ಮೈತ್ರಿಯ ಮಾತುಕತೆ ಪ್ರಾಥಮಿಕ ಹಂತದಲ್ಲಿದೆ. ರಾಜ್ಯದ ಹಿತದೃಷ್ಟಿಯಿಂದ ಈ ರೀತಿಯ ಕೆಲವು ತೀರ್ಮಾನಗಳಾಗುತ್ತವೆ. ಕೆಲವರು ಸಿದ್ಧಾಂತಗಳ ಬಗ್ಗೆ ಮಾತನಾಡುತ್ತಾರೆ. ಅದರ ಬಗ್ಗೆ ಮುಂದೆ ಮಾತನಾಡೋಣ. ಇನ್ನು ಮೈತ್ರಿ ವಿಷಯಕ್ಕೆ ಬಂದರೆ, ಅದಕ್ಕೆ ಇನ್ನೂ ಸಮಯ ಇದೆ. ಇನ್ನೂ ಹಲವಾರು ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿದೆ. ಇಲ್ಲಿ ಪರಸ್ಪರ ಕೊಟ್ಟು ತೆಗೆದುಕೊಳ್ಳುವುದಲ್ಲ, ವಿಶ್ವಾಸ, ಗೌರವ ಮುಖ್ಯ: ಎಚ್‌.ಡಿ.ಕುಮಾರಸ್ವಾಮಿ 

ಬೆಂಗಳೂರು(ಸೆ.10): ‘ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳು ಪ್ರಾರಂಭಿಕ ಹಂತದಲ್ಲಿದ್ದು, ಈವರೆಗೂ ಲೋಕಸಭಾ ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚೆ ನಡೆದಿಲ್ಲ’ ಎಂದು ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅನಾರೋಗ್ಯದಿಂದ ಚೇತರಿಕೆ ಕಂಡ ಬಳಿಕ ಮೊದಲ ಬಾರಿಗೆ ಮೈತ್ರಿಯ ಬಗ್ಗೆ ಹೇಳಿಕೆ ನೀಡಿದರು. ‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಮೈತ್ರಿಗೆ ಒಪ್ಪಿದ್ದಾರೆಯೇ ಅಥವಾ ಇಲ್ಲವೇ?’ ಎಂಬ ಪ್ರಶ್ನೆಗೆ ‘ಕಾದು ನೋಡಿ’ ಎಂದರು.

2018ರಲ್ಲಿ ಯಾವ ಅನ್ನ ಹಳಸಿತ್ತು, ಯಾವ ನಾಯಿ ಹಸಿದು ಬಾಗಿಲ ಬಳಿ ಬಂದಿತ್ತು?

‘ಮೈತ್ರಿಯ ಮಾತುಕತೆ ಪ್ರಾಥಮಿಕ ಹಂತದಲ್ಲಿದೆ. ರಾಜ್ಯದ ಹಿತದೃಷ್ಟಿಯಿಂದ ಈ ರೀತಿಯ ಕೆಲವು ತೀರ್ಮಾನಗಳಾಗುತ್ತವೆ. ಕೆಲವರು ಸಿದ್ಧಾಂತಗಳ ಬಗ್ಗೆ ಮಾತನಾಡುತ್ತಾರೆ. ಅದರ ಬಗ್ಗೆ ಮುಂದೆ ಮಾತನಾಡೋಣ. ಇನ್ನು ಮೈತ್ರಿ ವಿಷಯಕ್ಕೆ ಬಂದರೆ, ಅದಕ್ಕೆ ಇನ್ನೂ ಸಮಯ ಇದೆ. ಇನ್ನೂ ಹಲವಾರು ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿದೆ. ಇಲ್ಲಿ ಪರಸ್ಪರ ಕೊಟ್ಟು ತೆಗೆದುಕೊಳ್ಳುವುದಲ್ಲ, ವಿಶ್ವಾಸ, ಗೌರವ ಮುಖ್ಯ’ ಎಂದು ತಿಳಿಸಿದರು.

ಬಿಎಸ್‌ವೈಗೆ ಆಭಾರಿ:

‘ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮೈತ್ರಿ ಕುರಿತು ಮಾತನಾಡಿದ್ದಾರೆ. ಅವರಿಗೆ ನಾನು ಆಭಾರಿ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮೈತ್ರಿಕೂಟದ ಬಗ್ಗೆ ಹೇಳಿದ್ದಾರೆ. ರಾಜ್ಯದ ಜನರನ್ನು ಲೂಟಿ ಮಾಡುತ್ತಿರುವವರಿಗೆ ಕಡಿವಾಣ ಹಾಕಬೇಕಿದೆ’ ಎಂದರು.

‘2006ರಲ್ಲಿಯೂ ನಾನು ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದ್ದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮೂರೇ ತಿಂಗಳಿಗೆ ಜನರು ರೋಸಿ ಹೋಗಿದ್ದಾರೆ. ಯಾವುದೇ ಸರ್ಕಾರಕ್ಕೆ ನಾಲ್ಕು ವರ್ಷ ಕಳೆದ ಮೇಲೆ ಆಡಳಿತ ವಿರೋಧಿ ಅಲೆ ಎದುರಾಗುತ್ತದೆ. ಆದರೆ, ಈ ಸರ್ಕಾರ ಮೂರೇ ತಿಂಗಳಿಗೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಇಂತಹ ಸರ್ಕಾರದ ವಿರುದ್ಧ ಸಂಘಟಿತರಾಗಿ ಹೋರಾಟ ನಡೆಸಬೇಕಿದೆ’ ಎಂದು ಹೇಳಿದರು.

‘ರಾಜಕಾರಣದಲ್ಲಿ ನಿರಾಶೆ, ಹತಾಶೆ ಎನ್ನುವುದು ಬರಲ್ಲ. ಡೆಸ್ಪರೇಟ್‌ ಎನ್ನುವ ಪದ ರಾಜಕಾರಣದಲ್ಲಿ ಬರಲ್ಲ. ರಾಜಕಾರಣದ ಡಿಕ್ಷನರಿಯಲ್ಲಿಯೇ ಆ ಪದ ಇಲ್ಲ. ಈಗ ಕಾಂಗ್ರೆಸ್‌ ಪಕ್ಷ ಡೆಸ್ಪರೇಟ್‌ ಆಗುತ್ತದೆ. ಹೊರನೋಟಕ್ಕೆ ಅವರು ಏನು ಬೇಕಾದರೂ ಹೇಳಬಹುದು. ಆದರೆ, ಒಳಗಡೆ ಏನಿದೆ ಎನ್ನುವುದು ನನಗೂ ಗೊತ್ತಿದೆ. ಅವರ ಶಕ್ತಿ ಏನಿದೆ ಎನ್ನುವುದು ನನಗೂ ಗೊತ್ತಿದೆ. ರಾಜಕಾರಣದಲ್ಲಿ ಸದಾಕಾಲ ಒಂದೇ ರೀತಿ ಇರಲ್ಲ. ರಾಜಕಾರಣದ ಚಕ್ರ ಉರುಳುತ್ತಿರುತ್ತದೆ. ಅವರು ಏನು ಸಾಧನೆ ಮಾಡಿದ್ದಾರೆ ಎಂದು ಜನ ಸೀಟು ಕೊಡುತ್ತಾರೆ, ಲೂಟಿ ಮಾಡಿದ್ದಾರೆ. ಈ ಹಣದಲ್ಲಿ ಜನರನ್ನು ಕೊಂಡುಕೊಳ್ಳಬಹುದು ಎಂದುಕೊಂಡಿದ್ದಾರೆ. ಅದು ಸಾಧ್ಯವಾಗಲ್ಲ’ ಎಂದರು.

ದಿನೇಶ್‌ ಗುಂಡೂರಾವ್‌ಗೆ ತಿರುಗೇಟು:

‘ಕಾಂಗ್ರೆಸ್‌ ಪಕ್ಷದ ಯಾರೋ ಒಬ್ಬರು ನಾಯಕರು ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎಂದಿದ್ದಾರೆ. 2018ರಲ್ಲಿ ಯಾವ ಅನ್ನ ಹಳಸಿತ್ತು? ಯಾವ ನಾಯಿ ಹಸಿದಿತ್ತು ಎನ್ನುವುದನ್ನು ನೆನಪು ಮಾಡಿಕೊಳ್ಳಬೇಕು. ಅವತ್ತು ನಮ್ಮ ಮನೆಗೆ ಬಂದಿದ್ದವರು ಯಾರು?’ ಎಂದು ಸಚಿವ ದಿನೇಶ್‌ ಗುಂಡೂರಾವ್‌ಗೆ ತಿರುಗೇಟು ನೀಡಿದರು.

ಮೈತ್ರಿ ಒಪ್ಪಂದ ಬಳಿಕ ದೇವೇಗೌಡ, ಎಚ್ಡಿಕೆ ಭೇಟಿ: ಯಡಿಯೂರಪ್ಪ

‘ರಾಜ್ಯದ ಪರಿಸ್ಥಿತಿಯನ್ನು ನೋಡುತ್ತಿದ್ದೇನೆ. ಅಮಲಿನಲ್ಲಿ ನಾವು ಏನೋ ಮಾಡಿಬಿಟ್ಟಿದ್ದೇವೆ, ಜೆಡಿಎಸ್‌ ಪಕ್ಷವನ್ನು ಮುಗಿಸಿಬಿಟ್ಟಿದ್ದೇವೆ, ಅಲ್ಲಿಂದ-ಇಲ್ಲಿಂದ ಕರೆದುಕೊಂಡು ಬರುತ್ತಿದ್ದೇವೆ ಎಂದು ಬೀಗುತ್ತಿದ್ದಾರೆ. ಅದಕ್ಕೆಲ್ಲಾ ಉತ್ತರ ಕೊಡುತ್ತೇವೆ’ ಎಂದು ಕಿಡಿಕಾರಿದರು.

ಮೈತ್ರಿ ಕುರಿತು ಗೌಡ ಜತೆ ಎಚ್‌ಡಿಕೆ ಚರ್ಚೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪದ್ಮನಾಭನಗರದಲ್ಲಿನ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ನಿವಾಸಕ್ಕೆ ತೆರಳಿ ಬಿಜೆಪಿ-ಜೆಡಿಎಸ್‌ ಮೈತ್ರಿ ಕುರಿತು ಸಮಾಲೋಚನೆ ನಡೆಸಿದರು. ಸುಮಾರು ಎರಡು ತಾಸುಗಳಿಗಿಂತ ಹೆಚ್ಚು ಹೊತ್ತು ಚರ್ಚಿಸಿದರು. ಮೈತ್ರಿ ವಿಚಾರ ಮತ್ತು ಭಾನುವಾರ ನಡೆಯುವ ಜೆಡಿಎಸ್‌ ಸಮಾವೇಶದ ಕುರಿತು ಸಮಾಲೋಚನೆ ನಡೆಸಿ ಜೆ.ಪಿ.ನಗರದ ನಿವಾಸಕ್ಕೆ ಮರಳಿದರು ಎಂದು ಮೂಲಗಳು ತಿಳಿಸಿವೆ.