Asianet Suvarna News Asianet Suvarna News

ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಭದ್ರಾ ಮೇಲ್ದಂಡೆ ಪರಿಶೀಲನೆ: ಸಚಿವ ಡಿ.ಸುಧಾಕರ್

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಭದ್ರಾ ಮೇಲ್ದಂಡೆ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. 

Inspection of Bhadra Upper under the leadership of DCM DK Shivakumar Says Minister D Sudhakar gvd
Author
First Published Jan 7, 2024, 2:23 PM IST

ಚಳ್ಳಕೆರೆ (ಜ.07): ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಭದ್ರಾ ಮೇಲ್ದಂಡೆ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಚಳ್ಳಕೆರೆ ನಗರದ ಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಕಾಮಗಾರಿ ಅದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ ಈ ಭಾಗಕ್ಕೆ ಭದ್ರೆಯ ನೀರು ಹರಿಸಲು ರಾಜ್ಯ ಸರ್ಕಾರ ಬದ್ಧವಿದೆ ಎಂದರು. ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳಬೇಕು. 

ಎಲ್ಲಿಯಾದರೂ ಕುಡಿಯುವ ನೀರಿನ ಸಮಸ್ಯೆ ತಲೆ ತೋರಿದರೆ ತಕ್ಷಣವೇ ಕೊಳವೆ ಬಾವಿ ಕೊರೆಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ 7 ತಿಂಗಳ ಒಳಗಾಗಿ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಶಕ್ತಿ ಯೋಜನೆ, ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನ ಭಾಗ್ಯ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಜ.12ರಂದು ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಗೆ ಚಾಲನೆ ದೊರಕಲಿದೆ. ಈಗಾಗಲೇ ರಾಜ್ಯಾದ್ಯಂತ 43 ಸಾವಿರ ಅರ್ಜಿಗಳು ಯುವನಿಧಿ ಯೋಜನೆಗೆ ನೋಂದಣಿಯಾಗಿವೆ. ಒಟ್ಟು 4 ಲಕ್ಷ ಯುವಕ, ಯುವತಿಯರು ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂಬ ಅಂದಾಜಿದೆ. ಜಿಲ್ಲೆಯ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ಡಿ.ಸುಧಾಕರ್ ಕರೆ ನೀಡಿದರು.

ಸಂಪೂರ್ಣ ಭ್ರಷ್ಟ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ: ಎಂ.ಪಿ.ರೇಣುಕಾಚಾರ್ಯ

ರಾಜ್ಯದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿದ್ದು, ಶಕ್ತಿ ಯೋಜನೆ ಅಡಿ ಸುಮಾರು 100 ಕೋಟಿ ಅಧಿಕ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಶೇ.97ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಲಾಗಿದೆ ಎಂದರು. ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುವ ಸಲುವಾಗಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಥಳದಲ್ಲಿ ಪರಿಹಾರ ದೊರಕದ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಾಕೀತು ಮಾಡಿದರು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಜನಸಂಪರ್ಕ ಸಭೆಗಳನ್ನು ನಡೆಸಲಾಗುತ್ತಿದ್ದು, ಈಗಾಗಲೇ 26 ಜನಸಂಪರ್ಕ ಸಭೆ ನಡೆದಿವೆ. ಚಳ್ಳಕೆರೆ ಕ್ಷೇತ್ರದಾದ್ಯಂತ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆಸಿ, ಜನರ ಸಮಸ್ಯೆ ಬಗೆಹರಿಸಲಾಗಿದೆ. 

ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಪ್ರತಿಯೊಂದು ಅರ್ಜಿಗಳಿಗೆ ಉತ್ತರ ಕೊಡುವುದರ ಜೊತೆಗೆ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲೂಕುಗಳಲ್ಲಿ ವಿಶೇಷವಾಗಿ ಬರಗಾಲದ ಸಂದರ್ಭದಲ್ಲಿ ಮೊದಲು ಪಂಚಾಯಿತಿಗೊಂದರಂತೆ ಗೋಶಾಲೆ ತೆರೆಯಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಬರಗಾಲದ ಹಿನ್ನಲೆಯಲ್ಲಿ ಹೋಬಳಿಗೊಂದರಂತೆ ಗೋಶಾಲೆ ಸ್ಥಾಪನೆಗೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದ್ದು, ಸರ್ಕಾರ ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದೆ. ಹೋಬಳಿಗೆ ಒಂದರಂತೆ ಗೋಶಾಲೆ ಪ್ರಾರಂಭ ಮಾಡಲುಕ್ರಮವಹಿಸಲಾಗಿದೆ. ಜಿಲ್ಲೆಯ 1891 ದೇವರ ಎತ್ತುಗಳ ಮೇವಿಗೆ ಪ್ರತಿ ತಿಂಗಳು 22 ಲಕ್ಷ ರು. ಬೇಕಾಗಿದ್ದು, ಅದಕ್ಕೆ ಸಂಬಂಧಪಟ್ಟಂತೆ ಈಗಾಗಲೆ 10 ಲಕ್ಷ ರು. ಅನುದಾನ ಪಶುಸಂಗೋಪನೆ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.

29 ಸಾವಿರ ರೈತರ ಖಾತೆಗೆ ಶೀಘ್ರ ಬರ ಪರಿಹಾರ: ಫ್ರೂಟ್ಸ್ ತಂತ್ರಾಂಶ ಆಧರಿಸಿ ನೇರವಾಗಿ ರೈತರ ಖಾತೆಗೆ ಬರ ಪರಿಹಾರದ ಧನ ವರ್ಗಾಯಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ಚಳ್ಳಕೆರೆ ತಾಲೂಕಿನಲ್ಲಿ ಜಾರಿಮಾಡಲಿದೆ. ಈಗಾಗಲೇ ತಾಲೂಕಿನ 29 ಸಾವಿರ ರೈತರ ವಿವರಗಳನ್ನು ಫ್ರೂಟ್ಸ್ ತಂತ್ರಾಂಶಕ್ಕೆ ಜೋಡಣೆ ಮಾಡಲಾಗಿದೆ. ಶೀಘ್ರವಾಗಿ ಪರಿಹಾರ ಧನ ನೇರವಾಗಿ ರೈತರ ಖಾತೆ ಜಮೆಯಾಗಲಿದೆ ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಹೇಳಿದರು. ಜನತಾ ದರ್ಶನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಐಪಿಆರ್‌ಜಿಎಸ್‌ ಪೋರ್ಟಲ್ ಮೂಲಕ ಗಣಕೀಕೃತಗೊಳಿಸಲಾಗುವುದು. ಗಣೀಕೃತಗೊಂಡ ಅರ್ಜಿಗಳಿಗೆ ಜಿಲ್ಲಾ ಹಂತದಲ್ಲಿ ಪರಿಹಾರ ದೊರಕದಿದ್ದರೆ. ಸರ್ಕಾರದ ಉನ್ನತ ಅಧಿಕಾರಿಗಳು ಸಹ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲು ಪೋರ್ಟಲ್‍ನಲ್ಲಿ ಅವಕಾಶವಿದೆ. ಆಡಳಿತದಲ್ಲಿ ಪಾರರ್ಶಕತೆ ತರುವ ಸಲುವಾಗಿ ಸಕಾಲ ಹಾಗೂ ಇ-ಆಫೀಸ್‍ಗಳನ್ನು ಎಲ್ಲಾ ತಾಲೂಕು ಕಚೇರಿ ಹಾಗೂ ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಇದುವರೆಗೂ ಜರುಗಿದ 8 ಜನತಾ ದರ್ಶನದಲ್ಲಿ 2229 ಅರ್ಜಿಗಳು ಸ್ವೀಕರಿಸಲಾಗಿದೆ. ಇದರಲ್ಲಿ 1304 ಅರ್ಜಿಗಳನ್ನು ವಿಲೇವಾರಿ ಮಾಡಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ. 925 ಅರ್ಜಿಗಳ ವಿಲೇವಾರಿಗೆ ಬಾಕಿಯಿದೆ. ಇದರಲ್ಲಿ 392 ಕಂದಾಯ ಹಾಗೂ 503 ಇತರೆ ಇಲಾಖೆ ಸಂಬಂಧಪಟ್ಟ ಅರ್ಜಿಗಳಿವೆ ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಜಿಆರ್‌ಜಿ ಮಾಹಿತಿ ನೀಡಿದರು. ರೈತರಿಗೆ ಅನುಕೂಲವಾಗುವಂತೆ ಕೃಷಿ ವಸ್ತು ಪ್ರದರ್ಶನದಲ್ಲಿ ಕೃಷಿಗೆ ಅಗತ್ಯವಾದ ಯಂತ್ರಗಳು, ಸಾವಯವ ಗೊಬ್ಬರಗಳ ಬಳಕೆ, ರೇಷ್ಮೆ ಕೃಷಿ ಸಾಗಾಣಿಕೆ ಮಳಿಗೆಗಳನ್ನು ತೆರೆಯಲಾಗಿತ್ತು. ಚಳ್ಳಕೆರೆ ನಗರ ಸಭೆಯಿಂದ ಕಸ ವಿಂಗಡಣೆ ಹಾಗೂ ನೈರ್ಮಲ್ಯ, ಪರಿಸರ ರಕ್ಷಣೆ ಕುರಿತಾದ ವಿಡಿಯೋ ತುಣುಕನ್ನು ಎಲ್ಇಡಿ ಪರದೆ ಮೂಲಕ ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. 

ಎಸ್‌ಡಿಪಿಐ, ಪಿಎಫ್ಐ ಕೇಸ್‌ ವಾಪಸ್, ಹಿಂದೂ ಸಂಘಟನೆ ಕೇಸ್‌ ರೀ ಓಪನ್: ಸಿ.ಟಿ.ರವಿ ಕೆಂಡಾಮಂಡಲ

ಸ್ತ್ರೀ ಸ್ವ-ಸಹಾಯ ಸಂಘಗಳು ಮಹಿಳೆಯರು ತಯಾರಿಸಿದ ರೊಟ್ಟಿ, ಸಿಹಿ ತಿನಿಸು, ಉಪ್ಪಿನಕಾಯಿ ಸೇರಿದಂತೆ ಇತರೆ ಉತ್ಪನ್ನಗಳನ್ನು ಜನರು ಆಸಕ್ತಿಯಿಂದ ಖರೀದಿಸಿದರು. ನಂದಿನಿ ಸಿಹಿ ಉತ್ಪನ್ನಗಳು, ಜಲಜೀವನ್ ಮಿಷನ್, ಶಿಕ್ಷಣ ಇಲಾಖೆ ಆರೋಗ್ಯ, ಅಲ್ಪಸಂಖ್ಯಾತರ ಅಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳ ವಸ್ತು ಪ್ರದರ್ಶನ ಮಳಿಗೆಗಳು ಇದ್ದವು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಡಿವೈಎಸ್‍ಪಿ ರಾಜಣ್ಣ, ತಹಸೀಲ್ದಾರ್ ರೆಹಾನ್ ಪಾಷಾ, ತಾಲೂಕು ಪಂಚಾಯಿತಿ ಇಒ ಶಶಿಧರ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Follow Us:
Download App:
  • android
  • ios