ಸ್ವಪಕ್ಷೀಯರಿಂದಲೇ ಕಾಂಗ್ರೆಸ್ ಸರ್ಕಾರ ಬೀಳಲಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್
ಆಪರೇಷನ್ ಕಮಲ ಎನ್ನುವುದೇ ಮೂರ್ಖತನದ ಪರಮಾವಧಿ ಅಷ್ಟೇ. ಕಾಂಗ್ರೆಸ್ ಸರ್ಕಾರವನ್ನು ಹೊರಗಿನವರಲ್ಲ, ಅದೇ ಪಕ್ಷದವರೇ ಬೀಳಿಸುತ್ತಾರೆ ಕಾದು ನೋಡಿ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ದಾವಣಗೆರೆ (ನ.02): ಆಪರೇಷನ್ ಕಮಲ ಎನ್ನುವುದೇ ಮೂರ್ಖತನದ ಪರಮಾವಧಿ ಅಷ್ಟೇ. ಕಾಂಗ್ರೆಸ್ ಸರ್ಕಾರವನ್ನು ಹೊರಗಿನವರಲ್ಲ, ಅದೇ ಪಕ್ಷದವರೇ ಬೀಳಿಸುತ್ತಾರೆ ಕಾದು ನೋಡಿ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.ಕೆ.ಶಿವಕುಮಾರ, ಸತೀಶ ಜಾರಕಿಹೊಳಿ, ಬಿ.ಕೆ.ಹರಿಪ್ರಸಾದ, ಶಾಮನೂರು ಶಿವಶಂಕರಪ್ಪ, ರಾಯರೆಡ್ಡಿಯವ್ರೇ ಕಾಂಗ್ರೆಸ್ ಸರ್ಕಾರದ ಬುಡ ಅಲ್ಲಾಡಿಸುತ್ತಿದ್ದಾರೆ ಎಂದರು.
ತನ್ನ ವೈಫಲ್ಯ ಮರೆಮಾಚಲು, ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ ಗುಂಪುಗಾರಿಕೆ ವಿಚಾರದಿಂದ ಜನರನ್ನು ದಿಕ್ಕು ತಪ್ಪಿಸಲು ಕಾಂಗ್ರೆಸ್ ಪಕ್ಷವು ಇಂತಹ ಗಿಮಿಕ್ ಮಾಡುತ್ತಿದೆ. ಡಿಕೆಶಿ ಗುಂಪು ಒಂದು ಕಡೆ ಸಭೆ ಮಾಡುತ್ತಿದ್ದರೆ, ಸಿದ್ದರಾಮಯ್ಯ ಗುಂಪು ಮತ್ತೊಂದು ಕಡೆ ಸಭೆ ಮಾಡುತ್ತಿದೆ. ಸಿದ್ದು-ಡಿಕೆಶಿ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ ಎಂದು ಟೀಕಿಸಿದರು.
ದಲಿತ ಸಿಎಂ ಬಗ್ಗೆ ಚರ್ಚೆಯೇ ನಡೆದಿಲ್ಲ: ವಿಶೇಷ ಸಂದರ್ಶನದಲ್ಲಿ ಸಚಿವ ಮಹದೇವಪ್ಪ ಹೇಳಿದ್ದೇನು?
ಕಾಂಗ್ರೆಸ್ ಸರ್ಕಾರವನ್ನು ಯಾರೂ ಬೀಳಿಸುವುದಿಲ್ಲ. ತಾವಾಗಿಯೇ ಸರ್ಕಾರವನ್ನು ಕಾಂಗ್ರೆಸ್ಸಿನವರೇ ಬೀಳಿಸುತ್ತಾರೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಶೂನ್ಯವಾಗಿದೆ. ಗುಂಪುಗಾರಿಕೆ ಹೆಚ್ಚುತ್ತಿದೆ. ಹಾವೇರಿಯಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಿಎಂ, ಡಿಸಿಎಂ, ಸಚಿವರು ಚಕಾರ ಎತ್ತುತ್ತಿಲ್ಲ. ಸರ್ಕಾರದ ವೈಫಲ್ಯವನ್ನು ಮರೆ ಮಾಚಲು ಈಗ ಆಪರೇಷನ್ ಕಮಲ ಅಂತಾ, ಹುಲಿ ಉಗುರು ಅಂತೆಲ್ಲಾ ನಾಟಕ ಮಾಡುತ್ತಿದ್ದಾರಷ್ಟೇ. ಅರಣ್ಯ ಇಲಾಖೆಯೇನು ಇಷ್ಟು ದಿನ ನಿದ್ದೆ ಮಾಡುತ್ತಿತ್ತಾ ಎಂದು ಹರಿಹಾಯ್ದರು.
ಹಾವೇರಿ ಲೋಕಸಭೆಗೆ ಟಿಕೆಟ್ ಕೊಟ್ಟರೆ ಸ್ಪರ್ಧೆ: ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮಗೆ ಟಿಕೆಟ್ ನೀಡಿದರೆ ಖಂಡಿತಾ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಾವೇರಿ ಕ್ಷೇತ್ರದಲ್ಲಿ ತಮಗೆ ಬಿಟ್ಟು ಯಾರಿಗೆ ಬಿಜೆಪಿ ಟಿಕೆಟ್ ನೀಡಿದರೂ ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದರು.
ಲಿಂಗಾಯತ, ಕುರುಬ, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹೀಗೆ ಯಾವುದೇ ಜಾತಿ, ಜನಾಂಗದವರಿಗೆ ಬಿಜೆಪಿ ಟಿಕೆಟ್ ನೀಡಿದರೂ ಪಕ್ಷದ ಗೆಲುವೇ ನಮ್ಮ ಗುರಿ. ಹಾವೇರಿ, ಗದಗ ಜಿಲ್ಲೆಗೆ ಸೇರಿದವರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ನಮ್ಮೆಲ್ಲರದ್ದೂ ಆಗಿದೆ ಎಂದು ಹೇಳಿದರು. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ನಮ್ಮದು. ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತೊಮ್ಮೆ ಆಯ್ಕೆಯಾಗಬೇಕು, ಕೇಂದ್ರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕೆಂಬ ಗುರಿ ನಮ್ಮದು ಎಂದು ತಿಳಿಸಿದರು.
ಕೆಪಿಸಿಸಿ ಶೀಘ್ರ ಪುನಾರಚನೆ, ಯುವ ಮುಖಗಳಿಗೆ ಹೊಣೆ: ಸುರ್ಜೇವಾಲಾ
ಸಿದ್ದೇಶ್ವರಗಿಂತ ಸೂಕ್ತ ಅಭ್ಯರ್ಥಿ ಯಾರು?: ಹುಣಸೇ ಗಿಡಕ್ಕೆ ಮುಪ್ಪಾದರೆ, ಹುಳಿಗೆ ಮುಪ್ಪಲ್ಲ ಎಂಬಂತೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಿರಿಯ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಇದ್ದು, ಇಂತಹ ಸೂಕ್ತ, ಸಮರ್ಥ ಅಭ್ಯರ್ಥಿಗಿಂತ ಇಲ್ಲಿ ಬೇರೆ ಯಾರಾದರೂ ಇದ್ದಾರೆಯೇ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಪ್ರಶ್ನಿಸಿದ್ದಾರೆ. ಸ್ಥಳೀಯರ ಹೊರತುಪಡಿಸಿ ಹೊರಗಿನವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿದರೆ ಹಾವೇರಿ ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟವಿದೆ. ಹಾವೇರಿ, ಗದಗ ಜಿಲ್ಲೆಗಳ ಯಾವುದೇ ಸಮುದಾಯವರಿಗಾದರೂ ಟಿಕೆಟ್ ನೀಡಲಿ. ಒಟ್ಟಾರೆ, ಸ್ಥಳೀಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು.