ಸಿದ್ರಾಮುಲ್ಲಾ ಖಾನ್ ಬೈಗುಳ ಅಲ್ಲ: ಹೇಳಿಕೆ ಸಮರ್ಥಿಸಿಕೊಂಡ ಸಿ.ಟಿ.ರವಿ
ಸಿದ್ದರಾಮಯ್ಯಗೆ ಇದನ್ನು ನಾನು ಮೊದಲು ಹೇಳಿರುವುದಲ್ಲ. ಈ ಹಿಂದೆ ಮಾಜಿ ಸಚಿವ ಈಶ್ವರಪ್ಪ, ಮೈಸೂರು ಸಂಸದರು, ಅಲ್ಲಿನ ಜನ, ಕೊಡಗಿನವರು ಕೊಟ್ಟ ಬಿರುದು ಇದು: ಸಿ.ಟಿ ರವಿ
ಚಿಕ್ಕಮಗಳೂರು(ನ.29): ಸಿದ್ರಾಮುಲ್ಲಾಖಾನ್, ಅಸಂಸದೀಯ ಪದವಲ್ಲ, ಬೈಗುಳವೂ ಅಲ್ಲ. ಅವರಿಗೆ ಟಿಪ್ಪು, ಟೋಪಿ ಪ್ರಿಯವಾಗಿರುವ ಸಂಗತಿ. ಹಾಗಾಗಿ, ಅವರಿಗೆ ಹತ್ತಿರವಾದುದ್ದನ್ನೇ ಹೇಳಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸಿದ್ರಾಮುಲ್ಲಾ ಖಾನ್ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯಗೆ ಇದನ್ನು ನಾನು ಮೊದಲು ಹೇಳಿರುವುದಲ್ಲ. ಈ ಹಿಂದೆ ಮಾಜಿ ಸಚಿವ ಈಶ್ವರಪ್ಪ, ಮೈಸೂರು ಸಂಸದರು, ಅಲ್ಲಿನ ಜನ, ಕೊಡಗಿನವರು ಕೊಟ್ಟ ಬಿರುದು ಇದು. ಇದರಿಂದ ಅವರಿಗೆ ಆನಂದವಾಗುತ್ತದೆ. ಅವರಿಗೆ ಆನಂದ ಆಗದಿರುವ ಸಂಗತಿಗಳೆಂದರೆ ಕೇಸರಿ ಪೇಟ, ಕುಂಕುಮ. ಕುಂಕುಮದ ಬಗ್ಗೆ ಯಾರಾದರೂ ಹೇಳಿದರೆ ಅವರಿಗೆ ಬೇಜಾರಾಗುತ್ತಿತ್ತೇನೊ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಸಾಕಷ್ಟುಬಿರುದು ಕೊಡಲಾಗಿದೆ. ಹಾಗಾಗಿ, ಇದನ್ನು ಟಿಪ್ಪು ಜಯಂತಿಗೆ ಜನ ಕೊಟ್ಟಬಿರುದು ಎಂದು ಅವರು ಭಾವಿಸುತ್ತಾರೆ ಎಂದರು.
ಬಿಜೆಪಿ ಜನಸಂಕಲ್ಪ ಯಾತ್ರೆ ನನ್ನನ್ನು ಟಾರ್ಗೆಟ್ ಮಾಡಿದ ಯಾತ್ರೆಯಾಗಿತ್ತು: ಶಾಸಕ ರಾಜೇಗೌಡ ಆರೋಪ
ಸಿ.ಟಿ.ರವಿಯಿಂದ ದತ್ತ ಮಾಲಾಧಾರಣೆ
ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ತು ಹಾಗೂ ಬಜರಂಗದಳ ಸಂಯುಕ್ತವಾಗಿ ಡಿ.6ರಿಂದ 3 ದಿನಗಳ ಕಾಲ ಹಮ್ಮಿಕೊಂಡಿರುವ ದತ್ತಮಾಲೆ ಹಾಗೂ ದತ್ತಜಯಂತಿ ಅಭಿಯಾನಕ್ಕೆ ಸಿ.ಟಿ.ರವಿ ಸೇರಿದಂತೆ ನೂರಾರು ಭಕ್ತರು ಸೋಮವಾರ ಮಾಲಾಧಾರಣೆ ಮಾಡುವ ಮೂಲಕ ಚಾಲನೆ ನೀಡಿದರು. ಬೆಳಗ್ಗೆ ರತ್ನಗಿರಿ ರಸ್ತೆಯ ಕಾಮಧೇನು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ನಂತರ, ನೂರಾರು ದತ್ತ ಭಕ್ತರ ಸಮ್ಮುಖದಲ್ಲಿ ರಘುನಾಥ್ ಅವಧಾನಿಗಳ ನೇತೃತ್ವದಲ್ಲಿ ಗಣಹೋಮ, ಪೂರ್ಣಾಹುತಿ ನೆರವೇರಿಸಲಾಯಿತು. ಬಳಿಕ, ಸಿ.ಟಿ.ರವಿ ಮತ್ತಿತರರು ಮಾಲಾಧಾರಣೆ ಮಾಡಿದರು.
ಈ ವೇಳೆ, ಮಾತನಾಡಿದ ಸಿ.ಟಿ.ರವಿ, ಈ ಹಿಂದೆ ಕಾಂಗ್ರೆಸ್ ಸರ್ಕಾರದಿಂದ ದತ್ತಪೀಠಕ್ಕೆ ಅನ್ಯಾಯವಾಗಿತ್ತು. ಈಗ ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು ಎಂಬ ಬೇಡಿಕೆಯನ್ನು ಬಿಜೆಪಿ ನೇತೃತ್ವದ ಸರ್ಕಾರ ಈಡೇರಿಸಿ, ನ್ಯಾಯ ಒದಗಿಸಿಕೊಟ್ಟಿದೆ. ಇದಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.