Asianet Suvarna News Asianet Suvarna News

ಸಮ್ಮಿಶ್ರ ಸರ್ಕಾರ ಉರುಳಿಸಿದವರ ತನಿಖೆಗೆ ಎಚ್‌.ಡಿ.ಕುಮಾರಸ್ವಾಮಿ ಆಗ್ರಹ

ತಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಯಾರನ್ನೆಲ್ಲಾ ಬಳಕೆ ಮಾಡಿಕೊಳ್ಳಲಾಯಿತು? ಮುಂಬೈಗೆ ಹೋದವರ ಮೋಜು ಮಸ್ತಿಗೆ ಸಕಲ ವ್ಯವಸ್ಥೆ ಮಾಡಿದವರು ಯಾರು ಎಂಬುದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. 

HD Kumaraswamy demands investigation of those who brought down the coalition government gvd
Author
First Published Jan 5, 2023, 7:05 AM IST

ಬೆಂಗಳೂರು (ಜ.05): ತಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಯಾರನ್ನೆಲ್ಲಾ ಬಳಕೆ ಮಾಡಿಕೊಳ್ಳಲಾಯಿತು? ಮುಂಬೈಗೆ ಹೋದವರ ಮೋಜು ಮಸ್ತಿಗೆ ಸಕಲ ವ್ಯವಸ್ಥೆ ಮಾಡಿದವರು ಯಾರು ಎಂಬುದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಬುಧವಾರ ಪಕ್ಷದ ಕಚೇರಿಯಲ್ಲಿ ಸ್ಯಾಂಟ್ರೋ ರವಿ ಎಂಬಾತನ ಜತೆ ಬಿಜೆಪಿ ಸಚಿವರ ಸಂಪರ್ಕ ಇರುವ ಫೋಟೋಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೈಸೂರು ಪೊಲೀಸರು ಎಫ್‌ಐಆರ್‌ ದಾಖಲು ಮಾಡಿರುವ ಸ್ಯಾಂಟ್ರೋ ರವಿ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಕೆಲ ಪ್ರಭಾವಿ ಸಚಿವರ ನಡುವೆ ಇರುವ ಸಂಬಂಧ ಏನು? 

ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಮ್ಮು, ತಾಕತ್ತು ಬಗ್ಗೆ ಮಾತನಾಡುತ್ತಾರೆ. ಇಲ್ಲಿ ಅವರು ದಮ್ಮು, ತಾಕತ್ತು ತೋರಿಸಲಿ ಎಂದು ಒತ್ತಾಯಿಸಿದರು. ನನ್ನ ನೇತೃತ್ವದ ಮೈತ್ರಿ ಸರ್ಕಾರ ತೆಗೆಯಲು ಕೆಲವರನ್ನು ಮುಂಬೈಗೆ ಕರೆದುಕೊಂಡ ಹೋದ ವ್ಯಕ್ತಿ ಯಾರು ಎಂಬುದನ್ನು ಬಹಿರಂಗ ಪಡಿಸಬೇಕು. ಸಮ್ಮಿಶ್ರ ಸರ್ಕಾರವನ್ನು ತೆಗೆಯಲು ಎಲ್ಲಾ ರೀತಿಯ ವಾಮಮಾರ್ಗಗಳನ್ನು ಅನುಸರಿಸಲಾಯಿತು. ಸಾಂಟ್ರೋ ರವಿ ಎನ್ನುವ ವ್ಯಕ್ತಿ ಯಾರು? ಸರ್ಕಾರದಲ್ಲಿ ಯಾರೊಂದಿಗೆ ಈತನ ಸಂಪರ್ಕ ಇದೆ. ಈತನ ಬಗ್ಗೆ ಮಾಹಿತಿಯನ್ನು ರಹಸ್ಯವಾಗಿಡಲು ಕಾರಣವೇನು? 

ದೇವೇಗೌಡರ ಉಗುರಿಗೂ ಅಮಿತ್‌ ಶಾ ಸಮ ಅಲ್ಲ: ಎಚ್‌.ಡಿ.ಕುಮಾರಸ್ವಾಮಿ

ಎಲ್ಲರ ಬಗ್ಗೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಬೇಕು. ಸದಾ ದಮ್ಮು, ತಾಕತ್ತು ಬಗ್ಗೆ ಮಾತನಾಡುವ ಅವರು, ಸ್ಯಾಂಟ್ರೋ ರವಿ ಮತ್ತು ತಮ್ಮ ಸಂಪುಟದ ಸಚಿವರ ನಡುವೆ ಇರುವ ಸಂಬಂಧದ ಬಗ್ಗೆ ತನಿಖೆಗೆ ಆದೇಶ ನೀಡಲಿ ಎಂದು ಸವಾಲು ಹಾಕಿದರು. ಈ ವ್ಯಕ್ತಿ ಮೇಲೆ ಎಷ್ಟುಪ್ರಕರಣಗಳಿವೆ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕು. ನನಗಿರುವ ಮಾಹಿತಿ ಪ್ರಕಾರ ಸ್ಯಾಂಟ್ರೋ ರವಿಗೆ ಐದು ಹೆಸರುಗಳಿವೆ. 1995ರಿಂದಲೂ ಈತನ ಮೇಲೆ ಪ್ರಕರಣಗಳಿವೆ. ಕಳೆದ ತಿಂಗಳವರಗೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಇವನಿಗೆ ಕೊಠಡಿ ಕೊಟ್ಟವರು ಯಾರು? 

ಅಧಿಕಾರ ಹಸ್ತಾಂತರ ವಿಚಾರದಲ್ಲಿ ನನ್ನದೇನು ತಪ್ಪಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಕೊಠಡಿ ಕೊಡುವಂತೆ ಯಾರು ಶಿಫಾರಸ್ಸು ಮಾಡಿದ್ದರು? ಇದೆಲ್ಲವನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ರಾಜ್ಯದ ಜನತೆಗೆ ತಿಳಿಸಬೇಕು. ಕುಮಾರಕೃಪಾದಲ್ಲಿ ಕುಳಿತು ಭಾರಿ ವ್ಯವಹಾರ ನಡೆಸಿದ್ದಾನೆ. ಇವನ ಹಿಂದೆ ಅಡಗಿ ಕೂತಿರುವ ಅಸಲಿ ವ್ಯಕ್ತಿ ಯಾರು? ಪೊಲೀಸ್‌ ಅಧಿಕಾರಿಗೆ ಇವನು ಮೊಬೈಲ್‌ ಕರೆ ಮಾಡಿ, ನಾಳೆ ಬಂದು ನೋಡು ಎನ್ನುತ್ತಾನೆ. ತನ್ನನ್ನು ಸರ್‌ ಎಂದು ಕರೆಯುವಂತೆ ತಾಕೀತು ಮಾಡುತ್ತಾರೆ. ಇದೆಲ್ಲಾ ದಾಖಲೆ ಇದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕ ರಾಜಾ ವೆಂಕಟಪ್ಪ ನಾಯಕ ಉಪಸ್ಥಿತರಿದ್ದರು.

Follow Us:
Download App:
  • android
  • ios