Loksabha election 2024: ಶ್ರೀರಾಮುಲುಗೆ ಟಿಕೆಟ್ ನೀಡಿದರೆ ಸೋಲು ಖಚಿತ ಎಂದ ಶಾಸಕ ಜನಾರ್ದನ ರೆಡ್ಡಿ!
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನೀಡಿದರೆ ಅವರ ಸೋಲು ಖಚಿತ ಎನ್ನುವುದು ಸರ್ವೆ ರಿಪೋರ್ಟ್ ನಲ್ಲಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಗಂಗಾವತಿ (ಮಾ.9): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನೀಡಿದರೆ ಅವರ ಸೋಲು ಖಚಿತ ಎನ್ನುವುದು ಸರ್ವೆ ರಿಪೋರ್ಟ್ ನಲ್ಲಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಆನೆಗೊಂದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಶ್ರೀರಾಮುಲು ಸೋಲುತ್ತಾರೆ ಎನ್ನುವುದು ನನ್ನ ವಿಚಾರ ಅಲ್ಲ, ಅದು ಸರ್ವೆ ರಿಪೋರ್ಟ್ ನಲ್ಲಿ ಹೇಳಿದೆ ಎಂದರು. ಶ್ರೀರಾಮುಲುಗೆ ಟಿಕೆಟ್ ನೀಡಬೇಕೆನ್ನುವುದಕ್ಕೆ ನಾನು ಬಿಜೆಪಿ ರಾಜ್ಯಾಧ್ಯಕ್ಷ ಅಲ್ಲ, ಆ ಪಕ್ಷದ ಕೋರ್ ಕಮಿಟಿಯ ಸದಸ್ಯನೂ ಅಲ್ಲ. ಬಿಜೆಪಿ ಮಿತ್ರಪಕ್ಷದಲ್ಲಿಯೂ ನಾನು ಇಲ್ಲ. ಶ್ರೀರಾಮುಲುಗೆ ಟಿಕೆಟ್ ನೀಡಲು ವಿರೋಧಿಸುತ್ತೇನೆ ಎನ್ನುವುದು ಕೇವಲ ವದಂತಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಕರ್ನಾಟಕದ ಮೋದಿ ಇದ್ದಂತೆ: ಶ್ರೀರಾಮುಲು
ಸೋಲುವ ವ್ಯಕ್ತಿಗೆ ಬಿಜೆಪಿ ಹೇಗೆ ಟಿಕೆಟ್ ಕೊಡಲು ಸಾಧ್ಯ? ಇದು ಬಿಜೆಪಿ ನಾಯಕರಿಗೆ ಗೊತ್ತಿರುವ ವಿಷಯ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೂಡ ಎಲ್ಲ ಸರ್ವೇಗಳಲ್ಲಿ ಶ್ರೀರಾಮುಲು ಸೋಲುತ್ತಾರೆ ಎಂಬ ವರದಿ ಇತ್ತು. ಅದು ಕೂಡ ಸತ್ಯವಾಯಿತು ಎಂದರು. ಕೆಲವು ನಾಯಕರಲ್ಲಿ ಶ್ರೀರಾಮುಲು ಸೋತರೆ ತಮ್ಮ ಸ್ಥಾನಕ್ಕೆ ಕುತ್ತು ಬರಬಹುದೆಂಬ ಆತಂಕ ಇದೆ. ಹೀಗಿರುವಾಗ ಜವಾಬ್ದಾರಿ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ದೆಹಲಿಯಲ್ಲಿ ಇನ್ನೊಂದು ಬಣವೇ ಇದೆ. ರಾಜ್ಯದಲ್ಲಿ ಬಿಜೆಪಿ ಜವಾಬ್ದಾರಿ ತೆಗೆದುಕೊಂಡವರಿಗೆ ವಿರೋಧ ಮಾಡುವ ಬಣವೂ ಇದೆ ಎಂದರು.
ಪರೋಕ್ಷವಾಗಿ ಸಂತೋಷ್ ಬಣ ಮತ್ತು ವಿಜಯೇಂದ್ರ ಬಣದ ನಡುವಿನ ಗುದ್ದಾಟ ಪ್ರಸ್ತಾಪಿಸಿದ ರೆಡ್ಡಿ, ಬಿಜೆಪಿಗೂ ಜನಾರ್ದನ ರೆಡ್ಡಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು. ನಾನು ಬಿಜೆಪಿ ಜೊತೆ ಮೈತ್ರಿಗೆ ನಾಲ್ಕು ಸ್ಥಾನ ಕೇಳಿದ್ದೇನೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ಕಲ್ಯಾಣ ರಾಜ್ಯದ ಪ್ರಗತಿ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯಲು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ, ಇದು ಸರಿಯಲ್ಲ ಎಂದರು.
ಲೋಕಸಭಾ ಚುನಾವಣೆಗೆ ಶ್ರೀರಾಮುಲು ಸಜ್ಜು!
ಯಾವುದೇ ಕಾರಣಕ್ಕೂ ನಾನು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಆದರೆ ಬಿಜೆಪಿಯವರು ಹೊಂದಾಣಿಕೆಗೆ ಸಿದ್ಧರಿದ್ದರೆ ಮಾತ್ರ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವೆ ಎಂದರು.
ರಾಜ್ಯ ಮತ್ತು ರಾಷ್ಟ್ರ ಬಿಜೆಪಿ ನಾಯಕರು ಸುಳ್ಳು ಮಾತಾಡುವುದನ್ನು ಬಿಡಬೇಕು. ಅವರ ಸ್ವಾರ್ಥಕ್ಕೆ ಇನ್ನೊಬ್ಬರನ್ನು ವಿಲನ್ ಮಾಡುವುದನ್ನು ಕೈ ಬಿಡಬೇಕೆಂದರು.