Karnataka Assembly Elections 2023: ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿ ಆಯ್ಕೆಯೇ ಕಗ್ಗಂಟು..!
ಬಿಜೆಪಿಯ ಹಾಲಿ ಶಾಸಕ ಸಿದ್ದು ಸವದಿ ಅವರಿಗೆ ಹಾಗೂ ಕಾಂಗ್ರೆಸ್‌ನ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಟಿಕೆಟ್ ನೀಡುವ ವಿಚಾರ ಈಗ ತೇರದಾಳದಲ್ಲಿ ನೂಲಿನಂತೆಯೇ ಸಮಸ್ಯೆ ಕೂಡ ಸುತ್ತಿಕೊಂಡಿದೆ. ಮಾತ್ರವಲ್ಲ, ಸ್ಥಳೀಯ ಮತ್ತು ಹೊರಗಿನವರು ಎಂಬ ವಾತಾವರಣ ಕ್ಷೇತ್ರದಲ್ಲಿ ಸೃಷ್ಟಿಯಾಗಿದೆ. ಹೀಗಾಗಿ ಉಭಯ ಪಕ್ಷಗಳ ಹೈಕಮಾಂಡ್‌ಗೆ ಅಭ್ಯರ್ಥಿ ಆಯ್ಕೆ ಮುಳ್ಳಿನ ಮೇಲೆ ಬಿದ್ದಿರುವ ಬಟ್ಟೆಯನ್ನು ತೆಗೆಯುವಂತಹ ಸವಾಲು ಉದ್ಭವವಾಗಿದೆ.
ಶಿವಾನಂದ ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿ(ಏ.02): ತೇರದಾಳ ಕ್ಷೇತ್ರದಾದ್ಯಂತ ರಾಜಕೀಯ ರಂಗು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಹುತೇಕ ಕಡೆಗಳಲ್ಲಿ ಹೊಸಬರ-ಹಳಬರ ಮಧ್ಯ ಪೈಪೋಟಿ ಎದುರಾಗುತ್ತಿದ್ದರೆ, ಇಲ್ಲಿ ಮಾತ್ರ ಕಾಂಗ್ರೆಸ್-ಬಿಜೆಪಿಯಲ್ಲಿ ಸ್ಥಳೀಯ ಮತ್ತು ನೇಕಾರ ಅಭ್ಯರ್ಥಿಗಳ ಧ್ವನಿ ಮಾರ್ಧನಿಸುತ್ತಿದೆ. ಹೀಗಾಗಿ ತೇರದಾಳ ಮತಕ್ಷೇತ್ರದ ಅಭ್ಯರ್ಥಿ ಆಯ್ಕೆ ಕೈ, ಕಮಲ ವರಿಷ್ಠರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.
ಬಿಜೆಪಿಯ ಹಾಲಿ ಶಾಸಕ ಸಿದ್ದು ಸವದಿ ಅವರಿಗೆ ಹಾಗೂ ಕಾಂಗ್ರೆಸ್‌ನ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಟಿಕೆಟ್ ನೀಡುವ ವಿಚಾರ ಈಗ ತೇರದಾಳದಲ್ಲಿ ನೂಲಿನಂತೆಯೇ ಸಮಸ್ಯೆ ಕೂಡ ಸುತ್ತಿಕೊಂಡಿದೆ. ಮಾತ್ರವಲ್ಲ, ಸ್ಥಳೀಯ ಮತ್ತು ಹೊರಗಿನವರು ಎಂಬ ವಾತಾವರಣ ಕ್ಷೇತ್ರದಲ್ಲಿ ಸೃಷ್ಟಿಯಾಗಿದೆ. ಹೀಗಾಗಿ ಉಭಯ ಪಕ್ಷಗಳ ಹೈಕಮಾಂಡ್‌ಗೆ ಅಭ್ಯರ್ಥಿ ಆಯ್ಕೆ ಮುಳ್ಳಿನ ಮೇಲೆ ಬಿದ್ದಿರುವ ಬಟ್ಟೆಯನ್ನು ತೆಗೆಯುವಂತಹ ಸವಾಲು ಉದ್ಭವವಾಗಿದೆ. ಇದರ ನಡುವೆ ತೇರದಾಳ ಕ್ಷೇತ್ರದಲ್ಲಿ ನೇಕಾರರಿಗೆ ಪ್ರಾಶಸ್ತ್ಯ ನೀಡಿಲ್ಲವೆಂಬ ಕೂಗು ಕೂಡ ಈಗ ಬಲವಾಗಿ ಕೇಳಿಬರುತ್ತಿದೆ. ಹೀಗಾಗಿ ಶತಾಯಗತಾಯ ಈ ಬಾರಿಯಾದರೂ ನೇಕಾರ ಸಮುದಾಯಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ವಾದ ಬಲವಾಗಿ ಕೇಳಿಬರುತ್ತಿದೆ. ಮತ್ತೊಂದೆಡೆ ಸ್ಥಳೀಯರಿಗೆ ಅವಕಾಶ ಕಲ್ಪಿಸಲೇಬೇಕು ಎಂಬ ಒತ್ತಡ ಕೂಡ ಹೆಚ್ಚಾಗಿದೆ. ಹೊರಗಿನಿಂದ ಬಂದವರೇ ಇಲ್ಲಿ ಶಾಸಕರಾಗುತ್ತಿದ್ದಾರೆ. ಸ್ಥಳೀಯರಿಗೆ ಏಕೆ ಅವಕಾಶ ಕಲ್ಪಿಸುತ್ತಿಲ್ಲ ಎಂಬ ವಾದ ಕೂಡ ಹುಟ್ಟಿಕೊಂಡಿದೆ.
ಬಿಜೆಪಿ ಶಾಸಕ ಗೋಪಾಲಕೃಷ್ಣ ರಾಜೀನಾಮೆ ಸ್ವೀಕೃತ: ಕಾಂಗ್ರೆಸ್ಸಿಗೆ?
ಹೀಗಾಗಿ ಎರಡೂ ಪಕ್ಷಗಳಲ್ಲಿನ ಮುಖಂಡರು ಬಹಿರಂಗವಾಗಿಯೇ ಸವಾಲು ಹಾಕುತ್ತ, ಈ ಬಾರಿ ಟಿಕೆಟ್ ನಮಗೇ ನೀಡಬೇಕೆಂದು ಆಯಾ ಹೈಕಮಾಂಡ್‌ಗಳ ಮುಂದೆ ಉಭಯ ಗುಂಪಿನವರು ಹಠ ಹಿಡಿದಿದ್ದಾರೆ. ತಮಗೇ ಟಿಕೆಟ್ ನೀಡಬೇಕೆಂಬ ಕಸರತ್ತನ್ನು ಕೂಡ ನಡೆಸಿದ್ದಾರೆ.
ಕಾಂಗ್ರೆಸ್‌ನಲ್ಲಿದೆ ಪೈಪೋಟಿ:
2013ರಲ್ಲಿ ಕಾಂಗ್ರೆಸ್ ಸ್ಪರ್ಧಿಸಿ ಗೆದ್ದಿದ್ದ ಉಮಾಶ್ರೀ ಸಹಜವಾಗಿ ಈ ಬಾರಿಯೂ ಟಿಕೆಟ್ ಪಡೆಯುವವರಲ್ಲಿ ಪಟ್ಟಿಯಲ್ಲಿ ಮೊದಲ ಸಾಲಿನಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಎರಡನೇ ಪಟ್ಟಿಯಲ್ಲಾದರೂ ಬರಬಹುದೇ ಎಂದು ಅವರು ಎದುರು ನೋಡುತ್ತಿದ್ದಾರೆ. ತೀವ್ರ ಪೈಪೋಟಿ ಇರುವ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿಲ್ಲ. ಆ ಪೈಕಿ ತೇರದಾಳ ಮತಕ್ಷೇತ್ರ ಕೂಡ ಪೈಪೋಟಿ ಇರುವ ಕ್ಷೇತ್ರವಾಗಿದೆ.
ಈ ನಿಟ್ಟಿನಲ್ಲಿ ಕಾಂಗ್ರೆಸ್‌ನಿಂದ ನೇಕಾರ ಸಮುದಾಯದ ಪ್ರತಿನಿಧಿಯಾಗಿ ಡಾ.ಎಂ.ಎಸ್.ದಡ್ಡೇನವರ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮತ್ತು ಪ್ರಬಲ ಪಂಚಮಸಾಲಿ ಸಮುದಾಯದ ಡಾ.ಎ.ಆರ್.ಬೆಳಗಲಿ, ಯುವ ನಾಯಕ ಡಾ.ಪದ್ಮಜೀತ ನಾಡಗೌಡ ಪಾಟೀಲ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ. ಸಹಜವಾಗಿ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಿರುವುದರಿಂದ ಹೈಕಮಾಂಡ್ ಕೂಡ ಅಭ್ಯರ್ಥಿ ಘೋಷಣೆಯನ್ನು ವಿಳಂಬ ಮಾಡುವ ಸಾಧ್ಯತೆ ಇದೆ. ಎರಡನೇ ಪಟ್ಟಿಯಲ್ಲಿ ತೇರದಾಳ ಮತಕ್ಷೇತ್ರಕ್ಕೆ ಯಾರ ಹೆಸರು ಬರಲಿದೆ ಎಂದು ಎಲ್ಲರೂ ಅದರತ್ತ ಚಿತ್ತ ಹರಿಸಿದ್ದಾರೆ. ಅಲ್ಲದೆ, ಟಿಕೆಟ್ ಘೋಷಣೆಗೂ ಮುನ್ನ ತಮ್ಮ ತಮ್ಮ ಶಕ್ತಿ ಪ್ರದರ್ಶನವನ್ನೂ ಹೈಕಮಾಂಡ್ ಮಟ್ಟದಲ್ಲಿ ಮಾಡುತ್ತಿದ್ದಾರೆ.
ಬಿಜೆಪಿಯಲ್ಲಿಯೂ ನಡೆದಿದೆ ಪೈಪೋಟಿ:
ಸಿದ್ದು ಸವದಿ ಈಗ ಬಿಜೆಪಿಯ ಹಾಲಿ ಶಾಸಕ. ಈ ಹಿಂದೆ ವಿಜಯ ಸಂಕಲ್ಪ ಯಾತ್ರೆ ನಡೆಯುವ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಿದ್ದು ಸವದಿ ಬೆಂಬಲಿಸುವಂತೆ ಬಹಿರಂಗ ಕರೆ ನೀಡಿದ್ದರು. ಆದರೆ, ಈ ಹೇಳಿಕೆ ಸ್ಥಳೀಯ ಬಿಜೆಪಿ ನಾಯಕರಲ್ಲಿ ಮತ್ತು ಆಕಾಂಕ್ಷಿತರಲ್ಲಿ ತೀವ್ರ ಬೇಸರ ಮೂಡಿಸಿತ್ತು. ನಂತರ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಮೇಲೆ ತಮ್ಮ ಮಾತಿಗೆ ತೇಪೆ ಹಚ್ಚುವ ಕೆಲಸ ಮಾಡಿದರು.
ಅಲ್ಲದೆ, ಬಿಜೆಪಿಯಿಂದ ನೇಕಾರ ಸಮುದಾಯದ ರಾಜೇಂದ್ರ ಅಂಬಲಿ, ಮನೋಹರ ಶಿರೋಳ ಹಾಗೂ ಸ್ಥಳೀಯ ಅಭ್ಯರ್ಥಿಗೇ ಟಿಕೆಟ್ ನೀಡಲು ಮೊದಲು ಧ್ವನಿ ಎತ್ತಿದ ಭೀಮಶಿ ಮಗದುಮ್, ತೇರದಾಳದ ಡಾ.ಎಂ.ಎಸ್.ದಾನಿಗೊಂಡ, ಕಿರಣಕುಮಾರ ದೇಸಾಯಿ ಪೈಪೋಟಿಯಲ್ಲಿದ್ದಾರೆ.
ಕಾಂಗ್ರೆಸ್ ಹೈ ಕಮಾಂಡ್‌ಗೆ ತಲೆನೋವಾದ ನಾಮಧಾರಿ V/s ಹವ್ಯಕ ಬ್ರಾಹ್ಮಣ ಟಿಕೆಟ್ ಫೈಟ್!
ಸ್ಥಳೀಯ ಅಭ್ಯರ್ಥಿ ಇಲ್ಲವೇ ನೇಕಾರ ವ್ಯಕ್ತಿಗೆ ಟಿಕೆಟ್ ನೀಡಬೇಕೆಂಬ ಕೂಗು ಕಾಂಗ್ರೆಸ್-ಬಿಜೆಪಿಯ ಎರಡೂ ಪಕ್ಷಗಳ ವರಿಷ್ಠರಿಗೆ ತಲೆನೋವಾಗಿದ್ದು, ಅಳೆದು ತೂಗಿ ಯಾರನ್ನು ಅಭ್ಯರ್ಥಿಯೆಂದು ಘೋಷಣೆ ಮಾಡಲಿದ್ದಾರೆ? ಎಂಬುದನ್ನು ಕ್ಷೇತ್ರದ ಜನತೆ ಕುತೂಹಲದಿಂದ ಕಾದು ನೋಡುತ್ತಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ರಣರಂಗಕ್ಕೆ ಧುಮುಕಲು ಕೇಸರಿ ಪಡೆ ರೆಡಿ, 15 ಜಿಲ್ಲೆಗಳ ಮುಖಂಡರ ಅಭಿಪ್ರಾಯ ಸಂಗ್ರಹ!