ಕ್ಷೇತ್ರ ಮರುವಿಂಗಡಣೆಯು 'ಒಂದು ಮತ-ಒಂದು ಮೌಲ್ಯ' ತತ್ವವನ್ನು ಖಚಿತಪಡಿಸಲು ಅಗತ್ಯವಾದ ಸಾಂವಿಧಾನಿಕ ಸುಧಾರಣೆಯಾಗಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇದನ್ನು ಉತ್ತರ-ದಕ್ಷಿಣ ವಿವಾದವಾಗಿ ಬಿಂಬಿಸುತ್ತಿರುವುದು ರಾಜಕೀಯ ದ್ವಂದ್ವ ನಿಲುವು? ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದೇನು? ಮುಂದೆ ಓದಿ
ಆರ್.ಅಶೋಕ್, ವಿರೋಧ ಪಕ್ಷದ ನಾಯಕರು, ಕರ್ನಾಟಕ ವಿಧಾನಸಭೆ
ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ. ಜನಮತವೇ ಇಲ್ಲಿ ಆಡಳಿತದ ಮೂಲ. ಆದ್ದರಿಂದ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನ ಮತಕ್ಕೂ ಸಮಾನ ಮೌಲ್ಯ ಇರಬೇಕು ಎಂಬುದು ಅತ್ಯಂತ ಪ್ರಮುಖವಾದ ತತ್ವ. ಈ ಮೂಲ ತತ್ವವನ್ನು ಜಾರಿಗೆ ತರಲು ಕ್ಷೇತ್ರ ಮರುವಿಂಗಡಣೆ (Delimitation) ಅತ್ಯಗತ್ಯ. ಆದರೆ ದುರದೃಷ್ಟವಶಾತ್ ಈ ಅಗತ್ಯ ಸುಧಾರಣೆಯನ್ನೇ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ರಾಜಕೀಯ ವಿವಾದವನ್ನಾಗಿ ಮಾಡಲು ಪ್ರಯತ್ನಿಸುತ್ತಿವೆ.
ಕ್ಷೇತ್ರ ಮರುವಿಂಗಡಣೆ ಎಂಬುದು ಹೊಸ ಸಂಗತಿಯೇ ಅಲ್ಲ. ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಇದು ಹಲವು ಬಾರಿ ನಡೆದಿದೆ. ಜನಸಂಖ್ಯೆ ಬದಲಾವಣೆಯಾದಂತೆ ಕ್ಷೇತ್ರಗಳ ಗಾತ್ರ ಹಾಗೂ ಸಂಖ್ಯೆಯನ್ನು ಮರುಪರಿಶೀಲಿಸುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅಗತ್ಯ. ಒಂದು ಕ್ಷೇತ್ರದಲ್ಲಿ ಅತಿಯಾದ ಜನಸಂಖ್ಯೆ ಇದ್ದರೆ, ಅಲ್ಲಿ ಮತದಾರರ ಧ್ವನಿ ಕುಗ್ಗುತ್ತದೆ. ಮತ್ತೊಂದು ಕಡೆ ಜನಸಂಖ್ಯೆ ಕಡಮೆ ಇದ್ದರೆ ಅಲ್ಲಿ ಮತದ ಮೌಲ್ಯ ಹೆಚ್ಚಾಗುತ್ತದೆ. ಇದರಿಂದ ಸಮಾನತೆ ಹಾಳಾಗುತ್ತದೆ. ಅದಕ್ಕಾಗಿಯೇ ‘ಒಂದು ಮತ-ಒಂದು ಮೌಲ್ಯ’ ಎಂಬ ತತ್ವ ಉಳಿಸಲು ಕ್ಷೇತ್ರ ಮರುವಿಂಗಡಣೆ ಅನಿವಾರ್ಯ.
ಕಳೆದ ಹಲವು ದಶಕಗಳಲ್ಲಿ ಭಾರತದ ಜನಸಂಖ್ಯೆ ಬಹಳ ವೇಗವಾಗಿ ಹೆಚ್ಚಾಗಿದೆ. ಆದರೆ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಬಹು ವರ್ಷಗಳಿಂದ ಅದೇ ಸ್ಥಿತಿಯಲ್ಲಿದೆ. ಇದರಿಂದಾಗಿ ಇಂದು ಒಬ್ಬ ಸಂಸದರು ಪ್ರತಿನಿಧಿಸುವ ಜನಸಂಖ್ಯೆ ಬಹಳ ಹೆಚ್ಚಾಗಿದೆ. 2011ರ ಜನಗಣತಿ ಆಧಾರದ ಮೇಲೆ ಮರುವಿಂಗಡಣೆ ಮಾಡಿದರೆ ಲೋಕಸಭಾ ಸದಸ್ಯರ ಸಂಖ್ಯೆ 543ರಿಂದ ಸುಮಾರು 800ಕ್ಕೂ ಹೆಚ್ಚು ಆಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿಯೂ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಬಹುದು. ಬೆಂಗಳೂರಿನಂಥ ವೇಗವಾಗಿ ಬೆಳೆಯುತ್ತಿರುವ ನಗರಗಳಿಗೆ ಹೆಚ್ಚುವರಿ ಪ್ರತಿನಿಧಿತ್ವ ದೊರೆಯುವ ಸಾಧ್ಯತೆ ಇದೆ.
ಆದರೆ, ವಿರೋಧ ಪಕ್ಷಗಳು ಇದನ್ನು ಉತ್ತರ-ದಕ್ಷಿಣ ವಿವಾದವಾಗಿ ತಿರುಚಲು ಪ್ರಯತ್ನಿಸುತ್ತಿವೆ. ಕ್ಷೇತ್ರ ಮರುವಿಂಗಡಣೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು ಎನ್ನುವ ರೀತಿ ಬಿಂಬಿಸಲು ಹೊರಟಿವೆ. ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚು ಇರುವುದರಿಂದ ಅಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ ಈ ವಾದಕ್ಕೆ ಯಾವುದೇ ತಾರ್ಕಿಕ ನೆಲೆ ಇಲ್ಲ.
ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿತ್ವವು ಜನಸಂಖ್ಯೆ ಆಧಾರದ ಮೇಲೆ ನಿರ್ಧಾರವಾಗುವುದು ಸಹಜ. ಇದು ಯಾವುದೇ ಪ್ರದೇಶಕ್ಕೆ ವಿಶೇಷ ಲಾಭ ಕೊಡಲು ಮಾಡುತ್ತಿರುವ ಕ್ರಮವಲ್ಲ. ಜನರ ಸಂಖ್ಯೆಗೆ ಅನುಗುಣವಾಗಿ ಪ್ರತಿನಿಧಿತ್ವ ನೀಡುವುದು ಪ್ರಜಾಪ್ರಭುತ್ವದ ಮೂಲ ತತ್ವವೇ ಆಗಿದೆ.
ಇನ್ನೂ ಒಂದು ಪ್ರಮುಖ ವಿಷಯವೆಂದರೆ, ದೇಶದಲ್ಲಿ ಅನುದಾನ ಹಂಚಿಕೆ ಅಥವಾ ಅಭಿವೃದ್ಧಿ ಯೋಜನೆಗಳನ್ನು ಕೇವಲ ಸಂಸದರ ಸಂಖ್ಯೆ ಆಧಾರದ ಮೇಲೆ ನಿರ್ಧಾರ ಮಾಡುವುದಿಲ್ಲ. ಹಣಕಾಸು ಆಯೋಗ, ಜಿಎಸ್‌ಟಿ ಮಂಡಳಿ ಮೊದಲಾದ ಸಂವಿಧಾನಾತ್ಮಕ ಸಂಸ್ಥೆಗಳು ವಿವಿಧ ಮಾನದಂಡಗಳನ್ನು ಪರಿಗಣಿಸಿ ನಿರ್ಧಾರ ಮಾಡುತ್ತವೆ. ರಾಜ್ಯಗಳ ಅಭಿವೃದ್ಧಿ ಮಟ್ಟ, ಜನಸಂಖ್ಯೆ, ಅಗತ್ಯಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಅನುದಾನ ಹಂಚಿಕೆ ಮಾಡಲಾಗುತ್ತದೆ.
ಉತ್ತರದ ಪ್ರಾಬಲ್ಯ ವಾದಕ್ಕೆ ಅರ್ಥ ಇಲ್ಲ:
ರಾಜಕೀಯವಾಗಿ ನೋಡಿದರೂ ‘ಉತ್ತರದವರ ಪ್ರಾಬಲ್ಯ’ ಎಂಬ ವಾದ ಅರ್ಥವಿಲ್ಲದ್ದಾಗಿದೆ. ಭಾರತದಲ್ಲಿ ಸರ್ಕಾರವನ್ನು ರೂಪಿಸುವುದು ಯಾವುದೇ ಒಂದು ರಾಜ್ಯದ ಸಂಸದರ ಮೂಲಕ ಅಲ್ಲ. ವಿವಿಧ ರಾಜ್ಯಗಳ ಬೆಂಬಲದ ಮೂಲಕವೇ ಸರ್ಕಾರ ರೂಪುಗೊಳ್ಳುತ್ತದೆ. ಆದ್ದರಿಂದ ದೇಶವನ್ನು ಉತ್ತರ-ದಕ್ಷಿಣ ಎಂದು ವಿಭಜಿಸುವ ರಾಜಕೀಯ ಪ್ರಯತ್ನಗಳು ದೇಶದ ಏಕತೆಯನ್ನೇ ಹಾಳು ಮಾಡುವಂತಹವು.
ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ದ್ವಂದ್ವ ನಿಲುವು ಇನ್ನಷ್ಟು ಸ್ಪಷ್ಟವಾಗುತ್ತದೆ. 1970ರ ದಶಕದಲ್ಲಿ ಕಾಂಗ್ರೆಸ್ ಸರ್ಕಾರವೇ ಕ್ಷೇತ್ರ ಮರುವಿಂಗಡಣೆ ಮಾಡಿತ್ತು. 2008ರಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರವೂ ಇದೇ ಕ್ರಮವನ್ನು ಅನುಸರಿಸಿತ್ತು. ಆಗ ಕಾಂಗ್ರೆಸ್‌ಗೆ ಇದು ಪ್ರಜಾಪ್ರಭುತ್ವದ ಅಗತ್ಯ ಸುಧಾರಣೆ ಎನ್ನಿಸಿತ್ತು. ವಿಚಿತ್ರ ಎಂದರೆ, ಈಗ ಬಿಜೆಪಿ ಸರ್ಕಾರ ಮುಂದಿಟ್ಟಾಗ ಮಾತ್ರ ಅದು ತಪ್ಪಾಗಿ ಕಾಣುತ್ತಿದೆ.
ಅದೇ ಸಮಯದಲ್ಲಿ ರಾಜ್ಯ ಮಟ್ಟದಲ್ಲೂ ಕಾಂಗ್ರೆಸ್ ಸರ್ಕಾರಗಳು ಇದೇ ರೀತಿಯ ಕ್ರಮಗಳನ್ನು ಕೈಗೊಂಡಿರುವುದು ಗಮನಾರ್ಹ. ಬೆಂಗಳೂರಿನ ಸ್ಥಳೀಯ ಆಡಳಿತದಲ್ಲಿ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದು, ನಗರವನ್ನು ಐದು ಪಾಲಿಕೆಗಳಾಗಿ ವಿಂಗಡಿಸುವುದು, ಇವೆಲ್ಲವೂ ಆಡಳಿತದ ದೃಷ್ಟಿಯಿಂದ ಅಗತ್ಯ ಎಂದು ಸ್ವತಃ ಕಾಂಗ್ರೆಸ್ ಪಕ್ಷವೇ ವಾದಿಸುತ್ತಿದೆ. ಆದರೆ ರಾಷ್ಟ್ರಮಟ್ಟದಲ್ಲಿ ಅದೇ ತತ್ವವನ್ನು ಅನುಸರಿಸುವುದಕ್ಕೆ ವಿರೋಧಿಸುವುದು ರಾಜಕೀಯ ದ್ವಂದ್ವವನ್ನು ತೋರಿಸುತ್ತದೆ.
ಕ್ಷೇತ್ರ ಮರುವಿಂಗಡಣೆ ಒಂದು ಚುನಾವಣಾ ತಂತ್ರವಲ್ಲ. ಇದು ಪ್ರಜಾಪ್ರಭುತ್ವವನ್ನು ಹೆಚ್ಚು ಪ್ರತಿನಿಧಾತ್ಮಕವಾಗಿಸಲು ಮಾಡುವ ಸಂವಿಧಾನಾತ್ಮಕ ಸುಧಾರಣೆ. ಜನಸಂಖ್ಯೆಯ ವಾಸ್ತವಿಕತೆಗೆ ಅನುಗುಣವಾಗಿ ರಾಜಕೀಯ ವ್ಯವಸ್ಥೆಯನ್ನು ಹೊಂದಿಸಿಕೊಳ್ಳುವುದು ಯಾವುದೇ ಪ್ರಜಾಪ್ರಭುತ್ವದ ಸಹಜ ಪ್ರಕ್ರಿಯೆ.
ಭಾರತವು ವೇಗವಾಗಿ ಬದಲಾಗುತ್ತಿರುವ ದೇಶ. ನಗರಗಳು ಬೆಳೆಯುತ್ತಿವೆ, ಜನಸಂಖ್ಯೆಯ ವಿತರಣೆಯೂ ಬದಲಾಗುತ್ತಿದೆ. ಈ ಬದಲಾವಣೆಗಳಿಗೆ ಅನುಗುಣವಾಗಿ ಆಡಳಿತ ವ್ಯವಸ್ಥೆಯೂ ಬದಲಾಗಬೇಕು. ಕ್ಷೇತ್ರ ಮರುವಿಂಗಡಣೆ ಆ ದಿಕ್ಕಿನಲ್ಲಿ ತೆಗೆದುಕೊಳ್ಳುತ್ತಿರುವ ಒಂದು ಅಗತ್ಯ ಹೆಜ್ಜೆ.
ರಾಜಕೀಯ ಲಾಭ-ನಷ್ಟದ ದೃಷ್ಟಿಯಿಂದ ಅಲ್ಲದೆ, ಪ್ರಜಾಪ್ರಭುತ್ವದ ದೃಷ್ಟಿಯಿಂದ ಈ ವಿಷಯವನ್ನು ನೋಡುವುದು ಅಗತ್ಯ. ಜನರ ಧ್ವನಿಗೆ ಸಮಾನ ಮೌಲ್ಯ ನೀಡುವ ವ್ಯವಸ್ಥೆ ನಿರ್ಮಿಸುವುದು ನಮ್ಮ ಎಲ್ಲರ ಜವಾಬ್ದಾರಿ. ಕ್ಷೇತ್ರ ಮರುವಿಂಗಡಣೆ ಅದಕ್ಕೆ ಒಂದು ಮಹತ್ವದ ಸಾಧನವಾಗಲಿದೆ.
ಕಾಂಗ್ರೆಸ್ ಭವಿಷ್ಯ ಬಗ್ಗೆ ವಿಶ್ವಾಸದ ಕೊರತೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರು ಕ್ಷೇತ್ರ ಪುನರ್‌ವಿಂಗಡಣೆ ಬಗ್ಗೆ ಪ್ರಸ್ತಾಪಿಸಿ ಒಂದು ಗಮನಾರ್ಹ ಅಂಶ ಸ್ಪಷ್ಟವಾಗುತ್ತದೆ. ಹಲವು ರಾಜ್ಯಗಳನ್ನು ಅವರು ‘ಬಿಜೆಪಿ ಪ್ರಭುತ್ವದ ರಾಜ್ಯಗಳು’ ಎಂದು ವಿವರಿಸಿರುವುದು ಒಂದು ರೀತಿಯಲ್ಲಿ ಮಹತ್ವದ ಸೂಚನೆ ನೀಡುತ್ತದೆ.
ಮೊದಲನೆಯದಾಗಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್ ಮೊದಲಾದ ರಾಜ್ಯಗಳು ಬಿಜೆಪಿ ಪ್ರಭುತ್ವದಲ್ಲೇ ಮುಂದುವರಿಯುತ್ತವೆ ಎಂಬ ಭಾವನೆ ವ್ಯಕ್ತವಾಗುತ್ತದೆ. ಇದರಿಂದ ಆ ಭಾಗಗಳಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷದ ಅವಕಾಶಗಳು ಸೀಮಿತವಾಗಿವೆ ಎಂಬ ಸಂದೇಶ ದೊರಕುತ್ತದೆ.
ಎರಡನೆಯದಾಗಿ, ಈ ಹೇಳಿಕೆ ಕ್ಷೇತ್ರ ಮರುಹೊಂದಿಕೆ ಕುರಿತ ಟೀಕೆಯಷ್ಟೇ ಅಲ್ಲ, ತಮ್ಮದೇ ಪಕ್ಷದ ಭವಿಷ್ಯದ ಬಗ್ಗೆ ವಿಶ್ವಾಸದ ಕೊರತೆಯನ್ನೂ ಸೂಚಿಸುವಂತೆ ಕಾಣುತ್ತದೆ. ವಿಶೇಷವಾಗಿ ಗಾಂಧಿ ಕುಟುಂಬದ ನಾಯಕತ್ವದ ಸಂದರ್ಭದಲ್ಲಿ.
ಮೂರನೆಯದಾಗಿ, ‘ಪ್ರಭುತ್ವ’ ಎಂಬ ಪದವನ್ನು ಜನರ ಆಯ್ಕೆಯಾಗಿ ಕೂಡ ನೋಡಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಈ ರಾಜ್ಯಗಳ ಮತದಾರರು ಹಲವು ಬಾರಿ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಗಮನಾರ್ಹ ಸಂಗತಿ.
ಒಟ್ಟಿನಲ್ಲಿ, ಈ ಚರ್ಚೆ ಕ್ಷೇತ್ರ ಪುನರ್‌ವಿಂಗಡಣೆ ಕುರಿತಷ್ಟೇ ಅಲ್ಲದೆ ದೇಶದ ರಾಜಕೀಯ ವಾಸ್ತವಿಕತೆಯನ್ನೂ ಪ್ರತಿಬಿಂಬಿಸುತ್ತದೆ. ಕಾಂಗ್ರೆಸ್ ಪಕ್ಷವು ದೇಶದ ಹಲವು ಭಾಗಗಳಲ್ಲಿ ಮತ್ತೆ ಬಲ ಪಡೆಯುವುದು ಸವಾಲಿನ ಸಂಗತಿ ಎಂಬ ಸಂದೇಶ ಇಲ್ಲಿ ಗೋಚರಿಸುತ್ತದೆ. ಕೆಲವೊಮ್ಮೆ ರಾಜಕೀಯ ಹೇಳಿಕೆಗಳು ದಡ್ಡತನದಲ್ಲೇ ಆಳವಾದ ಸತ್ಯವನ್ನು ಹೊರಹಾಕುತ್ತವೆ.


