Asianet Suvarna News Asianet Suvarna News

ನಾನು ತುಟಿಗೆ ತುಪ್ಪ ಸವರುವವರನ್ನು ನೋಡಿದ್ದೆ. ಹಣೆಗೆ ತುಪ್ಪ ಸವರುವವರನ್ನು ನೋಡಿರಲಿಲ್ಲ: ಎಚ್‌ಡಿಕೆ

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯದ ಜನತೆಗೆ ಇದರ ಒಳಮರ್ಮ ಅರ್ಥವಾಗಲು ಬಹಳ ದಿನ ಬೇಕಿಲ್ಲ ಎಂದು ಹೇಳಿದ್ದಾರೆ. 

Former CM HD Kumaraswamy Slams On Congress Over Guarantee Schemes gvd
Author
First Published Jun 3, 2023, 3:40 AM IST

ಬೆಂಗಳೂರು (ಜೂ.03): ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯದ ಜನತೆಗೆ ಇದರ ಒಳಮರ್ಮ ಅರ್ಥವಾಗಲು ಬಹಳ ದಿನ ಬೇಕಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಅವರು, ಷರತ್ತು ಸಹಿತವಾಗಿ ಘೋಷಣೆ ಮಾಡಲಾಗಿರುವ ಐದು ಗ್ಯಾರಂಟಿಗಳ ಬಗ್ಗೆ ಈಗಾಗಲೇ ಜನರಿಗೆ ಒಂದು ನಿರ್ದಿಷ್ಟಅಭಿಪ್ರಾಯ ಬಂದಿದೆ. 

ಹರುಷದ ಕೂಳಿಗೆ ಆಸೆಪಟ್ಟು ವರುಷದ ಕೂಳು ಕಳೆದುಕೊಂಡರು ಎನ್ನುವ ಮಾತನ್ನು ಹೇಳಲಾರೆ. ಆದರೆ, ರಾಜ್ಯದ ಜನತೆಗೆ ಇದರ ಒಳಮರ್ಮ ಅರ್ಥವಾಗಲು ಬಹಳ ದಿನ ಬೇಕಿಲ್ಲ ಎಂದಿದ್ದಾರೆ. ಗ್ಯಾರಂಟಿಗಳ ಬಗ್ಗೆ ಚರ್ಚೆ ಅಥವಾ ವಿಮರ್ಶೆಗೆ ನನಗೆ ಆತುರವಿಲ್ಲ. ನನಗೆ ತಾಳ್ಮೆ ಇದೆ. ಆದರೆ, ಮತ ಗಳಿಕೆಗೆ ಮುನ್ನ ಕೊಟ್ಟ ಭರವಸೆಗಳು ಅಧಿಕಾರಕ್ಕೆ ಬಂದ ಮೇಲೆ ‘ಷರತ್ತು ಸಹಿತ’ ಎಂದಾಗಿದ್ದರ ಬಗ್ಗೆ ನನಗೆ ನೋವಿದೆ. 

ಕಾಂಗ್ರೆಸ್‌ ಉಚಿತ ಯೋಜನೆಗಳ ಆಶ್ವಾಸನೆ ನೀಡಿರುವ ಪರಿಣಾಮ ಬಿಜೆಪಿಗೆ ಸೋಲು: ಕೋಟ ಶ್ರೀನಿವಾಸ ಪೂಜಾರಿ

ಜನರ ಸಹನೆ ಎನ್ನುವುದು ಖಂಡಿತಾ ಕಟ್ಟೆಯೊಡೆಯುತ್ತದೆ. ನಾನು ಕಾಯುತ್ತೇನೆ ಮತ್ತು ಅವರ ಜತೆ ನಿಲ್ಲುತ್ತೇನೆ ಎಂದಿದ್ದಾರೆ. ಹಾಲಿ ಮುಖ್ಯಮಂತ್ರಿಗಳು 2013-18ರಲ್ಲಿ 2.75 ಲಕ್ಷದಷ್ಟು ಸರ್ಕಾರಿ ಹುದ್ದೆಗಳನ್ನು ಖಾಲಿ ಇಟ್ಟಿದ್ದರು. ಆ ಖಾಲಿ ಹುದ್ದೆಗಳನ್ನು ತುಂಬಲು ಅವರು ಆ ಸಂದರ್ಭದಲ್ಲಿ ಎಳ್ಳಷ್ಟೂ ಪ್ರಯತ್ನ ಮಾಡಲಿಲ್ಲ. ಅಂದು ಕಾಣದ ನಿರುದ್ಯೋಗ ಈ ಚುನಾವಣೆಗೆ ಮುನ್ನ ಕಂಡಿತು. 

ಮತ ಫಸಲು ತಂದುಕೊಟ್ಟಿತು ಎಂದು ವ್ಯಂಗ್ಯವಾಡಿದ್ದಾರೆ. ಮುಗ್ಧ ಯುವಜನರಿಗೆ ಮೂರು ಸಾವಿರ ಮಾಸಿಕ ಭತ್ಯೆ ಎಂದು ಗ್ಯಾರಂಟಿ ಕೊಟ್ಟಾಗ ಷರತ್ತಿನ ಬಗ್ಗೆ ನಾಲಿಗೆ ಮೌನವಾಗಿತ್ತು. ಅದೇ ಯುವ ಜನರ ವೋಟಿನಿಂದ ಪಟ್ಟಕ್ಕೇರಿದ ಮೇಲೆ ‘ಪ್ರಸಕ್ತ ಸಾಲಿಗೆ ಮಾತ್ರ’ ಎನ್ನುವ ಷರತ್ತು ವಿಧಿಸಿ 24 ತಿಂಗಳಷ್ಟೇ ಭತ್ಯೆ ಎಂದಿದ್ದು ನನ್ನನ್ನು ಬಾಧಿಸಿದೆ. 

ಮಳೆ ಅನಾಹುತ ಎದುರಿಸಲು ಸನ್ನದ್ಧರಾಗಿ: ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ರಾಜೇಗೌಡ

ಯುವಕರಿಗೆ ಟೋಪಿ ಹಾಕಿದ ‘ನಕಲಿ ಗ್ಯಾರಂಟಿ’ಗೆ ಶಾಸ್ತಿ ದೂರವಿಲ್ಲ. ನಾನು ತುಟಿಗೆ ತುಪ್ಪ ಸವರುವವರನ್ನು ನೋಡಿದ್ದೆ. ಹಣೆಗೆ ತುಪ್ಪ ಸವರುವವರನ್ನು ನೋಡಿರಲಿಲ್ಲ. ಗ್ಯಾರಂಟಿ ಕಾರ್ಡ್‌ಗೆ ಸಹಿ ಹಾಕಿಕೊಟ್ಟು ಏಮಾರಿಸಿದ ಮಹಾನುಭಾವರು ಹಣೆಗೆ ತುಪ್ಪ ಸವರಿ ನಯಗಾರಿಕೆಯಿಂದ ಭಂಡತನ ಮೆರೆದು ಯುವಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ಯುವಜನರೂ ತಮ್ಮ ಶಕ್ತಿಯನ್ನೂ ತೋರಿಸಲಿದ್ದಾರೆ. ನಾನು ಕಾಯುತ್ತೇನೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios