ಭಾರತೀಯ ಸೇನೆ ಆಪರೇಷನ್ ಸಿಂಧೂರ ನಡೆಸುವುದರ ಮೂಲಕ ಪಾಕಿಸ್ತಾನದಲ್ಲಿನ ಉಗ್ರರಿಗೆ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ (ಮೇ.08): ಭಾರತೀಯ ಸೇನೆ ಆಪರೇಷನ್ ಸಿಂಧೂರ ನಡೆಸುವುದರ ಮೂಲಕ ಪಾಕಿಸ್ತಾನದಲ್ಲಿನ ಉಗ್ರರಿಗೆ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಪಾಕಿಸ್ತಾನದಲಿನ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿರುವುದು ಬಹಳ ಸಂತೋಷದ ವಿಚಾರ. ಲಷ್ಕರ್ -ಇ- ತೋಯ್ಬಾ ಹಾಗೂ ವಿವಿಧ ಉಗ್ರ ಸಂಘಟನೆಗಳ ಮೇಲೆ ದಾಳಿ ಮಾಡಲಾಗಿದೆ. ಆಪರೇಶನ್ ಸಿಂಧೂರ ಮೂಲಕ ನಮ್ಮ ಸೈನಿಕರು ಧ್ವಂಸ ಮಾಡಿದ್ದಾರೆ ಎಂದರು.
ಸೈನಿಕರ ದಾಳಿಯಿಂದ ಶಕ್ತಿಶಾಲಿ ಉಗ್ರರೆ ಸತ್ತಿರುವುದು ಸಂತೋಷ. ಹೆಣ್ಣು ಮಕ್ಕಳ ಸಿಂಧೂರ ಅಳಿಸುವ ಕೆಲಸ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಆಪರೇಶನ್ ಸಿಂಧೂರ ಎಂದು ಹೆಸರಿಟ್ಟಿರುವುದು ಸಂತೋಷ. ದಾಳಿಯಲ್ಲಿ 100 ಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. ಚೀನಾ ಒಂದು ಬಿಟ್ಟು ಇನ್ನೆಲ್ಲಾ ದೇಶಗಳು ಸಂತೋಷ ಪಟ್ಟಿವೆ. ಇಡೀ ವಿಶ್ವವೇ ಇಂದು ಭಾರತದ ಜೊತೆಗಿದೆ. ಪ್ರಧಾನಿ ಮೋದಿ, ರಾಜನಾಥ್ ಸಿಂಗ್, ಅಮಿತ್ ಅವರಿಗೆ ಸೇನೆಗೆ ಬೆಂಬಲ ನೀಡಿದ್ದಾರೆ. ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರೂ ಸೈನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಅಭಿನಂದಿಸಿದ್ದಾರೆ.
ಆದರೆ, ಕಾಂಗ್ರೆಸ್ ಪಕ್ಷ ಟ್ವಿಟರ್ ಮೂಲಕ ಶಾಂತಿ ಮಂತ್ರ ಜಪಿಸಿದ್ದಾರೆ. ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ಅದನ್ನ ಡಿಲೀಟ್ ಮಾಡಿದ್ದಾರೆ. ಎಲ್ಲಿಯವರೆಗೆ ಶಾಂತಿ ಮಂತ್ರ ಪಠಿಸಲು ಸಾಧ್ಯ? ಇಂತಹ ಸಂದರ್ಭದಲ್ಲಿ ದೇಶದ ಜೊತೆ ನಿಲ್ಲುವ ಕೆಲಸ ಮಾಡಬೇಕು. ಉಗ್ರರನ್ನು ಹುಡುಕಿ, ಹುಡುಕಿ ಹೊಡೆಯೋ ಕೆಲಸವನ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ಇತ್ತ ಪಾಕಿಸ್ತಾನ ಭಾರತದ ನಾಗರೀಕರ ಮೇಲೆ ದಾಳಿ ಮಾಡುತ್ತಿದೆ. ಅದರ ಪ್ರತಿಫಲವನ್ನ ಕೂಡ ಪಾಕಿಸ್ತಾನ ಅನುಭವಿಸಬೇಕಾಗುತ್ತದೆ. ಭಾರತ ಉಗ್ರಗಾಮಿಗಳನ್ನು ಮಾತ್ರ ಹುಡುಕಿ ಕೊಲ್ಲುತ್ತಿದೆ. ನಾಗರೀಕರ ಮೇಲೆ ದಾಳಿ ಮಾಡಿಲ್ಲ. ಇದು ಸಂತೋಷದ ವಿಚಾರ. ಸೈನಿಕರ ನೈತಿಕತೆಯನ್ನ ನಾನು ಮೆಚ್ಚುತ್ತೇನೆ ಎಂದರು ಈಶ್ವರಪ್ಪ.
ಪಾಕಿಸ್ತಾನದ ಅಡಗು ತಾಣಗಳ ಮೇಲೆ ದಾಳಿ ಸ್ವಾಗತಾರ್ಹ: ಸಚಿವ ಎಂ.ಬಿ.ಪಾಟೀಲ್
ಶಿವಮೊಗ್ಗದಲ್ಲಿ ವಕ್ಫ್ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಮಾಡಿದ್ದರ ಕುರಿತು ಪ್ರತಿಕ್ರಿಸಿದ ಈಶ್ವರಪ್ಪ, ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಅವಕಾಶ ಕೇಳಿದ್ದರು. ಅದರಲ್ಲೂ ಡಿಸಿ ಕಚೇರಿ ಎದುರಿನ ವಿವಾದಿತ ಜಾಗದಲ್ಲೇ ಪ್ರತಿಭಟಿಸಲು ಅನುಮತಿ ಕೇಳಿದ್ದರು. ಆದರೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೊಟ್ಟಿಲ್ಲ. ಆದರೂ ರಸ್ತೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಕೋರ್ಟ್ ಆದೇಶ ಉಲ್ಲಂಘಿಸಿ, ಮೆರವಣಿಗೆ- ಪ್ರತಿಭಟನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಪ್ರತಿಭಟನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕು. ಈಗಾಗಲೇ ಜಾಗಕ್ಕೆ ಸಂಬಂಧಿಸಿದ ದಾಖಲೆ ಕೂಡ ನೀಡಿದ್ದೇವೆ. ತಕ್ಷಣವೇ ಆ ಜಾಗವನ್ನ ಪಾಲಿಕೆ ಸುಪರ್ದಿಗೆ ಪಡೆಯಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.


