ಅರವಿಂದ ಬೆಲ್ಲದ ನಿವಾಸದಲ್ಲಿ ಆಂತರಿಕ ಸಭೆ ನಡೆಸಿದ ನಡ್ಡಾ: ಮೂರುಸಾವಿರ ಮಠಕ್ಕೆ ಭೇಟಿ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದರಿಂದ ಆಗಿರುವ ಹಾನಿ ಕಡಿಮೆ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬುಧವಾರವೂ ಪಕ್ಷದ ಆಂತರಿಕ ಸಭೆ ನಡೆಸಿದರು.
ಹುಬ್ಬಳ್ಳಿ (ಏ.20): ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದರಿಂದ ಆಗಿರುವ ಹಾನಿ ಕಡಿಮೆ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬುಧವಾರವೂ ಪಕ್ಷದ ಆಂತರಿಕ ಸಭೆ ನಡೆಸಿದರು. ಮಂಗಳವಾರವಷ್ಟೇ ಎಲ್ಲ ಮುಖಂಡರೊಂದಿಗೆ ಆಂತರಿಕ ಸಭೆ ನಡೆಸಿದ್ದ ನಡ್ಡಾ, ಇದೀಗ ಪ್ರಮುಖರೊಂದಿಗೆ ಸಭೆ ನಡೆಸಿದರು. ಜತೆಗೆ ಮೂರುಸಾವಿರ ಮಠದ ಶ್ರೀಗಳೊಂದಿಗೆ ಚರ್ಚೆ ನಡೆಸಿರುವುದು ವಿಶೇಷ.
ಬೆಳಗ್ಗೆಯೇ ಶಾಸಕ ಅರವಿಂದ ಬೆಲ್ಲದ ನಿವಾಸದಲ್ಲಿ ಉಪಾಹಾರದ ನೆಪದಲ್ಲಿ ಕೆಲ ಕಾಲ ಪ್ರಮುಖರೊಂದಿಗೆ ಆಂತರಿಕ ಸಭೆ ನಡೆಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ, ಶಾಸಕ ಅರವಿಂದ ಬೆಲ್ಲದ, ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪಕ್ಷದ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಅವರೊಂದಿಗೆ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು.
ಇಷ್ಟು ದಿನ ನಿಮ್ಮ ಹವಾ, ಇನ್ಮುಂದೆ ನಮ್ಮದೇ ಹವಾ: ಸಂಸದ ಪ್ರಜ್ವಲ್ ರೇವಣ್ಣ ಸವಾಲು
ಈ ವೇಳೆ ಯಾವುದೇ ಕಾರಣಕ್ಕೂ ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷ ಸೋಲಬಾರದು. ಅಲ್ಲಿ ಆರು ಬಾರಿ ಬಿಜೆಪಿಯೇ ಗೆದ್ದಿದೆ. ಆದರೆ, ಇದೀಗ ಅಲ್ಲಿನ ಶಾಸಕರು ಪಕ್ಷಾಂತರ ಮಾಡಿದ್ದಾರೆ. ಆದಕಾರಣ ಯಾವುದೇ ಕಾರಣಕ್ಕೂ ಮತಗಳು ಹರಿದು ಹಂಚಿಹೋಗದಂತೆ ತಡೆಯಲು ಹಾಗೂ ಪಕ್ಷದ ಅಭ್ಯರ್ಥಿ ಗೆಲ್ಲುವಂತೆ ನೋಡಿಕೊಳ್ಳಬೇಕು. ಇದಕ್ಕೆ ಬೇಕಾದ ಚುನಾವಣಾ ರಣತಂತ್ರ ರೂಪಿಸಿಕೊಳ್ಳಿ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಬಳಸಿಕೊಳ್ಳಿ. ಅಗತ್ಯ ಬಿದ್ದರೆ ಬೇರೆ ಕ್ಷೇತ್ರಗಳ ಮುಖಂಡರನ್ನು ಅಲ್ಲಿನ ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಿ ಎಂದು ನಡ್ಡಾ ಮುಖಂಡರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ಧಾರೂಢ, ಮೂರುಸಾವಿರ ಮಠಕ್ಕೆ ಭೇಟಿ: ನಂತರ ನಡ್ಡಾ ಅವರು ಅಲ್ಲಿಂದ ಸಿದ್ಧಾರೂಢ ಮಠಕ್ಕೆ ತೆರಳಿದರು. ಶ್ರೀ ಮಠದಲ್ಲಿ ಉಭಯ ಶ್ರೀಗಳ ಗದ್ದುಗೆಯ ದರ್ಶನಾಶೀರ್ವಾದ ಪಡೆದು ವಿಶೇಷ ಪೂಜೆ ಸಲ್ಲಿಸಿದ ನಡ್ಡಾ ಅಲ್ಲಿಂದ ನೇರವಾಗಿ ಮೂರು ಸಾವಿರ ಮಠಕ್ಕೆ ತೆರಳಿದರು. ಅಲ್ಲೂ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳನ್ನು ಭೇಟಿ ಮಾಡಿದರು. ಕೆಲ ಕಾಲ ಶ್ರೀಗಳೊಂದಿಗೆ ಚರ್ಚೆ ನಡೆಸಿದರು. ಸುಮಾರು 15 ನಿಮಿಷ ಕಾಲ ಸಭೆ ನಡೆಸಿದ್ದು ವಿಶೇಷ. ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿದ್ದಕ್ಕೆ ಮೂರುಸಾವಿರ ಮಠದ ಶ್ರೀಗಳು, ನಾಲ್ಕು ದಿನಗಳ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಹೀಗಾಗಿ ಶ್ರೀಗಳ ಭೇಟಿ ವೇಳೆ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿರುವುದಕ್ಕೆ ಕಾರಣ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಕುತೂಹಲಕ್ಕೆ ಕಾರಣವಾಗಿತ್ತು. ಟೆಂಪಲ್ ರನ್ ವೇಳೆ ಶಾಸಕ ಅರವಿಂದ ಬೆಲ್ಲದ ಮಾತ್ರ ಸಾಥ್ ನೀಡಿದ್ದರು. ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಇದೊಂದು ಔಪಚಾರಿಕ ಭೇಟಿಯಾಗಿತ್ತು. ಅಂದು ಶೆಟ್ಟರ್ ಅವರ ನ್ಯಾಯಯುತ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಟಿಕೆಟ್ ವಿಚಾರ ಪ್ರಸ್ತಾಪಿಸಿದ್ದೆ. ಆದರೆ ಈಗ ನಡ್ಡಾ ಅವರು ಭೇಟಿಯಾದ ವೇಳೆ ಆ ಬಗ್ಗೆಯೇನೂ ಚರ್ಚೆಯಾಗಿಲ್ಲ.
ರಾಮಚಂದ್ರಗೆ ಮಂಡ್ಯ ಜೆಡಿಎಸ್ ಟಿಕೆಟ್: ಎಚ್‌ಡಿಕೆ ಸ್ಪರ್ಧೆ ಇಲ್ಲ
ಬಿಜೆಪಿ ಲಿಂಗಾಯತರನ್ನು ಕಡೆಗಣಿಸುತ್ತಿದೆ ಎಂದೇನೂ ನನಗೆ ಅನಿಸಲ್ಲ. ಯಾವುದೇ ಪಕ್ಷದವರು ಬಂದರೂ ನಾವು ಆಶೀರ್ವಾದ ಮಾಡುತ್ತೇವೆ ಅಷ್ಟೇ ಎಂದರು. ಆದರೆ ಮೂರು ಸಾವಿರ ಮಠಕ್ಕೆ ನಡ್ಡಾ ಅವರು ಭೇಟಿ ಮಾಡಿ ಶ್ರೀಗಳೊಂದಿಗೆ ಚರ್ಚಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.