Asianet Suvarna News Asianet Suvarna News

Pancharatna Rathayatra: ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಡಮಾರ್‌: ಎಚ್‌.ಡಿ.ಕುಮಾರಸ್ವಾಮಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಡಮಾರಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಮಾತನಾಡಿದರು.

Former CM HD Kumaraswamy Slams On Congress At Raichur gvd
Author
First Published Jan 28, 2023, 8:55 PM IST

ರಾಯಚೂರು (ಜ.28): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಡಮಾರಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಏನೇ ಹೇಳಿದರು ಅದು ಉಲ್ಟಾ ಆಗುತ್ತದೆ. ಈ ಹಿಂದೆ ನಾನು ಸಿಎಂ ಆಗುವುದಿಲ್ಲ ಎಂದಿದ್ದರು, ಅದೇ ರೀತಿ ಬಿಎಸ್‌ವೈ ಸಹ ಆಗುವುದಿಲ್ಲ ಎಂದಿದ್ದರು ಅವರು ಸಹ ಸಿಎಂ ಆದರು. ಇದೀಗ ಅವರು ತಮ್ಮ ಭಾಷಣದಲ್ಲಿ ಸೂರ್ಯ-ಚಂದ್ರ ಇರುವುದು ಎಷ್ಟುಸತ್ಯವೋ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಸಹ ಅಷ್ಟೇ ಸತ್ಯ ಎಂದಿದ್ದಾರೆ ಇದು ಸಹ ಸುಳ್ಳಾಗಲಿದೆ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ಸಿಗರು ಷರತ್ತು ವಿಧಿಸಿದ್ದರು. ಸಿಎಂರನ್ನು ಗುಲಾಮರನ್ನಾಗಿ ಮಾಡಿದ್ದರು.ಇದೀಗ ಕೊಟ್ಟಕುದುರೆಯನ್ನು ಏರಲು ಆಗದವರು ಎನ್ನುತ್ತಿದ್ದಾರೆ. ಕಾಲಿಲ್ಲದ ಕುದುರೆಯನ್ನು ನೀಡಿದ್ದ ಅವರು, ಓಡು ಎಂದರೆ ಎಲ್ಲಿಂದ ಓಡಲಾಗುತ್ತದೆ. ಸಿಎಂ ಮಾಡಿ ಸ್ಲೋ ಪಾಯಿಸನ್‌ ಕೊಟ್ಟಿದ್ದವರು ಇದೀಗ ಪಂಚರತ್ನ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಒಂದು ಚಡ್ಡಿ ತಗೊಂಡರೆ ಎರಡು ಚಡ್ಡಿ ಫ್ರೀ ಎನ್ನುವ ಹಾಗೆ 200 ಯುನಿಟ್‌ ವಿದ್ಯುತ್‌ ಉಚಿತ, 2000 ರು. ಖಚಿತ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ಪಂಚರತ್ನವನ್ನು ಟೀಕಿಸುವುದಕ್ಕಿಂತ ಮುಂಚೆ ಸಿದ್ದರಾಮಯ್ಯ ಅವರು ತಮ್ಮ ಪಕ್ಷದವರನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದರು.

ರಮೇಶ್‌ ಜಾರಕಿಹೊಳಿ ಜೆಡಿಎಸ್‌ಗೆ ಬೇಡ: ಎಚ್‌.ಡಿ.ಕುಮಾರಸ್ವಾಮಿ

ನಾವು ಪಂಚರತ್ನ ರಥಯಾತ್ರೆ ಮುಖಾಂತರ ಸ್ಪಷ್ಟಬಹುಮತ ಕೊಡುವಂತೆ ಜನರಲ್ಲಿ ಕೇಳುತ್ತಿದ್ದೇವೆ. ಆದರೆ ಡಿಕೆಶಿ ಅವರು ಕಿಂಗ್‌ ಮೇಕರ್‌ ಆಗಲು ಹೊರಟಿದ್ದಾರೆ ಎಂದು ಹೇಳುತ್ತಿದ್ದಾರೆ. ನಾವು ಕಿಂಗ್‌ಮೇಕರ್‌ ಅಲ್ಲ ಕಿಂಗ್‌ ಆಗಲು ಹೊರಟ್ಟಿದ್ದೇವೆ. ಡಿಕೆಶಿ ಅವರಿಗೆ ಕನ್ನಡ ಅರ್ಥವಾಗುವುದಿಲ್ಲ ಎನಿಸುತ್ತದೆ. ಸಿಎಂ ಇದ್ದಾಗ ಹೋಟೆಲ್‌ನಲ್ಲಿ ಎಚ್‌ಡಿಕೆ ಅಧಿಕಾರ ನಡೆಸಿದರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. 78 ಸೀಟ್‌ ಇದ್ದ ಅವರು ಸರ್ಕಾರಿ ಬಂಗ್ಲೆ ಬಿಟ್ಟುಕೊಡಲಿಲ್ಲ, ಪ್ರಮುಖ ಖಾತೆಗಳನ್ನು ನೀಡಲಿಲ್ಲ, ನಾನೇನು ರಸ್ತೆಯಲ್ಲಿ ಅಧಿಕಾರ ನಡೆಸಿಲ್ಲ.ಅಮಿತ್‌ ಶಾ, ಸುರ್ಜೇವಾಲಾ, ರಾಹುಲ್‌ ಗಾಂಧಿ ಅವರು ಎಲ್ಲಿ ಉಳಿದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಅವರಿಗೆ ಹೊಟೆಲ್‌ನಲ್ಲಿ ಉಳಿದಿದ್ದೇ ತಪ್ಪಾಗಿ ಕಾಣುತ್ತಿದೆ, ನಾನೇನು ಅಲ್ಲಿ ಚಕ್ಕಂದ ಆಡಲು ಹೋಗಿಲ್ಲ. ಸೂಟ್‌ಕೇಸ್‌ ತರಲು ಉದ್ಯಮಿಗಳನ್ನು ಕರೆಸಿಲ್ಲ, ಸಿದ್ದವನದಲ್ಲಿ ಕುಳಿತುಕೊಂಡು ಸರ್ಕಾರ ಬೀಳಿಸ್ತೀನಿ ಅಂತ ಸಿದ್ಧ ಔಷಧಿ ಅರೆದರಲ್ಲಾ ಅಂತ ಆಕ್ರೊಶ ವ್ಯಕ್ತಪಡಿಸಿದರು.

ದೇಶ ಒಡೆದವರು ಮನೆ ಒಡೆಯುತ್ತಿದ್ದಾರೆ: ಬಿಜೆಪಿಯ ಸಿ.ಟಿ.ರವಿ ಅವರು ಭವಾನಿ ರೇವಣ್ಣ ಅವರನ್ನು ಹೊಳೆನರಸಿಪುರಕ್ಕೆ ಆಹ್ವಾನಿಸಿದ್ದು, ಬಿಜೆಪಿಗರಿಗೆ ಮನೆ ಒಡೆದು ಅಭ್ಯಾಸವಿದೆ. ದೇಶವನ್ನು ಒಡೆದವರು ಮನೆ ಒಡೆಯಲು ಬಂದಿದ್ದಾರೆ. ದೇವೇಗೌಡರ ಕುಟುಂಬವನ್ನು ಒಡೆಯಲು ಆಗಲ್ಲ. ಅಗತ್ಯವಿದ್ದಾಗ ಮಾತ್ರ, ಕಾರ್ಯಕರ್ತರ ರಕ್ಷಣೆ ಮಾಡುವುದಕ್ಕಾಗಿ ನಮ್ಮ ಕುಟುಂಬದವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಎಚ್ಡಿಕೆ ಅವರ ತಂತ್ರ ಉತ್ತರ ಕರ್ನಾಟಕದಲ್ಲಿ ನಡೆಯಲ್ಲಾ ಎಂದು ಯತ್ನಾಳ್‌ ಹೇಳಿದ್ದಾರೆ. ನಮ್ಮ ಪಂಚರತ್ನ ರಥಯಾತ್ರೆ ಓಡುತ್ತಿದೆ. ಯಾರು ಏನೇ ಹೇಳಿಕೆ ನೀಡಲಿ ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ.

ನನ್ನನ್ನು ಬೈಯುವುದರಿಂದ ಕಾಂಗ್ರೆಸ್‌ಗೆ ಸೀಟ್‌ ಕಡಿಮೆಯಾಗುತ್ತವೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಮಾತನಾಡುವುದನ್ನು ಬಿಡಬೇಕು. ಕಾಂಗ್ರೆಸ್‌ ಅಧಿಕಾರ ಬಂದಾಗ ಲಾಟರಿ, ಮಟ್ಕಾ ದಂಧೆ ಫ್ರೀಯಾಗಿ ನಡೆಸಲು ಬಿಟ್ಟಿಲ್ವಾ ಸಿದ್ದರಾಮಯ್ಯನವರೆ ಎಂದು ದೂರಿದರು. ನನ್ನ ಮೈಯಲ್ಲಿ ಕಾಂಗ್ರೆಸ್‌ ರಕ್ತ ಹರಿಯುತ್ತಿದೆ ಎಂದು ಎಚ್‌.ವಿಶ್ವನಾಥ ಹೇಳುತ್ತಿದ್ದಾರೆ. ನಮ್ಮವರು ಕರೆದುಕೊಂಡು ಬಂದಿದ್ದರು ಅವರು ಹೋದರು, ಗೋಪಾಲಯ್ಯ ಸಹ ಮೊದಲೇ ಟೋಪಿ ಹಾಕಿದ್ದ. ಚುಂಚನಗಿರಿ ಸ್ವಾಮಿಗಳ ಹೇಳಿದ್ದಕ್ಕೆ ಕರೆದುಕೊಂಡಿದ್ದೇವೆ ಅವರು ಸಹ ಹೋದರು. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ಕತೆ ಮುಗಿದು ಹೋಗಿದೆ. ಕಾಂಗ್ರೆಸ್‌ಗೆ ಉಳಿದಿಲ್ಲ, ನಿಮ್ಮ ಪಕ್ಷದವರನ್ನು ನೀವು ಕಂಟ್ರೋಲ್‌ ಮಾಡಿಕೊಳ್ಳುವಂತೆ ಎಚ್ಡಿಕೆ ತಿಳಿಸಿದರು. ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಇ.ವಿನಯ ಕುಮಾರ, ಮುಖಂಡರಾದ ಇ.ಆಂಜನೇಯ್ಯ, ವಿರುಪಾಕ್ಷಿ, ಎನ್‌.ಶಿವಶಂಕರ ಸೇರಿದಂತೆ ಅನೇಕರು ಇದ್ದರು.

ಜನಾದೇಶ ಮಾರಿಕೊಂಡವರಿಗೆ ತಕ್ಕ ಪಾಠ ಕಲಿಸಿ: ಎಚ್‌.ಡಿ.ಕುಮಾರಸ್ವಾಮಿ

ನಗರಕ್ಕೆ ಯಾತ್ರೆಗೆ ಅದ್ದೂರಿ ಸ್ವಾಗತ: ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಸಾಗಿರುವ ಜೆಡಿಎಸ್‌ ಪಂಚರತ್ನ ರಥಯಾತ್ರೆಯು ಶುಕ್ರವಾರ ಸಂಜೆ ರಾಯಚೂರು ನಗರ ವಿಧಾನಸಭಾ ಕ್ಷೇತ್ರವನ್ನು ಪ್ರವೇಶಿಸಿತು. ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಂಚರಿಸಿದ ಯಾತ್ರೆಯು ತಾಲೂಕಿನ ಶಕ್ತಿನಗರದಲ್ಲಿ ಗುರುವಾರ ರಾತ್ರಿ ತಂಗಿತ್ತು. ಶುಕ್ರವಾರ ಮಧ್ಯಾಹ್ನ ದೇವಸುಗೂರು ಶ್ರೀಸುಗೂರೇಶ್ವರ ದೇವಸ್ಥಾನಕ್ಕೆ ತೆರಳಿದ ಎಚ್ಡಿಕೆ ದೇವರ ದರ್ಶನ ಪಡೆದರು. ನಂತರ ಯರಮರಸ್‌ ಮುಖಾಂತರ ನಗರಕ್ಕೆ ಆಗಮಿಸಿದ ಯಾತ್ರೆಯನ್ನು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಈರುಳ್ಳಿ ಹಾರ ಹಾಕಿ ಎಚ್ಡಿಕೆರನ್ನು ಸನ್ಮಾನಿಸಿದರು. ನಗರ ಪ್ರಮುಖ ರಸ್ತೆಗಳಲ್ಲಿ ಕಲಾತಂಡಗಳು ಪ್ರದರ್ಶನದ ನಡುವೆ ರಾರ‍ಯಲಿ ಜರುಗಿತು.

Follow Us:
Download App:
  • android
  • ios