Asianet Suvarna News Asianet Suvarna News

ಬಿಎಸ್‌ವೈ ಸರ್ಕಾರ ಪಠ್ಯಪುಸ್ತಕ ಕೇಸರೀಕರಣಗೊಳಿಸಲು ಹೊರಟಿದೆ: ಸಿದ್ದರಾಮಯ್ಯ

ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಸಿದ್ದರಾಮಯ್ಯ| 10ನೇ ತರಗತಿ‌‌ ಪಠ್ಯದಿಂದ ಕೆಲವು ಮಹಾಪುರುಷರಿಗೆ ಸಂಬಂಧಿಸಿದ ಪಾಠವನ್ನು ಕೈಬಿಟ್ಟದ್ದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ| ಕರ್ನಾಟಕ ಪಠ್ಯಪುಸ್ತಕ ಸಮಿತಿ ಸರ್ಕಾರಕ್ಕಿಂತಲೂ ಉನ್ನತ ಸಂಸ್ಥೆಯೇ? ಅದನ್ನು ತಕ್ಷಣ ವಾಪಸು ಪಡೆಯಿರಿ, ಇಲ್ಲದೆ ಇದ್ದರೆ ನಿಮ್ಮ ಪಾತ್ರ ಒಪ್ಪಿಕೊಳ್ಳಿ ಎಂದ ಸಿದ್ದರಾಮಯ್ಯ|

Former CM Siddaramaiah Talks Over Tipus Out Textbook
Author
Bengaluru, First Published Jul 29, 2020, 1:40 PM IST

ಬೆಂಗಳೂರು(ಜು.29): ಕೊರೋನಾ ನಿಯಂತ್ರಿಸಲಾಗದ ರಾಜ್ಯ ಸರ್ಕಾರ, ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡು ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸಿ, ಗುಪ್ತ ಅಜೆಂಡಾ ಅನುಷ್ಠಾನಗೊಳಿಸಲು ಹೊರಟಿದೆ.‌‌ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಈ ಹುನ್ನಾರವನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ, ಹೋರಾಟ ಅನಿವಾರ್ಯವಾಗಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 

 

ಇಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್‌ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, 10ನೇ ತರಗತಿ‌‌ ಪಠ್ಯದಿಂದ ಕೆಲವು ಮಹಾಪುರುಷರಿಗೆ ಸಂಬಂಧಿಸಿದ ಪಾಠವನ್ನು ಕೈಬಿಟ್ಟದ್ದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಹೇಳಿದ್ದಾರೆ. ಆದರೆ, ಕರ್ನಾಟಕ ಪಠ್ಯಪುಸ್ತಕ ಸಮಿತಿ ಸರ್ಕಾರಕ್ಕಿಂತಲೂ ಉನ್ನತ ಸಂಸ್ಥೆಯೇ? ಅದನ್ನು ತಕ್ಷಣ ವಾಪಸು ಪಡೆಯಿರಿ, ಇಲ್ಲದೆ ಇದ್ದರೆ ನಿಮ್ಮ ಪಾತ್ರ ಒಪ್ಪಿಕೊಳ್ಳಿ ಎಂದು ಬಹಿರಂಗವಾಗಿ ಸಚಿವ ಸುರೇಶ್‌ ಕುಮಾರ್‌ ಅವರಿಗೆ ಸವಾಲ್‌ ಹಾಕಿದ್ದಾರೆ. 

 

ಏಸು ಕ್ರಿಸ್ತ, ಪ್ರವಾದಿ ಪೈಗಂಬರ್, ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕದೇವಿ ಮೊದಲಾದವರಿಗೆ ಸಂಬಂಧಿಸಿದ ಪಠ್ಯವನ್ನು ಹತ್ತನೇ ತರಗತಿಯ ಪಠ್ಯಕ್ರಮದಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯವಾಗಿದೆ. ಅಧಿಕೃತ ಸರ್ಕಾರ‌ ದುರ್ಬಲಗೊಳ್ಳುತ್ತಿದೆ. ಅನಧಿಕೃತ ಸಂಘಿ ಸರ್ಕಾರ ಬಲಗೊಳ್ಳುತ್ತಿದೆ ಎಂದು ಬಿಎಸ್‌ವೈ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್‌ಗೆ ಸದ್ಯ ಕೊಕ್‌ ಇಲ್ಲ!

ಇನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರ ವರ್ಗಾವಣೆ ಸಂಬಂಧ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಅವರು, ಶಹಬ್ಬಾಸ್, ಯಡಿಯೂರಪ್ಪನವರೇ ಒಂದೆಡೆ ಕೊರೊನಾ ವಾರಿಯರ್ಸ್‌ಗೆ ಆಕಾಶದಿಂದ ಹೂಮಳೆ ಸುರಿಸುತ್ತೀರಿ, ಇನ್ನೊಂದೆಡೆ ಕೊಲೆ ಬೆದರಿಕೆ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ರಕ್ಷಣೆ ನೀಡದೆ ವರ್ಗಾವಣೆ ಮಾಡ್ತೀರಿ. ಇದೇನಾ ಕೊರೊನಾ ವಾರಿಯರ್ಸ್‌ಗೆ ಕೊಡುವ ಗೌರವ? ಎಂದು ಪ್ರಶ್ನಿಸಿದ್ದಾರೆ.

 

ಕೊರೊನಾ ಅಕ್ರಮ ಬಯಲಿಗೆಳೆದರೆ ಅಧಿಕಾರಿಗಳ ನೈತಿಕಸ್ಥೈರ್ಯ ಕುಸಿಯುವಂತೆ ಮಾಡ್ತೀರಿ ಎಂದು ದೂರುತ್ತೀರಿ. ಮೊದಲು, ಭ್ರಷ್ಟರ ರಕ್ಷಣೆಗಾಗಿ ಬಿಬಿಎಂಪಿ‌ ಆಯುಕ್ತರ ವರ್ಗಾವಣೆ ಮಾಡಿದ್ದೀರಿ. ಈಗ ಕೋಮುವಾದಿ ಪುಂಡರ  ರಕ್ಷಿಸಲು ದ.ಕ. ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಿದ್ದೀರಿ. ಇದೇನಾ ನಿಮ್ಮ ಕೊರೊನಾ ವಿರುದ್ಧದ ಹೋರಾಟ? ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರನ್ನ ಪ್ರಶ್ನಿಸಿದ್ದಾರೆ. 
 

Follow Us:
Download App:
  • android
  • ios