ರಾಜ್ಯದ ಪ್ರತಿ ಕುಟುಂಬಕ್ಕೆ ಮುಂದಿನ 5 ವರ್ಷದಲ್ಲಿ ಸಂಪೂರ್ಣ ನೆಮ್ಮದಿಯ ಬದುಕಿಗೆ ಪಂಚರತ್ನ ಯೋಜನೆ ಜಾರಿಗೆ ತರಲು ಜೆಡಿಎಸ್‌ ಪಕ್ಷಕ್ಕೆ ಪೂರ್ಣ ಬಹುಮತ ಅವಶ್ಯಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. 

ಹುಮನಾಬಾದ್‌ (ಜ.10): ರಾಜ್ಯದ ಪ್ರತಿ ಕುಟುಂಬಕ್ಕೆ ಮುಂದಿನ 5 ವರ್ಷದಲ್ಲಿ ಸಂಪೂರ್ಣ ನೆಮ್ಮದಿಯ ಬದುಕಿಗೆ ಪಂಚರತ್ನ ಯೋಜನೆ ಜಾರಿಗೆ ತರಲು ಜೆಡಿಎಸ್‌ ಪಕ್ಷಕ್ಕೆ ಪೂರ್ಣ ಬಹುಮತ ಅವಶ್ಯಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಪಟ್ಟಣದ ತೇರು ಮೈದಾನದಲ್ಲಿ ಪಂಚರತ್ನ ರಥಯಾತ್ರೆಯ ಬಹಿರಂಗ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆ ಎಂದು ಹೇಳಿದ್ದರು. ಆದರೆ, ಅವರು ತರಲಿಲ್ಲ. ನಾನು ಅವರಂತೆ ಸುಳ್ಳು ಮಾತುಗಳನ್ನು ಹೇಳುವದಿಲ್ಲ. ನೀವೆಲ್ಲ ನನ್ನ ಮೇಲೆ ನಂಬಿಕೆ ಇಟ್ಟು ನಮ್ಮನ್ನು ಒಂದು ಬಾರಿ 5 ವರ್ಷಗಳ ಕಾಲ ಅಧಿಕಾರದಲ್ಲಿರುವಂತೆ ಮಾಡಿ.

ಒಂದು ವೇಳೆ ಐದು ವರ್ಷಗಳಲ್ಲಿ ನಾವು ಹೇಳಿದ ಕೆಲಸ ಮಾಡದಿದ್ದರೆ 2028ರ ಒಳಗಾಗಿ ನಮ್ಮ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದರು. ಬಿಜೆಪಿ ಮತ್ತು ಕಾಂಗ್ರೆಸ್‌ ರೈತರಿಗೆ ಮಾರಕವಾಗಿವೆ. ಹೀಗಾಗಿ ಜನರು ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ. ಪ್ರಾದೇಶಿಕ ಪಕ್ಷ ಜೆಡಿಎಸ್‌ ಜನರ ಪ್ರೀತಿ ವಿಶ್ವಾಸದೊಂದಿಗೆ ರಾಜ್ಯದ ಜನತೆಯ ನೋವಿಗೆ ಸ್ಪಂದಿಸುವ ಪಕ್ಷವಾಗಿದೆ. 2023ರ ಚುನಾವಣೆಯಲ್ಲಿ ಹುಮಾನಾಬಾದ್‌ ವಿಧಾನ ಸಭಾ ಕ್ಷೇತ್ರದಿಂದ ಅಭ್ಯರ್ಥಿ ಸಿಎಂ ಫೈಯಾಜ್‌ ಅವರನ್ನು ಆಶೀರ್ವದಿಸುವಂತೆ ಮನವರಿಕೆ ಮಾಡಿಕೊಂಡರು.

ಸಮ್ಮಿಶ್ರ ಸರ್ಕಾರ ಉರುಳಿಸಿದವರ ತನಿಖೆಗೆ ಎಚ್‌.ಡಿ.ಕುಮಾರಸ್ವಾಮಿ ಆಗ್ರಹ

ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪೂರ ಮಾತನಾಡಿ, ರಾಷ್ಟ್ರೀಯ ಪಕ್ಷಗಳ ಬದಲು ಪ್ರಾದೇಶಿಕ ಪಕ್ಷಕ್ಕೆ ಶಕ್ತಿ ತುಂಬಲು ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ. ಆದ್ದರಿಂದಲೇ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆ ಹೋದ ಕಡೆಯೆಲ್ಲ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು. ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಜೆಡಿಎಸ್‌ ಜಿಲ್ಲಾಧ್ಯಕ್ಷರಾದ ರಮೇಶ್‌ ಪಾಟೀಲ್‌ ಸೋಲಪೂರ್‌, ಹುಮನಾಬಾದ್‌ ಮತಕ್ಷೇತ್ರದ ಅಭ್ಯರ್ಥಿ ಸಿಎಂ ಫೈಜ್‌, ವಿಧಾನ ಪರಿಷತ್‌ ಸದಸ್ಯರು, ಮಾಜಿ ಸದ್ಯರಾದ ತಿಪ್ಪೇಸ್ವಾಮಿ, ಬೋಜೇಗೌಡ, ರಮೇಶ್‌ ಗೌಡ, ತಾಲೂಕು ಅಧ್ಯಕ್ಷ ಗೌತಮ್‌ ಸಾಗರ್‌, ಮುಖಂಡರಾದ ಸುರೇಶ್‌ ಸೀಗಿ, ಮಹೇಶ್‌ ಅಗಡಿ, ಉಬೇದುಲ್ಲಾ ಖಾನ್‌ ಅಜ್ಮಿ, ರೇಖಾ, ತನುಜಾ ಧುಮಾಳೆ, ಚೇತನ್‌ ಗೋಖಲೆ, ಶಿವಪುತ್ರ ಮಾಳಗೆ, ಅಬ್ದುಲ್‌ ಗೋರೆಮಿಯ್ಯಾ ಸೇರಿದಂತೆ ಅನೇಕರಿದ್ದಾರೆ.

ಶಾಸಕ ಪಾಟೀಲ್‌ ನನ್ನ ಮಗನಿಗಾಗಿ ಕ್ಷೇತ್ರ ತ್ಯಜಿಸಲಿ: ನನ್ನ ಉಪಕಾರ ಸ್ಮರಿಸಿ ಕಾಂಗ್ರೆಸ್‌ ಶಾಸಕ ರಾಜಶೇಖರ ಪಾಟೀಲ್‌ ಈ ಬಾರಿ ಚುನಾವಣೆಗೆ ಸ್ಪರ್ಧಿಸದೇ ನನ್ನ ಮಗನಿಗೆ ಬಿಟ್ಟುಕೊಡುವದಾಗಿ ಹೇಳಿದರೆ ನಿಜವಾದ ಶರಣನಾಗುತ್ತಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು. ಪಟ್ಟಣದ ತೇರ ಮೈದಾನದಲ್ಲಿ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಣ್ಣಾ ನನ್ನ ಅಪ್ಪನ ಮೇಲೆ ನಿನ್ನ ಉಪಕಾರ ಅದಾ, ನಿನ್ನ ಮಗ ನಿಂತಿದ್ದಾನೆ, ನಾನ್ನ ನಿಲ್ಲಂಗಿಲ್ಲ. ನಿನ್ನ ಮಗನಿಗೆ ಆಶೀರ್ವಾದ ಮಾಡತ್ತೀನಿ ಅಂದರೆ ಅದು ನಿಜವಾದ ಶರಣಾರ್ಥ ಎಂದು ನಾನು ಒಪ್ಪುತ್ತೇನೆ ಎಂದು ಹೇಳಿದರು.

ಮೊದಲ ಬಾರಿ ದಿ. ಬಸವರಾಜ ಪಾಟೀಲ್‌ ಅಭ್ಯರ್ಥಿ ಆಗಿ ಚುನಾವಣೆಗೆ ಧುಮುಕಿದ್ದ ಸಂದರ್ಭದಲ್ಲಿ ಮತ್ತು ಎರಡನೇ ಚುನಾವಣೆ ರಾಜಶೇಖರ ಪಾಟೀಲ್‌ ಪರ, ಮೂರನೇ ಬಾರಿ ದಿ. ಮಿರಾಜೋದ್ದಿನ್‌ ಪಟೇಲ್‌ ಅವರ ಚುನಾವಣೆಯಲ್ಲಿ ಪಟ್ಟಣಕ್ಕೆ ಆಗಮಿಸಿದ್ದೆ. ಇದೀಗ ಮಗನ ಚುನಾವಣೆಯ ಪ್ರಚಾರಕ್ಕೆ ಬಂದಿದ್ದೇನೆ ಎಂದರು. ನಾನು 700 ಕಿ.ಮೀ. ದೂರದಿಂದ ಬಂದಿದ್ದೇನೆ ಎಂದು ಲೇವಡಿ ಮಾಡುವವರು ಅರಿತುಕೊಳ್ಳಲಿ. ಇನ್ನೂ ರಾಜಶೇಖರ ಹುಟ್ಟಿರಲಿಲ್ಲ, ಅಂದಿನಿಂದ ನಾನು ಹುಮನಾಬಾದ್‌ಗೆ ಬರುತ್ತಿದ್ದೇನೆ. ಈಗ ನನ್ನ ಮಗ ಅಭ್ಯರ್ಥಿಯಾಗಿರುವುದು ಕುಮಾರಸ್ವಾಮಿ ಅವರ ಕೊಡುಗೆ ಎಂದು ಹೇಳಿದರು.

ನಾಯಿ, ನರಿ ಅನ್ನೋರಿಗೆ ಜನರ ಚಿಂತೆಯಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ನನ್ನ ಮಗ ಜನರಿಗೆ ಉತ್ತಮ ಸೇವೆ ಮಾಡುವ ಸಂಕಲ್ಪದೊಂದಿಗೆ ಈ ಕ್ಷೇತ್ರ ಆಯ್ಕೆ ಮಾಡಿದ್ದಾನೆ. ಬೇಕಾದರೆ ವಿಧಾನ ಪರಿಷತ್‌ ಸದಸ್ಯನನ್ನಾಗಿ ನೇರವಾಗಿ ಮಾಡಬಹುದಾಗಿತ್ತು. ಆದರೆ 700 ಕಿ.ಮೀ ದೂರದಿಂದ ಈ ಕ್ಷೇತ್ರದ ಜನರ ಸೇವೆಗಾಗಿ ಬಂದಿದ್ದಾನೆ. ಮತ್ತೊಮ್ಮೆ ದಿ. ಮಿರಾಜೋದ್ದಿನ್‌ ಪಟೇಲ್‌ ಅವರ ಹೆಸರು ಎಲ್ಲರ ಮನಸ್ಸಿನಲ್ಲಿ ಇರಲು ಈ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುವ ಉದ್ದೇಶ ಹೊಂದಿದ್ದಾನೆ ಎಂದರು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ದಿನಕ್ಕೊಬ್ಬ ಬ್ರೋಕರ್‌ ಸಿಗುತ್ತಿದ್ದಾರೆ. 12 ಜನ ಮಂತ್ರಿಗಳು ನ್ಯಾಯಾಲಯದ ತಡೆಯಾಜ್ಞೆ ತಂದು ಮಂತ್ರಿಗಳಾಗಿ ಸೇವೆ ಮಾಡುತ್ತಿದ್ದಾರೆ. ಬಸವಣ್ಣನ ನಾಡಿನಲ್ಲಿ ಈ ಪಾಪಿಗಳು ಮಂತ್ರಿಯಾಗಿ ಕುಳಿತುಕೊಂಡಿರುವುದಕ್ಕೆ ಜನರು, ಈ ದೇಶ ಒಪ್ಪುತ್ತಾ ಎಂದು ಪ್ರಶ್ನಿಸಿದರು.