BY Vijayendra: ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ವಿಜಯೇಂದ್ರ, ಯಾವ ಕ್ಷೇತ್ರ?
* ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ವಿಜಯೇಂದ್ರ
* ತುಮಕೂರಿನಲ್ಲಿ ಬಹಿರಂಗವಾಗಿಯೇ ಘೋಷಿಸಿದ ಬಿಎಸ್‌ವೈ ಪುತ್ರ
* ಕ್ಷೇತ್ರದ ಬಗ್ಗೆ ಸುಳಿವು ನೀಡದ ರಾಜ್ಯ ಬಿಜೆಪಿ ಉಪಾಧ್ಯಕ್ಷ
ತುಮಕೂರು, (ನ.27): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ (BS Yediyurappa) ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಹೌದು...ಈಗಾಗಲೇ ಯಡಿಯೂರಪ್ಪನವರ (BS Yediyurappa) ಹಿರಿಯ ಪುತ್ರ ಬಿವೈ ರಾಘವೇಂದ್ರ (BY Raghavendra) ಶಿವಮೊಗ್ಗ(Shivamogga) ಸಂಸದರಾಗಿದ್ದಾರೆ. ಇದೀಗ ಇನ್ನೋರ್ವ ಮಗ ಬಿವೈ ವಿಜಯೇಂದ್ರ ಸಹ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಆದ್ರೆ, ಯಾವ ಕ್ಷೇತ್ರ ಎನ್ನುವುದು ಮಾತ್ರ ಹೇಳಿಲ್ಲ.
'ಮತ್ತೆ ವರುಣಾ ಕ್ಷೇತ್ರದಲ್ಲಿ ಚುನಾವಣಾ ಸ್ಪರ್ಧೆ ಸುಳಿವು ನೀಡಿದ ವಿಜಯೇಂದ್ರ'
ಇನ್ನು ಈ ಬಗ್ಗೆ ಇಂದು(ನ.27) ತುಮಕೂರಿನಲ್ಲಿ(Tumakuru) ಮಾತನಾಡಿರುವ ಬಿ.ವೈ. ವಿಜಯೇಂದ್ರ, ನಾನು 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ರಾಜ್ಯ ಬಿಜೆಪಿ(BJP) ಉಪಾಧ್ಯಕ್ಷನಾಗಿ ಪ್ರವಾಸ ಮಾಡುತ್ತಿದ್ದೇನೆ. ನಾನು ರಾಜಕೀಯ ಸನ್ಯಾಸಿಯಲ್ಲ. ಮುಂದಿನ ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯಿದೆ. ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಾಗಿನಿಂದಲೂ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಬಯಕೆಯನ್ನು ಹೊಂದಿದ್ದೇನೆ. ನಾನು ಯವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದರು.
ವಿಜಯೇಂದ್ರ ಕ್ಷೇತ್ರ ಯಾವುದು?
ಯೆಸ್....ಬಿಎಸ್ ಯಡಿಯೂರಪ್ಪ ಅವರು ಮುಂಬರುವ ಚುನಾವಣೆಗೆ ಸ್ಪರ್ಧೆ ಮಾಡ್ತಾರೋ ಇಲ್ವೋ ಎನ್ನುವುದು ಇನ್ನೂ ತಿಳಿದುಬಂದಿಲ್ಲ, ಈ ಬಗ್ಗೆ ಅವರು ಸ್ಪರ್ಧೆ ಮಡ್ತೀನಿ ಅಥವಾ ಇಲ್ಲ ಎಂದು ಎಲ್ಲೂ ಇದುವರೆಗೂ ಬಹಿರಂಗವಾಗಿ ಹೇಳಿಲ್ಲ. ಒಂದು ವೇಳೆ ಹೈಕಮಾಂಡ್ ವಯೋಮಿತಿ ಕಾರಣ ಕೊಟ್ಟ ಅವರಿಗೆ ವಿಶ್ರಾಂತಿ ನೀಡ, ಅವರ ಪುತ್ರ ವಿಜಯೇಂದ್ರಗೆ ಅವಕಾಶ ಮಾಡಿಕೊಡಬಹುದು.
'ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ, ಯಡಿಯೂರಪ್ಪ ಕೊಡುಗೆ ಏನು?'
ಒಂದು ವೇಳೆ ಯಡಿಯೂರಪ್ಪ 2023ರ ಚುನಾವಣೆಗೆ ಸ್ಪರ್ಧಿಸದಿದ್ದರೆ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಇಲ್ಲ ಮೊದಲಿನಿಂದಲೂ ಕಣ್ಣಿಟ್ಟಿರುವ ಮಾಜಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಕ್ಷೇತ್ರ ವರುಣಾದಿಂದ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.
ವರುಣಾದಲ್ಲಿ ಹವಾ ಎಬ್ಬಿಸಿದ್ದ ವಿಜಯೇಂದ್ರ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಪ್ರತ್ಯಕ್ಷರಾಗಿದ್ದರು. ಕಾಂಗ್ರೆಸ್‌ನಿಂದ ಡಾ.ಯತೀಂದ್ರ ಹಾಗೂ ಬಿಜೆಪಿಯಿಂದ ವಿಜಯೇಂದ್ರ ಸ್ಪರ್ಧಿಸುವುದು ಬಹುತೇಕ ಖಚಿತವಾಗಿತ್ತು. ಇಬ್ಬರು ಯುವಕರ ಸ್ಪರ್ಧೆ ಹಾಗೂ ರಾಜ್ಯದ ಇಬ್ಬರು ರಾಜಕೀಯ ಬಲಾಢ್ಯರ ಪುತ್ರರ ಹೋರಾಟ ಎಲ್ಲೆಡೆ ಗಮನ ಸೆಳೆದಿತ್ತು.
ವಿಜಯೇಂದ್ರ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿ ಪತ್ನಿ ಜೊತೆ ಪೂಜೆ-ಹೋಮ ನಡೆಸಿ ಗೃಹ ಪ್ರವೇಶ ಮಾಡಿದ್ದರು. ಎಲ್ಲೆಡೆ ಪ್ರಚಾರ ಕಾರ್ಯವೂ ನಡೆಯಿತು. ಅಂದು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ವಿಜಯೇಂದ್ರ ಅವರ ಕಡೆ ಹರಿದು ಬಂದಾಗ ರಾಜಕೀಯ ವಲಯದಲ್ಲಿ ಅಚ್ಚರಿ ಕಂಡು ಬಂತು. ವರುಣಾ ಕ್ಷೇತ್ರ ಅತೀ ಹೆಚ್ಚಿನ ಪ್ರಚಾರ ಪಡೆಯಿತು.ಆದ್ರೆ, ನಾಮಪತ್ರ ಸಲ್ಲಿಸುವ ಕೊನೇ ಕ್ಷಣದಲ್ಲಿ ಹೈಕಮಾಂಡ್ ಸೂಚನೆಯಂತೆ ವಿಜಯೇಂದ್ರ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯ್ತು.
ತಂದೆ ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ ಬಿ.ವೈ. ವಿಜಯೇಂದ್ರ ಮೂಗು ತೂರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದವು.ಅಲ್ಲದೇ ಬಗ್ಗೆ ಕೆಲ ಬಿಜೆಪಿ ನಾಯಕರು ಹೈಕಮಾಂಡ್ಗೂ ದೂರು ನೀಡಿದ್ದರು.
ಇಷ್ಟು ದಿನ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ವೈ ವಿಜಯೇಂದ್ರ ಅಧಿಕೃತವಾಗಿ ರಾಜಕಾರಣದ ಅಖಾಡಕ್ಕಿಳಿಯಲು ತೀರ್ಮಾನಿಸಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.