ಸಾಮಾಜಿಕ ಮತ್ತು ಆರ್ಥಿಕ ದುರ್ಬಲ ಸಮುದಾಯದವರಿಗೆ ರಾಜಕೀಯ ಮುಖ್ಯವಾಹಿನಿಯಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸುವ ಭಾರತದ ರಾಜಕೀಯ ಮೀಸಲಾತಿ ವ್ಯವಸ್ಥೆ ಕುರಿತು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಭಾರತದ ಈ ಕ್ರಮವನ್ನು ವಿಶ್ವಾಸಾರ್ಹ ಉದಾಹರಣೆ ಎಂದು ಬಣ್ಣಿಸಲಾಗಿದೆ.
ದಾವೋಸ್: ವಿಶ್ವಾದ್ಯಂತ ರಾಜಕೀಯ ವ್ಯವಸ್ಥೆ ಮೇಲೆ ಶ್ರೀಮಂತರ ಹಿಡಿತ ಹೆಚ್ಚಾಗುತ್ತಿರುವ ಆತಂಕದ ನಡುವೆಯೇ ಸಾಮಾಜಿಕ ಮತ್ತು ಆರ್ಥಿಕ ದುರ್ಬಲ ಸಮುದಾಯದವರಿಗೆ ರಾಜಕೀಯ ಮುಖ್ಯವಾಹಿನಿಯಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸುವ ಭಾರತದ ರಾಜಕೀಯ ಮೀಸಲಾತಿ ವ್ಯವಸ್ಥೆ ಕುರಿತು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಭಾರತದ ಈ ಕ್ರಮವನ್ನು ವಿಶ್ವಾಸಾರ್ಹ ಉದಾಹರಣೆ ಎಂದು ಬಣ್ಣಿಸಲಾಗಿದೆ.
ಭಾರತದ ಮೀಸಲು ವ್ಯವಸ್ಥೆ ಗಮನಾರ್ಹ ಉದಾಹರಣೆ
ರಾಜಕೀಯ ಅಧಿಕಾರವನ್ನು ಅತ್ಯಂತ ಸಮಾನವಾಗಿ ಹೇಗೆ ಹಂಚಬಹುದು ಹಾಗೂ ಶ್ರೀಸಾಮಾನ್ಯರನ್ನೂ ಹೇಗೆ ಸಬಲೀಕರಣ ಮಾಡಬಹುದು ಎಂಬುದಕ್ಕೆ ಭಾರತದ ಮೀಸಲು ವ್ಯವಸ್ಥೆ ಗಮನಾರ್ಹ ಉದಾಹರಣೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಲಾಗಿದೆ.
ಅಸಮಾನತೆ ಮತ್ತು ಬಡತನ ವಿರುದ್ಧ ಹೋರಾಟ ನಡೆಸುವ ಆಕ್ಸ್‌ಫಾಮ್ ಇಂಟರ್‌ನ್ಯಾಷನಲ್
ಅಸಮಾನತೆ ಮತ್ತು ಬಡತನ ವಿರುದ್ಧ ಹೋರಾಟ ನಡೆಸುವ ಆಕ್ಸ್‌ಫಾಮ್ ಇಂಟರ್‌ನ್ಯಾಷನಲ್ ಸಂಘಟನೆಯು ಸೋಮವಾರದಿಂದ ಇಲ್ಲಿ ಆರಂಭವಾದ ವಿಶ್ವ ಆರ್ಥಿಕ ಶೃಂಗದ ವೇಳೆ ಸಲ್ಲಿಸಿದ ವರದಿಯಲ್ಲಿ ಭಾರತೀಯ ಮೀಸಲಾತಿ ವ್ಯವಸ್ಥೆ ಕುರಿತು ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಜನಸಾಮಾನ್ಯರಿಗಿಂತ ಶ್ರೀಮಂತರ ರಾಜಕೀಯ ಪ್ರವೇಶ ಸಾಧ್ಯತೆ 4000 ಪಟ್ಟು ಹೆಚ್ಚಿರುತ್ತದೆ ಎಂದು ಅಭಿಪ್ರಾಯಪಟ್ಟಿರುವ ಆಕ್ಸ್‌ಫಾಮ್, ಜನಸಾಮಾನ್ಯರಿಗೂ ರಾಜಕೀಯ ಮತ್ತು ನೀತಿ-ನಿರೂಪಣೆಯ ಅಧಿಕಾರ ನೀಡುವ ಅಗತ್ಯವಿದೆ ಎಂದು ಒತ್ತಿ ಹೇಳಿದೆ. ಹೆಚ್ಚುತ್ತಿರುವ ಅಸಮಾನತೆ ಹೊರತಾಗಿಯೂ ಸಾಮಾನ್ಯ ಜನರೂ ಸಬಲರಾಗಿ ರಾಜಕೀಯವಾಗಿ ನೀತಿ ನಿರೂಪಣೆಯಲ್ಲಿ ಮಹತ್ವದ ಪಾತ್ರ ವಹಿಸಬಹುದಾಗಿದೆ. ಆದರೆ ಅದಕ್ಕೆ ಪೂರಕವಾದ ರಾಜಕೀಯ, ಸಾಂಸ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ನಿರ್ಮಿಸಬೇಕಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಸಾಂಸ್ಥಿಕವಾಗಿ ಎಲ್ಲರ ಒಳಗೊಳ್ಳುವಿಕೆ, ರಾಜಕೀಯ ಸ್ಪಂದನೆಗೆ ಪ್ರೋತ್ಸಾಹ, ಸಾಮೂಹಿಕ ಸಂಘಟನೆ, ಪರಿಣಾಮಕಾರಿ ಆಡಳಿತ ಮತ್ತು ಸೈದ್ಧಾಂತಿಕ ಬದ್ಧತೆಗಳೆಲ್ಲ ಒಂದಾದಾಗ ಮಾತ್ರ ಇದು ಸಾಧ್ಯವಾಗಲಿದೆ ಎಂದು ಆಕ್ಸ್‌ಫಾಮ್ ಅಭಿಪ್ರಾಯಪಟ್ಟಿದೆ.
ಅವಕಾಶ ವಂಚಿತರು ನೀತಿ ನಿರೂಪಣೆಯ ಭಾಗವಾಗುವಂತೆ ನೋಡಿಕೊಳ್ಳಲು, ರಾಜಕೀಯದಲ್ಲಿನ ತಮ್ಮ ಭಾಗೀದಾರಿಕೆ ಹೆಚ್ಚಿಸಿಕೊಳ್ಳಲು ನಾಗರಿಕ ಸಮಾಜ ಸಂಘಟನೆಗಳು, ನೆಲಮೂಲದ ಚಳವಳಿಗಳು ಮತ್ತು ಟ್ರೇಡ್ ಯೂನಿಯನ್‌ಗಳು ಸರ್ಕಾರಗಳ ಪಾಲಿಗೆ ಸಹಜ ಮಿತ್ರರಾಗಲಿವೆ ಎಂದು ಆಕ್ಸ್‌ಫಾಮ್ ತನ್ನ ‘ರಿಸಿಸ್ಟಿಂಗ್ ದಿ ರೂಲ್ ಆಫ್ ದಿ ರಿಚ್; ಪ್ರೊಟೆಕ್ಟಿಂಗ್ ಫ್ರೀಡಂ ಫ್ರೊಂ ಬಿಲಿಯನೇರ್ ಪವರ್’ ಎಂಬ ವರದಿಯಲ್ಲಿ ತಿಳಿಸಿದೆ.
ಇದೇ ವೇಳೆ ಭಾರತದ ಮೀಸಲಾತಿಯ ಉದಾಹರಣೆಯನ್ನೂ ವರದಿಯಲ್ಲಿ ಉಲ್ಲೇಖಿಸಿದ ಆಕ್ಸ್‌ಫಾಮ್, ಭಾರತದಲ್ಲಿರುವ ಮೀಸಲಾತಿ ವ್ಯವಸ್ಥೆಯು ಎಸ್ಸಿ, ಎಸ್ಟಿ ಮತ್ತು ಇತರೆ ಆರ್ಥಿಕ ದುರ್ಬಲ ಮತ್ತು ಸಾಮಾಜಿಕವಾಗಿ ಹೊರಗುಳಿದಿರುವ ಸಮುದಾಯಗಳಿಗೆ ಶಾಸನಪ್ರತಿನಿಧಿಯಾಗಲು ಮತ್ತು ಸಂಪನ್ಮೂಲಗಳ ಮರುವಿತರಣೆ ನೀತಿಗಳಿಗೆ ಉತ್ತೇಜನ ನೀಡಲು ಇದರಿಂದ ಅವಕಾಶ ಸಿಗುತ್ತದೆ ಎಂದು ಹೇಳಿದೆ.
ರಾಜಕೀಯ ಮೀಸಲು ಹೇಗೆ?ಗ್ರಾಪಂ, ತಾಪಂ, ಜಿಪಂ, ರಾಜ್ಯ ವಿಧಾನಸಭೆ, ಸಂಸತ್‌ನಲ್ಲಿ ಹಿಂದುಳಿದ ವರ್ಗಗಳಿಗೆ ಸ್ಥಾನ ಮೀಸಲು ಇಡಲಾಗಿದೆ. ಈ ಮೂಲಕ ಈ ಕ್ಷೇತ್ರಗಳಲ್ಲಿ ಅವರು ಮಾತ್ರವೇ ಸ್ಪರ್ಧಿಸುವ ಅವಕಾಶ ಕಲ್ಪಿಸಲಾಗಿದೆ.
- ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಶೃಂಗ
- ಆಕ್ಸ್‌ಫಾಮ್ ಸಂಸ್ಥೆಯಿಂದ ‘ಬಿಲಿಯನೇರ್‌ಗಳ ಅಧಿಕಾರದಿಂದ ಸ್ವಾತಂತ್ರ್ಯ ರಕ್ಷಣೆ’ ವರದಿ ಬಿಡುಗಡೆ
- ಶ್ರೀಸಾಮಾನ್ಯರಿಗಿಂತ ಶತಕೋಟ್ಯಧೀಶ್ವರರು ಅಧಿಕಾರಕ್ಕೇರುವ ಸಾಧ್ಯತೆ 4000 ಪಟ್ಟು ಅಧಿಕವಾಗಿದೆ
- ಆದರೆ ಭಾರತದಲ್ಲಿ ದಲಿತರು, ದುರ್ಬಲ ವರ್ಗದವರಿಗೆ ಮೀಸಲಾತಿಯ ವ್ಯವಸ್ಥೆ ಇದೆ ಎಂದು ಉಲ್ಲೇಖ
- ಇದರಿಂದ ಆರ್ಥಿಕ ದುರ್ಬಲವರ್ಗದವರು, ನಿರ್ಲಕ್ಷ್ಯಿತ ಸಮುದಾಯಗಳಿಗೆ ಅವಕಾಶ ಎಂದು ಬಣ್ಣನೆ


