Asianet Suvarna News Asianet Suvarna News

ನರೇಂದ್ರನ ದಾಖಲೆಗಳನ್ನು ಭೂಪೇಂದ್ರ ಮುರಿಯಬೇಕೆಂದು ಬಯಸುತ್ತೇನೆ: ಪ್ರಧಾನಿ ಮೋದಿ

ನರೇಂದ್ರನ ದಾಖಲೆಗಳನ್ನು ಭೂಪೇಂದ್ರ ಮುರಿಯಲಿ ಎಂದು ನಾನು ಬಯಸುತ್ತೇನೆ. ಗುಜರಾತ್ ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪುತ್ತದೆ ಎಂದು ನನಗೆ ಖಾತ್ರಿಯಿದೆ ಎಂದೂ ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. 

gujarat assembly elections pm narendra modi offers prayers at somnath temple rally at veraval ash
Author
First Published Nov 20, 2022, 12:39 PM IST

ಗುಜರಾತ್‌ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ಹಿನ್ನೆಲೆ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರವೂ ಜೋರಾಗಿದೆ. ಅದರಲ್ಲೂ, ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಭರ್ಜರಿ ತಯಾರಿ ನಡೆಸುತ್ತಿದೆ. ಪ್ರಧಾನಿ ಮೋದಿ ಸಹ ತಮ್ಮ ತವರು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಲು ಕಳೆದ ಕೆಲ ತಿಂಗಳುಗಳಿಂದ ಗುಜರಾತ್‌ಗೆ ಹೆಚ್ಚು ಭೇಟಿ ನೀಡುತ್ತಲೇ ಇದ್ದಾರೆ. ಈಗ 3 ದಿನಗಳ ಕಾಲ ಮತ್ತೆ ಗುಜರಾತ್‌ ಪ್ರವಾಸಕ್ಕೆ ಹೋಗಿರುವ ಪ್ರಧಾನಿ ಮೋದಿ, ಇಂದು ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ, ಇಂದು ಒಂದಲ್ಲ.. ಎರಡಲ್ಲ 4 ರ‍್ಯಾಲಿಗಳನ್ನು ನಡೆಸಿದ್ದಾರೆ. 

ಭಾನುವಾರ ಬೆಳಗ್ಗೆ ಸೋಮನಾಥ್‌ ದೇಗುಲಕ್ಕೆ ತೆರಳಿದ ಪ್ರಧಾನಿ ಮೋದಿ ಶಿವನ ಆದಿ ಜೋತಿರ್ಲಿಂಗದಲ್ಲಿ ವಿಶೇಷ ಪೂಜೆ ಮಾಡಿದರು. ಅಲ್ಲದೆ, ಸೋಮನಾಥ ದೇಗುಲದಲ್ಲಿರುವ ಸರ್ದಾರ್‌ ಪಟೇಲ್‌ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ಹಾಗೂ, ದೇಗುಲದ ಪವಿತ್ರ ಧ್ವಜಾರೋಹಣವನ್ನೂ ಮಾಡಿದರು. ಗುಜರಾತ್‌ನ ವೇರಾವಲ್‌ನಲ್ಲಿರುವ ಸೋಮನಾಥ ದೇಗುಲಕ್ಕೆ ತೆರಳಿದ ಬಳಿಕ ಸೌರಾಷ್ಟ್ರ ಭಾಗದ ವೇರಾವಲ್‌ನಲ್ಲಿ ರ‍್ಯಾಲಿಯ ಮೂಲಕ ತಮ್ಮ ಚುನಾವಣಾ ಪ್ರಚಾರವನ್ನೂ ಆರಂಭಿಸಿದರು. 

ಇದನ್ನು ಓದಿ: ದ್ವೇಷ ಹರಡುವ, Gujarat ಮಾನಹಾನಿ ಮಾಡುವವರನ್ನು ಹೊರಹಾಕಲಾಗುತ್ತದೆ: ಪ್ರಧಾನಿ ಮೋದಿ

ಸೌರಾಷ್ಟ್ರ ಪ್ರದೇಶದಲ್ಲಿ ಇಂದು ಪ್ರಧಾನಿ ಮೋದಿ 4 ರ‍್ಯಾಲಿಗಳನ್ನು ನಡೆಸಲಿದ್ದಾರೆ. ವೇರಾವಲ್‌, ಧೊರಾರ್ಜಿ, ಅಮ್ರೇಲಿ ಹಾಗೂ ಬೊಟಾಡ್‌ ನಗರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಸೌರಷ್ಟ್ರ ಭಾಗ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದು, 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿದರೂ, ಈ ಭಾಗದಲ್ಲಿ ಒಂದು ಸ್ಥಾನವನ್ನೂ ಗಳಿಸಿರಲಿಲ್ಲ. ಈ ಹಿನ್ನೆಲೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಈ ಭಾಗದಲ್ಲೂ ಹೆಚ್ಚು ಸ್ಥಾನಗಳನ್ನು ಪಡೆಯಲು ಪ್ರಧಾನಿ ಮೋದಿ ಸರಣಿ ರ‍್ಯಾಲಿಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. 

ಇನ್ನು, ಗಿರ್‌ ಸೋಮನಾಥ್‌ ಜಿಲ್ಲೆಯ ವೇರಾವಲ್‌ನಲ್ಲಿ ಪ್ರಚಾರ ಆರಂಭಿಸಿದ ಮೋದಿ ಸಾರ್ವಜನಿಕವಾಗಿ ಭಾಷಣ ಮಾಡಿದರು. ಸೌರಾಷ್ಟ್ರದಲ್ಲಿ ನನ್ನ ಮೊದಲ ರ‍್ಯಾಲಿ ಆರಂಭವಾಗಿದೆ. ಅದೂ ಸೋಮನಾಥದಿಂದ. ನಮಗೆ ದೇವರ ಹಾಗೂ ಜನರ ಆಶೀರ್ವಾದ ಇದ್ದರೆ, ನಾವು ದಾಖಲೆಗಳನ್ನು ಮುರಿಯಬೇಕು. ಮೊದಲನೆಯದು ಅತ್ಯಧಿಕ ಮತದಾನವನ್ನು ಖಚಿತಪಡಿಸಿಕೊಳ್ಳುವುದು. ಪ್ರಜಾಪ್ರಭುತ್ವದ ಹಬ್ಬದಲ್ಲಿ ಚುನಾವಣೆ. ಪ್ರಜಾಪ್ರಭುತ್ವಕ್ಕೆ ಮತದಾನ ಮುಖ್ಯ. ಪ್ರತಿಯೊಬ್ಬ ನಾಗರಿಕರು ಭಾಗವಹಿಸಬೇಕು. ಬಿಜೆಪಿ ಗೆಲ್ಲದ ಯಾವುದೇ ಮತಗಟ್ಟೆ ಇರಬಾರದು ಎಂದು ಮೋದಿ ಹೇಳಿದರು. 

ಇದನ್ನೂ ಓದಿ: Gujarat Elections 2022: ಯಾವ್ಯಾವ ವಯಸ್ಸಿನ ಮತದಾರರ ಒಲವು ಯಾವ ಪಕ್ಷದತ್ತ ಇದೆ ನೋಡಿ..

ಅಲ್ಲದೆ, ನರೇಂದ್ರನ ದಾಖಲೆಗಳನ್ನು ಭೂಪೇಂದ್ರ ಮುರಿಯಲಿ ಎಂದು ನಾನು ಬಯಸುತ್ತೇನೆ. ಗುಜರಾತ್ ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪುತ್ತದೆ ಎಂದು ನನಗೆ ಖಾತ್ರಿಯಿದೆ ಎಂದೂ ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. 

ಕಡು ಬಡವರಿಗೆ ಶಿಕ್ಷಣದ ಪ್ರವೇಶವನ್ನು ನಾವು ಖಚಿತಪಡಿಸಿದ್ದೇವೆ. ನಾವು ಎಲ್ಲಾ ಶಾಲೆಗಳಲ್ಲಿ ಶೌಚಾಲಯಗಳನ್ನು ಖಾತ್ರಿಪಡಿಸಿದ್ದೇವೆ, ಇದು ಹೆಣ್ಣುಮಕ್ಕಳು ಶಾಲೆ ತೊರೆಯುವ ಪ್ರಮಾಣವನ್ನು ಕಡಿಮೆ ಮಾಡಲು ಕಾರಣವಾಗಿದೆ ಎಂದೂ ಮೋದಿ ವೇರಾವಲ್‌ನಲ್ಲಿ ತಿಳಿಸಿದ್ದಾರೆ. 

ಇದನ್ನೂ ಓದಿ: ದೆಹಲಿ ಸಿಎಂಗೆ 'ಚೋರ್‌ ಚೋರ್‌', 'ಮೋದಿ ಮೋದಿ' ಘೋಷಣೆ ಕೂಗಿದ ಗುಜರಾತ್‌ ಜನತೆ; ಕಪ್ಪು ಬಾವುಟ ಪ್ರದರ್ಶನ

ಇನ್ನು, ಈ ಭಾಗದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಕೆಶೋದ್ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಬಯಸುತ್ತೇವೆ. ಗುಜರಾತ್ಪ್ರವಾಸೋದ್ಯಮದಲ್ಲಿ ಜಿಗಿತ ಮತ್ತು ಪುಟಿದೇಳುವಿಕೆಯೊಂದಿಗೆ ಪ್ರಗತಿ ಕಾಣುತ್ತಿದೆ. ಸೋಮನಾಥ ಪ್ರವಾಸೋದ್ಯಮದ ಕೇಂದ್ರವಾಗಿದೆ ಎಂದೂ ಮೋದಿ ಹೇಳಿದ್ದಾರೆ. ಹಾಗೂ, ಕಛ್‌ನ ಏಕತಾ ಪ್ರತಿಮೆ ಮತ್ತು ವೈಟ್ ರಾನ್ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದ್ದು, ಇದು ಅನೇಕರಿಗೆ ಉದ್ಯೋಗ ನೀಡುವ ಪ್ರವಾಸೋದ್ಯಮ ಆಕರ್ಷಣೆಯಾಗಿದೆ ಎಂದೂ ತಿಳಿಸಿದರು. 

ಅಲ್ಲದೆ, ನಾನು ಪ್ರತಿ ಮನೆಯಲ್ಲೂ ಕೊಳವೆ ನೀರನ್ನು ಖಾತ್ರಿಪಡಿಸಿದ್ದೇನೆ. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಕಳೆದ 2.5 ವರ್ಷಗಳಲ್ಲಿ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಿದ್ದೇನೆ. ಮುಂದಿನ 25 ವರ್ಷಗಳಲ್ಲಿ ನಾವು ಅಭಿವೃದ್ಧಿಯನ್ನು ವೇಗಗೊಳಿಸಬೇಕಾಗಿದೆ. ಅದಕ್ಕಾಗಿ ಬಿಜೆಪಿಗೆ ಮತ ನೀಡಿ. ದಯವಿಟ್ಟು ನನಗಾಗಿ ಒಂದು ಕೆಲಸ ಮಾಡಿ. ದಯವಿಟ್ಟು ಪ್ರತಿ ಮನೆಗೆ ಹೋಗಿ ನರೇಂದ್ರಭಾಯಿ ಅವರು ತಮ್ಮ ನಮನಗಳನ್ನು ಕಳುಹಿಸಿದ್ದಾರೆ ಎಂದು ಹೇಳಿ ಎಂದೂ ಗುಜರಾತ್‌ನ ಸೌರಾಷ್ಟ್ರ ಭಾಗದ ವೆರಾವಲ್‌ನಲ್ಲಿ ಮೊದಲ ರ‍್ಯಾಲಿ ವೇಳೆ ಪ್ರಧಾನಿ ಮೋದಿ ಜನತೆಯ ಮನವಿ ಮಾಡಿಕೊಂಡಿದ್ದಾರೆ. 

Follow Us:
Download App:
  • android
  • ios