ರೋಡ್ ಶೋನಲ್ಲಿ ಮೋದಿಗೆ ಹೂ ಬದಲು ಮೊಬೈಲ್ ಎಸೆದ ಅಭಿಮಾನಿ, ಆತಂಕಗೊಂಡ ಭದ್ರತಾ ಪಡೆ!
ಮೈಸೂರು ರೋಡ್ ಶೋನಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಭಿಮಾನಿಯೊಬ್ಬ ಮೋದಿಗೆ ಹೂವು ಎಸೆಯುವ ಬದಲು ತನ್ನ ಮೊಬೈಲ್ ಎಸೆದು ಭದ್ರತಾ ಪಡೆಯ ನಿದ್ದೆಗೆಡಿಸಿದ ಘಟನೆ ನಡೆದಿದೆ.
ಮೈಸೂರು(ಏ.30): ಪ್ರಧಾನಿ ನರೇಂದ್ರ ಮೈಸೂರಿನಲ್ಲಿ ನಡೆಸಿದ ಅದ್ಧೂರಿ ರೋಡ್ ಶೋ ಭಾರಿ ಯಶಸ್ವಿಯಾಗಿದೆ. ಮೋದಿ ನೋಡಲು ಜನಸಾಗರವೇ ಹರಿದು ಬಂದಿತ್ತು. ಕಾರ್ಯಕರ್ತರು, ಬೆಂಬಲಿಗರು ನಡುವೆ ಮೋದಿ ಅಬ್ಬರದ ರೋಡ್ ಶೋ ನಡೆಸಿದ್ದಾರೆ. ಆದರೆ ಇದೇ ರೋಡ್ ಶೋನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೋದಿಗೆ ಅಭಿಮಾನಿಗಳು ಹೂ ಮಳೆ ಸ್ವಾಗತ ನೀಡಿದ್ದಾರೆ. ರಸ್ತೆ ಬದಿಯಲ್ಲಿ ನಿಂತಿದ್ದ ಅಭಿಮಾನಿಯೊಬ್ಬ, ಮೋದಿಗೆ ಹೂವಿನ ಜೊತೆಗೆ ತನ್ನ ಮೊಬೈಲ್ ಕೂಡ ಎಸೆದಿದ್ದಾನೆ. ಇದರಿಂದ ಕೆಲ ಕ್ಷಣ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಭದ್ರತಾ ಸಿಬ್ಬಂಧಿ ಎಸೆದಿರುವುದು ಮೊಬೈಲ್ ಎಂದು ಖಚಿತಗೊಂಡ ಬೆನ್ನಲ್ಲೇ ನಿರಾಳರಾಗಿದ್ದಾರೆ.
ಮೈಸೂರಿನ ವಿದ್ಯಾಪೀಠದಿಂದ ಆರಂಭಗೊಂಡ ರೋಡ್ ಶೋ ಹೈವೇ ಸರ್ಕಲ್ ಬಳಿ ಅಂತ್ಯಗೊಂಡಿತು. 4 ಕಿಲೋಮೀಟರ್ ರೋಡ್ ಶೋಗೆ ಜನರು ಕಿಕ್ಕಿರಿದು ತುಂಬಿದ್ದರು. ರಸ್ತೆ ಬದಿಯಲ್ಲಿ ಇಂದು ಮಧ್ಯಾಹ್ನದಿಂದ ಮೋದಿಗಾಗಿ ಕಾಯುತ್ತಿದ್ದ ಜನ, ಮೋದಿ ಆಗಮಿಸುತ್ತಿದ್ದಂತೆ ಹೂಮಳೆ ಸುರಿಸಿದ್ದಾರೆ. ತೆರೆದ ವಾಹನದ ಮೂಲಕ ಸಾಗಿದ ಮೋದಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್ ಹಾಗೂ ಕೆಎಸ್ ಈಶ್ವರಪ್ಪ ಸಾಥ್ ನೀಡಿದರು. ರಸ್ತೆಯುದ್ದಕ್ಕೂ ಅಭಿಮಾನಿಗಳು ಹೂವು ಎಸೆದು ಅಭಿಮಾನ ತೋರಿದ್ದಾರೆ. ಆದರೆ ಸಯ್ಯಾಜಿ ರಾವ್ ಸರ್ಕಲ್ ಬಳಿ ಬರುತ್ತಿದ್ದಂತೆ ಅಭಿಮಾನಿಯೊರ್ವ, ಹೂವಿನ ಜೊತೆಗೆ ತನ್ನ ಮೊಬೈಲ್ ಕೂಡ ಎಸೆದಿದ್ದಾನೆ.
ಮೈಸೂರಿನಲ್ಲಿ ಮೋದಿ ರೋಡ್ ಶೋ, ಪ್ರಧಾನಿ ನೋಡಲು ಮುಗಿಬಿದ್ದ ಜನಸಾಗರ!
ಒಂದು ಕೈಯಲ್ಲಿ ಮೊಬೈಲ್ ಒಂದು ಕೈಯಲ್ಲಿ ಹೂವು ಹಿಡಿದು ನಿಂತಿದ್ದ ಅಭಿಮಾನಿ, ಮೋದಿ ಆಗಮಿಸುತ್ತಿದ್ದಂತೆ ವಿಡಿಯೋ ಮಾಡಲು ಆರಂಭಿಸಿದ್ದಾನೆ. ಮೋದಿ ಹತ್ತಿರ ಬರುತ್ತಿದ್ದಂತೆ ಅಭಿಮಾನದಲ್ಲಿ ಹೂವು ಎಸೆಯುವ ಬದಲು ವಿಡಿಯೋ ಮಾಡುತ್ತಿದ್ದ ಮೊಬೈಲ್ ಎಸೆದಿದ್ದಾನೆ. ಮೊಬೈಲ್ ಮೋದಿ ಅವರ ಮುಂದೆ ಟೆಂಪೋ ಮೇಲೆ ಬಿದ್ದಿದೆ. ಭದ್ರತಾ ಸಿಬ್ಬಂದಿ ತಕ್ಷಣ ಅಲರ್ಟ್ ಆಗಿದ್ದಾರೆ. ಬಳಿಕ ಮೊಬೈಲ್ ಎಂದು ನಿರಾಳರಾಗಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಡೆಸಿದ ರೋಡ್ ಶೋನಲ್ಲೂ ಇದೇ ರೀತಿ ಅಭಿಮಾನಿಯೊಬ್ಬ ತನ್ನ ಮೊಬೈಲ್ ಎಸೆದಿದ್ದ. ಆದರೆ ಭದ್ರತಾ ಸಿಬ್ಬಂದಿ ಮೊಬೈಲ್ ತಡೆದಿದ್ದರು. ಹೀಗಾಗಿ ಮೊಬೈಲ್ ರಸ್ತೆಯಲ್ಲಿ ಬಿದ್ದಿತ್ತು. ಮೈಸೂರಿನ ರೋಡ್ ಶೋನಲ್ಲಿ ಮೋದಿ ನೋಡಲು ಬೆಂಗಳೂರು ಸೇರಿದಂತೆ ಹಲವು ಭಾಗಗಳಿಂದ ಅಭಿಮಾನಿಗಳು ಆಗಮಿಸಿದ್ದರು. 6 ತಿಂಗಳ ಹಸುಗೂಸಿನೊಂದಿಗೆ ದಂಪತಿ ಮೋದಿಯನ್ನು ಕಣ್ತುಂಬಿಕೊಂಡರು.