ಜೆಡಿಎಸ್‌ನ ಒಂದೊಂದೇ ವಿಕೆಟ್‌ ಪತನ: ಕಾಂಗ್ರೆಸ್‌ ಸೇರಲು ಸಜ್ಜಾದ ಮತ್ತೊಬ್ಬ ದಳ ನಾಯಕ..!

ಸೆ.26ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ತಿಳಿಸಿದ ಜೆಡಿಎಸ್‌ನ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್‌ 

JDS Leader M Shrikant Join Congress grg

ಶಿವಮೊಗ್ಗ(ಸೆ.24):  ಆಯನೂರು ಮಂಜುನಾಥ್‌ ಬಳಿಕ ಜೆಡಿಎಸ್‌ನ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್‌ ಕಾಂಗ್ರೆಸ್‌ ಸೇರ್ಪಡೆ ಖಚಿತವಾಗಿದ್ದು, ಮುಹೂರ್ತವೂ ಫಿಕ್ಸ್‌ ಆಗಿದೆ. ವಿಧಾನಸಭಾ ಚುನಾವಣೆ ಬಳಿಕ ಜಿಲ್ಲಾ ಜೆಡಿಎಸ್‌ನ ಒಂದೊಂದೇ ವಿಕೆಟ್‌ ಪತನಗೊಳ್ಳುತ್ತಿದ್ದು, ಈಗ ನಾಯಕನ ವಿಕೆಟ್‌ ಪತನಗೊಳ್ಳುವ ಕಾಲ ಸನಿಹವಾಗಿದೆ. ಎಂ.ಶ್ರೀಕಾಂತ್‌ ಈ ಸಂಬಂಧ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆ.26ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

ಸುಮಾರು 20 ವರ್ಷದಿಂದ ಜಿಲ್ಲಾ ಜೆಡಿಎಸ್‌ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಅವರು ನನ್ನನ್ನು ಮಗನಂತೆ ನೋಡಿಕೊಂಡಿದ್ದಾರೆ. ಎಲ್ಲ ಜವಾಬ್ದಾರಿ ಕೊಟ್ಟಿದ್ದಾರೆ. ಆದರೆ, ನಾವು ಎಷ್ಟೇ ಶ್ರಮ ಹಾಕಿದರೂ ಜನ ಪಕ್ಷಕ್ಕೆ ಬೆಂಬಲ ನೀಡುತ್ತಿಲ್ಲ. ಹೀಗಾಗಿ ಶಿವಮೊಗ್ಗದಲ್ಲಿ ಪಕ್ಷವನ್ನು ಬಲಪಡಿಸುವುದು ಕಷ್ಟವಾಗುತ್ತಿದೆ. ನಮ್ಮ ರಾಜಕೀಯ ಬದಲಾವಣೆ ಬಯಸಿ ಕಾಂಗ್ರೆಸ್‌ ಸೇರ್ಪಡೆಗೊಳ್ಳುತ್ತಿದ್ದೇನೆ. ಈ ಹಿಂದೆ ಪಾಲಿಕೆಯಲ್ಲಿ, ತಾಪಂ, ಜಿಪಂ, ಎಂಪಿ ಎಲೆಕ್ಷನ್ನಲ್ಲೂ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಂದಿದ್ದೇವೆ ಎಂದು ಮಾಹಿತಿ ನೀಡಿದರು.

ವಿಧಾನಸಭಾ ಚುನಾವಣೇಲಿ ಕುಕ್ಕರ್‌, ಇಸ್ತ್ರಿ ಪೆಟ್ಟಿಗೆ ಕೊಟ್ಟು ಸಿದ್ದರಾಮಯ್ಯ ಗೆದ್ದಿದ್ದಾರೆ; ಕೆಎಸ್ ಈಶ್ವರಪ್ಪ ಆರೋಪ

ಕಾಂಗ್ರೆಸ್‌ ಸೇರ್ಪಡೆಗೊಳ್ಳಬೇಕು ಎಂಬ ವಿಚಾರ ಹೊಸದಲ್ಲ, ಕಳೆದ ಒಂದು ವರ್ಷದ ಹಿಂದೇಯೇ ಕಾಂಗ್ರೆಸ್‌ ಸೇರ್ಪಡೆಗೊಳ್ಳಬೇಕಿತ್ತು. ಆದರೆ, ಚುನಾವಣೆ ಸಂದರ್ಭದಲ್ಲಿ ಪಕ್ಷ ಬಿಟ್ಟು ಹೋಗುವುದು ಸರಿಯಲ್ಲ ಎಂದು ನಮ್ಮ ಬೆಂಬಲಿಗರು ಹೇಳಿದ್ದರು. ಈ ಕಾರಣಕ್ಕೆ ಉಳಿದುಕೊಂಡೆವು. 2013ರಲ್ಲಿಯೂ ಕಾಂಗ್ರೆಸ್‌ ಸೇರ್ಪಡೆಗೊಳ್ಳುತ್ತೇನೆ ಎಂದಾಗ ಎಚ್‌.ಡಿ. ಕುಮಾರಸ್ವಾಮಿ ಹಾಗೂ ದೇವೇಗೌಡರು ನನ್ನನ್ನು ತಡೆದಿದ್ದರು ಎಂದು ತಿಳಿಸಿದರು.

ನಾನು ಯಾವುದೇ ಸ್ಥಾನಮಾನಕ್ಕಾಗಿ ಕಾಂಗ್ರೆಸ್‌ ಸೇರ್ಪಡೆ ಆಗುತ್ತಿಲ್ಲ. ಜೆಡಿಎಸ್‌ನಲ್ಲಿ ಇದ್ದಾಗಲೂ ನಮ್ಮ ಜೊತೆ ಇರುವರಿಗೆ ಸ್ಥಾನ ಕೊಡಿಸಿದ್ದೇನೆ ಹೊರತು, ನಾನು ಯಾವುದೇ ಸ್ಥಾನಮಾನ ಪಡೆದಿಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರ ಬೆಂಬಲದೊಂದಿಗೆ ಕಾಂಗ್ರೆಸ್‌ಗೆ ಹೋಗುತ್ತಿದ್ದೇನೆ. ಮುಂದೆ ಪಕ್ಷ ಯಾವುದೇ ಜವಬ್ದಾರಿ ಕೊಟ್ಟರು ನಾನು ನಿಷ್ಠೆಯಿಂದ ನಿಭಾಯಿಸುತ್ತೇನೆ ಎಂದರು.

ನನ್ನೊಂದಿಗೆ ಪಾಲಿಕೆ ಸದಸ್ಯ ನಾಗರಾಜ್‌ ಕಂಕಾರಿ, ಮಾಜಿ ಮೇಯರ್‌ ಎಚ್‌.ಪಾಲಾಕ್ಷಿ, ಪಕ್ಷದ ಮುಖಂಡರಾದ ಎಸ್‌.ಎನ್. ಮಹೇಶ್‌, ರಾಜಣ್ಣ, ಕೆ.ಜಿ.ನವಾಬ್‌, ಎಸ್‌.ಡಿ. ಪ್ರಸನ್ನಕುಮಾರ್‌, ಎಸ್‌.ಕೆ. ಭಾಸ್ಕರ್‌, ಡಿ.ಶ್ಯಾಮು, ಮಂಜುನಾಥ್‌ ನವುಲೆ, ಬಿ.ಎನ್‌.ಅನಿಲ್‌ಕುಮಾರ್‌, ಆನಂದ್‌, ಉಮೇಶ್‌, ಬಿ.ಆರ್‌.ಸಂತೋಷ್‌, ಪುನೀತ್‌ ಕುಮಾರ್‌, ಶಾಮೀರ್‌ ಪಾಷ, ದಿವಾಕರ್‌, ಬಸವರಾಜ್‌, ಪ್ರಶಾಂತ್‌ ರಾವ್‌, ಆರ್‌.ಸಂತೋಷ್, ಸಂದೇಶ್‌, ಎಚ್‌.ಸುರೇಶ್‌, ಮೇಘರಾಜ್‌, ಗೋವಿಂದರಾಜ್‌, ಎಚ್‌.ಲೋಕೇಶ್‌, ರಘುಗೌಡ, ಗುರುಪ್ರಸಾದ್‌, ಗಂಗಾಧರ, ದಾನೇಶ್‌, ಮೋಹನ್‌, ಕಿರಣ, ಶಿವಪ್ಪ, ಎಸ್‌.ಡಿ.ಶ್ರೀಕಾಂತ್‌, ಎಸ್‌.ಅವಿನಾಶ್‌ ಸೇರಿದಂತೆ ಇನ್ನೂ ಹಲವರು ಸೇರ್ಪಡೆಗೊಳ್ಳುವರು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ನಾಗರಾಜ್‌ ಕಂಕಾರಿ, ಎಚ್‌.ಪಾಲಾಕ್ಷಿ, ಮಹೇಶ್‌, ಎಸ್‌.ಕೆ. ಭಾಸ್ಕರ್‌, ಡಿ,ಶ್ಯಾಮು, ನವುಲೆ ಮಂಜುನಾಥ್‌, ಅನಿಲ್‌ಕುಮಾರ್‌, ಆನಂದ್‌, ಉಮೇಶ್‌, ಸಂತೋಷ್ ಮತ್ತಿತರರು ಇದ್ದರು.

ಬರಿದಾಗುತ್ತಾ ಜೆಡಿಎಸ್‌?

ವಿಧಾನಸಭಾ ಚುನಾವಣೆ ಬಳಿಕ ಜಿಲ್ಲಾ ಜೆಡಿಎಸ್‌ನಿಂದ ಒಬ್ಬೊಬ್ಬರೇ ಕಾಂಗ್ರೆಸ್‌ ಸೇರ್ಪಡೆ ಆಗುತ್ತಿದ್ದಾರೆ. ಆಯನೂರು ಮಂಜುನಾಥ್‌ ಅವರು ಕಾಂಗ್ರೆಸ್‌ ಸೇರ್ಪಡೆ ಬೆನ್ನಲ್ಲೇ ಜೆಡಿಎಸ್‌ಗೆ ಬೆನ್ನೆಲುಬಾಗಿದ್ದ ಎಂ.ಶ್ರೀಕಾಂತ್‌ ಕೂಡ ರಾಜಕೀಯದಲ್ಲಿ ತೆನೆಯ ಬಾರ ಇಳಿಸಿ ಕೈ ಹಿಡಿದು ಮುನ್ನಡೆಯಲು ಮುಂದಾಗಿದ್ದಾರೆ. ಇಷ್ಟೇ ಅಲ್ಲ ಇವರೊಂದಿಗೆ ಪಕ್ಷದ ಪ್ರಮುಖರು ಕಾಂಗ್ರೆಸ್‌ಗೆ ಹೋಗಲು ಹೆಜ್ಜೆ ಮುಂದಿಟ್ಟಿರುವುದರಿಂದ ಜಿಲ್ಲಾ ಜೆಡಿಎಸ್‌ ಬಹುತೇಕ ಬರಿದಾದಂತಾಗಿದೆ.

ಡಿ.ಕೆ.ಶಿವಕುಮಾರ್‌ ನೀರಿನ ಕಳ್ಳ, ಅಯೋಗ್ಯ: ಕೆ.ಎಸ್.ಈಶ್ವರಪ್ಪ

ಕಳೆದ ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಾಗ ಬಿಜೆಪಿ ತೊರೆದಿದ್ದ ಆಯನೂರು ಮಂಜುನಾಥ್‌ ಅವರು ಜೆಡಿಎಸ್‌ಗೆ ಸೇರಿದ್ದರು. ಚುನಾವಣೆಯಲ್ಲಿ ಸ್ಪರ್ಧೆಯೂ ಮಾಡಿದ್ದರು. ಇದಕ್ಕೂ ಕೆಲ ದಿನಗಳ ಹಿಂದೆ ಕಾಂಗ್ರೆಸ್‌ನಿಂದ ಟಿಕೆಟ್‌ ವಂಚಿತರಾಗಿದ್ದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಅವರು ಕೂಡ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್‌ಗೆ ಬಂದಿದ್ದರು. ಆಗ ಜೆಡಿಎಸ್‌ ತುಂಬಿದ ಮನೆಯಂತಾಗಿತ್ತು. ಇವರ ಸೇರ್ಪಡೆಯಿಂದ ಮುಂದೆ ಜೆಡಿಎಸ್‌ನ ಬಲ ಇಮ್ಮಡಿಯಾಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಚುನಾವಣೆಯಲ್ಲಿ ಭಾರಿ ಅಂತರದಿಂದ ಸೋಲು ಕಂಡ ಬಳಿಕ ಬೇಸರಗೊಂಡಿದ್ದ ಜೆಡಿಎಸ್‌ ನಾಯಕರು ಈಗ ಕಾಂಗ್ರೆಸ್‌ನತ್ತ ಮುಖ ಮಾಡಿರುವುದರಿಂದ ಜೆಡಿಎಸ್‌ ಈಗ ಖಾಲಿ ಮನೆಯಂತಾಗಿದೆ.

ಜೆಡಿಎಸ್‌ ಸೇರಿ ಕೆಲ ತಿಂಗಳಲ್ಲೆ ಪಕ್ಷ ತೊರೆದು ಮೊನ್ನೆಯಷ್ಟೇ ಕಾಂಗ್ರೆಸ್‌ ಸೇರಿದ ಆಯನೂರು ಮಂಜುನಾಥ್‌ ಅವರ ನಂತರ ಈಗ ಜಿಲ್ಲಾ ಜೆಡಿಎಸ್‌ಗೆ ಬಲವಾಗಿದ್ದ ಎಂ.ಶ್ರೀಕಾಂತ್‌ ಅವರೂ ಕಾಂಗ್ರೆಸ್‌ ಸೇರ್ಪಡೆಗೊಳ್ಳುತ್ತಿರುವುದು ಜೆಡಿಎಸ್‌ ಯಜಮಾನನಿಲ್ಲದ ಮನೆಯಂತಾಗಿದೆ. ಇನ್ನು ಮಾಜಿ ಕಾಂಗ್ರೆಸ್‌ ನಾಯಕ ಕೆ.ಬಿ.ಪ್ರಸನ್ನಕುಮಾರ್‌ ಅವರು ಜೆಡಿಎಸ್‌ನಲ್ಲೆ ಉಳಿಯುತ್ತಾರೋ, ಇಲ್ಲ ಅವರೂ ಮತ್ತೆ ಕಾಂಗ್ರೆಸ್‌ಗೆ ಬರುತ್ತಾರೋ ಎಂಬುದು ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆಯಾಗಿ ಉಳಿದಿದೆ.

Latest Videos
Follow Us:
Download App:
  • android
  • ios