ಶಿಕಾರಿಪುರ ವಿಧಾನಸಭಾ ಕ್ಷೇತ್ರ: ವಿಜಯೇಂದ್ರ ಓಟಕ್ಕೆ ನಾಗರಾಜ ಅಡ್ಡಿಯಾಗುವರೇ?

ರಾಜ್ಯದ ಪ್ರತಿಷ್ಟಿತ ಚುನಾವಣಾ ಕ್ಷೇತ್ರದಲ್ಲಿ ಶಿಕಾರಿಪುರವೂ ಒಂದಾಗಿದ್ದು, ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಕೀಯ ಜೀವನಕ್ಕೆ ಆಶ್ರಯ ನೀಡಿ ಬೆಳೆಸಿದ ಈ ಕ್ಷೇತ್ರವೀಗ ಬಿಎಸ್‌ವೈ ಕುಟುಂಬದಲ್ಲಿಯೇ ಉಳಿಯುತ್ತದೆಯೇ? ಇಲ್ಲವೇ? ಎಂಬುದೇ ಅತ್ಯಂತ ಕುತೂಹಲದ ಸಂಗತಿಯಾಗಿದೆ.

Karnataka assembly election Will Nagaraja stand against Vijayendras at shikaripur constituency race rav

ರಾಘವೇಂದ್ರ ಎಚ್‌.ಆರ್‌.

ಶಿಕಾರಿಪುರ (ಏ.29) : ರಾಜ್ಯದ ಪ್ರತಿಷ್ಟಿತ ಚುನಾವಣಾ ಕ್ಷೇತ್ರದಲ್ಲಿ ಶಿಕಾರಿಪುರವೂ ಒಂದಾಗಿದ್ದು, ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಕೀಯ ಜೀವನಕ್ಕೆ ಆಶ್ರಯ ನೀಡಿ ಬೆಳೆಸಿದ ಈ ಕ್ಷೇತ್ರವೀಗ ಬಿಎಸ್‌ವೈ ಕುಟುಂಬದಲ್ಲಿಯೇ ಉಳಿಯುತ್ತದೆಯೇ? ಇಲ್ಲವೇ? ಎಂಬುದೇ ಅತ್ಯಂತ ಕುತೂಹಲದ ಸಂಗತಿಯಾಗಿದೆ.

ಶತಾಯ ಗತಾಯ ಕ್ಷೇತ್ರ ಉಳಿಸಿಕೊಳ್ಳಲು ಅಭ್ಯರ್ಥಿ ಬಿ.ವೈ. ವಿಜಯೇಂದ್ರ(BY Vijayendra) ಅವರ ವರ್ಚಸ್ಸು, ಬಿ.ಎಸ್‌. ಯಡಿಯೂರಪ್ಪ (BS Yadiyurappa)ಅವರ ಅಭಿವೃದ್ಧಿಯ ಮಂತ್ರ, ಸಂಸದ ರಾಘವೇಂದ್ರ(BY Raghavendra MP) ಅವರ ಬೆನ್ನೆಲುಬು, ಕ್ಷೇತ್ರದ ಪ್ರಬಲ ಸಂಘಟನೆಯನ್ನು ಪಣಕ್ಕೆ ಇಟ್ಟಿದ್ದಾರೆ. ಇತ್ತ ಬಿಎಸ್‌ವೈ ಕುಟುಂಬವನ್ನು ಮಣಿಸಲೇಬೇಕು ಎಂದು ಹಠಕ್ಕೆ ಬಿದ್ದಿರುವ ಎದುರಾಳಿಗಳು ರಣತಂತ್ರ ರೂಪಿಸುತ್ತಲೇ ಇದ್ದು, ಸಧ್ಯ ತ್ರಿಕೋನ ಸ್ಪರ್ಧೆ ಏರ್ಪಟ್ಟಂತೆ ಕಾಣುತ್ತಿದೆ. ಇದು ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಅವರಿಗೆ ಹೇಗೆ ಲಾಭ ತರಬಲ್ಲದು ಎಂಬುದೇ ಚರ್ಚೆಯ ವಿಷಯವಾಗಿದೆ.

 

ಶಿವಮೊಗ್ಗದಲ್ಲಿ 2ನೇ ತಲೆಮಾರಿನ ರಾಜಕಾರಣ: ಮಾಜಿಗಳ ಪುತ್ರರದ್ದೇ ರಣಕಣ

ಬಿಜೆಪಿಯಿಂದ ಸ್ಪರ್ಧಿಸಿರುವ ಬಿ.ವೈ. ವಿಜಯೇಂದ್ರ ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿ ಮಾಲತೇಶ್‌ ಸವಾಲೊಡ್ಡಲು ಸಿದ್ಧತೆ ನಡೆಸಿದ್ದಾರೆ. ಆದರೆ, ಈ ಸವಾಲಿಗಿಂತ ಪಕ್ಷೇತರ ಅಭ್ಯರ್ಥಿ ನಾಗರಾಜಗೌಡ ಒಡ್ಡುತ್ತಿರುವ ಸವಾಲೇ ಹೆಚ್ಚು ಗಂಭೀರ ಎಂದು ಬಿಜೆಪಿ ಪಡಸಾಲೆಯಲ್ಲಿಯೇ ಕೇಳಿಬರುತ್ತಿರುವ ಮಾತು. ಇವರಿಗೆ ಬೆಂಬಲ ಸಿಗುತ್ತಿರುವ ಹಿನ್ನೆಲೆ ಗಮನಿಸಿದರೆ ಈ ಚುನಾವಣೆ ಬಿಎಸ್‌ವೈ ಕುಟುಂಬ ಮತ್ತು ಎದುರಾಳಿಗಳ ನಡುವಿನ ನೇರ ಕಾದಾಟವಾಗಬಹುದು ಎಂಬಂತೆ ಕಾಣುತ್ತಿದೆ.

ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿಯಾಗಿ, ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎಂದು ಗುರುತಿಸಿಕೊಂಡಿರುವ ಯಡಿಯೂರಪ್ಪ ಅವರ ಸ್ವಕ್ಷೇತ್ರ ಬಿಜೆಪಿಗೆ ಸಹಜವಾಗಿಯೇ ಪ್ರತಿಷ್ಟಿತ ಕ್ಷೇತ್ರವಾಗಿದೆ. 4 ದಶಕಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿ ಹೋರಾಟ, ಪಾದಯಾತ್ರೆ, ಸತ್ಯಾಗ್ರಹ ಮೂಲಕ ರಾಜ್ಯ ರಾಜಕಾರಣದಲ್ಲಿ ಅತ್ಯಂತ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಶಿಕಾರಿಪುರ ಮೂಲಕ ಬಿಜೆಪಿಗೆ ರಾಜ್ಯದಲ್ಲಿ ಗಟ್ಟಿನೆಲೆಗಟ್ಟು ಕಲ್ಪಿಸಿಕೊಟ್ಟಯಡಿಯೂರಪ್ಪ ಅವರು ಈ ಬಾರಿ ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆದು, ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರನ್ನು ಉತ್ತರಾಧಿಕಾರಿಯಾಗಿ ಕಣಕ್ಕಿಳಿಸಿ ಭವಿಷ್ಯ ರೂಪಿಸಲು ವೇದಿಕೆ ಸಿ​ದ್ಧಪಡಿಸಿದ್ದಾರೆ.

ಇಂತಹ ಸೂಕ್ಷ್ಮ ಕಾಲಘಟ್ಟದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ವಂಚಿತನಾಗಿ ಬಂಡಾಯ ಕಾಂಗ್ರೆಸ್‌ ಅಭ್ಯ​ರ್ಥಿ​ಯಾಗಿ ಸ್ಪರ್ಧಿಸಿರುವ ನಾಗರಾಜಗೌಡರ ತೀವ್ರ ಪೈಪೋಟಿ ಬಿಜೆಪಿ ನಿದ್ದೆಗೆಡಿಸಿದಂತೆ ಕಂಡುಬರುತ್ತಿದೆ. ಆದರೂ, ಕಾಂಗ್ರೆಸ್‌ ಮತ್ತು ಬಂಡಾಯ ಅಭ್ಯರ್ಥಿಗಳ ಮತ ಹಂಚಿಕೆ ಬಿಜೆಪಿಗೆ ಲಾಭ ತರುತ್ತದೆ ಎಂಬುದು ಒಳಗಿನ ಲೆಕ್ಕಾಚಾರ.

ಸಿಎಂ ಅವಧಿಯಲ್ಲಿ ಕ್ಷೇತ್ರ​ದಲ್ಲಿ ಯಡಿಯೂರಪ್ಪ ನೀರಾವರಿ, ವಿದ್ಯುತ್‌, ಶಾಲಾ, ಕಾಲೇಜು, ರಸ್ತೆ, ಎಲ್ಲ ಜಾತಿ ಜನಾಂಗಗಳಿ​ಗೆ ಪ್ರತ್ಯೇಕ ಸಮುದಾಯ ಭವನ ಮೂಲಕ ಸಹಸ್ರಾರು ಕೋಟಿ ಅನುದಾನ ತಂದಿದ್ದಾರೆ. ಇದು ಕೂಡ ಪುತ್ರನ ರಾಜಕೀಯ ಪ್ರವೇಶಕ್ಕೆ ಫ್ಲಸ್‌ ಪಾಯಿಂಟ್‌. ಯಡಿಯೂರಪ್ಪ ಅವರು ತಂತ್ರಕ್ಕೆ ಪ್ರತಿತಂತ್ರ ಎಂಬಂತೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿಸುತ್ತಲೇ ತಮ್ಮ ಪುತ್ರ ವಿಜಯೇಂದ್ರಗೆ ಧಾರೆ ಎರೆದ ಶಿಕಾ​ರಿ​ಪು​ರ ಕ್ಷೇತ್ರವನ್ನು ಯಥಾವತ್ತಾಗಿ ಉಳಿಸಿಕೊಳ್ಳಲು 4 ದಶಕದ ರಾಜಕಾರಣದ ಎಲ್ಲ ಪಟ್ಟುಗಳನ್ನು ಪ್ರಯೋಗಿಸುತ್ತಿದ್ದಾರೆ. ಬೂತ್‌ಮಟ್ಟದ ಕಾರ್ಯಕರ್ತರ ತಂಡದ ಮೂಲಕ ಮತದಾರರ ಮನವೊಲಿಸುವಲ್ಲಿ ಸಫಲರಾಗುತ್ತಿದ್ದಾರೆ.

ಯುವ ಮೋರ್ಚಾ, ಮಹಿಳಾ ಮೋರ್ಚಾ, ರೈತ ಮೋರ್ಚಾ ಸರಣಿ ಸಭೆ ನಡೆಸಿ ಸಂಘಟನೆಯನ್ನು ಬಲಿಷ್ಠಗೊಳಿಸಲಾಗಿದೆ. ಎಲ್ಲ ರೀತಿಯ ಸಂಪನ್ಮೂಲದಿಂದ ಸಜ್ಜಾಗಿರುವ ಪಕ್ಷಕ್ಕೆ ಪ್ರಬಲ ವಿರೋಧವಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೂ, 3 ಬಾರಿ ಪುರಸಭಾ ಸದಸ್ಯನಾಗಿ 4-5 ವರ್ಷಗಳಿಂದ ಚುನಾವಣಾ ಕಣಕ್ಕೆ ಧುಮುಕುವ ಗುರಿ ಹೊಂದಿ ಎಲ್ಲ ತಯಾರಿ ನಡೆಸಿಕೊಂಡಿದ್ದ ಪ್ರಬಲ ಸಾಧು ವೀರಶೈವ ಸಮಾಜದ ನಾಗರಾಜಗೌಡ ಕಾಂಗ್ರೆಸ್‌ ಟಿಕೆಟ್‌ ವಂಚಿತನಾಗಿ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಗ್ರಾಮೀಣ ಭಾಗದ ಮತದಾರರ ಅನುಕಂಪವನ್ನು ಗಿಟ್ಟಿಸುತ್ತಿ​ದ್ದಾ​ರೆ. ಈ ದಿಸೆಯಲ್ಲಿ ಮತದಾರರು ಹಣ ನೀಡಿ ಹುರಿದುಂಬಿಸತೊಡಗಿರುವುದು, ಬಹುತೇಕ ಬಿಜೆಪಿ ವಿರೋಧಿ ಮುಖಂಡರೆಲ್ಲ ನಾಗರಾಜಗೌಡರ ಬೆಂಬಲಕ್ಕೆ ಟೊಂಕಕಟ್ಟಿನಿಂತಿರುವುದು ಗಮನಿಸಬೇಕಾದ ವಿಚಾರ.

ಸಧ್ಯ ಅಷ್ಟೇನೂ ಪ್ರಬಲವಾಗಿಲ್ಲದ ಜೆಡಿಎಸ್‌, ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ತಮ್ಮ ಬೆಂಬಲವನ್ನು ಪಕ್ಷೇತರ ಅಭ್ಯರ್ಥಿಗೆ ನೀಡಿವೆ. ಒಳಮೀಸಲಾತಿಯಲ್ಲಿ ​ರಾ​ಜ್ಯ ಸರ್ಕಾರದ ನಿರ್ಧಾರದಿಂದ ಪ್ರಬಲ ಬಂಜಾರ ಸಮುದಾಯ ಕುದಿಯುತ್ತಿದೆ. ಬಿಜೆಪಿಗೆ ಸ್ವಲ್ಪಮಟ್ಟಿನ ವಿರೋಧ ವ್ಯಕ್ತವಾಗುತ್ತಿದೆ. ನಿರಂತರವಾಗಿ ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಲೇ ಬಂದ ಈ ಸಮುದಾಯ ಇದೀಗ ಸ್ವಲ್ಪ ಅತ್ತಿತ್ತ ನೋಡತೊಡಗಿದೆ. ಈ ಅಂಶವನ್ನೇ ತಮ್ಮ ಅಸ್ತ್ರವಾಗಿಸಿಕೊಳ್ಳಲು ಬಂಡಾಯ ಅಭ್ಯರ್ಥಿ ನಾಗರಾಜಗೌಡ ತಂತ್ರ ರೂಪಿಸುತ್ತಿದ್ದಾರೆ. ಸಾಧು ವೀರಶೈವ ಸಮುದಾಯದ ಬೆಂಬಲವನ್ನು ಗುಪ್ತವಾಗಿ ಪಡೆದುಕೊಳ್ಳುವ ಎಲ್ಲ ಪ್ರಯತ್ನ ನಡೆಸಿದ್ದಾರೆ.

ಕಾಂಗ್ರೆಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ ಗೋಣಿ ಮಾಲತೇಶ್‌ ಪುನಃ ಸ್ಪರ್ಧಿಸಿದ್ದು, ಈ ಬಾರಿ ಅವರು ಪಡೆಯುವ ಮತಗಳು ನಿರ್ಣಾಯಕ ಸಾಧ್ಯತೆ ಹೆಚ್ಚಿದೆ. ಸಾಂಪ್ರದಾಯಿಕ ಎದುರಾಳಿಯಾದ ಕಾಂಗ್ರೆಸ್‌ ಪಡೆಯುವ ಮತಗಳು ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ. ಮತ ವಿಭಜನೆ ತಪ್ಪಿದಲ್ಲಿ ಪಕ್ಷೇತರ ಅಭ್ಯರ್ಥಿ ನಾಗರಾಜಗೌಡರಿಗೆ ಅನುಕೂಲವಾಗಲಿದೆ. ಕಾಂಗ್ರೆಸ್‌ ಪರವಾಗಿ ರಾಜ್ಯಮಟ್ಟದ ನಾಯಕರು ಪ್ರಚಾರಕ್ಕೆ ಧಾವಿಸುವ ಸಾಧ್ಯತೆ ಕ್ಷೀಣವಾಗಿದ್ದು, ಗುಪ್ತವಾಗಿ ನಾಗರಾಜಗೌಡ ಅವರನ್ನು ಬೆಂಬಲಿಸುತ್ತಿರುವ ಅನುಮಾನವಿದೆ. ಇದರಿಂದಾಗಿ ನಾಗರಾಜಗೌಡರ ಹವಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಚುನಾವಣೆ ವೇಳೆ ಕಾಂಗ್ರೆಸ್‌ಗೆ ಲಿಂಗಾಯತರ ಮೇಲೇಕೆ ಪ್ರೀತಿ?: ಬಿ.ವೈ.ವಿಜಯೇಂದ್ರ

ಅಭಿವೃದ್ಧಿ ಹೆಗ್ಗಳಿಕೆ, ಬೂತ್‌ಮಟ್ಟದ ಸಂಘಟನೆ, ಶಿಸ್ತುಬದ್ಧ ಶೈಲಿಯಿಂದ ಕ್ಷೇತ್ರದಲ್ಲಿ ಬಿಜೆಪಿ ಗಟ್ಟಿಯಾದ ನೆಲೆಗಟ್ಟು ಹೊಂದಿದೆ. ಸಂಸದ ರಾಘವೇಂದ್ರ ಕ್ಷೇತ್ರ ಪುನಃ ವಶಕ್ಕೆ ಎಲ್ಲ ರೀತಿಯ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಪ್ರತಿಯಾಗಿ ಪಕ್ಷೇತರ ಅಭ್ಯರ್ಥಿ ನಾಗರಾಜಗೌಡ ಮತದಾರರ ಮನಗೆಲ್ಲಲು ಶತಾಯಗತಾಯ ಪ್ರಯತ್ನದಲ್ಲಿದ್ದಾರೆ. ಅಚ್ಚರಿಯ ಫಲಿ​ತಾಂಶ​ಕ್ಕಾಗಿ ಮೇ 13ರವರೆಗೆ ಕಾಯಲೇಬೇ​ಕು.

Latest Videos
Follow Us:
Download App:
  • android
  • ios