ಬೆಂಗಳೂರು[ಜ.21]: ಟಿಪ್ಪು ಸುಲ್ತಾನ್‌ ಜೀವನದ ಋುಣಾತ್ಮಕ ಅಂಶಗಳು, ಘಟನೆಗಳು ಹಾಗೂ ಆತ ಎಸಗಿದ ಹಿಂಸಾತ್ಮಕ ಕೃತ್ಯಗಳ ಬಗ್ಗೆ ವಿಸ್ತೃತ ಅಧ್ಯಯನಕ್ಕಾಗಿ ನೂತನ ಸಮಿತಿಯೊಂದನ್ನು ರಚನೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಪಠ್ಯದಲ್ಲಿ ಟಿಪ್ಪುವಿನ ಸಕಾರಾತ್ಮಕ ಅಂಶಗಳು ಹಾಗೂ ಮೈಸೂರು ಪ್ರಾಂತ್ಯದ ಇತಿಹಾಸ ಮಾತ್ರ ಹೇಳಲಾಗಿದೆ. ಹಾಗಾಗಿ ನಕಾರಾತ್ಮಕ ವಿಷಯಗಳನ್ನು ಕೂಡ ತಿಳಿಯಲು ಸದ್ಯದಲ್ಲಿಯೇ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

'ಟಿಪ್ಪು ಬದುಕಿರುತ್ತಿದ್ರೆ ಕಾವೇರಿ ವಿವಾದ ಉದ್ಭವಿಸುತ್ತಿರಲಿಲ್ಲ'..!

ಟಿಪ್ಪು ಸುಲ್ತಾನ್‌ ಮಂಡ್ಯದ ಮೇಲುಕೋಟೆ, ಚಿತ್ರದುರ್ಗ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಕಷ್ಟುಹಿಂಸಾತ್ಮಕ ಕೃತ್ಯಗಳನ್ನು ಎಸಗಿದ್ದಾನೆ ಎನ್ನಲಾಗಿದೆ. ಇದನ್ನು ಪರಿಪೂರ್ಣವಾಗಿ ತಿಳಿಯುವ ಉದ್ದೇಶ ಹೊಂದಲಾಗಿದೆ ಎಂದರು.

ಹಾಲಿ ಪಠ್ಯ ಮುಂದುವರಿಕೆ:

ಪ್ರಸ್ತುತ 6, 7 ಮತ್ತು 10ನೇ ತರಗತಿಗಳಿಗೆ ಬೋಧಿಸುತ್ತಿರುವ ಟಿಪ್ಪು ಸುಲ್ತಾನ್‌ ಕುರಿತ ಪಾಠಗಳ ಬೋಧನೆಯನ್ನು 2020-21ನೇ ಶೈಕ್ಷಣಿಕ ಸಾಲಿಗೆ ಮುಂದುವರಿಸಲಾಗುತ್ತದೆ. ನೂತನ ಸಮಿತಿ ನೀಡುವ ವರದಿ ಆಧಾರದಲ್ಲಿ ಅವಶ್ಯವೆನಿಸಿದರೆ 2021-22ನೇ ಸಾಲಿಗೆ ತಿದ್ದುಪಡಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಮುಂದುವರಿಕೆಗೆ ಶಿಫಾರಸು ಮಾಡಿದ್ದ ಸಮಿತಿ:

ಬಿಜೆಪಿ ಹಿರಿಯ ಶಾಸಕ ಅಪ್ಪಚ್ಚು ರಂಜನ್‌ ಅವರು ಟಿಪ್ಪುವನ್ನು ವೈಭವೀಕರಿಸಿ ಮಕ್ಕಳಿಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ. ಟಿಪ್ಪು ದೇಶ ಭಕ್ತನಲ್ಲ, ಕನ್ನಡ ಪ್ರೇಮಿಯಲ್ಲ. ಕೊಲೆಗಡುಕನಾಗಿದ್ದ. ಸದ್ಯ ಪಠ್ಯದಲ್ಲಿ ಒಂದು ಮುಖವನ್ನು ಮಾತ್ರ ತೋರಿಸಲಾಗಿದೆ. ಮತ್ತೊಂದು ಮುಖವನ್ನು ಕೂಡ ತೋರಿಸಬೇಕು. ಒಂದು ವೇಳೆ ಟಿಪ್ಪುವಿನ ನಕಾರಾತ್ಮಕ ವಿಷಯಗಳನ್ನು ತಿಳಿಸಲು ಸಾಧ್ಯವಾಗದಿದ್ದರೆ ಪಠ್ಯದಿಂದಲೇ ಟಿಪ್ಪು ಪಾಠವನ್ನು ತೆಗೆಯಬೇಕು ಎಂದು ಒತ್ತಾಯಿಸಿದ್ದರು.

ಟಿಪ್ಪು ಸ್ಮರಿಸಿದ ಪಾಕ್‌ ಪ್ರಧಾನಿ ಇಮ್ರಾನ್‌: ತರೂರ್‌ ಮೆಚ್ಚುಗೆ

ಈ ಹಿನ್ನೆಲೆಯಲ್ಲಿ ಸಂಪೂರ್ಣ ವರದಿ ನೀಡುವಂತೆ ರಾಜ್ಯ ಸಂಶೋಧನಾ ಮತ್ತು ತರಬೇತಿ ಸಂಸ್ಥೆಗೆ (ಡಿಎಸ್‌ಇಆರ್‌ಟಿ) ತಿಳಿಸಲಾಗಿತ್ತು. ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು, ಅಪ್ಪಚ್ಚು ರಂಜನ್‌ ತಿಳಿಸಿರುವ ಯಾವುದೇ ವಿಷಯಗಳು ಪಠ್ಯದಲ್ಲಿಲ್ಲ. ಅಲ್ಲದೆ, ಟಿಪ್ಪು ವಿಷಯವನ್ನು ಪಠ್ಯದಿಂದ ತೆರವು ಮಾಡಿದರೆ, ಮೈಸೂರು ಪ್ರಾಂತ್ಯದ ಆಡಳಿತ ತಿಳಿಸುವ ಟಿಪ್ಪು ಆಡಳಿತಾವಧಿಯಾದ 1783ರಿಂದ 1799ರ ವರೆಗಿನ ಮೈಸೂರು ಇತಿಹಾಸ ಹಾಗೂ ಬ್ರಿಟಿಷರ ವಿರುದ್ಧ ಮೈಸೂರು ಯುದ್ಧಗಳ ವಿಶ್ಲೇಷಣೆಯಲ್ಲಿ ಇತಿಹಾಸದ ಕೊಂಡಿ ಕಳಚಿದಂತಾಗಲಿದೆ. ಈ ಹಿನ್ನೆಲೆಯಲ್ಲಿ ಟಿಪ್ಪು ಪಠ್ಯ ಮುಂದುವರಿಸಬೇಕು ಎಂದು ವರದಿ ನೀಡಿತ್ತು.

6, 7 ಮತ್ತು 10ನೇ ತರಗತಿ ಪಾಠಗಳಲ್ಲಿ ಮೈಸೂರು ಯುದ್ಧ ಹಾಗೂ ಟಿಪ್ಪುವಿನ ಪರಿಚಯ ಮಾತ್ರ ನೀಡಲಾಗಿದೆ. ಸಂಪೂರ್ಣ ವಿಷಯಗಳು ಅವಶ್ಯವೆನಿಸಿದರೆ ವಿಸ್ತೃತವಾಗಿ ಉನ್ನತ ಶಿಕ್ಷಣದಲ್ಲಿ ತಿಳಿಸಬಹುದು ಎಂದು ಹೇಳಿತ್ತು. ಹೀಗಾಗಿ, ರಾಜ್ಯ ಸರ್ಕಾರ ನಕಾರಾತ್ಮಕ ಅಂಶಗಳನ್ನು ಕೂಡ ತಿಳಿಯಲು ಮುಂದಾಗಿದೆ ಎಂದು ಹೇಳಿದರು.