Asianet Suvarna News Asianet Suvarna News

ನಾಯಿ, ನರಿ ಅನ್ನೋರಿಗೆ ಜನರ ಚಿಂತೆಯಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ನಾಯಿ, ನರಿ ಎಂದೆಲ್ಲ ಹೀಯಾಳಿಸಿಕೊಳ್ಳುವ ಕಾಂಗ್ರೆಸ್‌, ಬಿಜೆಪಿಗೆ ಜನರ ಬದುಕು ಬವಣೆ ಬಗ್ಗೆ ಚಿಂತೆಯಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದರು. 

Former CM HD Kumaraswamy Slams On BJP Govt At Bidar gvd
Author
First Published Jan 7, 2023, 10:59 AM IST

ಬೀದರ್‌ (ಜ.07): ನಾಯಿ, ನರಿ ಎಂದೆಲ್ಲ ಹೀಯಾಳಿಸಿಕೊಳ್ಳುವ ಕಾಂಗ್ರೆಸ್‌, ಬಿಜೆಪಿಗೆ ಜನರ ಬದುಕು ಬವಣೆ ಬಗ್ಗೆ ಚಿಂತೆಯಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದರು. ಪಂಚರತ್ನ ರಥಯಾತ್ರೆಯ ಸಂದರ್ಭದಲ್ಲಿ ಭೇಟಿಯಾದ ಸುದ್ದಿಗಾರರಿಗೆ ಮಾತನಾಡಿದ ಅವರು, ನಾಯಿ ನರಿಗಳ ಹೆಸರಿನಲ್ಲಿ ಎರಡೂ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ. ನಾವು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಬದುಕಿನ ಬಗ್ಗೆ ಯಾರು ಚರ್ಚೆ ಮಾಡಲು ತಯಾರಿಲ್ಲ. ಬಡವರ ಸಮಸ್ಯೆ ಪರಿಹರಿಸುವ ಬಗ್ಗೆ ಯಾರು ತಲೆ ಕಡೆಸಿಕೊಳ್ಳುತ್ತಿಲ್ಲ ಎಂದರು.

ರಾಜ್ಯದಲ್ಲಿ ರೈತರು ಹಲವಾರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅವರ ನೆರವಿಗೆ ಧಾವಿಸುವ ಯೋಚನೆಯೂ ಇಲ್ಲ. ಈ ಬಾರಿ ರೈತ ಸಮುದಾಯದಲ್ಲಿ ಬಿಜೆಪಿಯ ವಿರೋಧಿ ಅಲೆಯು ಆರಂಭವಾಗಿದೆ. ಎಲ್ಲಾ ಭಾಗದಲ್ಲೂ ಜೆಡಿಎಸ್‌ಗೆ ಬೆಂಬಲಿಸಬೇಕು ಎಂಬ ವಾತವರಣ ರೈತರಲ್ಲಿದೆ ಎಂದು ಹೇಳಿದರು. ಅಮಿತ್‌ ಶಾ ಗೂ ಕರ್ನಾಟಕಕ್ಕೂ ಏನು ಸಂಬಂಧ?, ನನಗೆ ಅಮಿತ್‌ ಶಾ ಆತಂಕವಿಲ್ಲ. ಅಷ್ಟೆಅಲ್ಲ ಯಾವುದೇ ಪಕ್ಷದ, ಯಾವುದೇ ವ್ಯಕ್ತಿಯ ಆತಂಕವೂ ನನಗೆ ಇಲ್ಲ. ನಮಗೆ ರೈತರ ಬಗ್ಗೆ ಕಾಳಜಿ, ಕಳಕಳಿ ಇದೆ. ಜನರೊಟ್ಟಿಗೆ ನಾವಿದ್ದೇವೆ. ಜನರಿಗಾಗಿ ನಾವು ಹೋರಾಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್‌ ಸೋಲಪೂರ್‌ ಇದ್ದರು.

ಸಮ್ಮಿಶ್ರ ಸರ್ಕಾರ ಉರುಳಿಸಿದವರ ತನಿಖೆಗೆ ಎಚ್‌.ಡಿ.ಕುಮಾರಸ್ವಾಮಿ ಆಗ್ರಹ

ಬೃಹತ್‌ ಜನಬೆಂಬಲದೊಂದಿಗೆ ಪಂಚರತ್ನಕ್ಕೆ ಸ್ವಾಗತ: ಮಾಜಿ ಮುಖ್ಯಮಂತ್ರಿಗಳು, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರಾದ ಎಚ್‌ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವರು, ಜೆಡಿಎಸ್‌ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್‌ ಕೋರ್‌ ಕಮಿಟಿಯ ಅಧ್ಯಕ್ಷರು, ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್‌ ರವರ ಸಮ್ಮುಖದಲ್ಲಿ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆಗೆ ಬೃಹತ್‌ ಜನ ಬೆಂಬಲ ವ್ಯಕ್ತವಾಗಿದೆ. ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಮಲಾಪೂರ ಗ್ರಾಮದಿಂದ ಶುಕ್ರವಾರ ಬೆಳಗ್ಗೆ ಆರಂಭವಾದ ರಥಯಾತ್ರೆಯನ್ನು ಕ್ಷೇತ್ರದ ಜನತೆ ವಿಶಿಷ್ಟಹಾರಗಳು, ವಿವಿಧ ಕಲಾ ತಂಡಗಳೊಂದಿಗೆ ಸ್ವಾಗತಿಸಿಕೊಂಡರು. ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಸಾವಿರಾರು ಜನರು ಮಾಜಿ ಸಚಿವ ಕುಮಾರ ಸ್ವಾಮಿಯವರನ್ನು ಬರಮಾಡಿಕೊಂಡರು.

ಯಾತ್ರೆ ನಡೆದು ಬಂದ ದಾರಿ: ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಮಲಾಪೂರ ಗ್ರಾಮದಿಂದ ಆರಂಭವಾದ ದಕ್ಷಿಣ ಕ್ಷೇತ್ರದ ಪಂಚರತ್ನ ರಥಯಾತ್ರೆಯನ್ನು ಗ್ರಾಮಸ್ಥರು ಎತ್ತಿನ ಬಂಡಿಯೊಂದಿಗೆ ಸ್ವಾಗತಿಸಿ, ಬೈಕ್‌ ರ್ಯಾಲಿ ನಡೆಸಿ ವಿವಿಧ ಹೂವಿನ ಹಾರಗಳನ್ನು ಹಾಕಿದರು. ಕುಮಾರಸ್ವಾಮಿ ಮತ್ತು ಖಾಶೆಂಪೂರ್‌ ಎತ್ತಿನ ಗಾಡಿಯಲ್ಲಿಯೇ ಸಾಗಿದರು. ಈ ವೇಳೆ ಗ್ರಾಮಸ್ಥರು ಮೊಸಂಬಿ (ಕಿತ್ತಳೆ) ಹಣ್ಣಿನ ವಿಶೇಷ ಹಾರ ಹಾಕಿ ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿರವರು, ಬಡವರ, ರೈತರ, ಗ್ರಾಮೀಣ ಜನರ ಒಳಿತಿಗಾಗಿ ಅನೇಕ ಯೋಜನೆಗಳನ್ನು, ರೈತರಿಗಾಗಿ ಮತ್ತು ಗ್ರಾಮೀಣ ಭಾಗದ ಜನರಿಗೆ ಶಾಶ್ವತ ಕಾರ್ಯಕ್ರಮಗಳನ್ನು ತರುವ ಉದ್ದೇಶದಿಂದ ಈ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಸ್ತ್ರೀ ಶಕ್ತಿ ಸ್ವಸಾಹಯ ಗುಂಪುಗಳ ಸಾಲವನ್ನು ನಾವು ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ ಮನ್ನಾ ಮಾಡುತ್ತೇವೆ. ಬೀದಿಬದಿಯ ವ್ಯಾಪಾರಿಗಳಿಗೆ ಸರ್ಕಾರದಿಂದ ಬಡ್ಡಿ ರಹಿತ ನೆರವು ನೀಡುತ್ತೇವೆಂದರು.

ಬಂಡೆಪ್ಪ ಖಾಶೆಂಪುರ್‌ ಬಗ್ಗೆ ನಾನು ಜಾಸ್ತಿ ಹೇಳ್ಬೇಕಿಲ್ಲ, ಚಿರಪರಿಚಿತರು: ಬಂಡೆಪ್ಪ ಖಾಶೆಂಪುರ್‌ ಅವರು ಈಗಾಗಲೇ ಎರಡು ಬಾರಿ ಸಚಿವರಾಗಿ ಅನೇಕ ಜನ ಪರ ಕೆಲಸಗಳನ್ನು ಮಾಡಿದ್ದಾರೆ. ಅವರು ನಿಮ್ಮೆಲ್ಲರಿಗೆ ಆತ್ಮೀಯರಾಗಿದ್ದಾರೆ. ಅವರಿಗೆ ನಿಮ್ಮ ಮತ ನೀಡಿ ಎಂದು ಎಚ್‌ಡಿಕೆ ಮನವಿ ಮಾಡಿದರು.

ನಾಗೋರಾ ಗ್ರಾಮಕ್ಕೆ ಆಗಮಿಸಿದ ಪಂಚರತ್ನ ರಥಯಾತ್ರೆ: ಅಮಲಾಪೂರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದ ಗ್ರಾಮಸ್ಥರು ಬಳಿಕ ನಾಗೋರಾ ಕಡೆಗೆ ಪಂಚರತ್ನ ರಥಯಾತ್ರೆಯ ರಥವನ್ನು ಕಳಿಸಿಕೊಟ್ಟರು. ಅಮಲಾಪೂರ - ನಾಗೋರಾದವರೆಗೂ ಭರ್ಜರಿಯಾಗಿ ಸಾಗಿದ ರ್ಯಾಲಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ಪುದಿನ ಹಾರದೊಂದಿಗೆ ನಾಗೋರಾಕ್ಕೆ ಅದ್ಧೂರಿ ಸ್ವಾಗತ: ಪಂಚರತ್ನ ರಥಯಾತ್ರೆಯ ರಥವನ್ನ ನಾಗೋರಾ ಗ್ರಾಮಸ್ಥರು ಪುದೀನಾ ಹಾರ ಹಾಕಿ ಸ್ವಾಗತಿಸಿಕೊಂಡರೆ ಮನ್ನಳಿಯಲ್ಲಿ ಕಂಬಳಿ ಹಾರದೊಂದಿಗೆ ಸ್ವಾಗತಿಸಿದರು.

ದೇವೇಗೌಡರ ಉಗುರಿಗೂ ಅಮಿತ್‌ ಶಾ ಸಮ ಅಲ್ಲ: ಎಚ್‌.ಡಿ.ಕುಮಾರಸ್ವಾಮಿ

ಐದು ತಿಂಗಳ ಬಳಿಕ 24 ತಾಸು ಕರೆಂಟ್‌: ಐದು ತಿಂಗಳು ತಡೆಯಿರಿ, ಕುಮಾರಣ್ಣ ಮುಖ್ಯಮಂತ್ರಿಯಾದ ನಂತರ ದಿನದ 24 ತಾಸು ರೈತರಿಗೆ ವಿದ್ಯುತ್‌ ಪೂರಕೆ ಮಾಡಲಾಗುತ್ತದೆ. ಎಲ್ಲಾ ರೀತಿಯಿಂದಲ್ಲೂ ಜನಪರ ಯೋಜನೆಗಳನ್ನು ಅವರು ಅಧಿಕಾರಕ್ಕೆ ಬಂದ ನಂತರ ಜಾರಿಗೆ ತರುತ್ತೇವೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್‌ ರವರು ತಿಳಿಸಿದರು. ಬಳಿಕ ಪಂಚರತ್ನ ರಥಯಾತ್ರೆ ಬಂಗೂರು, ಬೇಮಳಖೇಡ, ಉಡಮನಳ್ಳಿ, ಕರಕನಳ್ಳಿ, ಚಾಂಗಲೇರಾ ಸೇರಿದಂತೆ ವಿವಿಧ ಗ್ರಾಮಗಳಿಗೆ ತಲುಪಿತು. ಇದೇ ವೇಳೆ ಕರಕನಳ್ಳಿಯ ಗಂಗಾಧರ ಬುಕ್ಕ ಪ್ರಭು ದೇವಸ್ಥಾನ, ಚಾಂಗಲೇರಾದ ವೀರಭದ್ರೇಶ್ವರ ದೇವಸ್ಥಾನಗಳಿಗೆ ರಥಯಾತ್ರೆ ಸಾಗಿತು. ಜೆಡಿಎಸ್‌ ಜಿಲ್ಲಾಧ್ಯಕ್ಷ, ಬೀದರ್‌ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಮೇಶ ಪಾಟೀಲ್‌ ಸೋಲಪೂರ್‌ ರವರು ಸೇರಿದಂತೆ ಅನೇಕರಿದ್ದರು.

Follow Us:
Download App:
  • android
  • ios