Asianet Suvarna News Asianet Suvarna News

ಮಳೆ ಅನಾಹುತ ಎದುರಿಸಲು ಸನ್ನದ್ಧರಾಗಿ: ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ರಾಜೇಗೌಡ

ಅತಿಯಾದ ಮಳೆ ಜನ ಜೀವನದ ಮೇಲೆ ದುಷ್ಪರಿಣಾಮ ಬೀರದಂತೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು. 

Be prepared to face rain disaster Says MLA TD Rajegowda gvd
Author
First Published Jun 2, 2023, 10:43 PM IST

ಚಿಕ್ಕಮಗಳೂರು (ಜೂ.02): ಅತಿಯಾದ ಮಳೆ ಜನ ಜೀವನದ ಮೇಲೆ ದುಷ್ಪರಿಣಾಮ ಬೀರದಂತೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಧಾನಸಭಾ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ತಮ್ಮ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದರು. ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನಲ್ಲಿ ಹೆಚ್ಚು ಮಳೆಯಾಗುತ್ತಿದೆ. ಕೆಲವು ಸಂದರ್ಭದಲ್ಲಿ ಪ್ರಾಣ ಹಾನಿ ಸಂಭವಿಸಿದೆ. ಜನರಿಗೂ ತುಂಬಾ ತೊಂದರೆಯಾಗಿದೆ. ರಸ್ತೆ ಸಂಪರ್ಕ, ವಿದ್ಯುತ್‌ ದೀಪದ ವ್ಯವಸ್ಥೆ ಇಲ್ಲದೆ ಜನ ಪರದಾಡುತ್ತಿರುತ್ತಾರೆ. 

ಇನ್ನು ಕೆಲವೇ ದಿನಗಳಲ್ಲಿ ಮಳೆ ಆರಂಭವಾಗಿದೆ. ಅದ್ದರಿಂದ ಅಧಿಕಾರಿಗಳು ಈಗಾಗಲೇ ತೆಗೆದುಕೊಂಡಿರುವ ಹಾಗೂ ತೆಗೆದು ಕೊಳ್ಳಬೇಕಾದ ಕ್ರಮಗಳ ಬಗ್ಗೆ ತಾಲೂಕುವಾರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಸಂಗ್ರಹಿಸುವ ಜತೆಗೆ ಕೆಲವು ಸಲಹೆ, ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. ಗಾಳಿಗೆ ವಿದ್ಯುತ್‌ ಕಂಬಗಳು ಮುರಿದು ಬೀಳುತ್ತವೆ. ತಂತಿಗಳ ಮೇಲೆ ಮರಗಳು ಬಿದ್ದು ವಿದ್ಯುತ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಹಾಗಾಗಿ ಮೆಸ್ಕಾಂನವರು ವಿದ್ಯುತ್‌ ಕಂಬಗಳನ್ನು ಸಂಗ್ರಹಿಸಿ, ಟ್ರಾನ್ಸ್‌ಫಾರ್ಮರ್‌ಗಳನ್ನು ಸಹ ತಂದಿಡಬೇಕು ಎಂದು ಸೂಚನೆ ನೀಡಿದರು.

ಪ್ಲಾಸ್ಟಿಕ್‌ ಮುಕ್ತ ಚಿಕ್ಕಬಳ್ಳಾಪುರ ಮಾಡುವುದೇ ನನ್ನ ಗುರಿ: ಶಾಸಕ ಪ್ರದೀಪ್‌ ಈಶ್ವರ್‌

ವಿದ್ಯುತ್‌ ಲೈನ್‌ ಹಾದು ಹೋಗಿರುವ ಆಸುಪಾಸಿನಲ್ಲಿರುವ ಮರಗಳ ಟೊಂಗೆಗಳನ್ನು ಈಗಿನಿಂದಲೇ ತೆರವುಗೊಳಿಸಬೇಕು, ಮಳೆಗಾಲ ಆರಂಭಕ್ಕೆ 15 ದಿನಗಳು ಇರುವುದರಿಂದ ಮೆಸ್ಕಾಂ ನಲ್ಲಿರುವ ಸಿಬ್ಬಂದಿ ಸಾಕಾಗುವುದಿಲ್ಲ. ಕಾಫಿ ತೋಟಗಳಲ್ಲಿ ಮರಗಸಿ ಮಾಡಿಸುವ ಗ್ಯಾಂಗ್‌ ಮ್ಯಾನ್‌ಗಳನ್ನು ಸಂಪರ್ಕಿಸಿ ಅವರನ್ನು ಕೂಡ ಈ ಕೆಲಸಕ್ಕೆ ಬಳಸಿಕೊಳ್ಳಬಹುದು. ಅದ್ದರಿಂದ ಅವರನ್ನು ಸಂಪರ್ಕಿಸುವ ಕೆಲಸ ತ್ವರಿತಗತಿಯಲ್ಲಿ ಆಗಬೇಕು ಎಂದರು. ಮಳೆಗಾಲದ ಆರಂಭದಲ್ಲಿ ಹಾವುಗಳು ಕಚ್ಚುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರಲಿವೆ. ಹಾಗಾಗಿ ತುರ್ತು ಚಿಕಿತ್ಸೆಗೆ ವ್ಯಾಕ್ಸಿನ್‌ಗಳನ್ನು ದಾಸ್ತಾನು ಇಡಲಾಗಿದೆ. 

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ಲಿಚಿಂಗ್‌ ಪೌಡರ್‌ಗಳ ಅಗತ್ಯ ಇರುವುದರಿಂದ ಖರೀದಿ ಮಾಡಿ ಆರೋಗ್ಯ ಕೇಂದ್ರಗಳಿಗೆ ನೀಡುವಂತೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮಾತನಾಡಿ, ಚಿಕ್ಕಮಗಳೂರು ತಾಲೂಕಿನ ಬೊಗಸೆ ಗ್ರಾಮದಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳಿದರು. ಆಗ ಶಾಸಕರು, ಮುಂದಿನ 10-15 ದಿನಗಳಲ್ಲಿ ಮಳೆ ಇಲ್ಲದೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲಿದೆ. 

ಅದ್ದರಿಂದ ಅಂತಹ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತು ಮಾಡಿ, ಅಂತಹ ಕಡೆಗಳಲ್ಲಿ ಖಾಸಗಿ ಬೋರ್‌ವೆಲ್‌ ಹಾಗೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು. ಖಾಂಡ್ಯ ಹೋಬಳಿಯಲ್ಲಿ ಅತಿವೃಷ್ಟಿಯಡಿ ಎರಡು ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗವಿರಂಗಪ್ಪ ಹೇಳಿದರು. 

ದೇವನಹಳ್ಳಿ-ವಿಜಯಪುರ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ: ಸಚಿವ ಮುನಿಯಪ್ಪ

ಅತಿಯಾಗಿ ಮಳೆ ಬಂದರೆ ಯಾವ ಭಾಗದಲ್ಲಿ ಭೂ ಕುಸಿತ ಉಂಟಾಗುತ್ತದೆ ಎಂಬ ಮಾಹಿತಿ ಕ್ರೋಢಿಕರಿಸುವ ಜತೆಗೆ ರಸ್ತೆ ಸಂಪರ್ಕ ಕಡಿತಗೊಂಡರೆ ಕೂಡಲೇ ಕಾರ್ಯಾಚರಣೆ ನಡೆಸಲು ಜೆಸಿಬಿ, ಹಿಟಾಚಿ, ಜಲಾವ್ರತ ಪ್ರದೇಶದಿಂದ ಜನರನ್ನು ರಕ್ಷಿಸಲು ಹಗ್ಗದ ವ್ಯವಸ್ಥೆ, ಮಳೆಯಿಂದಾಗಿ ಅತಿ ಸಂಕಷ್ಟದಲ್ಲಿರುವ ಜನರು ಕೂಡಲೇ ಯಾರನ್ನು ಸಂಪರ್ಕಿಸಬೇಕು ಎಂಬ ಪೂರ್ಣ ವಿವರದೊಂದಿಗೆ ಮಾಹಿತಿ ಸಂಗ್ರಹ ಮಾಡಿ ಮುಂದಿನ ಸಭೆಯೊಳಗೆ ತಮಗೆ ಕೊಡಬೇಕೆಂದು ಶಾಸಕರು ಸೂಚನೆ ನೀಡಿದರು. ಸಭೆಯಲ್ಲಿ ಚಿಕ್ಕಮಗಳೂರು ತಾಲೂಕು ತಹಸೀಲ್ದಾರ್‌ ವಿನಾಯಕ್‌ ಸಾಗರ್‌, ತಾಪಂ ಕಾರ್ಯನಿರ್ವಹಕ ಅಧಿಕಾರಿ ತಾರಾನಾಥ್‌ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ವಿನಾಯಕ್‌ ಹುಲ್ಲೂರ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios