Asianet Suvarna News Asianet Suvarna News

ಮೋದಿ ರಾಜ್ಯದಲ್ಲಿ ಮುನಿದನಾ ಮತದಾರ? ಚುನಾವಣೆಯಿಂದ ದೂರ ದೂರ!

ಗುಜರಾತ್ ವಿಧಾನಸಭಾ ಚುನಾವಣೆ ಇಡೀ ದೇಶದ ಕುತೂಹಲ ಕೆರಳಿಸಿದೆ. ಇಷ್ಟೇ ಅಲ್ಲ ರಾಜಕೀಯವಾಗಿಯೂ ಪ್ರತಿ ಪಕ್ಷಕ್ಕೆ ಈ ಚುನಾವಣೆ ಅತ್ಯಂತ ಮುಖ್ಯ. ಆದರೆ ಈ ಬಾರಿಯ ಚುನಾವಣೆಯಿಂದ ಮತದಾರರ ದೂರ ಉಳಿದುಕೊಂಡಿದ್ದಾರೆ. ಇದು ಮೊದಲ ಹಂತದ ಮತದಾನದಲ್ಲಿ ಸಾಬೀತಾಗಿದೆ. ಇದಕ್ಕೆ ಕಾರಣವೇನು? ಮೋದಿ ತವರೂರಿನಲ್ಲಿ ಮತದಾರರ ಆಸಕ್ತಿ ಏನು? ಚುನಾವಣೆಗಳಿಂದ ದೂರ ಉಳಿಯುತ್ತಿರುವುದೇಕೆ? ಇಲ್ಲಿದೆ ವಿವರ.

Gujarat Election 2022 low voter turnout threatening Indian democracy leads mistrust of political process ckm
Author
First Published Dec 2, 2022, 7:37 PM IST

ಡೆಲ್ಲಿ ಮಂಜು

ನವದೆಹಲಿ,(ಡಿ.2) : ಮೋದಿ ರಾಜ್ಯದಲ್ಲಿ ಮುನಿದನಾ ಮತದಾರ..?! ಹತ್ತಾರು ಅಶ್ಚರ್ಯಗಳಿಗೂ, ಒಂದಷ್ಟು ಪ್ರಶ್ನೆಗಳಿಗೂ ಕಾರಣವಾಗಿದೆ `ಈ ಮತ ಮುನಿಸು'. ಪ್ರಜಾಪ್ರಭುತ್ವದ ಹಬ್ಬದಲ್ಲಿ ಮತದಾರ ಆಚರಣೆಯಿಂದ ದೂರ ಸರಿಯುತ್ತಿರುವುದು ರಾಜಕೀಯವಾಗಿ ಅಷ್ಟೆ ಅಲ್ಲಾ ಕರ್ತವ್ಯದಿಂದಲೂ ಹಿಮ್ಮುಖವಾಗುತ್ತಿದ್ದಾನಾ ? ಅನ್ನೋದು ಇದೀಗ ಸಂಶೋಧನಾ ವಸ್ತುವಾಗಿ ಕಾಣುತ್ತಿದ್ದಾನೆ. ಪ್ರತಿ ರಾಜ್ಯದಲ್ಲಿ ಚುನಾವಣೆ ನಡೆದಾಗ ಅಥವಾ ಸಾರ್ವತ್ರಿಕ ಚುನಾವಣೆಗಳು ಬಂದಾಗ ಈ ಪ್ರಶ್ನೆ ನೆನಪಾಗಿ, ಚರ್ಚೆಗೆ ಗ್ರಾಸವಾಗಿ, ಪುನಃ ಅದು ಶೀತಲೀಕರಣದ ಉಗ್ರಾಣ ಸೇರೋದು ಸಾಮಾನ್ಯವಾಗಿ ಬಿಟ್ಟಿದೆ.

ನಗರ ಭಾಗಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾದರೆ ಆಳುವ ಪಕ್ಷಕ್ಕೆ ಹೊಡೆತ  ಅಂತಲೋ, ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಮತದಾನವಾದರೆ ವಿಪಕ್ಷಕ್ಕೆ ಹಿನ್ನೆಡೆ ಅಂತಲೋ ಒಂದು ಲೋಕಾರೂಢಿ ಲೆಕ್ಕಚಾರ ಬಂದು ಹೋಗುತ್ತದೆ. ಅದರಲ್ಲೂ ಮಹಾನಗರಗಳಲ್ಲಿ ಮತದಾನ ಕಡಿಮೆಯಾದರೆ ಒಂದು ರಾಜಕೀಯ ಪಕ್ಷ ಸಂಭ್ರಮಿಸಿದರೆ, ಹೆಚ್ಚಾದ್ರೆ ಮತ್ತೊಂದು ಅಥವಾ ಮಗದೊಂದು ಪಕ್ಷ ಸಂಭ್ರಮಿಸುತ್ತೆ. ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಮೇಲ್ನೋಟಕ್ಕೆ ಇದು ವಿಜಯದ ಗಣಿತ ತಿಳಿಸುತ್ತದೆ ಅನ್ನುತ್ತೆ ರಾಜಕೀಯ ಪಡಸಾಲೆ.

50 ಕಿ.ಮೀ ರೋಡ್ ಶೋ ನಡುವೆ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಮೋದಿ!

ಗುಜರಾತಿನಲ್ಲಿ ಮುನಿದನಾ ಮತದಾರ ? : 
ಗುಜರಾತಿನಲ್ಲಿ ಬಿಜೆಪಿ ಮೇಲೆ ಮುನಿದನಾ ಅಥವಾ ಕಾಂಗ್ರೆಸ್ ಪಕ್ಷದ ಮೇಲೆ ಮುನಿದನಾ ಅಥವಾ ಆಪ್ ಪಕ್ಷ ಮತದಾರನನ್ನು ಆಕರ್ಷಿಸಲಿಲ್ವೇ ? ಇವೆಲ್ಲಾ ಪ್ರಶ್ನೆಗಳೊಂದಿಗೆ ಕಾರಣಗಳೂ ಕೂಡ ಆಗಿವೆ. ಪಕ್ಷಗಳ ಮುನಿಸು ಅನ್ನೋದಕ್ಕಿಂತ ಎರಡೂವರೆ ದಶಕ ಆಳಿದ ಬಿಜೆಪಿಯಾಗಲಿ ಅಥವಾ ಹಂತ ಹಂತಕ್ಕೂ ಟಕ್ಕರ್ ಕೊಡ್ತಿರುವ ಕಾಂಗ್ರೆಸ್, ಆಪ್ ಪಕ್ಷವಾಗಲೀ ಗುಜರಾತ್ ಮೊದಲ ಹಂತದ ಚುನಾವಣೆಯಲ್ಲಿ ಮತದಾರರನ್ನು ಮತಗಟ್ಟೆಗೆ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಕಳೆದ ಬಾರಿ ಚುನಾವಣೆಯ ಹೋಲಿಕೆ ಮಾಡುವಷ್ಟಾದರೂ ಕರೆತರಲಿಲ್ಲ ಅನ್ನೋದು ಆತಂಕದ ವಿಷಯ.

ಗುಜರಾತ್‍ನಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಕಳೆದ ಭಾರೀ ಅಂದರೆ 2017ರಲ್ಲಿ ಶೇ 68 ರಷ್ಟು ಮತದಾನ ವಾಗಿತ್ತು. ಈ ಬಾರಿ ಅದು ಅಂತಿಮವಾಗಿ ಶೇ 63.32 ದಾಖಲಾಗಿದೆ. ಇದು ರಾಜಕೀಯ ಪಕ್ಷಗಳನ್ನು ಚಿಂತೆಗೀಡು ಮಾಡಿದೆ. ಗುಜರಾತ್ ಅಸ್ಮಿತೆ, ಅಭಿವೃದ್ಧಿಯೇ ನಮ್ಮ ಮಂತ್ರ, ಡಬಲ್ ಎಂಜಿನ್ ಸರ್ಕಾರ, ಮೋದಿಗಾಗಿ ಓಟು ಹಾಕಿ ಅನ್ನುವ ಬಿಜೆಪಿ ಆಗಲಿ ಅಥವಾ ಹೆಚ್ಚುಕಡಿಮೆ ಎರಡೂವರೆ ದಶಕಗಳಿಂದ ಬಿಜೆಪಿ ಅಧಿಕಾರದಲ್ಲಿದ್ದು, ಕೊಟ್ಟ ಆಶ್ವಾಸನೆ ಈಡೇರಿಸಿಲ್ಲ. ಪೇಪರ್ ಲೀಕ್, ನೇಮಕಾತಿಯಲ್ಲಿ ಅಕ್ರಮಗಳ ಸರಮಾಲೆ ನಡೆದಿದೆ ಅಂಥ ಆರೋಪಿಸಿ, ಸರ್ಕಾರದ ಬದಲಾವಣೆಗೆ ಆಗ್ರಹಿಸಿ ಪ್ರಚಾರ ಮಾಡೋತ್ತಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವಾಗಲಿ ಅಥವಾ ದೆಹಲಿಯಲ್ಲಿ ವಿದ್ಯುತ್ ಫ್ರೀ, ಉತ್ತಮ ಶಿಕ್ಷಣ, ನೀರು ಉಚಿತ ಅಂತೆಲ್ಲಾ ಫ್ರೀ ಬೀಸ್ ಅಂದರೆ ಉಚಿತ ಕೊಡುಗೆಗಳ ಮಹಪೂರಗಳ  ಬಗ್ಗೆ ಭರವಸೆಗಳು ನೀಡಿರುವ ಆಪ್ ಪಕ್ಷವಾಗಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾರರನ್ನು ಮತಗಟ್ಟೆಗೆ ಕರೆತರುವಲ್ಲಿ ವಿಫಲವಾಗಿವೆ ಎನ್ನುವುದು ರಾಜಕೀಯ ಚಿಂತಕರ ಅಭಿಪ್ರಾಯ.

Gujarat Election ಬಿಜೆಪಿ ನಾಯಕ ಪಿಯೂಷ್ ಪಟೇಲ್ ಮೇಲೆ ಹಲ್ಲೆ, ಆಸ್ಪತ್ರೆ ದಾಖಲು!

ಆದಿವಾಸಿ ಪ್ರದೇಶಗಳಲ್ಲಿ ಹೆಚ್ಚಳ : ಕಾಂಗ್ರೆಸ್ ಪಕ್ಷ ಇದು ನಮ್ಮದೇ ಓಟ್ ಬ್ಯಾಂಕ್ ಅಂಥ ಬೀಗುತ್ತಿದ್ದ ಆದಿವಾಸಿ ಮತಕ್ಷೇತ್ರಗಳಲ್ಲಿ ಈ ಬಾರಿ ಕೊಂಚ ಹೆಚ್ಚು ಮತದಾನವಾಗಿದೆ ಅನ್ನೋದು ಸಂತೋಷವಾದ್ರೂ ಆಪ್ ಉಚಿತ ಭರವಸೆಗಳು ಒಂದಷ್ಟು ಮತದಾರರನ್ನು ಮತಗಟ್ಟೆಗೆ ಹೆಚ್ಚು ಬರುವಂತೆ ಮಾಡಿದೆ ಎನ್ನುವ ಅಭಿಪ್ರಾಯವೂ ಕೇಳಿಬರುತ್ತಿದೆ. ಸಾಲದಕ್ಕೆ ಅದಿವಾಸಿ ಪ್ರದೇಶಗಳಲ್ಲಿ ಬಿಜೆಪಿಗೆ ಒಲವು ಕಡಿಮೆ ಇತ್ತು. ಆದರೆ ಈ ಬಾರಿ ಆದಿವಾಸಿ ಜನಾಂಗದ ಪ್ರಮುಖರು, ಆರೇಳು ಬಾರಿ ಕಾಂಗ್ರೆಸ್ ಶಾಸಕರಾಗಿದ್ದವರು ಈಗ ಬಿಜೆಪಿ ತಕ್ಕೆಯಲ್ಲಿದ್ದಾರೆ. ಇದು ಬಿಜೆಪಿಗೆ ಸಹಾಯಕವಾಗಲಿದೆ ಎನ್ನುವುದು ಮತ್ತೊಂದು ಅಭಿಪ್ರಾಯ. ಮತದಾರರು ಹೆಚ್ಚು ಪ್ರಮಾಣದಲ್ಲಿ ಹೊರಗಡೆ ಬಂದಿದ್ದೇ ನಮಗೆ ಪ್ಲಸ್ ಪಾಯಿಂಟ್ ಅಂತ ಕಾಂಗ್ರೆಸ್ ಕೂಡ ಬೀಗುತ್ತಿದೆ. ಉಳಿದಂತೆ ಕಚ್ ಸೌರಾಷ್ಟ್ರ ಪ್ರದೇಶದ ಕ್ಷೇತ್ರಗಳಲ್ಲಿ ಮತದಾರ ಹೆಚ್ಚು ನಿರಾಸಕ್ತಿ ತೋರಿದ್ದಾನೆ ಎನ್ನುತ್ತಿವೆ ಅಂಕಿ- ಅಂಶಗಳು.

ಎರಡೂವರೆ ದಶಕಗಳ ಆಡಳಿತ ಬೇಸರ: ಮತದಾರನ ನಿರಾಸಕ್ತಿ, ಬೆಲೆ ಏರಿಕೆ, ನಿರುದ್ಯೋಗ, ಆಡಳಿತ ವಿರೋಧಿ ಅಲೆ ಇವು ಕೂಡ ಮತದಾರರನ್ನು ಮತಗಟ್ಟೆಗೆ ಬರದಂತೆ ತಡೆದಿವೆ ಎನ್ನುತ್ತಿದೆ ಕಾಂಗ್ರೆಸ್. ಪ್ರಧಾನಿ ಮೋದಿಯವರು ಪೂರ್ತಿ ಜವಾಬ್ದಾರಿ ಹೊತ್ತಿದ್ದು, ಒಂದೊಂದು ಜಿಲ್ಲೆಗೆ ಮೂರು ಮೂರು ಬಾರಿ ಭೇಟಿ, 30, 50 ಹೀಗೆ ಕಿಲೋಮೀಟರ್ ರೋಡ್ ಶೋ ಮಾಡುವ ಮೂಲಕ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಅಮಿತ್ ಶಾ, ನಡ್ಡಾ ಹೀಗೆ ಒಂದೇ ಒಂದು ಕ್ಷೇತ್ರವನ್ನು ಬಿಡದೇ ಸುತ್ತುತ್ತಿದ್ದಾರೆ. ಇದರ ಮರ್ಮವೇನು ? ಅಂತಲೂ ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಕಾರಣಗಳು ಹತ್ತಾರು ಏನೇ ಇರಬಹುದು  ಡಿಸೆಂಬರ್ 8ರ ಚುನಾವಣಾ ಫಲಿತಾಂಶದಲ್ಲಿ ಹೊಸ ಲಕ್ಷಣಗಳು ಗೋಚರಿಸಲಿವೆ ಎನ್ನುವ ಅಭಿಪ್ರಾಯಗಳು ದೆಹಲಿ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
 

Follow Us:
Download App:
  • android
  • ios