Asianet Suvarna News Asianet Suvarna News

ಮುಸಲ್ಮಾನರನ್ನು ಬೆದರು ಬೊಂಬೆ ಮಾಡಿಕೊಂಡು ಆರ್‌ಎಸ್‌ಎಸ್‌ ದೇಶ ಒಡೆಯುತ್ತಿದೆ: ಸಿದ್ದು

ಮೇಲ್ವರ್ಗ ಬಡವರಿಗೆ ಮೀಸಲು ಸಂವಿಧಾನಕ್ಕೆ ವಿರೋಧ, ಇದರಿಂದ ಸಮಾಜದಲ್ಲಿ ಸಮಾನತೆ ಸಾಧ್ಯವಿಲ್ಲ, ಸಂವಿಧಾನಕ್ಕೆ ವಿರುದ್ಧವಾಗಿ ಮೋದಿ ಮೀಸಲಾತಿ ತಂದರು, ಆರ್‌ಎಸ್‌ಎಸ್‌ ಅಸಮಾನತೆ ಬಯಸುತ್ತದೆ: ಸಿದ್ದು

Former CM Siddaramaiah Slams RSS grg
Author
First Published Dec 1, 2022, 12:30 PM IST

ನಂಜನಗೂಡು(ಡಿ.01):  ಶೋಷಣೆಗೆ ಒಳಗಾದ ಜನರಿಗೆ ಮೀಸಲಾತಿ ನೀಡಬೇಕೆಂಬುದು ಅಂಬೇಡ್ಕರ್‌ ಅವರ ಆಶಯವಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಮೇಲ್ವರ್ಗದ ಸಾಮಾನ್ಯ ಸಮುದಾಯದ ಬಡವರಿಗೂ ಸಹ ಶೇ.10ರಷ್ಟು ಮೀಸಲಾತಿ ನೀಡಿದರು. ಹೀಗಾದರೆ, ಸಮಾಜದಲ್ಲಿ ಹೇಗೆ ಸಮಾನತೆ ಬರಲು ಸಾಧ್ಯ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ನಡೆದ ಕನಕದಾಸರ 535ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನುವಾದಿಗಳು ಶೋಷಿತ ಸಮಾಜಗಳಿಗೆ ವಿದ್ಯೆ ಕಲಿಯಲು ಅವಕಾಶ ನೀಡದ ಕಾರಣ ಇಂದಿಗೂ ಸಹ ಅಸಮಾನತೆ ದೂರವಾಗಿಲ್ಲ. ಆದರೆ, ಮೋದಿಯವರು ಸಂವಿಧಾನಕ್ಕೆ ವಿರುದ್ಧವಾಗಿ ಮೇಲ್ವರ್ಗದ ಬಡವರಿಗೂ ಮೀಸಲಾತಿಯನ್ನು ಸದ್ದು ಗದ್ದಲವಿಲ್ಲದೆ ಒಂದೇ ದಿನ ಲೋಕಸಭೆ, ರಾಜ್ಯಸಭೆಯಲ್ಲಿ ಅನುಮೋದನೆಗೊಳಿಸಿ ಕಾನೂನು ಮಾಡಿದರು ಎಂದು ಆರೋಪಿಸಿದರು.

ಸಿದ್ದರಾಮಯ್ಯ ಬಯೋಪಿಕ್ ಮಾಡಲು ವೇದಿಕೆ ರೆಡಿ: ಮಾಜಿ ಸಿಎಂ ಪಾತ್ರ ಮಾಡ್ತಾರಾ ತಮಿಳಿನ ಖ್ಯಾತ ನಟ ವಿಜಯ್‌ ಸೇತುಪತಿ..?

ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ:

ಇದೇ ವೇಳೆ, ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಶೋಷಣೆ, ದೌರ್ಜನ್ಯ ಮಾಡಲು ಸಮಾಜದಲ್ಲಿ ಅಸಮಾನತೆ ಇರಬೇಕೆಂದು ಆರ್‌ಎಸ್‌ಎಸ್‌ ಬಯಸುತ್ತದೆ. ಆರ್‌ಎಸ್‌ಎಸ್‌ ಬದಲಾವಣೆ ಬಯಸುವುದಿಲ್ಲ. ಜಾತಿ ವ್ಯವಸ್ಥೆ ಇದೇ ರೀತಿ ಮುಂದುವರಿಯಲು ಇಷ್ಟ ಪಡುತ್ತದೆ. ಜಾತಿ ವ್ಯವಸ್ಥೆ ನಿರ್ಮೂಲನೆಯಾದರೆ ಇವರಿಗೆ ಶೋಷಣೆ ಮಾಡಲು ಆಗುವುದಿಲ್ಲ. ಇದಕ್ಕಾಗಿಯೇ ಮುಸಲ್ಮಾನರನ್ನು ಬೆದರು ಬೊಂಬೆ ಮಾಡಿಕೊಂಡು ದೇಶ ಒಡೆಯುತ್ತಿದ್ದಾರೆ ಎಂದು ಟೀಕಿಸಿದರು.

ವರುಣ ಕ್ಷೇತ್ರ ಮರೆಯಲಾರೆ:

ವರುಣದಿಂದಲೇ ಸ್ಪರ್ಧೆ ಮಾಡಬೇಕೆಂಬ ಜನರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವರುಣ ಕ್ಷೇತ್ರದ ಜನರು 2 ಬಾರಿ ನನ್ನನ್ನು ಗೆಲ್ಲಿಸಿದ್ದಾರೆ. ಒಂದು ಬಾರಿ ಪ್ರತಿಪಕ್ಷದ ನಾಯಕನನ್ನಾಗಿ, ಒಂದು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಎಂದಿಗೂ ಸಹ ನಾನು ಈ ಕ್ಷೇತ್ರದ ಜನರನ್ನು ಮರೆಯಲ್ಲ. ಸ್ಪರ್ಧೆ ಬಗ್ಗೆ ಮುಂದೆ ನೋಡೋಣ ಎಂದರು.

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಬೆಳ್ಳಿ ಖಡ್ಗ ನೀಡಿ, ಗೌರವಿಸಲಾಯಿತು. ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮತ್ತು ಶಿವಾನಂದಪುರಿ ಸ್ವಾಮೀಜಿಗೆ ಬೆಳ್ಳಿ ಕಿರೀಟ ನೀಡಿ ಗೌರವಿಸಲಾಯಿತು.
ಕುರುಬರು ಜಾತಿ ಹೇಳಿಕೊಳ್ಳಲು ನಾಚಿಕೆ ಪಟ್ಟುಕೊಳ್ಳುತ್ತಿದ್ದರು:

ಎಲ್ಲೆಡೆ ಕನಕ ಜಯಂತಿ ಆಚರಿಸಿದ ಮೇಲೆ ನಮ್ಮ ಸಮಾಜದಲ್ಲಿ ಜಾಗೃತಿ ಮೂಡಿತು. ಅಲ್ಲಿವರೆಗೆ ಕುರುಬರು ಎಂದು ಹೇಳಿಕೊಳ್ಳಲು ನಾಚಿಕೆ ಪಡುತ್ತಿದ್ದರು. ನಾನು ಓದುತ್ತಿದ್ದಾಗ ನಮ್ಮ ಕೆಲ ವಿದ್ಯಾರ್ಥಿಗಳು ಕುರುಬರು ಎನ್ನದೆ ಗೌಡರು ಎನ್ನುತ್ತಿದ್ದರು. ನಾನು ಮತ್ತು ವಿಶ್ವನಾಥ್‌ ಕಾಳಿದಾಸ ಹಾಸ್ಟೆಲ್‌ ಸ್ಥಾಪಿಸಿ ಎಲ್ಲಾ ಕಡೆ ಓಡಾಡಿ ಜಾಗೃತಿ ಮೂಡಿಸಿದ್ದರಿಂದ ಭಯ ಹೋಗಿ ಧೈರ್ಯವಾಗಿ ಕುರುಬರು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ವಿಶ್ವನಾಥ್‌ ಜೊತೆಗಿನ ಒಡನಾಟವನ್ನು ಸಿದ್ದರಾಮಯ್ಯ ಮೆಲುಕು ಹಾಕಿದರು.

ಸಿದ್ರಾಮುಲ್ಲಾ ಖಾನ್‌ ಬೈಗುಳ ಅಲ್ಲ: ಹೇಳಿಕೆ ಸಮರ್ಥಿಸಿಕೊಂಡ ಸಿ.ಟಿ.ರವಿ

ಮತ್ತೆ ಸಿದ್ದು ಸಿಎಂ ಕೂಗು:

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಕೇಳಿ ಬಂತು. ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ಪಕ್ಷದ ವರಿಷ್ಠರು ಸಿದ್ದರಾಮಯ್ಯನವರನ್ನು ಮುಂದಿನ ಸಿಎಂ ಎಂದು ಬಿಂಬಿಸಬೇಡಿ ಎನ್ನುತ್ತಾರೆ. ಆದರೆ, ರಾಜ್ಯದ ಜನತೆ ಸಿದ್ದರಾಮಯ್ಯನವರೇ ಮುಂದಿನ ಬಾರಿ ಸಿಎಂ ಆಗಬೇಕು ಎನ್ನುತ್ತಿದ್ದಾರೆ ಎಂದರು. ವಿಧಾನ ಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ದೀನ ದಲಿತರ ಉದ್ದಾರಕ್ಕೆ ಸಿದ್ದರಾಮಯ್ಯನವರೇ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದರು. ಇದೇ ವೇಳೆ, ಸಮಾರಂಭದಲ್ಲಿದ್ದ ಜನರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಯವಾಗಲಿ ಎಂದು ಕೂಗಿದರು.

75 ಕೆಜಿ ತೂಕದ ಕೇಕ್‌ ಕತ್ತರಿಸಿದ ಸಿದ್ದು:

ಬಳಿಕ, ಮೈಸೂರಿನ ಕಲಾಮಂದಿರದಲ್ಲಿ ನಡೆದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ 75 ಕೆಜಿ ತೂಕದ ಕೇಕ್‌ನ್ನು ಕತ್ತರಿಸಿ, ಸಿದ್ದರಾಮಯ್ಯನವರು ತಮ್ಮ ಜನ್ಮದಿನ ಆಚರಿಸಿಕೊಂಡರು.
 

Follow Us:
Download App:
  • android
  • ios