Asianet Suvarna News Asianet Suvarna News

ಕಾಂಗ್ರೆಸ್‌ ಉಚಿತ ಯೋಜನೆಗಳ ಆಶ್ವಾಸನೆ ನೀಡಿರುವ ಪರಿಣಾಮ ಬಿಜೆಪಿಗೆ ಸೋಲು: ಕೋಟ ಶ್ರೀನಿವಾಸ ಪೂಜಾರಿ

ಆರ್ಥಿಕ ಸ್ಥಿತಿಗತಿಗಳ ಪರಿವೆ ಇಲ್ಲದೇ ಕಾಂಗ್ರೆಸ್‌ ಉಚಿತ ಯೋಜನೆಗಳ ಆಶ್ವಾಸನೆ ನೀಡಿರುವ ಪರಿಣಾಮ ರಾಜ್ಯದಲ್ಲಿ ಬಿಜೆಪಿಗೆ ಸೋಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪರ ಯೋಜನೆಯಿಂದ ಬಿಜೆಪಿ ಗೆಲ್ಲುವ ವಿಶ್ವಾಸವಿತ್ತು. 

BJPs defeat as a result of Congress promise of free schemes Says Kota Srinivas Poojary gvd
Author
First Published Jun 3, 2023, 12:30 AM IST

ಹೊನ್ನಾವರ (ಜೂ.03): ಆರ್ಥಿಕ ಸ್ಥಿತಿಗತಿಗಳ ಪರಿವೆ ಇಲ್ಲದೇ ಕಾಂಗ್ರೆಸ್‌ ಉಚಿತ ಯೋಜನೆಗಳ ಆಶ್ವಾಸನೆ ನೀಡಿರುವ ಪರಿಣಾಮ ರಾಜ್ಯದಲ್ಲಿ ಬಿಜೆಪಿಗೆ ಸೋಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪರ ಯೋಜನೆಯಿಂದ ಬಿಜೆಪಿ ಗೆಲ್ಲುವ ವಿಶ್ವಾಸವಿತ್ತು. ಕಾಂಗ್ರೆಸ್‌ನ ಉಚಿತ ಯೋಜನೆ ನಿರೀಕ್ಷೆ ಮಾಡದೆ ಇರುವಂತ ಫಲಿತಾಂಶ ಬಂದಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಪಟ್ಟಣದ ಮೂಡಗಣಪತಿ ಸಬಾಭವನದಲ್ಲಿ ಬಿಜೆಪಿ ಹೊನ್ನಾವರ ಮಂಡಲ ವತಿಯಿಂದ ಶುಕ್ರವಾರ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತಾ ಕಾರ್ಯಕ್ರಮ ಹಾಗೂ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾದ ದಿನಕರ ಶೆಟ್ಟಿಅವರಿಗೆ ಅಭಿನಂದನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಂಗ್ರೆಸ್‌ ಚುನಾವಣೆಯಲ್ಲಿ ಏನೇನು ಕೊಡುತ್ತೇನೆ ಎಂದು ಹೇಳಿದ್ದರೋ ಅದನ್ನು ಕೊಡುವ ತನಕ ವಿರೋಧ ಪಕ್ಷವಾದ ನಾವು ಬಡವರ ಪರವಾಗಿ ಹೋರಾಟ ಮಾಡುತ್ತೇವೆ. ವಿರೋಧ ಪಕ್ಷದ ಗಟ್ಟಿಹೋರಾಟದಿಂದಾಗಿ ಸರ್ಕಾರ ಯೋಜನೆ ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಸಿದೆ. ರಾಜ್ಯದಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ ಎಂದರು. ಕಾರ್ಯಕರ್ತರ ಕಷ್ಟಕ್ಕೆ ಸ್ಪಂದಿಸುವ ಅಪರೂಪದ ರಾಜಕಾರಣಿ ದಿನಕರ ಶೆಟ್ಟಿಎಂದು ಶ್ಲಾಘಿಸಿ, ಅವರ ಪರಿಶ್ರಮ ಸಾರ್ಥಕತೆಯನ್ನು ಕಾಣಲಿ ಎಂದು ಶುಭಕೋರಿದರು.

ಪ್ಲಾಸ್ಟಿಕ್‌ ಮುಕ್ತ ಚಿಕ್ಕಬಳ್ಳಾಪುರ ಮಾಡುವುದೇ ನನ್ನ ಗುರಿ: ಶಾಸಕ ಪ್ರದೀಪ್‌ ಈಶ್ವರ್‌

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ನಾನು ಹೆಚ್ಚು ಅಭಿವೃದ್ಧಿ ಕೆಲಸ ಮಾಡಿಯೂ ಕಡಿಮೆ ಮತಗಳು ದೊರಕಿವೆ. ಇದಕ್ಕೆ ಪಕ್ಷದ ಹಲವು ಮುಖಂಡರು ಕಾರಣರಾಗಿದ್ದಾರೆ. ನನಗೆ ಎಷ್ಟೇ ನೋವಾಗಿದ್ದರೂ ನಾನು ಮುಂದೆ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಮಾತನಾಡುವುದನ್ನು ಇವತ್ತಿನಿಂದ ನಿಲ್ಲಿಸುತ್ತೇನೆ. ಮತ ಕಡಿಮೆ ಆಗಿರುವಲ್ಲಿಯೂ ತಾರತಮ್ಯ ಮಾಡದೇ ಕೆಲಸ ಮಾಡುತ್ತೇನೆ. ನಿವೇದಿತ್‌ ಆಳ್ವ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಕೆಲವರು ಜಾಲತಾಣದ ಮೂಲಕ ಅಪಪ್ರಚಾರ ಮಾಡಿ ಹಾದಿ ತಪ್ಪಿಸುವ ಕೆಲಸ ಮಾಡಿದ್ದರು. 

ನನ್ನ ಐದು ವರ್ಷದ ಶಾಸಕತ್ವದ ಅವಧಿಯಲ್ಲಿ ಮಂಡಲ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಸೂಚಿಸಿದ ವ್ಯಕ್ತಿಗಳಿಗೆ ಸಮಿತಿಯಲ್ಲಿ ಅವಕಾಶ ನೀಡಿದ್ದೇನೆ. ಕಾರ್ಯಕರ್ತರ, ಮುಖಂಡರ ಸಹಕಾರದಿಂದ ಗೆಲುವು ಆಗಿದೆ ಎಂದು ಹೇಳಿದರು. ಬಿಜೆಪಿ ಮುಖಂಡ ವೆಂಕಟರಮಣ ಹೆಗಡೆ ಮಾತನಾಡಿ, ಚುನಾವಣೆ ಸಮಯದಲ್ಲಿ ಮುಖಂಡರ ನಡುವಿನ ಒಡಕು ಸರಿಪಡಿಸುವ ಕೆಲಸವನ್ನೂ ಯಾರೂ ಮಾಡಿಲ್ಲ. ಸಂಸದರು ಮತ್ತೆ ಕ್ಷೇತ್ರದಲ್ಲಿ ಸಂಚಾರ ಮಾಡಬೇಕಿದೆ. ಅವರು ಬರದೇ ಇದ್ದಲ್ಲಿ ಮುಂದೆ ಕಷ್ಟವಿದೆ. ಹೊಸ ನಾಯಕತ್ವ ಬರಬೇಕು. ಪಕ್ಷ ಗಟ್ಟಿಗೊಳ್ಳಬೇಕು ಎಂದು ಹೇಳಿದರು.

ಶಿವಾನಂದ ಹೆಗಡೆ ಕಡತೋಕ ಮಾತನಾಡಿ, ಬಿಜೆಪಿ ಸರ್ಕಾರ ಬರಲಿಲ್ಲ ಎಂಬ ಬೇಸರವಿದೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಶಕ್ತಿ ತುಂಬಿಸುವಂತಹ ಕೆಲಸ ಆಗಬೇಕು. ಮೋದಿ ಅವರ ನಾಯಕತ್ವದಲ್ಲಿ ಲೋಕಸಭಾ ಚುನಾವಣೆ ವೇಳೆಗೆ ಮತ್ತೆ ನಾವು ಗೆಲವಿಗಾಗಿ ಶ್ರಮಿಸಬೇಕು ಎಂದರು. ಮುಖಂಡರಾದ ಎನ್‌.ಎಸ್‌. ಹೆಗಡೆ ಕರ್ಕಿ, ನಾಗರಾಜ್‌ ತೊರ್ಕೆ, ಸುಬ್ರಾಯ ದೇವಾಡಿಗ ಮಾತನಾಡಿದರು. ಮಂಡಲಾಧ್ಯಕ್ಷ ರಾಜೇಶ್‌ ಭಂಡಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪಪಂ ಅಧ್ಯಕ್ಷೆ ಭಾಗ್ಯ ಮೇಸ್ತ, ಗ್ರಾಪಂ ಅಧ್ಯಕ್ಷರಾದ ಜಿ.ಜಿ. ಶಂಕರ, ಪ್ರಮೋದ್‌ ನಾಯ್ಕ, ವಿಘ್ನೇಶ್‌ ಹೆಗಡೆ, ರಜನಿ ನಾಯ್ಕ, ಮುಖಂಡರಾದ ಸುಬ್ರಾಯ ವಾಳ್ಕೆ, ಸುಬ್ರಾಯ ನಾಯ್ಕ, ಛಾಯಾ ಉಭಯಕರ ಇದ್ದರು.

ರಾಜ್ಯ ಸರ್ಕಾರ ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಕೈಬಿಟ್ಟರೆ, ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಯನ್ನು ಬದಲಿಸಲು ಮುಂದಾದರೆ ವಿರೋಧ ಪಕ್ಷದವರಾಗಿ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಬಿಜೆಪಿ ರಾಜ್ಯಾದ್ಯಂತ ಗಟ್ಟಿಧ್ವನಿಯಲ್ಲಿ ರೈತ ಪರವಾಗಿ, ಸಮಾಜದ ಪರವಾಗಿ ಹೋರಾಟ ನಡೆಸುವ ಅನಿವಾರ್ಯತೆ ಇದೆ.
-ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ

ದೇವನಹಳ್ಳಿ-ವಿಜಯಪುರ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ: ಸಚಿವ ಮುನಿಯಪ್ಪ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅನಂತಕುಮಾರ ಹೆಗಡೆ ಸ್ಪರ್ಧೆ ಮಾಡಬೇಕು. ನಾವೆಲ್ಲ ಸೇರಿ ಅವರನ್ನು ಭೇಟಿಯಾಗಿ ಮನವಿ ಮಾಡಬೇಕು. ಪಕ್ಷದ ಮುಖಂಡರಿಗೆ ಮನವರಿಕೆ ಮಾಡುವ ಕೆಲಸ ನಾವೆಲ್ಲ ಒಟ್ಟುಗೂಡಿ ಮಾಡಬೇಕಿದೆ.
-ದಿನಕರ ಶೆಟ್ಟಿ, ಶಾಸಕರು

Follow Us:
Download App:
  • android
  • ios