಂಕ್ ಖರ್ಗೆ ಒಂದು ದಿನವೂ ದಲಿತ ಚಳವಳಿಯಲ್ಲಿ ಭಾಗಿಯಾಗಿಲ್ಲ. ದಲಿತ ಸಂಘಟನೆಗಳ ನಡುವೆ ಒಡಕು ಮೂಡಿಸಿದ್ದೇ ಖರ್ಗೆ. ಈಗ ಭೀಮ್ ಆರ್ಮಿ ಮೂಲಕ ಹೋರಾಟಕ್ಕೆ ಹೊರಟಿದ್ದಾರೆ. ಭೀಮ್ ಆರ್ಮಿಯಲ್ಲಿ ಜನ ಎಲ್ಲಿದ್ದಾರೆ. 'ಐ ಲವ್ ಡಿಎಸ್ಎಸ್' ಯಾಕಂದ್ರೆ ದಲಿತರ ಪರ ಹೋರಾಟ ಮಾಡಿ ನ್ಯಾಯ ಕೊಡಿಸಿದೆ. ಅದೇ ರೀತಿ ಐ ಲವ್ ಆರ್ ಎಸ್ಎಸ್ ಯಾಕಂದ್ರೆ ಇದು ದೇಶದ ಪರವಾಗಿರುವ ಸಂಘಟನೆಯಾಗಿದೆ. ಅಂಬೇಡ್ಕರ್ ಯಾವತ್ತೂ ಆರೆಸ್ಸೆಸ್ ವಿರೋಧ ಮಾಡಿಲ್ಲ ಎಂದರು.

ದಲಿತರನ್ನ ಹಾಳು ಮಾಡಿದ್ದೇ ಖರ್ಗೆ ಕುಟುಂಬ:

ಇರಲಾರದೆ ಇರುವೆ ಬಿಟ್ಟುಕೊಳ್ಳುವ ಕೆಲಸ ಪ್ರಿಯಾಂಕ್ ಖರ್ಗೆ ಮಾಡ್ತಿದ್ದಾರೆ. ಪ್ರಿಯಾಂಕ್ ಖರ್ಗೆಗೆ ಈಗ ದಲಿತ ಸಂಘಟನೆಗಳು ನೆನಪಾಗಿವೆ. ದಲಿತರನ್ನೇ ಹಾಳು ಮಾಡಿದವರು ಯಾರಾದರೂ ಇದ್ರೆ ಅದು ಖರ್ಗೆ ಕುಟುಂಬ ಗುರುಮಠಕಲ್‌ ನಲ್ಲಿ ಮಲ್ಲಿಕಾರ್ಜುನ ಖರ್ಗೆ 9 ಬಾರಿ ಗೆದ್ದಿದ್ದಾರೆ. ಅಲ್ಲಿ ಒಬ್ಬ ದಲಿತ ನಾಯಕನನ್ನ ಬೆಳೆಸಿಲ್ಲ, ಬೆಳೆಯಲು ಬಿಟ್ಟಿಲ್ಲ, ಮೀಸಲು ಕ್ಷೇತ್ರವನ್ನೂ ಬೇರೆ ಯಾವ ದಲಿತರಿಗೂ ಬಿಟ್ಟುಕೊಟ್ಟಿಲ್ಲ. ನಾನು ಇದನ್ನ ಕಲ್ಪಿತವಾಗಿ ಹೇಳುತ್ತಿಲ್ಲ, ಅನುಭವದಿಂದ ಹೇಳುತ್ತಿದ್ದೇನೆ. ನಾನೇ 25 ವರ್ಷ ಅವರ ಜೊತೆಲಿದ್ದೆ, ಸಮಾದಿಯಾಗುವ ಮುನ್ನ ಬಿಜೆಪಿಗೆ ಬಂದು ಬಚಾವಾದೆ. ದಲಿತರೇ ನೀವು ಕಾಂಗ್ರೆಸ್ ಪರವಾಗಿ ನಿಂತರೇ ಅಂಬೇಡ್ಕರ್ ವಿರೋಧಿಗಳಾಗುತ್ತೀರಿ ಎಂದು ಎಚ್ಚರಿಸಿದರು.

ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಕರಿ ಕಾಗೆ ಆಗಿದ್ದಾರೆ:

ಸಿದ್ದರಾಮಯ್ಯ ಸಿಎಂ ಆಗಿ ಏಳೂವರೆ ವರ್ಷ ಆಗ್ತಿದೆ. ಕಾಂಗ್ರೆಸ್ ನಲ್ಲಿ 10 ಮಂದಿ ಸಿಎಂ ರೇಸ್ ನಲ್ಲಿದ್ದಾರೆ. ಡಿಕೆಶಿ ಒಬ್ಬ ಗಟ್ಟಿ ಮನುಷ್ಯ, ಡಿಕೆಶಿ ಸಿಎಂ ಆದ್ರೆ ನನಗೂ ಖುಷಿ. ಪರಮೇಶ್ವರ್ ಸಿಎಂ ಆದ್ರೆ ದಲಿತ ಸಿಎಂ ಆದ್ರಲ್ಲ ಅನ್ನುವ ಖುಷಿ ಇದೆ. ಆದರೆ ಕಾಂಗ್ರೆಸ್ ಸರ್ಕಾರ ಯಾವತ್ತೂ ದಲಿತ ಸಿಎಂ ಮಾಡುವುದಿಲ್ಲ. ದಲಿತ ನಾಯಕ ಶ್ರೀನಿವಾಸ್ ಪ್ರಸಾದ್ ರನ್ನ ಯಾವ ಪರಿಸ್ಥಿತಿಗೆ ತಂದಿದ್ರು ಅನ್ನೋದು ನೋಡಿದ್ದೀರಿ. ಪ್ರಿಯಾಂಕ ಖರ್ಗೆ ತಾವು ಮಂತ್ರಿ ಆಗುವ ಸಲುವಾಗಿ ತಂದೆಗೆ ಸಿಗಬೇಕಾದ ಸಿಎಂ ಸ್ಥಾನ ತಪ್ಪಿಸಿದ್ರು. ಪ್ರಿಯಾಂಕ ಖರ್ಗೆ ಮಂತ್ರಿ ಆಗಲಿಲ್ಲ ಅಂದಿದ್ರೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗ್ತಿದ್ರು. ಈಗ ಯತೀಂದ್ರ ಬಂದು ಅಪ್ಪಂದು ಕೊನೆ ಗಳಿಗೆ ಅಂತಾರೆ. ಸಿದ್ದರಾಮಯ್ಯ ನನಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಅಂತಿದ್ರು. ಆದರೀಗ ಭ್ರಷ್ಟಾಚಾರದಲ್ಲಿ ಕರಿ ಕಾಗೆ ಆಗಿದ್ದಾರೆ, ಇನ್ನೂ ಕಪ್ಪು ಚುಕ್ಕೆ ಎಲ್ಲಿ ಹುಡುಕುವುದು ಎಂದು ಲೇವಡಿ ಮಾಡಿದರು.