ಎಸ್‌ಡಿಪಿಐ, ಪಿಎಫ್ಐ ಕೇಸ್ ವಾಪಸ್, ಹಿಂದೂ ಸಂಘಟನೆ ಕೇಸ್ ರೀ ಓಪನ್: ಸಿ.ಟಿ.ರವಿ ಕೆಂಡಾಮಂಡಲ
ರಾಜ್ಯದಲ್ಲಿರುವ ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳ ಮೇಲಿನ ಪ್ರಕರಣ ವಾಪಸ್ ಪಡೆಯುತ್ತಾರೆ. ಅದೇ ಹಿಂದೂ ಸಂಘಟನೆಗಳ ಪ್ರಕರಣಗಳನ್ನು ರೀಓಪನ್ ಮಾಡಿಸುತ್ತಾರೆ. ಇದೆಂತ ಸರ್ಕಾರ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಕಿಡಿ ಕಾರಿದ್ದಾರೆ.
ಗಂಗಾವತಿ (ಜ.07): ರಾಜ್ಯದಲ್ಲಿರುವ ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳ ಮೇಲಿನ ಪ್ರಕರಣ ವಾಪಸ್ ಪಡೆಯುತ್ತಾರೆ. ಅದೇ ಹಿಂದೂ ಸಂಘಟನೆಗಳ ಪ್ರಕರಣಗಳನ್ನು ರೀಓಪನ್ ಮಾಡಿಸುತ್ತಾರೆ. ಇದೆಂತ ಸರ್ಕಾರ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಕಿಡಿ ಕಾರಿದ್ದಾರೆ. ಗಂಗಾವತಿ ಅಂಜನಾದ್ರಿಯ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಜ.22ರಂದು ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಕರ ಸೇವಕರನ್ನು ಬಂಧಿಸಿ ರೊಚ್ಚಿಗೆಬ್ಬಿಸುತ್ತಿದ್ದಾರೆ. ಇದು ದುರದ್ದೇಶಪೂರಕ. ಹಿಂದೂಗಳ ಪ್ರಕರಣಗಳನ್ನು ರೀಓಪನ್ ಮಾಡಿಸಿ ಬಂಧಿಸಿದ್ದಾರೆ. ಆದರೆ ರಾಜ್ಯದಲ್ಲಿ ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳು ಏನೇ ತಪ್ಪು ಮಾಡಿದ್ದರೂ ಅವರ ಪ್ರಕರಣಗಳನ್ನು ವಾಪಸ್ ಪಡೆಯುತ್ತಾರೆ. ಇದೊಂದು ಹಿಂದೂ ವಿರೋಧಿ ಸರ್ಕಾರವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಲು ಪಕ್ಷ ಸನ್ನದ್ಧವಾಗಿದ್ದು, ಕಾಂಗ್ರೆಸ್ ಕುತಂತ್ರಕ್ಕೆ ಬೆಜೆಪಿ ಪ್ರತಿತಂತ್ರ ರೂಪಿಸಿದೆ ಎಂದರು. ಚಿಕ್ಕಮಗಳೂರು ದತ್ತ ಪೀಠದಲ್ಲಿ ಭಗವಾಧ್ವಜ ಹಾರಿಸಿದ್ದಕ್ಕೆ ಕೇಸ್ ಹಾಕಿದ್ದಾರೆ. ಏಳು ವರ್ಷದ ಹಿಂದಿನ ಕೇಸ್‌ಗೆ ಚಾರ್ಜ್‌ಶೀಟ್ ಸಲ್ಲಿಸಿ, ಸಮನ್ಸ್ ನೀಡಿದ್ದಾರೆ. ಭಗವಾಧ್ವಜ ಹಾರಿಸಿದ್ದೇ ಅವರ ದೃಷ್ಟಿಯಲ್ಲಿ ದೊಡ್ಡ ಅಪರಾಧವಾಗಿದೆ ಎಂದು ಕಿಡಿಕಾರಿದರು. ಸಿದ್ದರಾಮಯ್ಯ ಅವರಿಗೆ ಕೇಸರಿ ವಸ್ತ್ರ ನೋಡಿದರೆ ಏಕೆ ಆಗಲ್ಲ ಎನ್ನುವದಕ್ಕೆ ಇದೇ ಸಾಕ್ಷಿಯಾಗಿದೆ ಎಂದರು.
ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳು ಅರ್ಹರಿಗೆ ತಲುಪಲಿ: ಶಾಸಕ ಸಿ.ಸಿ.ಪಾಟೀಲ್
ಅಂಜನಾದ್ರಿ ಅಭಿವೃದ್ಧಿಗೆ ₹120 ಕೋಟಿ ಬಿಜೆಪಿ ಸರ್ಕಾರ ನೀಡಿದೆ. ಇದಕ್ಕೆ ನೀಲನಕ್ಷೆ ತಯಾರಿಸಬೇಕು. ಅಂಜನಾದ್ರಿ ದೇಗುಲ ಸೇರಿದಂತೆ ನೈಸರ್ಗಿಕವಾಗಿರುವ ಮೂಲ ಬೆಟ್ಟದ ಸ್ವರೂಪಕ್ಕೆ ಧಕ್ಕೆ ಬಾರದಂತೆ ಅಂಜನಾದ್ರಿ ಅಭಿವೃದ್ಧಿ ಪಡಿಸಲಿ ಎಂದರು. ಶ್ರೀರಾಮಚಂದ್ರ- ಹನುಮಂತ ದೇವರು ಉತ್ತರ- ದಕ್ಷಿಣ ಪ್ರದೇಶಕ್ಕೆ ಸಂಬಂಧ ಹೊಂದಿದ್ದಾರೆ. ಶ್ರೀರಾಮ ಸರ್ಕ್ಯೂಟ್ ಯೋಜನೆಯಡಿ ಅಂಜನಾದ್ರಿಯನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿರೂಪಾಕ್ಷಪ್ಪ ಸಿಂಗನಾಳ, ಜಿ.ಶ್ರೀಧರ, ತಿಪ್ಪೇರುದ್ರಸ್ವಾಮಿ, ಚೆನ್ನಪ್ಪ ಮಳಗಿ, ಪದ್ಮನಾಭ, ವಿನಯ್ ಪಾಟೀಲ್ ಇದ್ದರು.