Asianet Suvarna News Asianet Suvarna News

ಇಬ್ರಾಹಿಂ ‘ವಜಾ’ಗೆ ಜೆಡಿಎಸ್‌ ರಾಜ್ಯ ಘಟಕವೇ ವಿಸರ್ಜನೆ

ರಾಜ್ಯಾಧ್ಯಕ್ಷ ಸ್ಥಾನದಿಂದ ಇಬ್ರಾಹಿಂ ಅವರೊಬ್ಬರನ್ನು ವಜಾಗೊಳಿಸಿದರೆ ಮುಸ್ಲಿಂ ಸಮುದಾಯದ ಅಸಮಾಧಾನ ಎದುರಿಸಬೇಕಾಗಬಹುದು ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಇಡೀ ರಾಜ್ಯ ಘಟಕವನ್ನೇ ವಿಸರ್ಜನೆ ಮಾಡುವ ನಡೆ ಅನುಸರಿಸಲಾಗಿದೆ.

JDS State Unit Dissolved in Karnataka grg
Author
First Published Oct 20, 2023, 4:34 AM IST

ಬೆಂಗಳೂರು(ಅ.20):  ತಮ್ಮದೇ ಮೂಲ ಜೆಡಿಎಸ್ ಎಂದು ಬಂಡಾಯದ ಬಾವುಟ ಹಾರಿಸಿದ್ದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ಪದಚ್ಯುತಿಗೊಳಿಸುವ ಉದ್ದೇಶದಿಂದ ಇಡೀ ರಾಜ್ಯ ಘಟಕವನ್ನೇ ವಿಸರ್ಜನೆ ಮಾಡಲಾಗಿದೆ. ರಾಜ್ಯಾಧ್ಯಕ್ಷ ಸ್ಥಾನದಿಂದ ಇಬ್ರಾಹಿಂ ಅವರೊಬ್ಬರನ್ನು ವಜಾಗೊಳಿಸಿದರೆ ಮುಸ್ಲಿಂ ಸಮುದಾಯದ ಅಸಮಾಧಾನ ಎದುರಿಸಬೇಕಾಗಬಹುದು ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಇಡೀ ರಾಜ್ಯ ಘಟಕವನ್ನೇ ವಿಸರ್ಜನೆ ಮಾಡುವ ನಡೆ ಅನುಸರಿಸಲಾಗಿದೆ.

ಇದರ ಬೆನ್ನಲ್ಲೇ ಹಂಗಾಮಿ ರಾಜ್ಯಾಧ್ಯಕ್ಷರನ್ನಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ನೇಮಿಸಲಾಗಿದೆ.
ಗುರುವಾರ ನಡೆದ ಜೆಡಿಎಸ್‌ನ ಕೋರ್‌ ಕಮಿಟಿ ಅಧ್ಯಕ್ಷರು, ಸದಸ್ಯರು, ಶಾಸಕರು, ಮುಖಂಡರನ್ನೊಳಗೊಂಡ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆದು ನಿರ್ಧಾರ ಕೈಗೊಳ್ಳುವ ಸರ್ವಸಮ್ಮತ ಅಧಿಕಾರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರಿಗೆ ನೀಡಲಾಯಿತು.

100% ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಅಂತಾ ಪ್ರೂವ್ ಆಗೋಯ್ತು; ದೇವೇಗೌಡರ ವಿರುದ್ಧ ಇಬ್ರಾಹಿಂ ಕಿಡಿ

ಕೆಲಹೊತ್ತಿನ ಬಳಿಕ ದೇವೇಗೌಡರು, ''ಜನತಾದಳ (ಜಾತ್ಯತೀತ) ಪಕ್ಷದ ಸಂವಿಧಾನ ಮತ್ತು ನಿಯಮಗಳ ಅಡಿಯಲ್ಲಿ, ಅಂದರೆ ಆರ್ಟಿಕಲ್ 10ರ ಪ್ರಕಾರ , ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ಈ ಕೂಡಲೇ ಜಾರಿಗೆ ಬರುವಂತೆ ಆ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ. ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳನ್ನು ಸುಲಲಿತವಾಗಿ ಮುಂದುವರೆಸಿಕೊಂಡು ಹೋಗಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಡಹಾಕ್‌ (ಹಂಗಾಮಿ) ಅಧ್ಯಕ್ಷರನ್ನಾಗಿ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ'' ಎಂದು ಲಿಖಿತ ಆದೇಶ ಹೊರಡಿಸಿದರು.

ಕಾರ್ಯಕಾರಿಣಿ ಸಭೆಯ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಚ್‌.ಡಿ.ದೇವೇಗೌಡರು, ಕಳೆದ ವಿಧಾನಸಭೆ ಚುನಾವಣೆ ಮುಗಿದ ಮೇಲೆ ಸ್ಥಗಿತಗೊಂಡಿದ್ದ ಪಕ್ಷದ ಚಟುವಟಿಕೆಗಳಿಗೆ ವೇಗ ನೀಡುವ ಉದ್ದೇಶದಿಂದ ರಾಜ್ಯದ ಜೆಡಿಎಸ್ ಘಟಕದ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ ಆದೇಶ ಹೊರಡಿಸಲಾಗಿದೆ. ಅಲ್ಲದೇ, ಎಚ್‌.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯ ಜೆಡಿಎಸ್ ಘಟಕದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದರು. ಈ ಎರಡೂ ಆದೇಶಗಳು ತಕ್ಷಣದಿಂದಲೇ ಜಾರಿಗೆ ಬರುತ್ತವೆ. ಜೆಡಿಎಸ್‌ ಪಕ್ಷದ ಸಂವಿಧಾನ ಮತ್ತು ನಿಯಮಗಳ ಅಡಿಯಲ್ಲಿ ಜೆಡಿಎಸ್‌ನ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ಈ ಕೂಡಲೇ ಜಾರಿಗೆ ಬರುವಂತೆ ಆ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಚುನಾವಣೆ ಮುಗಿದು ನಾಲ್ಕು ತಿಂಗಳು ಆಗಿದೆ. ಸಿ.ಎಂ.ಇಬ್ರಾಹಿಂ ನೀಡಿರುವ ಹೇಳಿಕೆಗಳ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ. ಆದರೆ, ಕುಮಾರಸ್ವಾಮಿ ಹಾಗೂ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹಾಗೂ ಇತರೆ ಮುಖಂಡರ ಜತೆಗೆ ಸಮಾಲೋಚನೆ ಮಾಡಿದ್ದೇವೆ. ಪಕ್ಷದ ವಿವಿಧ ರಾಜ್ಯಗಳ ಘಟಕಗಳಿಗೆ ಮಾಹಿತಿ ನೀಡಲಾಗಿದೆ. ಅವರಿಗೆ ನಮ್ಮ ನಡೆ ಮನವರಿಕೆ ಆಗಿದೆ. ನಮ್ಮ ಬಿಜೆಪಿ ಮೈತ್ರಿ ನಿರ್ಧಾರಕ್ಕೆ ಕೇರಳದ ಘಟಕ ಒಪ್ಪಿಗೆ ನೀಡಿದೆ ಎಂದರು.

ರಾಜ್ಯ ಘಟಕದ ಕಾರ್ಯದರ್ಶಿಯಾಗಿ ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಕಾರ್ಯ ನಿರ್ವಹಿಸಲಿದ್ದಾರೆ. ಕುಮಾರಸ್ವಾಮಿ ಅವರ ಜತೆ ಕಾರ್ಯನಿರ್ವಹಿಸಲು ಇನ್ನು ಮೂರು ದಿನದಲ್ಲಿ ಕೆಲವು ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.

ಕೋರ್ ಕಮಿಟಿಯ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಒಕ್ಕಲಿಗರೇ ಆಗಿದ್ದಾರೆ ಎಂಬ ಪ್ರಶ್ನೆ ಕೇಳಿಬರಬಹುದು. ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಇದೆ. ಅವರ ನಾಯಕತ್ವವನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಜತೆ ಮೈತ್ರಿ ಇದ್ದರೂ ಜಾತ್ಯತೀತ ಜನತಾದಳ ಜಾತ್ಯತೀತವಾಗೇ ಇರಲಿದೆ: ಬಂಡೆಪ್ಪ ಕಾಶಂಪೂರ್

ಅಲ್ಪಸಂಖ್ಯಾತ ಮುಖಂಡರ ಕೊರತೆ ಇಲ್ಲ:

ನಮಗೆ ಅಲ್ಪಸಂಖ್ಯಾತ ಮುಖಂಡರ ಕೊರತೆ ಇಲ್ಲ. ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಸೇರಿದಂತೆ ಹಲವು ಮುಖಂಡರು ಪಕ್ಷದಲ್ಲಿ ಇದ್ದಾರೆ. ಪಕ್ಷದ ಹಲವು ಮುಸ್ಲಿಂ ನಾಯಕರು ಸಹ ನಮ್ಮ ಜತೆಗೆ ಇದ್ದಾರೆ. ಯಾರೂ ಧೃತಿಗೆಡಬೇಕಾಗಿಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ವಿಧವಾದ ಬೆಳವಣಿಗೆಗಳಿವೆ. ಪಶ್ಚಿಮ ಬಂಗಾಳವೇ ಬೇರೆ, ತ್ರಿಪುರವೇ ಬೇರೆ, ಕರ್ನಾಟಕವೇ ಬೇರೆ. ಕುಮಾರಸ್ವಾಮಿ ಅವರು ಶಾಸಕಾಂಗ ಪಕ್ಷದ ನಾಯಕ ಜವಾಬ್ದಾರಿಯ ಜತೆಗೆ ಪಕ್ಷದ ಅಧ್ಯಕ್ಷ ಸ್ಥಾನದ ಹೊಣೆಯನ್ನೂ ನಿರ್ವಹಣೆ ಮಾಡಬೇಕು ಎಂಬ ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದೀಗ ಇಬ್ರಾಹಿಂ ಅವರು ರಾಜ್ಯಾಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದು ತೀವ್ರ ಮುಜುಗರ ಅನುಭವಿಸುವಂತಾಗಿದೆ. ಆದರೆ, ಸೋಲೊಪ್ಪಿಕೊಳ್ಳದ ಅವರು ನೋಟಿಸ್ ನೀಡದೆ ವಿಸರ್ಜನೆ ಮಾಡಿದ್ದು ಸರಿಯಲ್ಲ ಎಂದಿದ್ದು, ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ಮಾಡಿದ್ದಾರೆ.

Follow Us:
Download App:
  • android
  • ios