ಫೋನ್ ಕದ್ದಾಲಿಕೆ ಕುರಿತು ಕುಂಬಳಕಾಯಿ ಕಳ್ಳ ಎಂದರೆ ನಾನೇ ನಾನೇ ಎಂದು ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ? ಕೆಲಸ ಮಾಡುವುದು ಬಿಟ್ಟು ಕೌಂಟರ್ ಕೊಡುವುದರಲ್ಲಿ ನೀವು ಹೆಚ್ಚು ಬ್ಯುಸಿಯಾಗಿದ್ದೀರಿ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಟಾಂಗ್
ಬೆಂಗಳೂರು : ಫೋನ್ ಕದ್ದಾಲಿಕೆ ಕುರಿತು ಕುಂಬಳಕಾಯಿ ಕಳ್ಳ ಎಂದರೆ ನಾನೇ ನಾನೇ ಎಂದು ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ? ಕೆಲಸ ಮಾಡುವುದು ಬಿಟ್ಟು ಕೌಂಟರ್ ಕೊಡುವುದರಲ್ಲಿ ನೀವು ಹೆಚ್ಚು ಬ್ಯುಸಿಯಾಗಿದ್ದೀರಿ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳೇ ಮಾತನಾಡುತ್ತಿವೆ. ಆ ಬಗ್ಗೆ ನಾನು ಪ್ರತಿಕ್ರಿಯಿಸಿದ್ದೇನೆ. ನಿಮ್ಮ ಪುಂಖಾನುಪುಂಖ ಪುರಾಣ ನೋಡಿದರೆ ನಿಮಗೆ ಆಡಳಿತಕ್ಕಿಂತ ಮತ್ತೊಬ್ಬರನ್ನು ಆಡಿಕೊಳ್ಳುವುದರಲ್ಲೇ ಹೆಚ್ಚು ಮುತುವರ್ಜಿ, ಆಸಕ್ತಿ ಇದ್ದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ನಾನು ಎರಡು ಸಲವೂ ಅಧಿಕಾರ ಕಳೆದುಕೊಂಡವನು. ಇತಿಹಾಸ ಎಂದಿಗೂ ಮೌನವಾಗಿರುವುದಿಲ್ಲ ಎಂಬುದು ನಿಮಗೂ ಗೊತ್ತಿರಲಿ. ನೀವೂ ಚರಿತ್ರೆಯಿಂದ ಪಾರಾಗಲು ಸಾಧ್ಯವಿಲ್ಲ. ನಾನು ಪೋನ್ ಕದ್ದಾಲಿಕೆ ಮಾಡಿದ್ದರೆ ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳುತ್ತಿದ್ದೆ. ಸಿದ್ದವನದಲ್ಲಿ ಕೂತು ಯಾವ ಕಬ್ಬೆಕ್ಕು ಕರಾಮತ್ತು ನಡೆಸಿತು ಎನ್ನುವುದನ್ನು ಪತ್ತೆ ಹಚ್ಚುತ್ತಿದ್ದೆ. ಅದು ನನಗೆ ಬೇಕಿರಲಿಲ್ಲ, ಕಳೆದುಕೊಂಡಿದ್ದರ ಬಗ್ಗೆಯೂ ನನಗೆ ಚಿಂತೆ ಇಲ್ಲ. ಆದರೆ, ಆ ಪಾಪಪ್ರಜ್ಞೆ ಸದಾ ನೆರಳಿನಂತೆ ನಿಮ್ಮನ್ನು ಕಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಸಿದ್ದವನದಲ್ಲಿ ಕುಳಿತು ಶಾಸಕರ ಬ್ರೈನ್ ವಾಶ್:
ನಾನು ಎರಡು ಸಣ್ಣ ಅವಧಿಗೆ ಮುಖ್ಯಮಂತ್ರಿ ಆಗಿದ್ದೆ. ಸ್ವತಂತ್ರ ಸರ್ಕಾರವೂ ನನ್ನದಲ್ಲ. ಕದ್ದಾಲಿಸುವ ಕರ್ಮ ನನಗೇಕೆ? ನಿಮ್ಮಂತೆ ಸಿದ್ದವನದಲ್ಲಿ ಕೂತು ಮನೆಹಾಳು ಮಾಡೋದಕ್ಕೆ ಶಾಸಕರಿಗೆ ಬ್ರೈನ್ ವಾಶ್ ಮಾಡುವ ಹೀನ ಜಾಯಮಾನ ನನ್ನದಲ್ಲ. ನಿಮ್ಮ ಮೊದಲ ಐದು ವರ್ಷದ ಸರ್ಕಾರ ಮತ್ತು ಈಗಿನ ನಿಮ್ಮ ಗುಪ್ತಚರ ರಾಜಕಾರಣವನ್ನು ನಾನು ಕಂಡಿರುವುದೇ ಅಲ್ಲವೇ ಎಂದು ಅವರು ಕುಟುಕಿದ್ದಾರೆ.--
ನೀವು ಕುಚುಕುಗೆ ಕೊಟ್ಟಮಾತು ಉಳಿಸಿಕೊಳ್ಳಿ
ನಿಮ್ಮ ಮತ್ತು ಡಿಸಿಎಂ ನಡುವಿನ ಕುಚುಕು ಕುಚುಕು ಬಗ್ಗೆ ನಮಗೇನೂ ಸಂಕಟವಿಲ್ಲ. ಆದರೆ ನಿಮ್ಮೊಳಗೆ ಹುದುಗಿದ್ದ ಅಸಹನೆಯ ಜ್ವಾಲಾಮುಖಿ ಅದೆಷ್ಟೋ ಬಾರಿ ವೇದಿಕೆಗಳ ಮೇಲೆಯೇ ಸ್ಫೋಟಿಸಿದೆ. ರಾಜ್ಯದ ಜನ ನೋಡಿ ಕೃತಾರ್ಥರಾಗಿದ್ದಾರೆ. ಎದುರಿಗೆ ನಗುವುದು, ಬೆನ್ನ ಹಿಂದೆ ಚೂರಿ ಹಾಕುವಷ್ಟು ನಿಮ್ಮಬ್ಬರ ಕುಚುಕು ಬಗ್ಗೆ ಜನತೆಗೆ ಗೊತ್ತಿಲ್ಲದ್ದು ಏನೂ ಇಲ್ಲವೇನೋ? ನಿಮ್ಮ ಸ್ನೇಹ ಚಿರಾಯುವಾಗಲಿ ಹಾಗೂ ನಿಮ್ಮ ಸ್ನೇಹಿತನಿಗಾಗಿ ನಿಮ್ಮ ವಚನ ಉಳಿಸಿಕೊಳ್ಳಿ ಮಿಸ್ಟರ್ ಅಗ್ರಿಮೆಂಟ್ ರಾಮಯ್ಯ... ಎಂದು ಕುಮಾರಸ್ವಾಮಿ ಕಾಲೆಳೆದಿದ್ದಾರೆ.
ಗುರುವಿಗೆ ಗುನ್ನ ಇಟ್ಟವರು:
ನನ್ನ ಜತೆ ನೇರ ಸಂಘರ್ಷಕ್ಕೆ ಬಂದಾಗಲೆಲ್ಲ ನೀವು ದೇವೇಗೌಡರನ್ನು ಎಳೆದು ತರುತ್ತೀರಿ. ದೇವೇಗೌಡರು ನಿಮ್ಮ ರಾಜಕೀಯ ಗುರು, ನಿಮ್ಮನ್ನು ಗುರುತಿಸಿ ಬೆಳೆಸಿದವರು. ಅದಕ್ಕಾಗಿ ಎಷ್ಟೋ ನಾಯಕರ ವಿರೋಧ ಕಟ್ಟಿಕೊಂಡರು. ಅದೂ ನಿಮಗೂ ಗೊತ್ತಿದೆ. ಆದರೆ, ಸಮಯಕ್ಕೆ ಕಾಯುತ್ತಿದ್ದ ನೀವು ಗುರುವಿಗೆ ಗುನ್ನ ಇಟ್ಟಿರಿ. ಅಷ್ಟರಮಟ್ಟಿಗೆ ನಿಮ್ಮ ಕಪಟತನ, ಕುಟಿಲತೆಯನ್ನು ಸ್ವಯಂ ಸ್ಮರಣೆ ಮಾಡುತ್ತಿದ್ದೀರಿ, ಸಂತೋಷ ಎಂದು ಸಚಿವರು ಲೇವಡಿ ಮಾಡಿದ್ದಾರೆ.
ಗುಂಡಿಗೆ ಸಾಲುತ್ತಿಲ್ಲವೇ?:
ದೇವೇಗೌಡರು ಅಧಿಕಾರವನ್ನು ವಿರೋಚಿತವಾಗಿ ತ್ಯಜಿಸಿದರು. ಅವರ ಗರಡಿಯಲ್ಲಿ ಪಳಗಿ, ಈಗಲೂ ಬೆಳಗುತ್ತಿರುವ ನೀವೂ ಅಂತಹ ಕೆಚ್ಚನ್ನು, ವಿರೋಚಿತ ತ್ಯಾಗವನ್ನು ಒಮ್ಮೆ ಪ್ರದರ್ಶಿಸಿ. ನಿಮ್ಮ ಕುಚುಕು ಗೆಳೆಯನ ಮೇಲೆ ಪ್ರೀತಿ ತೋರಿಸಿ. ಅದಕ್ಕೆ ನಿಮಗೆ ಗುಂಡಿಗೆ ಸಾಲುತ್ತಿಲ್ಲವೇ? ಸೋತರೆ ಸೋಲಬೇಕು ಬಾಹುಬಲಿಯಂತೆ. ನಾನು ಸೋತಿದ್ದೇನೆ, ಓಡಿ ಹೋಗಿಲ್ಲ. ನಾನು ರಣಹೇಡಿಯಂತೆ ಪಲಾಯನ ಮಾಡುವುದಿಲ್ಲ, ನೆನಪಿರಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


