ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ರಾಜ್ಯ ಮಟ್ಟದ ಕೋರ್ ಕಮಿಟಿ ಸಭೆಯು ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ನಡೆಯಲಿದೆ.
ಬೆಂಗಳೂರು (ಏ.4) : ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ರಾಜ್ಯ ಮಟ್ಟದ ಕೋರ್ ಕಮಿಟಿ ಸಭೆಯು ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ನಡೆಯಲಿದೆ.
ಈಗಾಗಲೇ ಪ್ರತಿಯೊಂದು ವಿಧಾನಸಭಾ ಕ್ಷೇತ್ರ(Assembly constituency)ದ ಸ್ಥಳೀಯ ಮುಖಂಡರು ಹಾಗೂ ಜಿಲ್ಲಾ ಕೋರ್ ಕಮಿಟಿಗಳ(District Core Committees) ಸದಸ್ಯರ ಅಭಿಪ್ರಾಯ ಸಂಗ್ರಹಿಸಿರುವ ಹಿನ್ನೆಲೆಯಲ್ಲಿ ಆ ಮಾಹಿತಿಯನ್ನು ಮುಂದಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆ ಬಗ್ಗೆ ರಾಜ್ಯ ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಎರಡು ದಿನಗಳ ಕಾಲ ಬೆಳಗ್ಗೆಯಿಂದ ಸಂಜೆವರೆಗೆ ನಡೆಯುವ ಸುದೀರ್ಘ ಸಭೆಯಲ್ಲಿ ಚರ್ಚಿಸಿದ ನಂತರ ಒಂದಕ್ಕಿಂತ ಹೆಚ್ಚು ಹೆಸರುಗಳನ್ನು ಒಳಗೊಂಡ ಸಂಭಾವ್ಯರ ಪಟ್ಟಿಅಂತಿಮಗೊಳಿಸಿ ಪಕ್ಷದ ಕೇಂದ್ರ ಸಮಿತಿಗೆ ಕಳುಹಿಸಿಕೊಡಲಾಗುತ್ತದೆ.
Karnataka Assembly Elections 2023: ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿ ಆಯ್ಕೆಯೇ ಕಗ್ಗಂಟು..!
ಬಳಿಕ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸಭೆಯು ಇದೇ ತಿಂಗಳ 8ರಂದು ನಡೆಯುವ ಸಾಧ್ಯತೆಯಿದ್ದು, ಗೊಂದಲವಿಲ್ಲದ ಕ್ಷೇತ್ರಗಳಿಗೆ ಒಬ್ಬ ಅಭ್ಯರ್ಥಿಯನ್ನು ಅಖೈರುಗೊಳಿಸಲಿದೆ. ಅದೇ ದಿನ ಅಥವಾ ಮರುದಿನ ಅಭ್ಯರ್ಥಿಗಳ ಮೊದಲ ಪಟ್ಟಿಪ್ರಕಟಗೊಳ್ಳಬಹುದು. ಗೊಂದಲವಿರುವ ಕ್ಷೇತ್ರಗಳಿಗೆ ಎರಡನೇ ಹಂತದ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.
ಪಕ್ಷದ ಮೊದಲ ಪಟ್ಟಿಬಿಡುಗಡೆ ಸಂಬಂಧ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಮಂಗಳವಾರ ಮತ್ತು ಬುಧವಾರ ರಾಜ್ಯ ಮಟ್ಟದ ಕೋರ್ ಕಮಿಟಿ ಸಭೆ ನಡೆಯಲಿದೆ. ಬಳಿಕ ಕೇಂದ್ರ ಸಂಸದೀಯ ಮಂಡಳಿ ಸಭೆ ದೆಹಲಿಯಲ್ಲಿ ಜರುಗಲಿದೆ. ಬಹುತೇಕ ಏ.8ರಂದು ಸಂಸದೀಯ ಮಂಡಳಿಯ ಸಭೆಯಲ್ಲಿ ಪಟ್ಟಿಅಂತಿಮಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇದೇ ವೇಳೆ ಏ.8 ಅಥವಾ 9 ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಆಗುತ್ತದೆ ಎಂದು ಬೆಳಗಾವಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿಲ್ಲದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಗೊಂದಲವಾಗುವುದಿಲ್ಲ. ಆದರೆ, ಕೆಲವು ಕ್ಷೇತ್ರಗಳಲ್ಲಿ ಹಲವು ಆಕಾಂಕ್ಷಿಗಳು ಟಿಕೆಟ್‌ಗಾಗಿ ಪಟ್ಟು ಹಿಡಿದಿರುವುದರಿಂದ ಅಂಥ ಕ್ಷೇತ್ರಗಳಲ್ಲಿನ ಪರಿಸ್ಥಿತಿ ಅವಲೋಕನ ಮಾಡಿ ನಿರ್ಧಾರ ತೆಗೆದುಕೊಳ್ಳುವ ಸಂಭವವಿದೆ. ಪ್ರಬಲ ಆಕಾಂಕ್ಷಿಗಳಿದ್ದರೆ ಅಂಥವರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಸಾಧ್ಯತೆಯೂ ಇದೆ.
Karnataka election 2023: ಕುಷ್ಟಗಿ ಕ್ಷೇತ್ರದಲ್ಲಿ ಅಮರೇಗೌಡ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು?
ಶುಕ್ರವಾರ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಮಾದರಿಯಲ್ಲಿ ಸ್ಥಳೀಯ ಮುಖಂಡರಿಂದ ಯಾರು ಅಭ್ಯರ್ಥಿ ಆಗಬೇಕು ಎಂಬುದರ ಬಗ್ಗೆ ಲಿಖಿತ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಬಳಿಕ ಎಲ್ಲ ಜಿಲ್ಲೆಗಳ ಕೋರ್ ಕಮಿಟಿಗಳ ಸದಸ್ಯರನ್ನು ಬೆಂಗಳೂರಿಗೆ ಕರೆಸಿಕೊಂಡು ಶನಿವಾರ ಮತ್ತು ಭಾನುವಾರ ಅವರೊಂದಿಗೆ ರಾಜ್ಯ ನಾಯಕರು ಸಮಾಲೋಚನೆ ನಡೆಸಿದರು. ಇದೀಗ ಮೂರನೇ ಹಂತವಾಗಿ ಮಂಗಳವಾರ ಮತ್ತು ಬುಧವಾರ ರಾಜ್ಯ ಕೋರ್ ಕಮಿಟಿ ಸಭೆ ನಡೆಯಲಿದೆ.
