* ಸಿದ್ದರಾಮಯ್ಯ ಮುಖ್ಯಮಂತ್ರಯಾಗಲೆಂದು ಜಿಟಿ ದೇವೇಗೌಡ ಪೂಜೆ* ಉರಿದು ಬಿದ್ದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ*ಜಿಟಿ ದೇವೇಗೌಡ್ರ ಬಾಗಿಲು ಬಂದ್ ಮಾಡಿದ ಕುಮಾರಸ್ವಾಮಿ!

ಮೈಸೂರು, (ಡಿ.04): ಜೆಡಿಎಸ್‌ನಿಂದ ದೂರ ಉಳಿದಿರುವ ಜಿಟಿ ದೇವೇಗೌಡ (GT Devegowda) ಅವರನ್ನ ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಎಚ್‌ಡಿ ದೇವೇಗೌಡ(HD Devegowda), ಸಾರಾ ಮಹೇಶ್ ಸೇರಿದಂತೆ ಇತರೆ ನಾಯಕರ ಕಸರತ್ತು ನಡೆಸಿದರು. ಆದ್ರೆ, ಅದು ಫಲ ಕೊಡಲಿಲ್ಲ.

ಸಾಲದಕ್ಕೆ ವಿಧಾನಪರಿಷತ್ ಟಿಕೆಟ್ (MLC Ticket) ಆಫರ್‌ ಸಹ ಕೊಟ್ಟರು. ಆದರೂ ಜಿಡಿ ದೇವೇಗೌಡ ಜೆಡಿಎಸ್‌(JDS) ನಾಯಕ ಆಫರ್‌ಗಳಿಗೆ ಬಗ್ಗಲಿಲ್ಲ. ಸಾಲದಕ್ಕೆ ಜಿಟಿ ದೇವೇಗೌಡ ಅವರು ಸಿದ್ದರಾಮಯ್ಯನವರು (Siddaramaiah) ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಪೂಜೆ ಮಾಡಿರುವುದಕ್ಕೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಕಣ್ಣು ಕುಕ್ಕಿದೆ.

Karnataka Politics : ಸಿದ್ದರಾಮಯ್ಯ ಮತ್ತೆ ಸಿಎಂ ಆಗಲೆಂದು ಜಿಟಿಡಿ ಪೂಜೆ

ಯೆಸ್‌...ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ರಾಜಕೀಯ (Politics) ಬದ್ಧ ವೈರಿಗಳು. ಹೋದಲ್ಲಿ ಬಂದಲ್ಲಿ ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪಳನ್ನ ಮಾಡುತ್ತಲೇ ಇದ್ದಾರೆ. ಇದರ ನಡುವೆ ಜೆಡಿಎಸ್‌ ಶಾಸಕ ಜಿಟಿ ದೇವೇಗೌಡ, ವಿರೋಧಿ ನಾಯಕ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಪೂಜೆ ಮಾಡಿದ್ರೆ, ಕುಮಾರಸ್ವಾಮಿ ಕಣ್ಣುಕೆಂಪಾಗಿಸದೇ ಇರುತ್ತೆ,?

ಸಿದ್ದರಾಮಯ್ಯ ರಾಜಕೀಯ ಒಳಿತಿಗಾಗಿ ಪೂಜೆ ಮಾಡಿದ್ದರಿಂದ ಕುಮಾರಸ್ವಾಮಿ, ಜಿಟಿಡಿ ಮೇಲೆ ಕೆಂಡಾಮಂಡಲರಾಗಿದ್ದು, ಜಿ.ಟಿ.ದೇವೇಗೌಡ ಅವರಿಗೆ ಜೆಡಿಎಸ್‌ ಬಾಗಿಲು ಶಾಶ್ವತವಾಗಿ ಮುಚ್ಚಿದೆ ಎಂದು ಹೇಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ..

ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಪರ ಮತಯಾಚಿಸಿ ಮಾತನಾಡಿದ ಅವರು, ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಎಚ್.ಡಿ.ದೇವೇಗೌಡರು, ನಾನು ಮತ್ತು ಪುತ್ರ ನಿಖಿಲ್‌ ಸಾಕಷ್ಟು ಪ್ರಯತ್ನಿಸಿದೆವು. ಯಾರದ್ದೋ ಕಲ್ಯಾಣಕ್ಕಾಗಿ, ಯಾರನ್ನೋ ಮುಖ್ಯಮಂತ್ರಿ (ಸಿದ್ದರಾಮಯ್ಯ) ಮಾಡಲು ಜಿಟಿಡಿ ದೇಗುಲದಲ್ಲಿ ಕಲ್ಯಾಣೋತ್ಸವ ಮಾಡಿಸಿದ್ದಾರೆ. ಆದರೆ ನಾನು ಬಡವರ, ರೈತರ ಕಲ್ಯಾಣಕ್ಕಾಗಿ ಹೋರಾಡುತ್ತೇನೆ ಎಂದು ಟಾಂಗ್ ಕೊಟ್ಟರು.

Asianet Suvarna Special: ಹೀನಾ-ಮಾನವಾಗಿ ಸೋಲಿಸಿದವರೇ ಸಿದ್ದು ಸಿಎಂ ಆಗಲಿ ಎಂದು ಮಂತ್ರ

ಸಿದ್ದರಾಮಯ್ಯ ಅವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯ ಮಗ ಶಾಸಕರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಕುಟುಂಬದ ನಾಲ್ವರು ರಾಜಕಾರಣದಲ್ಲಿದ್ದಾರೆ. ಸಿದ್ದರಾಮಯ್ಯ ಮಗ ಅಕಾಲಿಕ ಮರಣಕ್ಕೀಡಾದರು. ಅವರು ಸಹ ಸಕ್ರಿಯ ರಾಜಕಾರಣದಲ್ಲಿದ್ದರು. ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಹಲವರು ಈ ರೀತಿ ಇದ್ದಾರೆ. ಬಿಜೆಪಿ ಕಾಂಗ್ರೆಸ್ ಪಕ್ಷದವರು ಇದಕ್ಕೆ ಕಾನೂನು ಜಾರಿ ಮಾಡಲಿ. ತಮ್ಮ ಸಾಮರ್ಥ್ಯದಿಂದ ಸಂವಿಧಾನ ತಿದ್ದುಪಡಿ ಮಾಡಲಿ. ಕುಟುಂಬದ ಎಷ್ಟು ಜನ ರಾಜಕಾರಣಕ್ಕೆ ಬರಬೇಕು ಎಂಬ ನಿಯಮ ಮಾಡಲಿ ಎಂದು ಸವಾಲು ಹಾಕಿದರು.

ಇನ್ನು ಇದೇ ವೇಳೆ ಜೆಡಿಎಸ್ ಬಿಜೆಪಿಯ ʼಬಿʼ ಟೀಂ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ತಮ್ಮ ಬಾಯಿಗೆ ಏಕೆ ಶ್ರಮ ಕೊಡುತ್ತಿದ್ದಾರೆ? ಅವರು ಈ ರೀತಿ ಸ್ಲೇಟ್‌ನಲ್ಲಿ ಬರೆದು ಕುತ್ತಿಗೆಗೆ ಹಾಕಿಕೊಂಡು ಓಡಾಡಲಿ. ಸುಮ್ಮನೆ ಪದೇ ಪದೇ ಈ ರೀತಿ ಹೇಳಿ ಬಾಯಿ ಏಕೆ ನೋಯಿಸಿಕೊಳ್ಳಬೇಕು? 2018ರಿಂದ ಇದೇ ರೀತಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ತಿರುಗುಬಾಣವಾಗಲಿದೆ. ಇದರ ಪರಿಣಾಮ 2023ರಲ್ಲಿ ಜೆಡಿಎಸ್‍ಗೆ ಲಾಭವಾಗಲಿದೆ. ವಿಧಾನ ಪರಿಷತ್ ಚುನಾವಣೆಯಲ್ಲೂ ಜೆಡಿಎಸ್‍ಗೆ ಸ್ವಲ್ಪ ಅನುಕೂಲವಾಗಲಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಜೆಡಿಎಸ್ ಆಫರ್ ನಿರಾಕರಿಸಿದ ಜಿಟಿ ದೇವೇಗೌಡ, ದಳಪತಿಗಳ ಪ್ಲಾನ್ ಫೇಲ್

ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಮತ್ತೆ ಸಿಎಂ ಆಗಲಿ ಎಂದು ಚಾಮುಂಡೇಶ್ವರಿ (Chamundeshwari) ಕ್ಷೇತ್ರದ ಶಾಸಕ ಜಿಟಿ ದೇವೇಗೌಡ (GT Devegowda) ಶ್ರಿನಿವಾಸನ ಮುಂದೆ ಸಂಕಲ್ಪದೊಂದಿಗೆ ಪೂಜೆ ಮಾಡಿದ್ದರು. 

ಮೈಸೂರು (Mysuru) ತಾಲುಕಿನ ದಡದಕಲ್ಲು ದೇವಾಲಯದಲ್ಲಿ ಪೂಜೆ ಮಾಡಿಸಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ನಮ್ಮ ಪಕ್ಷದ ಶಾಸಕನಾಗಿ ರಾಜಕೀಯ ವಿರೋಧಿಗಳ ಪೂಜೆ ಮಾಡುತ್ತಾರೆಂದು ಕುಮಾರಸ್ವಾಮಿ ಕಣ್ಣುಕೆಂಪಾಗಿಸಿಕೊಂಡಿದ್ದಾರೆ.