ಶಿವಮೊಗ್ಗ ಜಿಲ್ಲೆಯ ರಣಕಣದಲ್ಲಿ ಮಾಜಿ ಮುಖ್ಯಮಂತ್ರಿಗಳ ಹಾಗೂ ಮಾಜಿ ಸಚಿವರು, ಶಾಸಕರ ಪುತ್ರರ (2ನೇ ತಲೆಮಾರಿನ) ರಾಜಕಾರಣ ಆರಂಭವಾಗಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಮೂವರು ಪುತ್ರರು ಸ್ಪರ್ಧೆಗಿಳಿದಿದ್ದಾರೆ.

ಶಿವಮೊಗ್ಗ (ಏ.25): ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ರಣಕಣದಲ್ಲಿ ಮಾಜಿ ಮುಖ್ಯಮಂತ್ರಿಗಳ ಹಾಗೂ ಮಾಜಿ ಸಚಿವರು, ಶಾಸಕರ ಪುತ್ರರ (2ನೇ ತಲೆಮಾರಿನ) ರಾಜಕಾರಣ ಆರಂಭವಾಗಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಮೂವರು ಪುತ್ರರು ಸ್ಪರ್ಧೆಗಿಳಿದಿದ್ದಾರೆ.

ಕರ್ನಾಟಕದ ರಾಜಕಾರಣದಲ್ಲಿ ಶಿವಮೊಗ್ಗ ಜಿಲ್ಲೆಯ ರಾಜಕಾರಣಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟ ಜಿಲ್ಲೆ ಶಿವಮೊಗ್ಗವಾಗಿದೆ. ಈ ಜಿಲ್ಲೆಯಲ್ಲಿ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಪುತ್ರರಾದ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಪ್ರತಿಸ್ಪರ್ಧಿಗಳು ಆಗಿದ್ದು, ಇಬ್ಬರೂ ಸಹೋದರರು ಈ ಬಾರಿಯೂ ಸೊರಬ ವಿಧಾನಸಭಾ ಕ್ಷೇತ್ರದ ಅಖಾಡದಲ್ಲಿದ್ದಾರೆ. ಇವರು 2004ರ ವಿಧಾನಸಭೆ ಚುನಾವಣೆಯಿಂದ ಪ್ರತಿ' ಚುನಾವಣಿಯಲ್ಲೂ ಸೊರಬದಲ್ಲಿ ಸಹೋದರರ ಸವಾಲ್‌ ನಡೆಸುತ್ತಲೇ ಬಂದಿದ್ದಾರೆ. ಮತ್ತೊಂದೆಡೆ ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಮೊದಲ ಬಾರಿಗೆ ಚುನಾವಣೆ ಕಣದಲ್ಲಿ ಸ್ಪರ್ಧೆಗಿಳಿದಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆ: ಲಿಂಗಾಯತರ ಮತ ಸೆಳೆಯಲು ಬಿಎಸ್‌ವೈ ಮನೆಯಲ್ಲಿ ಮಹತ್ವದ ಸಭೆ

ಮಾಜಿ ಶಾಸಕರ ಪುತ್ರರಿಂದಲೂ ಸ್ಪರ್ಧೆ: ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿಗಳ ಪುತ್ರರ ನಂತರ ಮಾಜಿ ಶಾಸಕರ ಇಬ್ಬರು ಪುತ್ರರು, ದಿವಂಗತ ಮಾಜಿ ಶಾಸಕರ ಪತ್ನಿ ಚುನಾವಣಾ ಕಣದಲ್ಲಿ ಇರುವುದು ವಿಶೇಷವಾಗಿದೆ. ಜೊತೆಗೆ, ಗೃಹ ಸಚಿವರು ಸೇರಿದಂತೆ ಪರೀಕ್ಷೆಗೆ ಇಳಿದ ಐವರು ಹಾಲಿ ಶಾಸಕರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಭದ್ರಾವತಿಯಲ್ಲಿ ಮಾಜಿ ಶಾಸಕ ದಿವಂಗತ ಅಪ್ಪಾಜಿ ಗೌಡ ಪತ್ನಿ ಶಾರದಮ್ಮ ಅಪ್ಪಾಜಿ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. 

ಭದ್ರಾವತಿ, ರಾಜಕಾರಣದಲ್ಲಿ ಮೂರು ದಶಕಗಳ ಭದ್ರ ಹಿಡಿತ ಹೊಂದಿದ್ದ ಪತಿಯ ವರ್ಚಸ್ಸು ತಮ್ಮ ರಾಜಕೀಯಕ್ಕೂ ನೆರವಾಗಬಹುದೆಂಬ ನಿರೀಕ್ಷೆ ಶಾರದಮ್ಮ ಅವರದ್ದಾಗಿದೆ. ಇನ್ನು ತಂದೆ ಕರಿಯಣ್ಣ ಸ್ಪರ್ಧಿಸುತ್ತಿದ್ದ ಶಿವಮೊಗ್ಗ ಗ್ರಾಮಾಂತರದಲ್ಲಿ ಅವರ ಪುತ್ರ ಡಾ. ಶ್ರೀನಿವಾಸ ಕರಿಯಣ್ಣ ಎರಡನೇ ಬಾರಿ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕರಿಯಣ್ಣ 1985, 1989, 1994, 1999, 2004, 2008 ಹಾಗೂ 2013ರಲ್ಲಿ ಡಾ. ಶ್ರೀನಿವಾಸ್‌ ಕರಿಯಣ್ಣ ಕಣದಲ್ಲಿದ್ದಾರೆ. 

ಲಿಂಗಾಯತ ಸಮುದಾಯದ ನಾಯಕರ ಪೈಪೋಟಿ: ಮತ್ತೊಂದೆಡೆ 24 ವರ್ಷಗಳ ಹಿಂದೆ ತಂದೆ ಎಚ್.ಎಂ.ಚಂದ್ರಶೇಖರಪ್ಪ ಗೆಲುವು ಸಾಧಿಸಿದ್ದ ಶಿವಮೊಗ್ಗ ಕ್ಷೇತ್ರದಲ್ಲಿ ಈ ಬಾರಿ ಅವರ ಪುತ್ರ ಎಚ್.ಸಿ.ಯೋಗೇಶ್ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಬಿ.ಫಾರ್ಮ್ ಪಡೆದಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಜೆಡಿಎಸ್, ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಒಂದೇ ಸಮುದಾಯ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಶಿವಮೊಗ್ಗದಲ್ಲಿ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರು ಹಾಲಿ ಮಹಾನಗರ ಪಾಲಿಕೆ ಸದಸ್ಯರು. ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ 10 ಅಭ್ಯರ್ಥಿಗಳ ನಾಮಪತ್ರ ವಾಪಸ್ ಪಡೆದಿದ್ದು, ಒಟ್ಟು 74 ಮಂದಿ ಅಂತಿಮವಾಗಿ ಕಣದಲ್ಲಿದ್ದಾರೆ.

ಶಿವಮೊಗ್ಗದಲ್ಲಿ ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ: ಟ್ರ್ಯಾಕ್ಟರ್‌ ಉರುಳಿ ಒಬ್ಬ ಸಾವು

ಲಿಂಗಾಯತರ ಮತ ಸೆಳೆಯಲು ಸಭೆ: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಲಿಂಗಾಯತರ ಮತ ಸೆಳೆಯಲು ಬಿ.ಎಸ್.ಯಡಿಯೂರಪ್ಪ ಮನೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ವೀರಶೈವ ಸಮಾಜದ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಬಿಎಸ್‌ವೈ ಭಾಗಿಯಾಗಿದ್ದರು. ಶಿವಮೊಗ್ಗದ ವಿನೋಬನಗರದ ಯಡಿಯೂರಪ್ಪ ನಿವಾಸದ ಮುಂಭಾಗದಲ್ಲಿ ಜಾಗೃತಿ ಮತದಾರರ ಸಭಾ ವತಿಯಿಂದ ಸಭೆ ಆಯೋಜನೆ ಮಾಡಲಾಗಿದ್ದು, ಕಾಂಗ್ರೆಸ್ ಮುಕ್ತ ಭಾರತ ಆಗಬೇಕೆಂಬ ಕಲ್ಪನೆಯಲ್ಲಿ ಸಭೆ ಆರಂಭವಾಗಿದೆ. ಲಿಂಗಾಯತ ಸಮಾಜದ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪರಿಗೆ ಗೆಲ್ಲಿಸಲು ಲಿಂಗಾಯತರ ಪಣ ತೊಟ್ಟಿದ್ದು, ಸಭೆಯಲ್ಲಿ ಲಿಂಗಾಯತ ಸಮಾಜ ಒಗ್ಗೂಡಿಸಿಕೊಂಡು ಹಾಗೂ ಲಿಂಗಾಯತರ ಮತಗಳ ವಿಭಜನೆಯಾಗದಂತೆ ಕರೆ ನೀಡಲಾಗಿದೆ.