ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ಮಾತೇ ಅಂತಿಮ ಎಂದು ಪುನರುಚ್ಚರಿಸಿದ್ದಾರೆ. ಹೈಕಮಾಂಡ್ ಹೇಳಿದರೆ ಐದು ವರ್ಷವೂ ಸಿಎಂ ಆಗಿರುತ್ತೇನೆ ಎಂದ ಅವರು, ಸದ್ಯಕ್ಕೆ ದೆಹಲಿ ಪ್ರವಾಸದ ಯಾವುದೇ ಯೋಜನೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರು (ಮೇ.7): ‘ನಾನು ಹೈಕಮಾಂಡ್ ಮಾತನ್ನು ಮಾತ್ರ ಕೇಳುತ್ತೇನೆ. ಹೈಕಮಾಂಡ್ ಹೇಳಿದರೆ ಐದು ವರ್ಷವೂ ಸಿಎಂ ಆಗಿರುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಎಷ್ಟು ಬಾರಿ ಪ್ರಶ್ನೆ ಕೇಳಿದ್ರೂ ನನ್ನ ಉತ್ತರ ಹೈಕಮಾಂಡ್
ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನೀವು ಎಷ್ಟು ಬಾರಿ ಈ ಪ್ರಶ್ನೆ ಕೇಳಿದರೂ ನನ್ನ ಉತ್ತರ ಹೈಕಮಾಂಡ್ ಅಷ್ಟೇ. 5 ವರ್ಷವೂ ಕಾಂಗ್ರೆಸ್ ಸರ್ಕಾರ ಇರುತ್ತದೆ. ನೀವೇ ಇರಿ ಎಂದರೆ ಇರುತ್ತೇನೆ. ಎಲ್ಲಾ ತೀರ್ಮಾನ ಮಾಡುವುದು ಹೈಕಮಾಂಡ್ ಮಾತ್ರ. ಈ ವಿಷಯದಲ್ಲಿ ಬೇರೆ ಯಾರು, ಏನೇ ಮಾತನಾಡಿದರೂ ಅದು ಅವರ ವೈಯುಕ್ತಿಕ ಅಭಿಪ್ರಾಯ ಮಾತ್ರ’ ಎಂದು ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿ ನನ್ನ ದೆಹಲಿಗೆ ಕರೆದಿಲ್ಲ
ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರು ನನ್ನನ್ನು ಈವರೆಗೂ ದೆಹಲಿಗೆ ಬನ್ನಿ ಎಂದು ಕರೆದಿಲ್ಲ. ನಾನು ಕೂಡ ಅಪಾಯಿಂಟ್‌ಮೆಂಟ್ ಕೇಳಿಲ್ಲ. ಅವರು ನನ್ನನ್ನು ಕರೆದರೆ ಖಂಡಿತವಾಗಿಯೂ ಹೋಗುತ್ತೇನೆ. ಅಪಾಯಿಂಟ್‌ಮೆಂಟ್ ಫಿಕ್ಸ್ ಆದ ಮೇಲೆ ಸಂಪುಟ ಪುನಾರಚನೆಯಾ?, ಸಂಪುಟ ವಿಸ್ತರಣೆಯಾ?, ಯಾವ ವಿಷಯದ ಚರ್ಚೆ ಎಂಬುದು ಗೊತ್ತಾಗಲಿದೆ. ನಾನಾಗಿಯೇ ಹೋಗಬೇಕಾದಲ್ಲಿ ರಾಹುಲ್ ಅವರು ಸಮಯ ಕೊಟ್ಟಾಗ ಹೋಗುವೆ. ಅವರು ನನ್ನನ್ನು ಕರೆದೇ ಇಲ್ಲ ಎಂದ ಮೇಲೆ ಸಭೆಯ ಅಜೆಂಡಾ ಫಿಕ್ಸ್ ಆಗುವುದು ಹೇಗೆ?. ಅವರು ಕರೆದರೆ ಮಾತ್ರ ನಾನು ಹೋಗುವುದು. ಸದ್ಯಕ್ಕಂತೂ ದೆಹಲಿ ಪ್ರವಾಸ ಇಲ್ಲ’ ಎಂದು ಹೇಳಿದರು.
‘ಸಿಎಂ ಕುರ್ಚಿಯ ವಿಚಾರಕ್ಕೆ ತೆರೆ ಬೀಳುತ್ತದೆಯೇ?’ ಎಂಬ ಪ್ರಶ್ನೆಗೆ, ‘ಹೈಕಮಾಂಡ್ ತೀರ್ಮಾನಿಸಬೇಕು, ಅದರಂತೆ ನಡೆದುಕೊಳ್ಳುತ್ತೇನೆ’ ಎಂದರು.

