ಸ್ಪೀಕರ್ ಯು.ಟಿ.ಖಾದರ್ ಅವರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಹಾಲಿ ವಿಧಾನಸಭೆಯ ಎಲ್ಲಾ ಶಾಸಕರ ಗ್ರೂಫ್ ಫೋಟೋ ಸೆಷನ್ ಆಯೋಜಿಸಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು : ಸ್ಪೀಕರ್ ಯು.ಟಿ.ಖಾದರ್ ಅವರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಹಾಲಿ ವಿಧಾನಸಭೆಯ ಎಲ್ಲಾ ಶಾಸಕರ ಗ್ರೂಫ್ ಫೋಟೋ ಸೆಷನ್ ಆಯೋಜಿಸಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸರ್ಕಾರದ ಅವಧಿ ಪೂರ್ಣಗೊಳ್ಳುವಾಗ ಅಥವಾ ಮುಖ್ಯಮಂತ್ರಿ ಬದಲಾವಣೆ, ಸ್ಪೀಕರ್ ಬದಲಾವಣೆ ಆಗುವಾಗ ಸಂದರ್ಭದಲ್ಲಿ ಶಾಸಕರೊಂದಿಗೆ ಗ್ರೂಫ್ ಫೋಟೋ ತೆಗೆಸುವುದು ಸಂಪ್ರದಾಯ. ಆದರೆ, ಇದ್ಯಾವುದರ ಸುಳಿವೂ ಇಲ್ಲದಿರುವ ಈ ಸಮಯದಲ್ಲಿ ಸ್ಪೀಕರ್ ಶಾಸಕರ ಫೋಟೋ ಸೆಷನ್ ನಡೆಸಿದ್ದು ಏಕೆ ಎಂಬ ಪ್ರಶ್ನೆ ಆಡಳಿತ ಮತ್ತು ಪ್ರತಿಪಕ್ಷ ಎರಡೂ ಕಡೆಯ ಸದಸ್ಯರಲ್ಲಿ ಉದ್ಭವಿಸಿದ್ದು, ಇದು ಸದನದ ಒಳಗೆ ಹಾಗೂ ಹೊರಗೂ ಚರ್ಚೆಗೆ ಗ್ರಾಸವಾಗಿದೆ.
ಒಂದೆಡೆ ಇದು ಶೀಘ್ರ ಸಂಪುಟ ಪುನಾರಚನೆಯಾಗುವ ಮುನ್ಸೂಚನೆ. ಖಾದರ್ ಅವರು ಸ್ಪೀಕರ್ ಸ್ಥಾನದಿಂದ ಕೆಳಗಿಳಿದು ಮಂತ್ರಿಯಾಗುತ್ತಾರೆ. ಮುಂದಿನ ಅಧಿವೇಶನದವರೆಗೆ ಅವರು ಆ ಸ್ಥಾನದಲ್ಲಿ ಇರುವುದಿಲ್ಲ. ಹಾಗಾಗಿ ಈಗಲೇ ಸಿಎಂ, ಡಿಸಿಎಂ ಸೇರಿ ಎಲ್ಲಾ ಶಾಸಕರೊಟ್ಟಿಗೆ ಗ್ರೂಫ್ ಫೋಟೋ ತೆಗೆಸಿದ್ದಾರೆ ಎಂದು ಶಾಸಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸ್ಪೀಕರ್ ಕಾಲೆಳೆದ ಅಶೋಕ್:
ಸದನದ ಒಳಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿ ಸದಸ್ಯರು ಈ ಸಂಬಂಧ ಸ್ಪೀಕರ್ ಅವರನ್ನು ಬುಧವಾರ ಕಾಲೆಳೆದರು. ಇದಕ್ಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿ, ಖಾದರ್ ಅವರು 2028ಕ್ಕೂ ಗೆಲ್ಲುತ್ತಾರೆ. ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿ ವಿಷಯದ ಚರ್ಚೆಗೆ ಮುಕ್ತಾಯ ಹಾಡಿದರು.
ಸರ್ಕಾರದ ಅವಧಿ ಪೂರ್ಣಗೊಳ್ಳಲು ಎರಡು ವರ್ಷ ಬಾಕಿ ಇರುವಾಆಗಲೇ ಸಿಎಂ, ಡಿಸಿಎಂ ಸೇರಿ ಎಲ್ಲ ಶಾಸಕರ ಗ್ರೂಫ್ ಫೋಟೋ ತೆಗೆಸಿದ ಸ್ಪೀಕರ್ ಖಾದರ್ ನಡೆ ಚರ್ಚೆಗೆ ಗ್ರಾಸವಾಗಿದೆ. ಇದು ಸ್ಪೀಕರ್ ಅವರಿಗೆ ಕೊನೆಯ ಅಧಿವೇಶನ. ಮುಂದೆ ಸಂಪುಟ ಪುನಾರಚಣೆ ಆಗಲಿದ್ದು, ಖಾದರ್ ಸಚಿವರಾಗಬಹುದು. ಹಾಗಾಗಿ ಫೋಟೋ ತೆಗೆಸಿದ್ದಾರೆ ಎಂದು ಆಡಳಿತ, ಪ್ರತಿಪಕ್ಷ ಸದಸ್ಯರಿಂದ ಅಭಿಪ್ರಾಯ ವ್ಯಕ್ತವಾಗಿದೆ.
ವದಂತಿ
- ಅವಧಿ ಪೂರ್ಣಕ್ಕೂ ಮೊದಲೇ ಶಾಸಕರ ಗ್ರೂಪ್ ಫೋಟೋದಿಂದ ರಾಜಕೀಯ ಸಂಚಲನ
- ಇದು ಸ್ಪೀಕರ್ ಪಾಲಿಗೆ ಕಡೆ ಅಧಿವೇಶನ । ಯು.ಟಿ.ಖಾದರ್ ಕಾಲೆಳೆದ ಅಶೋಕ್
- ಸಾಮಾನ್ಯವಾಗಿ ವಿಧಾನಸಭೆ ಅಧಿವೇಶನ ಕಡೆಯಲ್ಲಿ ಶಾಸಕರ ಗ್ರೂಪ್ ಫೋಟೋ ಸಂಪ್ರದಾಯ
- ಆದರೆ ಬುಧವಾರವೇ ವಿಧಾನಸಭೆಯ ಎಲ್ಲಾ ಶಾಸಕರ ಜೊತೆಗೆ ಸ್ಪೀಕರ್ ಗ್ರೂಪ್ ಫೋಟೋ
- ಇದು ಖಾದರ್ ಅವರು ಸ್ಪೀಕರ್ ಸ್ಥಾನದಿಂದ ಕೆಳಗಿಳಿದು ಸಚಿವರಾಗಬಹುದು ಎಂಬ ವದಂತಿ
- ಜೊತೆಗೆ ಶೀಘ್ರ ರಾಜ್ಯ ಸಚಿವ ಸಂಪುಟ ಪುನಾರಚನೆ ಆಗಬಹುದು ಎಂಬ ಗುಸುಗುಸುಗೂ ಕಾರಣ


