ರಾಮಚಂದ್ರಗೆ ಮಂಡ್ಯ ಜೆಡಿಎಸ್ ಟಿಕೆಟ್: ಎಚ್‌ಡಿಕೆ ಸ್ಪರ್ಧೆ ಇಲ್ಲ
ಅಂತೂ ಇಂತೂ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಭ್ಯರ್ಥಿಯಾಗುವವರೆಂದು ಇದ್ದ ತೀವ್ರ ಕುತೂಹಲಕ್ಕೆ ಅಂತಿಮ ತೆರೆ ಬಿದ್ದಿದೆ. ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಬಿ ಆರ್. ರಾಮಚಂದ್ರ ಅವರಿಗೆ ದಳಪತಿಗಳು ಬುಧವಾರ ಬಿ-ಫಾರಂ ನೀಡಿದ್ದಾರೆ.
ಮಂಡ್ಯ (ಏ.20): ಅಂತೂ ಇಂತೂ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಭ್ಯರ್ಥಿಯಾಗುವವರೆಂದು ಇದ್ದ ತೀವ್ರ ಕುತೂಹಲಕ್ಕೆ ಅಂತಿಮ ತೆರೆ ಬಿದ್ದಿದೆ. ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಬಿ ಆರ್. ರಾಮಚಂದ್ರ ಅವರಿಗೆ ದಳಪತಿಗಳು ಬುಧವಾರ ಬಿ-ಫಾರಂ ನೀಡಿದ್ದಾರೆ. ಜೆಡಿಎಸ್ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕ ಎಂ ಶ್ರೀನಿವಾಸ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಈಗ ಅವರನ್ನು ಬದಲಾಯಿಸಿ ಬಿ.ಆರ್.ರಾಮಚಂದ್ರ ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಮಾಡಿದೆ.
ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಬಿ.ಆರ್.ರಾಮಚಂದ್ರ ಅವರ ಕೈಗೆ ಬಿ-ಫಾರಂ ನೀಡಿ ಕಳುಹಿಸುವುದರೊಂದಿಗೆ ಅಭ್ಯರ್ಥಿ ಯಾರಾಗುವರೆಂಬ ಕೊನೆಯ ಕ್ಷಣದ ಕುತೂಹಲಕ್ಕೂ ತೆರೆ ಎಳೆದಿದ್ದಾರೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಘೋಷಿಸಿದ್ದ ಅಭ್ಯರ್ಥಿಗಳಿಗೆ ಜೆಡಿಎಸ್ ವರಿಷ್ಠರು ಬಿ-ಫಾರಂ ನೀಡಿದ್ದರು. ಆದರೆ, ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಎಂ.ಶ್ರೀನಿವಾಸ್ ಹೆಸರನ್ನು ಘೋಷಿಸಿದ್ದರೂ ಬಿ-ಫಾರಂ ವಿತರಣೆ ಮಾಡಿರಲಿಲ್ಲ. ಟಿಕೆಟ್ ಆಕಾಂಕ್ಷಿಗಳಾದ ಶಾಸಕ ಎಂ.ಶ್ರೀನಿವಾಸ್, ಮನ್ಮುಲ್ ಅಧ್ಯಕ್ಷ ಬಿ .ಆರ್.ರಾಮಚಂದ್ರ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅವರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದರೂ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ.
ತಾತ ಮತ್ತೆ ಸಿಎಂ ಆಗಬೇಕು: ‘ಮರಿ ಹುಲಿಯಾ’: ವರುಣದಲ್ಲಿ ಸಿದ್ದು ಪರ ಧವನ್ ರಾಕೇಶ್ ಪ್ರಚಾರ
ಕಳೆದ ಮೂರು ನಾಲ್ಕು ದಿನಗಳಿಂದ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗುವರೆಂಬ ಮಾತುಗಳು ದಟ್ಟವಾಗಿ ಕೇಳಿಬಂದಿದ್ದವು. ಇದರ ನಡುವೆ ಮಂಡ್ಯದ ಎಚ್‌ಡಿಫ್‌ಸಿ ಬ್ಯಾಂಕ್‌ನಲ್ಲಿ ಕುಮಾರಸ್ವಾಮಿ ಅವರು ಖಾತೆ ತೆರೆದಿರುವುದು ಅವರೇ ಅಭ್ಯರ್ಥಿಯಾಗುವರೆಂಬ ಮಾತಿಗೆ ಪುಷ್ಟಿಯನ್ನು ನೀಡಿತ್ತು. ಜೆಡಿಎಸ್ ಪಕ್ಷದೊಳಗೆ ನಡೆದ ಅನಿರೀಕ್ಷಿತ ಬೆಳವಣಿಗೆಯಿಂದ ಎಚ್ಚೆತ್ತ ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಯನ್ನು ಬದಲಾಯಿಸಲು ನಿರ್ಧರಿಸಿತ್ತು.
ಅಂತಿಮ ಹಂತದಲ್ಲಿ ಸಂಸದೆ ಸುಮಲತಾ ಅಂಬರೀಶ್ ಕೂಡ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾದಲ್ಲಿ ಅವರ ಎದುರಾಗಿ ತಾವೇ ಕಣಕ್ಕಿಳಿಯಲು ಸಿದ್ದರಿರುವುದಾಗಿ ಘೋಷಿಸಿದ್ದರು. ಉಮೇದುವಾರಿಕೆ ಸಲ್ಲಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಸುಮಲತಾ ಮಂಡ್ಯದ ಬ್ಯಾಂಕ್ ಆಫ್ ಬರೋಡದಲ್ಲಿ ಹೊಸದಾಗಿ ಖಾತೆಯನ್ನು ತೆರೆದಿದ್ದರು. ಅಂತಿಮ ಹಂತದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದು ಮಂಡ್ಯ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಬಿ. ಆರ್.ರಾಮಚಂದ್ರ ಅವರಿಗೆ ಟಿಕೆಟ್ ಘೋಷಿಸುವುದರೊಂದಿಗೆ ಮಂಡ್ಯ ಕ್ಷೇತ್ರಕ್ಕೆ ತಾವು ಅಭ್ಯರ್ಥಿಯಾಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಬಿ.ಆರ್.ರಾಮಚಂದ್ರ ಕೈ ಹಿಡಿದ ಅದೃಷ್ಟ: ಪ್ರಸಕ್ತ ಚುನಾವಣೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್‌ಗೆ ಆಕಾಂಕ್ಷಿಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟು ಅಂತಿಮವಾಗಿ ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ ಟಿಕೆಟ್ ಪಡೆದ ಅದೃಷ್ಟಶಾಲಿಯಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಶಾಸಕ ಎಂ.ಶ್ರೀನಿವಾಸ್ ಅವರಿಗೆ ಟಿಕೆಟ್ ನಿರಾಕರಿಸಿರುವ ದಳಪತಿಗಳು ಬಿ.ಆರ್.ರಾಮಚಂದ್ರ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿ ಅಖಾಡ ಪ್ರವೇಶಿಸುವಂತೆ ಮಾಡಿದ್ದಾರೆ. ಆರಂಭದಿಂದಲೂ ಬಿ.ಆರ್. ರಾಮಚಂದ್ರ ಅವರ ಪರವಾಗಿ ಮೇಲುಕೋಟೆ ಕ್ಷೇತ್ರದ ಶಾಸಕ ಸಿ. ಎಸ್.ಪುಟ್ಟರಾಜು ಅವರು ಬ್ಯಾಟಿಂಗ್ ಮಾಡುತ್ತಲೇ ಬಂದಿದ್ದರು. ಅಂತಿಮ ಹಂತದಲ್ಲಿ ತಮ್ಮ ಶಿಷ್ಯನಿಗೆ ಟಿಕೆಟ್ ಕೊಡಿಸುವಲ್ಲಿ ಪುಟ್ಟರಾಜು ಅವರು ಯಶಸ್ವಿಯಾಗಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದ ಮನ್‌ಮುಲ್ ಅಧ್ಯಕ್ಷ ಬಿ ಆರ್.ರಾಮಚಂದ್ರ ಅವರು ಚುನಾವಣಾ ಪೂರ್ವ ಕಾರ್ಯ ಚಟುವಟಿಕೆಗಳನ್ನು ಬಹಳ ಬಿರುಸಿನಿಂದಲೇ ಆರಂಭಿಸಿದ್ದರು. ಎಂ.ಶ್ರೀನಿವಾಸ್ ಹೆಸರನ್ನು ಜೆಡಿಎಸ್ ಘೋಷಿಸಿದ್ದರ ನಡುವೆಯೂ ಬಿ.ಆರ್.ರಾಮಚಂದ್ರ ಅವರು ಪ್ರತ್ಯೇಕವಾಗಿ ತಮ್ಮ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸುವುದರೊಂದಿಗೆ ತಮ್ಮ ಟಿಕೆಟ್ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಪಂಚರತ್ನ ರಥಯಾತ್ರೆ ಸಮಯದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಘೋಷಿತ ಅಭ್ಯರ್ಥಿ ಎಂ.ಶ್ರೀನಿವಾಸ್ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದು ಹೇಳಿದ್ದ ದಳಪತಿಗಳು ಚುನಾವಣೆ ಘೋಷಣೆಯಾಗುವವರೆಗೂ ಸುಮ್ಮನಿದ್ದು ಆನಂತರದಲ್ಲಿ ಅಭ್ಯರ್ಥಿಯನ್ನು ಬದಲಾಯಿಸುವ ತೀರ್ಮಾನ ಕೈಗೊಂಡರು.
ಇದು ಸಹಜವಾಗಿಯೇ ಎಂ.ಶ್ರೀನಿವಾಸ್ ಅವರಿಗೆ ಬೇಸರವನ್ನು ಉಂಟುಮಾಡಿತ್ತು. ಎಂ.ಶ್ರೀನಿವಾಸ್ ಅವರ ವಿರೋಧವನ್ನು ಕಟ್ಟಿಕೊಳ್ಳದೆ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವುದು ವರಿಷ್ಠರ ನಿಲುವಾಗಿತ್ತು. ಅದಕ್ಕಾಗಿ ಬಿ-ಫಾರಂ ನಿನ್ನ ಕೈಗೆ ನೀಡುತ್ತೇವೆ. ನೀನು ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ, ಎಂ.ಶ್ರೀನಿವಾಸ್ ಆಯ್ಕೆ ಅವರ ಅಳಿಯ, ಜಿಪಂ ಮಾಜಿ ಸದಸ್ಯ ಹೆಚ್.ಎನ್.ಯೋಗೇಶ್ ಆಗಿದ್ದರಿಂದ ಅವರಿಗೆ ಟಿಕೆಟ್ ನೀಡಲು ವರಿಷ್ಠರು ಒಪ್ಪಲಿಲ್ಲ. ಹಾಗಾಗಿ ಟಿಕೆಟ್ ಬಿ.ಆರ್.ರಾಮಚಂದ್ರ ಪಾಲಾಗಿದೆ. ಇದೀಗ ಟಿಕೆಟ್ ಕೈತಪ್ಪಿರುವ ಎಂ.ಶ್ರೀನಿವಾಸ್ ಅವರ ರಾಜಕೀಯ ನಡೆ ಹೇಗಿರುತ್ತದೆ ಎನ್ನುವುದು ಕುತೂಹಲ ಕೆರಳಿಸಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.