ಮೈತ್ರಿ ಒಪ್ಪಂದ ಬಳಿಕ ದೇವೇಗೌಡ, ಎಚ್ಡಿಕೆ ಭೇಟಿ: ಯಡಿಯೂರಪ್ಪ
ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಪಕ್ಷದ ಹಾಲಿ ಸಂಸದರ ಕ್ಷೇತ್ರದ ಪ್ರಶ್ನೆ ಉದ್ಭವವಾಗುವುದಿಲ್ಲ. ನಮ್ಮ ಸಂಸದರ ಕ್ಷೇತ್ರವನ್ನು ಕೇಳುವ ಪ್ರಯತ್ನ ದೇವೇಗೌಡ ಅವರು ಮಾಡುವುದಿಲ್ಲ ಎಂದು ಭಾವಿಸುತ್ತೇನೆ. ಮೈತ್ರಿ ಕುರಿತು ಸಂಪೂರ್ಣವಾಗಿ ಮಾತುಕತೆ ಮುಗಿದ ನಂತರ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಎಲ್ಲರೂ ಸೇರಿ ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸುತ್ತೇವೆ ಎಂದ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು(ಸೆ.09): ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಂಬಂಧ ಪಕ್ಷದ ವರಿಷ್ಠರು ಕೈಗೊಂಡಿರುವ ತೀರ್ಮಾನವನ್ನು ಸ್ವಾಗತಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಒಪ್ಪಂದ ಸಂಬಂಧ ಮಾತುಕತೆಗಳು ಮುಗಿದ ಬಳಿಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಪಕ್ಷದ ಹಾಲಿ ಸಂಸದರ ಕ್ಷೇತ್ರದ ಪ್ರಶ್ನೆ ಉದ್ಭವವಾಗುವುದಿಲ್ಲ. ನಮ್ಮ ಸಂಸದರ ಕ್ಷೇತ್ರವನ್ನು ಕೇಳುವ ಪ್ರಯತ್ನ ದೇವೇಗೌಡ ಅವರು ಮಾಡುವುದಿಲ್ಲ ಎಂದು ಭಾವಿಸುತ್ತೇನೆ. ಮೈತ್ರಿ ಕುರಿತು ಸಂಪೂರ್ಣವಾಗಿ ಮಾತುಕತೆ ಮುಗಿದ ನಂತರ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಎಲ್ಲರೂ ಸೇರಿ ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.
ಇನ್ನು ನಾನು ಮನೆಯಲ್ಲಿ ಕೂರಲ್ಲ, 3-4 ದಿನಗಳಲ್ಲಿ ರಾಜ್ಯ ಪ್ರವಾಸ: ಬಿಎಸ್‌ವೈ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದೆಹಲಿಯಲ್ಲಿ ಪಕ್ಷದ ವರಿಷ್ಠರು ಕೈಗೊಂಡಿರುವ ತೀರ್ಮಾನಕ್ಕೆ ನಾವುಗಳು ಬದ್ಧವಾಗಿರಬೇಕು. ರಾಜಕೀಯದಲ್ಲಿ ಇಂತಹ ಹೊಂದಾಣಿಕೆಗಳು ಆಗಾಗ ಆಗುತ್ತಿರುತ್ತವೆ. ಇದು ರಾಜಕಾರಣದಲ್ಲಿ ಅನಿವಾರ್ಯ. ಒಪ್ಪಂದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈಗೊಂಡಿರುವ ತೀರ್ಮಾನವನ್ನು ಸ್ವಾಗತಿಸುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟವೇ ಎಲ್ಲಾ ಸ್ಥಾನಗಳನ್ನು ಗೆಲ್ಲಲಿದೆ. ಜೆಡಿಎಸ್‌ಗೆ ಬಿಟ್ಟುಕೊಡುವ ನಾಲ್ಕು ಕ್ಷೇತ್ರಗಳ ಹೆಸರು ಈಗಾಗಲೇ ಮಾಧ್ಯಮಗಳಲ್ಲಿ ಬಂದಿದ್ದು, ಈ ಬಗ್ಗೆ ಯಾವುದೇ ತಕರಾರು ಇಲ್ಲ ಎಂದರು.
ಈ ನಡುವೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ.ಸದಾನಂದಗೌಡ ಮಾತನಾಡಿ, ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಸಂಬಂಧ ದೆಹಲಿಯಲ್ಲಿ ನಡೆದ ಮಾತುಕತೆ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಆದರೆ, ವರಿಷ್ಠರು ಕೈಗೊಂಡ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ. ಕಾಂಗ್ರೆಸ್‌ನ ದುರಾಡಳಿತ, ಭ್ರಷ್ಟಾಚಾರ, ಸರ್ಕಾರದ ವಿರೋಧಿ ನೀತಿಗಳನ್ನು ಮಟ್ಟಹಾಕಲು ಪ್ರತಿಪಕ್ಷದಲ್ಲಿರುವ ಸಮಾನ ಮನಸ್ಕರು ಒಂದಾಗಬೇಕಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾದರೆ ಕಾಂಗ್ರೆಸ್ ಈ ಬಾರಿ ಸೊನ್ನೆ ಸ್ಥಾನಗಳನ್ನು ದಾಖಲಿಸಲಿದೆ ಎಂದು ತಿಳಿಸಿದರು.