ಕಳೆದ ಬಾರಿ ಕೋಲಾರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತುಗೆ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಮುಖಂಡ ಜೆಡಿಎಸ್ ತೊರೆದು ಕಾಂಗ್ರೆಸ್ ಹಿರಿಯ ಮುಖಂಡರ ಭೇಟಿ - ರಾಜಕೀಯ ವಲಯದಲ್ಲಿ ಕುತೂಹಲ
ಚಿಕ್ಕಬಳ್ಳಾಪುರ (ನ.30): ಕಳೆದ ಬಾರಿ ಕೋಲಾರ (Kolar) ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಜೆಡಿಎಸ್‌ನಿಂದ (JDS) ಸ್ಪರ್ಧಿಸಿ ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ವಿರುದ್ದ ಗೆಲುವು ಸಾಧಿಸಿದ್ದ ಚಿತ್ರ ನಿರ್ಮಾಪಕರಾದ ಸಿ.ಆರ್.ಮನೋಹರ್ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಾರಾ? ಹೌದು. ಸೋಮವಾರ ರಾಜ್ಯ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕರಾದ ಎಂ.ವೀರಪ್ಪ ಮೊಯ್ಲಿರನ್ನು (Veerappa Moily) ಮಾಜಿ ಎಂಎಲ್‌ಸಿ (MLC) ಸಿ.ಆರ್.ಮನೋಹರ್ ಭೇಟಿ ಮಾಡಿ ಚರ್ಚೆ ನಡೆಸಿರುವುದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ರಾಜಕೀಯ (Politics) ವಲಯದಲ್ಲಿ ಸಂಚಲನ ತಂದಿದೆ.
ಕಳೆದ ವಿಧಾನ ಪರಿಷತ್ತು ಚುನಾವಣೆಯಲ್ಲಿ (MLC Election) ಸಿ.ಆರ್.ಮನೋಹರ್ ಜೆಡಿಎಸ್‌ನಿಂದ (JDS) ಸ್ಪರ್ಧಿಸಿ ಕಾಂಗ್ರೆಸ್‌ನ ಅನಿಲ್ ಕುಮಾರ್ ವಿರುದ್ದ 900 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಸಿ.ಆರ್.ಮನೋಹರ್ , ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಿರುದ್ದ ವೈ ಮನಸ್ಸು ಬೆಳೆಸಿಕೊಂಡು ಇತ್ತೀಚೆಗೆ ಜೆಡಿಎಸ್ ಸಂಪರ್ಕ ಕಡಿದುಕೊಂಡಿದ್ದರು.
ಕೋಲಾರ ಕೈ ಟಿಕೆಟ್ ಮೇಲೆ ಕಣ್ಣು: ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ (Assembly Election) ಕೋಲಾರ (Kolar) ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಸಿ.ಆರ್.ಮನೋಹರ್, ಡಿಸೆಂಬರ್ 2 ರಂದು ಅಧಿಕೃತಕವಾಗಿ ಕಾಂಗ್ರೆಸ್ ಸೇರ್ಪಡೆಗೆ ಈಗಿನಿಂದಲೇ ಭೂಮಿಕೆ ಸಿದ್ದಪಡಿಸಿಕೊಳ್ಳಲು ಮುಂದಾಗಿದ್ದು ಆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು ಸದ್ಯ ಎರಡು ಜಿಲ್ಲೆಗಳಲ್ಲಿ ಕಾವೇರಿರುವ ವಿಧಾನ ಪರಿಷತ್ತು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ಪರವಾದ ಒಂದು ವಾರದ ಕಾಲ ಚುನಾವಣಾ ಪ್ರಚಾರ ನಡೆಸಲು ಸಿ.ಆರ್.ಮನೋಹರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದ ಸಂಪರ್ಕ ಕಡಿದು ಬಿಜೆಪಿ (BJP) ಸೇರುವ ವದಂತಿ ನಡುವೆ ಮನೋಹರ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮೊಯ್ಲಿರನ್ನು ಭೇಟಿ ಮಾಡಿರುವುದು ಅಂತೂ ಎರಡು ಜಿಲ್ಲೆಗಳ ರಾಜಕಾರಣದಲ್ಲಿ ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.
ಸಿ.ಆರ್.ಮನೋಹರ್ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ರಾಜಕೀಯವಾಗಿ ಕಡು ವೈರಿಯಾದ ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿರನ್ನು ಬೇಟಿ ಮಾಡಿ ಚರ್ಚೆ ನಡೆಸಿರುವುದು ಸದ್ಯ ಎಂಎಲ್‌ಸಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಅವಿಭಜಿತ ಎರಡು ಜಿಲ್ಲೆಗಳ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು ಸಿ.ಆರ್.ಮನೋಹರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಸಾಕಷ್ಟು ಮುನ್ನೆಲೆಗೆ ಬಂದಿದ್ದು ಹಾಲಿ ನಡೆಯುತ್ತಿರುವ ಎಂಎಲ್‌ಸಿ ಚುನಾವಣೆಯಲ್ಲಿ ಕಳೆದ ಬಾರಿ ತಮ್ಮ ಎದುರಾಳಿಯಾಗಿದ್ದ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ (Anil kumar) ಪರ ಪ್ರಚಾರಕ್ಕೆ ನಿರ್ಧರಿಸಿದ್ದಾರೆ.
ರಾಜೀನಾಮೆ ಸಲ್ಲಿಕೆ : ಜೆಡಿಎಸ್‌ನ (JDS) ಮತ್ತೊಂದು ವಿಕೆಟ್ ಪತನವಾಗಿದೆ. ಅವಧಿ ಮುಗಿಯುವ ಮೊದಲೇ ಜೆಡಿಎಸ್ ನಾಯಕ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ವಿಧಾನ ಪರಿಷತ್ ಚುನಾವಣೆ (MLC Election) ಮಧ್ಯೆಯೇ ಸಿ.ಆರ್. ಮನೋಹರ್ (CR Manohar) ಜೆಡಿಎಸ್ (JDS) ಪ್ರಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ(resign) ನೀಡಿದ್ದು, ದಳಪತಿಗಳಿಗೆ ಆಘಾತವಾಗಿದೆ. ವಿಧಾನ ಪರಿಷತ್ ಸದಸ್ಯತ್ವಕ್ಕೆ ಸಿ.ಆರ್. ಮನೋಹರ್ ರಾಜೀನಾಮೆ ನೀಡಿದ್ದು, ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ (ನ.29 ) ರಾಜೀನಾಮೆ ಪತ್ರ ನೀಡಿದ್ದರು.
ಕಾಂಗ್ರೆಸ್ ಸೇರಲು ಚಿಂತನೆ ನಡೆಸಿರುವ ಸಿ.ಆರ್. ಮನೋಹರ್, ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ರಿಜಿಸ್ಟರ್ ಪೋಸ್ಟ್ ಮೂಲಕ ಮನೋಹರ್ ರಾಜೀನಾಮೆ ಸಲ್ಲಿಸಿದ್ದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗಿರುವ ಸಿ.ಆರ್ ಮನೋಹರ್ ಅವರ ಸದಸ್ಯತ್ವದ ಅವಧಿ 2022ರ ಜ.5ಕ್ಕೆ ಕೊನೆಗೊಳ್ಳಲಿದೆ. ಅವಧಿ ಪೂರ್ಣಕ್ಕೆ ಮೂರು ತಿಂಗಳಷ್ಟೇ ಬಾಕಿ ಇದೆ. ಈ ನಡುವೆ ಜೆಡಿಎಸ್‌ನಿಂದ ಹೆಜ್ಜೆ ಹೊರಗೆ ಇಟ್ಟಿದ್ದಾರೆ.
ಇದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕೀಯ ವಲಯದಲ್ಲಿ ಆಂತರಿಕ ಚರ್ಚೆಗೆ ಕಾರಣವಾಗಿದೆ. ಎರಡೂ ಜಿಲ್ಲೆಗಳಲ್ಲಿ ಗಣನೀಯವಾಗಿರುವ ಬಲಿಜ ಸಮುದಾಯದ ಮೇಲೆ ಮನೋಹರ್ ಅವರಿಗೆ ಉತ್ತಮವಾದ ಹಿಡಿತವಿದೆ. ಆ ಸಮುದಾಯದ ಪ್ರಮುಖ ನಾಯಕರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. 2009ರಿಂದಲೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕಾರಣದಲ್ಲಿ ಮನೋಹರ್ ಅವರ ಹೆಜ್ಜೆ ಗುರುತು ಪ್ರಬಲವಾಗಿದೆ. 2009ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ.ಆರ್ ಮನೋಹರ್ 1.86 ಲಕ್ಷ ಮತಗಳನ್ನು ಪಡೆದಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 38 ಸಾವಿರ ಮತಗಳನ್ನು ಪಡೆದಿದ್ದರು.
