Asianet Suvarna News Asianet Suvarna News

Hunsur Election Results 2023: ಮೊದಲ ಯತ್ನದಲ್ಲೇ ಜಯ ಸಾಧಿಸಿದ ಜಿ.ಡಿ.ಹರೀಶ್‌ಗೌಡ!

ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರ ಪುತ್ರ, ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷರಾದ ಜಿ.ಡಿ. ಹರೀಶ್‌ಗೌಡ ಅವರು ಮೊದಲ ಯತ್ನದಲ್ಲೇ ಜಯ ಸಾಧಿಸಿದ್ದಾರೆ.

Hunsur Election Results 2023 GD Harish Gowda won in the first attempt gvd
Author
First Published May 14, 2023, 1:33 PM IST

ಮೈಸೂರು (ಮೇ.14): ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರ ಪುತ್ರ, ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷರಾದ ಜಿ.ಡಿ. ಹರೀಶ್‌ಗೌಡ ಅವರು ಮೊದಲ ಯತ್ನದಲ್ಲೇ ಜಯ ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲೇ ಹುಣಸೂರು ಕ್ಷೇತ್ರದ ಮೇಲೆ ಕಣ್ಣು ಇರಿಸಿದ್ದ ಜಿ.ಡಿ. ಹರೀಶ್‌ಗೌಡ ಅವರು, ಜೆಡಿಎಸ್‌ ಟಿಕೆಟ್‌ ಸಿಗದಿದ್ದರಿಂದ ಸ್ಪರ್ಧೆಯಿಂದ ಹಿಂದೆ ಸರಿದ್ದರು. ಆದರೆ, ಈ ಬಾರಿ ಜೆಡಿಎಸ್‌ ಟಿಕೆಟ್‌ ಗಿಟ್ಟಿಸಿಕೊಂಡು ಸ್ಪರ್ಧಿಸುವ ಮೂಲಕ ಮೊದಲ ಯತ್ನದಲ್ಲೇ ಜನ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಜಿ.ಡಿ. ಹರೀಶ್‌ಗೌಡ ಅವರು 94666 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ. ಮಂಜುನಾಥ್‌ ಅವರ ವಿರುದ್ಧ 2412 ಮತಗಳ ಅಂತರದಿಂದ ಜಯ ದಾಖಲಿಸಿದರು.

ಆದರೆ, ಹಾಲಿ ಶಾಸಕರಾದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ. ಮಂಜುನಾಥ್‌ ಅವರು 92254 ಮತಗಳನ್ನು ಪಡೆದು 2ನೇ ಸ್ಥಾನ ಪಡೆಯುವ ಮೂಲಕ ಸೋಲನ್ನು ಒಪ್ಪಿಕೊಂಡರು. ಹುಣಸೂರು ಕ್ಷೇತ್ರದ ಮತ ಎಣಿಕೆ ಆರಂಭದಿಂದಲೇ ಜಿ.ಡಿ. ಹರೀಶ್‌ಗೌಡ ಮುನ್ನಡೆ ಸಾಧಿಸಿದರು. ಇದು ಕೊನೆಯ ಸುತ್ತಿನವರೆಗೂ ಮುಂದುವರೆಯಿತು. ಆದರೆ, ಜಿ.ಡಿ. ಹರೀಶ್‌ಗೌಡ ಅವರ ಗೆಲವಿನ ಅಂತರ ಮಾತ್ರ ಹೆಚ್ಚಾಗಿಲ್ಲ. ಅಂತಿಮವಾಗಿ 2412 ಮತಗಳ ಅಂತರದಿಂದ ಜಯ ತಮ್ಮದಾಗಿಸಿಕೊಂಡರು. ಎಚ್‌.ಪಿ. ಮಂಜುನಾಥ್‌ ಅವರು ಸ್ಪರ್ಧಾತ್ಮಕ ಮತಗಳನ್ನು ಪಡೆದರೂ ಮುನ್ನಡೆ ಸಾಧಿಸುವಲ್ಲಿ ವಿಫಲರಾಗಿ ಸೋಲನ್ನು ಒಪ್ಪಿಕೊಂಡಿದ್ದಾರೆ.ಹಾಗೆಯೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದೇವರಹಳ್ಳಿ ಸೋಮಶೇಖರ ಅವರು 6258 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತೃಪ್ತರಾದರು. ಇನ್ನೂ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಜಿ. ರವಿಕುಮಾರ್‌ ಅವರು 2912 ಮತಗಳಿಂದ 4ನೇ ಸ್ಥಾನ ಪಡೆದರು. ಉಳಿದ ಅಭ್ಯರ್ಥಿಗಳು ಮೂರಂಕಿ ದಾಟಿಲ್ಲ. 894 ಮಂದಿ ನೋಟಾ ಮತ ಚಲಾಯಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಅಪ್ಪ- ಮಗ ಒಟ್ಟಿಗೆ ವಿಧಾನಸಭೆ ಪ್ರವೇಶ ಇದೇ ಪ್ರಥಮ

ಹರೀಶ್‌ಗೌಡ ಹುಣಸೂರು ಕ್ಷೇತ್ರದಲ್ಲಿ ಜಿ.ಡಿ. ಹರೀಶ್‌ಗೌಡ ಅವರ ತಂದೆ ಜಿ.ಟಿ. ದೇವೇಗೌಡ ಅವರು 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ತಾಯಿ ಲಲಿತಾ ಜಿ.ಟಿ. ದೇವೇಗೌಡ ಅವರು ಜಿಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. ಹೀಗಾಗಿ, ಜಿ.ಟಿ. ದೇವೇಗೌಡರ ಕುಟುಂಬಕ್ಕೆ ಹುಣಸೂರು ಕ್ಷೇತ್ರದಲ್ಲಿ ಹಿಡಿತ ಮತ್ತು ಜನ ಬೆಂಬಲವಿತ್ತು. ಇದು ಮಾತ್ರವಲ್ಲದೇ ಜಿ.ಡಿ. ಹರೀಶ್‌ಗೌಡ ಅವರು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ, ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷರಾಗಿ ಸಹ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಉತ್ತಮ ಸಂಘಟಕರಾಗಿರುವ ಹರೀಶ್‌ಗೌಡ ಕ್ಷೇತ್ರದ ಜನತೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಈ ಎಲ್ಲಾ ಅಂಶಗಳು ಜಿ.ಡಿ. ಹರೀಶ್‌ಗೌಡ ಅವರ ಗೆಲುವಿಗೆ ಕಾರಣವಾಗಿವೆ.

ಹುಣಸೂರು ಕ್ಷೇತ್ರದಲ್ಲಿ 2008 ರಲ್ಲಿ ಜಿ.ಟಿ. ದೇವೇಗೌಡ ಹಾಗೂ ಎಸ್‌. ಚಿಕ್ಕಮಾದು ನಡುವೆ ಮತ ವಿಭಜನೆ, 2013ರಲ್ಲಿ ಪ್ರಬಲ ಎದುರಾಳಿ ಇಲ್ಲದ ಕಾರಣ ಗೆದ್ದಿದ್ದ ಎಚ್‌.ಪಿ. ಮಂಜುನಾಥ್‌ 2018 ರಲ್ಲಿ ಜೆಡಿಎಸ್‌ನ ಎಚ್‌. ವಿಶ್ವನಾಥ್‌ ಎದುರು ಸೋತಿದ್ದರು. ಆದರೆ 2019 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್‌. ವಿಶ್ವನಾಥ್‌ ಅವರನ್ನು ಸೋಲಿಸಿದ್ದರು. ಎಚ್‌.ಪಿ. ಮಂಜುನಾಥ್‌ ಅವರಿಗೆ ಈ ಬಾರಿ ಜಿ.ಡಿ. ಹರೀಶ್‌ಗೌಡ ಪ್ರಬಲ ಪ್ರತಿಸ್ಪರ್ಧಿಯಾಗಿದ್ದೇ ಸೋಲಿಗೆ ಪ್ರಮುಖ ಕಾರಣವಾಗಿದೆ.

ಚಾಮುಂಡೇಶ್ವರಿ ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಜೆಡಿಎಸ್‌ ಅನ್ನು ಗೆಲ್ಲಿಸಿದ್ದಾರೆ. ಜಿ.ಟಿ. ದೇವೇಗೌಡರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಅವರನ್ನು ಮತ್ತೆ ಬೆಂಬಲಿಸಬೇಕೆಂದು ಎರಡು ಕ್ಷೇತ್ರದ ಜನ ಮತ ಹಾಕುವ ಮೂಲಕ ಪ್ರೀತಿ, ವಿಶ್ವಾಸವನ್ನು ನೀಡಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
- ಜಿ.ಡಿ. ಹರೀಶ್‌ಗೌಡ, ಹುಣಸೂರು ಕ್ಷೇತ್ರ

ಅರಸರ ಕರ್ಮಭೂಮಿಯಲ್ಲಿ ರಾಜಕೀಯ ಜೀವನ ಆರಂಭ : ಹರೀಶ್ ಗೌಡ

ಅಭ್ಯರ್ಥಿಗಳು ಪಡೆದ ಮತಗಳ ವಿವರ

1. ಜಿ.ಡಿ. ಹರೀಶ್‌ಗೌಡ- ಜೆಡಿಎಸ್‌- 94666
2. ಎಚ್‌.ಪಿ. ಮಂಜುನಾಥ್‌- ಕಾಂಗ್ರೆಸ್‌- 92254
3. ದೇವರಹಳ್ಳಿ ಸೋಮಶೇಖರ- ಬಿಜೆಪಿ- 6258
4. ಜಿ. ರವಿಕುಮಾರ್‌- ಆಪ್‌- 2912
5. ಪ್ರಸನ್ನ ಸೋಮನಹಳ್ಳಿ- ಬಿಎಸ್ಪಿ- 975
6. ಎಮ್ಮೆಕೊಪ್ಪಲು ತಿಮ್ಮಾಬೋವಿ- ಕರ್ನಾಟಕ ರಾಷ್ಟ್ರ ಸಮಿತಿ- 761
7. ಡಿ.ಎನ್‌. ಸುನಿಲ್‌- ಉತ್ತಮ ಪ್ರಜಾಕೀಯ- 654
8. ಚನ್ನೇಗೌಡ- ಪಕ್ಷೇತರ- 449
9. ಸೈಯದ್‌ ಅನಿಫ್‌- ಪಕ್ಷೇತರ- 401
10. ಬಿ.ಎಲ್‌. ಲೋಕೇಶ- ಪಕ್ಷೇತರ- 332
11. ಉಮೇಶ್‌- ಪಕ್ಷೇತರ- 212
12. ಎಚ್‌.ಬಿ. ರಾಜೇಂದ್ರ- ಪಕ್ಷೇತರ- 178
13. ನೋಟಾ- 894

Follow Us:
Download App:
  • android
  • ios